Loading Events

« All Events

  • This event has passed.

ಸುಧಾ ನಾರಾಯಣಮೂರ್ತಿ

August 19, 2023

೧೯..೧೯೫೦ ಉದ್ಯಮಿ, ಪ್ರಾಧ್ಯಾಪಕಿ, ಸಮಾಜಸೇವಕಿ, ಲೇಖಕಿಯಾಗಿದ್ದು ಜಗತ್ತಿನಲ್ಲೇ ಪ್ರಸಿದ್ಧ ಪಡೆದಿರುವ ಇನ್‌ಫೋಸಿಸ್‌ ಸಂಸ್ಥೆಯನ್ನು ಕಟ್ಟಿಬೆಳೆಸಿರುವ, ತಂತ್ರಜ್ಞಾನದ ಚಟುವಟಿಕೆಗಳ ನಡುವೆಯೇ ಬಿಡುವಿನ ವೇಳೆಯಲ್ಲಿ ತಮ್ಮ ಚಿಂತನ ಶೀಲ ಮನಸ್ಸಿನಿಂದ, ಸೃಜನಶೀಲ ಪ್ರತಿಭೆಯಿಂದ ಹಲವಾರು ಸಾಹಿತ್ಯಿಕ ಕೃತಿಗಳನ್ನೂ ರಚಿಸಿರುವ ಸುಧಾ ನಾರಾಯಣಮೂರ್ತಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಶಿಗ್ಗಾಂವ್‌ನಲ್ಲಿ (ಈಗ ಹಾವೇರಿ ಜಿಲ್ಲೆಗೆ ಸೇರಿದೆ) ೧೯೫೦ ರ ಆಗಸ್ಟ್‌ ೧೯ ರಂದು. ತಂದೆ ರಾಮಚಂದ್ರ ಕುಲಕರ್ಣಿ, ಹುಬ್ಬಳ್ಳಿಯ ಕೆ.ಎಂ. ಕಾಲೇಜಿನ ಸ್ತ್ರೀ ರೋಗ ತಜ್ಞರು ಹಾಗೂ ಪ್ರಾಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ಪ್ರತಿಭಾವಂತೆಯಾದ ಇವರಿಗೆ ಮೂವರು ಹೆಣ್ಣು ಒಂದು ಗಂಡು. ಮೊದಲನೆಯವರು ಸುನಂದಾ ಕುಲಕರ್ಣಿ ಪರಿಣತ ವೈದ್ಯೆ, ಗೈನೋಕಾಲಜಿ ಪ್ರೊಫೆಸರ್, ಎರಡನೆಯವರು ಸುಧಾಮೂರ್ತಿ, ಮೂರನೆಯವರು ಜಯಶ್ರೀ ದೇಶಪಾಂಡೆ. ಎಂ.ಎಸ್ಸಿ ನಂತರ ಅಮೆರಿಕ ಸೇರಿ ತಮ್ಮದೇ ಆದ ದೇಶಪಾಂಡೆ ಫೌಂಡೇಶನ್‌ ನಡೆಸುತ್ತಿದ್ದಾರೆ.  ಮಗ ಶ್ರೀನಿವಾಸ ಕುಲಕರ್ಣಿ ದೆಹಲಿಯ ಐ.ಐ.ಟಿ. ಯಲ್ಲಿ ಓದಿ ಅಂತಾರಾಷ್ಟ್ರೀಯ ಖ್ಯಾತಿಯ ಖಗೋಳ ವಿಜ್ಞಾನಿ. ಇದೊಂದು ಪ್ರತಿಭಾವಂತರ ಕುಟುಂಬ. ಹುಟ್ಟಿದೂರಿನಲ್ಲಿಯೇ ಪ್ರಾರಂಭದಿಂದ ಪ್ರೌಢಶಾಲೆಯವರೆಗೆ. ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್‌ ಬಿ.ಇ. ಎಲೆಕ್ಟ್ರಿಕಲ್‌ ಪದವಿಯಲ್ಲಿ ರ್ಯಾಂಕ್‌ ವಿಜೇತೆ. ನಂತರ ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ (೧೯೭೪) ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್‌ ಕಾಲೇಜು ಹಾಗೂ ಕ್ರೈಸ್ಟ್‌ ಕಾಲೇಜಿನಲ್ಲಿ ಕಂಪ್ಯೂಟರ್ ಹಾಗೂ ವಾಣಿಜ್ಯ ವ್ಯವಹಾರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅರೆಕಾಲಿಕ ಅಧ್ಯಾಪಕರಾಗಿ ಕೆಲಕಾಲ ಬೋಧನೆ. ಪುಣೆಯ  ಟೆಲ್ಕೊ-ಕಂಪನಿಯಲ್ಲಿ ಎಂಜಿನಿಯರಾಗಿ ೧೯೭೧ರಿಂದ ೮೪ರವರೆಗೆ. ಒಮ್ಮೆ ಜಾಹೀರಾತಿನಲ್ಲಿ ‘ಮಹಿಳಾ ಅಭ್ಯರ್ಥಿಗಳು ಅರ್ಜಿ ಹಾಬೇಕಿಲ್ಲ’ ಎಂದಿದ್ದ ಸೂಚನೆಯನ್ನೂ ಪ್ರಶ್ನಿಸಿ ಉದ್ಯಮಾಧಿಪತಿ ಜೆ.ಆರ್.ಡಿ. ಟಾಟಾರವರಿಗೇ ಪತ್ರ ಬರೆದು ಕೆಲಸಗಿಟ್ಟಿಸಿಕೊಂಡರು. ಆಗ ಪಟ್ನಿ ಕಂಪ್ಯೂಟರ್ ನಲ್ಲಿ ಜನರಲ್‌ ಮ್ಯಾನೇಜರಾಗಿದ್ದ ನಾರಾಯಣ ಮೂರ್ತಿಯವರ ಪರಿಚಯ. ಇವರು ಪ್ಯಾರಿಸ್‌ನಿಂದ ಬಂದು ಪಟ್ನಿ ಕಂಪ್ಯೂಟರ್ ಸೇರಿದ್ದರು. ಇಬ್ಬರ ಮದುವೆ ನಡೆದದು ೧೯೭೮ರಲ್ಲಿ ಇಬ್ಬರೂ ಸೇರಿ ಸ್ಥಾಪಿಸಿದ್ದು ಹೊಸ ಕಂಪನಿ ೧೯೮೧ರಲ್ಲಿ. ಉದ್ಯಮವನ್ನೂ ಪ್ರಾರಂಭಿಸಿದರೂ ಹಣದ ಮುಗ್ಗಟ್ಟಿನಿಂದ ಪಾರಾಗಲು ಅರೆಕಾಲಿಕ ಉದ್ಯೋಗವನ್ನು ಮುಂದುವರೆಸಿದ್ದರು.  ಸುಧಾರವರು ನೀಡಿದ ಹತ್ತು ಸಾವಿರ ರೂ.ಗಳ ಬಂಡವಾಳದ ಜೊತೆಗೆ ಮನೆಯ ಕೊಠಡಿಯೊಂದನ್ನೂ ಬಿಟ್ಟುಕೊಟ್ಟಿದ್ದರು. ಕಂಪ್ಯೂಟರ್ ವಿಜ್ಞಾನ ಮಾಹಿತಿ ತಂತ್ರಜ್ಞಾನದ ವಿಸ್ತಾರವನ್ನೂ ಪಡೆದಿದ್ದರಿಂದ ಇನ್‌ಫರ್ಮೇಷನ್‌ ಸಿಸ್ಟಮ್ಸ್‌ ಎಂದಿದ್ದುದನ್ನು ಸಂಕ್ಷಿಪ್ತವಾಗಿ ‘ಇನ್‌ಫೋಸಿಸ್‌’ ಎಂದು ಮರುನಾಮಕರಣ ಮಾಡಿದರು. ನಂತರ ಪುಣೆಯಲ್ಲಿ ಪ್ರಾರಂಭಿಸಿದ ಕಂಪನಿಯನ್ನು ೧೯೮೪ ರಲ್ಲಿ ಬೆಂಗಳೂರಿಗೆ ವರ್ಗಾಯಿಸಿದರು. ಇದೀಗ ಕರ್ನಾಟಕ, ತಮಿಳುನಾಡು, ಒರಿಸ್ಸಾ, ಮಹಾರಾಷ್ಟ್ರಗಳಲ್ಲಿ ೧೧ ಕಚೇರಿಗಳಲ್ಲದೆ ವಿದೇಶದಲ್ಲೂ ೧೩ ಕಚೇರಿಗಳಿದ್ದು ಬೆಂಗಳೂರಿನಲ್ಲಿ ಕೇಂದ್ರವಾಗಿದ್ದು ಕಾರ್ಯೋನ್ಮುಖವಾಗಿದೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಸಾಗಿರುವ ಇನ್‌ಫೋಸಿಸ್‌ ಮಾಹಿತಿ ತಂತ್ರಜ್ಞಾನ ಸಂಸ್ಥೆಯು ಜವಾಬ್ದಾರಿಯುತ ಸ್ಥಾನದಲ್ಲಿರುವುದರ ಜೊತೆಗೆ ತಾವು ಗಳಿಸಿದ್ದನ್ನು ಸಮಾಜ ಸೇವೆಗಾಗಿ ಮೀಸಲಿಟ್ಟು ಆರೋಗ್ಯ, ವಿದ್ಯಾಭ್ಯಾಸ, ಗ್ರಂಥಾಲಯ ಇವುಗಳಿಗಾಗಿ ವಿನಿಯೋಗಿಸಲು ಪ್ರಾರಂಭಿಸಿದ್ದು ಇದಕ್ಕಾಗಿ ‘ಇನ್‌ಫೋಸಿಸ್‌ ಫೌಂಡೇಷನ್‌’ ಎಂಬ ಹೆಸರಿನಿಂದ ಕಾರ್ಯ ಚಟುವಟಿಕೆಯಲ್ಲಿ ತೊಡಗಿದೆ. ನಿರ್ಮಲ ಮನಸ್ಸಿನಿಂದ ಕಷ್ಟದಲ್ಲಿರುವವರಿಗೆ ನೆರವಾಗುವುದೇ ಮಾನವಧರ್ಮವೆಂದು ತಿಳಿದಿರುವ ಇನ್‌ಫೋಸಿಸ್‌ ಫೌಂಡೇಷನ್‌ ಹಲವಾರು ಕಾರ್ಯಕ್ರಮಗಳನ್ನೂ ಹಾಕಿಕೊಂಡಿದೆ. ತಮಿಳುನಾಡಿನ ಕಾಂಚಿಪುರಂನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬ್ರೆಸ್ಟ್ ಕ್ಯಾನ್ಸರ್ ನಿಂದ ನರಳುವವರಿಗೆ ೫೦ ಹಾಸಿಗೆಗಳ ವಾರ್ಡ್, ಬಳ್ಳಾರಿಯಲ್ಲಿ ಮಿದುಳು ಜ್ವರದಿಂದ ನರಳುವ ಮಕ್ಕಳಿಗಾಗಿ  ೨೦ ಹಾಸಿಗೆಗಳ ವಾರ್ಡ್, ಬೆಂಗಳೂರಿನಲ್ಲಿ ಆಕಸ್ಮಿಕಗಳಿಗೆ ಈಡಾಗುವವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹವಾನಿಯಂತ್ರಣ ಹಾಗೂ ಸುಟ್ಟಗಾಯಗಳಿಂದ ನರಳುವ ರೋಗಿಗಳ ಉಪಯೋಗಕ್ಕಾಗಿ ಯಂತ್ರಸೌಕರ್ಯ, ಒರಿಸ್ಸಾದ ಚೆಹರಾಂ ಪುರಜಿಲ್ಲೆಯ ಬನಾಪುರದ ಬಳಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಹಾಸ್ಟೆಲ್‌, ಹಳ್ಳಿಗಳಲ್ಲಿ ಶೌಚಾಲಯ ವ್ಯವಸ್ಥೆ, ಹಳ್ಳಿಯ ಶಾಲೆಗೊಂದು ಗ್ರಂಥಾಲಯ ಯೋಜನೆಯಡಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳ ಹಳ್ಳಿಹಳ್ಳಿಗಳಲ್ಲಿ ಪಠ್ಯೇತರ ಪುಸ್ತಕಗಳ ವಿತರಣೆ , ಕರ್ನಾಟಕದ ೨೫೦ ಹಳ್ಳಿಗಳ ಗ್ರಂಥಾಲಯಗಳಿಗೆ ವಿಜ್ಞಾನ, ಸಾಹಿತ್ಯ, ಮನರಂಜನೆ ಹೀಗೆ ಹಲವಾರು ಪ್ರಕಾರದ ಪುಸ್ತಕಗಳ ವಿತರಣೆ, ಬಿ.ಆರ್. ಹಿಲ್ಸ್‌ನಲ್ಲಿರುವ ಸೋಲಿಗರ ಅಭಿವೃದ್ಧಿಗಾಗಿ ಡಾ. ಸಂದರ್ಶನರೊಡನೆ ಕೈಜೋಡಿಸಿ ಸೋಲಿಗರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪಠ್ಯಪುಸ್ತಕ, ಬಟ್ಟೆ-ಬರೆ,ಹೀಗೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಇನ್‌ಫೋಸಿಸ್‌ ಫೌಂಡೇಷನ್‌ ಮುಖಾಂತರ ನಡೆಸುತ್ತಾ ಬಂದಿದ್ದಾರೆ. ಗ್ರಾಮಕ್ಕೊಂದು ಶಾಲೆಯಂತೆ ಗ್ರಾಮಕ್ಕೊಂದು ಗಮಕವೂ ಆಗಿ, ಹಳ್ಳಿಗರ ಮನರಂಜನೆಯನ್ನೂ ಒದಗಿಸಲೆಂದು ಭಾರತೀಯ ವಿದ್ಯಾಭವನವು ಹೊರತಂದಿರುವ ಕುಮಾರ ವ್ಯಾಸ ಭಾರತದ ೨೦೦ ಕ್ಯಾಸೆಟ್‌ಗಳನ್ನು ಹಲವಾರು ಗ್ರಾಮಗಳಿಗೆ ವಿತರಿಸಿದ್ದಲ್ಲದೆ ಕ್ಯಾಸೆಟ್‌ಗಳ ಜೊತೆಗೆ ಟೇಪ್‌ರೆಕಾರ್ಡ್‌ಗಳನ್ನೂ ಒದಗಿಸಿ ಹಳ್ಳಿಗರು ಧ್ವನಿಸುರುಳಿ ಕೇಳಲು  ಅವಕಾಶ ಮಾಡಿಕೊಟ್ಟಿದ್ದಾರೆ. ಸಾಮಾಜಿಕ ಚಟುವಟಿಕೆಗಳ ಜೊತೆಗೆ ಮಕ್ಕಳ ಮನೋವಿಕಾಸಕ್ಕಾಗಿ ಕಥೆ ಹೇಳುವ ಕೆಲಸವನ್ನು ಕೈಗೊಂಡು ವರ್ಲ್ಡ್‌ಸ್ಪೇಸ್‌ ಸೆಟಲೈಟ್‌ ರೇಡಿಯೋದಲ್ಲಿ ಕನ್ನಡದ ‘ಸ್ಪರ್ಶ’ ವಾಹಿನಿಯಲ್ಲಿ ಹಲವಾರು ಕಥಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಸಮಾಜ ಸೇವೆಯಲ್ಲಿ ತೊಡಗಲು ಮಗಳು ಅಕ್ಷತಾಳಿಂದಲೇ ಮೂಲ ಪ್ರೇರಣೆ, ಅಕ್ಷತಾ ಪಿ.ಯು. ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದು, ರಮಣ ಮಹಯರ್ಷಿ ಅಂಧರ ಶಾಲೆಯಲ್ಲಿದ್ದ ಆನಂದಶರ್ಮ ಎಂಬ ವಿದ್ಯಾರ್ಥಿ ದೆಹಲಿಯ ಸೇಂಟ್ ಸ್ಟೀಫನ್ಸ್‌ ಕಾಲೇಜಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸೇರಲು ಬಯಸಿ, ಹಣದ ಅಡಚಣೆಯಾದಾಗ, ಅಕ್ಷತಾ ಅಮ್ಮನನ್ನು ಕೇಳಿದಳು. ನಿನ್ನ ಬರ್ತ್‌ಡೇ ಖರ್ಚು ಉಳಿಸಿ ಹಣ ಸಹಾಯ ಮಾಡೆಂದು ಸೂಚಿಸಿದಾಗ ಹಾಗೇ ಮಾಡಿದಳು. ನಂತರ ಮಗಳ ಈ ಕಾರ್ಯವೇ ಇವರಿಗೂ ಪ್ರೇರಣೆ ನೀಡಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಕಾರಣವಾಯಿತು. ವಿಜ್ಞಾನ, ತಂತ್ರಜ್ಞಾನಗಳಲ್ಲಿ ಆಸ್ಥೆ ಇರುವಂತೆ ಅವರ ಕಲಿಕೆಯ ಆಸಕ್ತ ಕ್ಷೇತ್ರಗಳೂ ಬಹುವಿಧ. ಪುರಾತನ ಶಾಸನಗಳ ಲಿಪಿಯನ್ನೂ ಅರ್ಥಮಾಡಿಕೊಳ್ಳಲು ಶಾಸನ ಶಾಸ್ತ್ರ ಅಧ್ಯಯನಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಶಾಸನ ಶಾಸ್ತ್ರ ತರಗತಿಗಳಿಗೂ ಹೋಗಿ ಕಲಿತಿದ್ದಾರೆ. ಇವರ ಮತ್ತೊಂದು ಆಸಕ್ತಿಯ ಕ್ಷೇತ್ರವೆಂದರೆ ಸಾಹಿತ್ಯ. ಮಕ್ಕಳಿಗಾಗಿ ರೇಡಿಯೋ ‘ಸ್ಪರ್ಶ’ ವಾಹಿನಿಯಲ್ಲಿ ಕತೆ ಹೇಳಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಹಲವಾರು ಬಾರಿ ವಿದೇಶಯಾತ್ರೆ ಮಾಡಿದ್ದರ ಫಲವಾಗಿ ಬರೆದ ಮೊದಲಿ ಪ್ರವಾಸಕಥನ ‘ಅಟ್ಲಾಂಟ ದಾಚೆಯಿಂದ’. ನಂತರ ‘ಹಕ್ಕಿಯ ತೆರದಲಿ’, ‘ಕಾವೇರಿಯಿಂದ ಮೆಕಾಂಗಿಗೆ’ ಇವು ಮೂರು ಪ್ರವಾಸ ಕಥನಗಳು. ಮಕ್ಕಳಿಗಾಗಿ ಗುಟ್ಟೊಂದು ಹೇಳುವೆ,  ಮಕ್ಕಳಿಗಾಗಿ ನನ್ನ ಮೆಚ್ಚಿನ ಕಥೆಗಳು, ಸುಖೇಶಿ ಮತ್ತು ಇತರ ಕಥೆಗಳು, ಕಂಪ್ಯೂಟರ್ ಲೋಕದಲ್ಲಿ ಮುಂತಾದ ಕೃತಿಗಳ ಜೊತೆಗೆ ನವಸಾಕ್ಷರರಿಗಾಗಿಯೂ ಕೃತಿ ರಚಿಸಿದ್ದಾರೆ. ದಿನ ಪತ್ರಿಕೆಗಳಾದ ವಿಜಯಕರ್ನಾಟಕ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ಅಂಕಣ ಬರಹಗಾರ್ತಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈ ಅಂಕಣಗಳ ಸಂಗ್ರಹ ಕೃತಿಗಳಾದ ಮನದಮಾತು (ಇಂಗ್ಲಿಷ್‌ನಲ್ಲಿ ವೈಸ್ ಅಂಡ ಅದರ್ ವೈಸ್‌)’, ಏರಿಳಿತದ ದಾರಿಯಲ್ಲಿ’ ಮತ್ತು ‘ಸಾಮಾನ್ಯರಲ್ಲಿ ಅಸಮಾನ್ಯರು’ ಮುಂತಾದವುಗಳು ಪ್ರಕಟಗೊಂಡಿವೆ. ಮ್ಯಾಜಿಕ್‌ ಡ್ರಮ್‌ ಎಂಬ ೭೭ ಕಥೆಗಳ ಸಂಕಲನವು ಮರಾಠಿ ಭಾಷೆಗೂ ಸುಖೇಶಿ ಮತ್ತು ಇತರ ಕಥೆಗಳು ಇಂಗ್ಲಿಷ್‌ಗೂ ಅನುವಾದಗೊಂಡಿವೆ. ಇದಲ್ಲದೆ ಇವರು ಬರೆದ ಕಾದಂಬರಿಗಳೆಂದರೆ ಅವ್ಯಕ್ತೆ, ಅತಿರಿಕ್ತೆ,  ಮಹಾಶ್ವೇತೆ, ಡಾಲರ್ ಸೊಸೆ, ಪರಿಧಿ, ಯಶಸ್ವಿ, ತುಮಲ ಮತ್ತು ಋಣ ಮುಂತಾದವುಗಳು. ‘ಡಾಲರ್ ಸೊಸೆ’ ಕಾದಂಬರಿಯು ಮೈಸೂರು ವಿ.ವಿ.ದ. ತರಗತಿಗಳಿಗೆ ಪಠ್ಯಪುಸ್ತಕವಾಗಿಯೂ ಆಯ್ಕೆಯಾಗಿತ್ತು. ಇವರು ಬರೆದಿರುವ ೧೭ ಕನ್ನಡ ಸಾಹಿತ್ಯ ಕೃತಿಗಳು, ೪ ಇಂಗ್ಲಿಷ್‌ ಕೃತಿಗಳು ಭಾರತದ ೧೫ ಭಾಷೆಗಳಿಗೆ ಅನುವಾದಗೊಂಡಿದ್ದು ಒಟ್ಟು ಕೃತಿಗಳ ಸಂಖ್ಯೆ ೧೦೦ ನ್ನೂ ದಾಟಿದೆ. ಸಾಹಿತ್ಯ, ಸಮಾಜಸೇವೆ, ತಂತ್ರಜ್ಞಾನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸದಾ ಸಕ್ರಿಯರಾಗಿರುವ ಸುಧಾಮೂರ್ತಿಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳೂ ಲೆಕ್ಕವಿಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೦), ದೆಹಲಿಯ ಸಹಸ್ರಮಾನ ಮಹಿಳಾ ಶಿರೋಮಣಿ ಪ್ರಶಸ್ತಿ ಮತ್ತು ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಎಂಜನಿಯರಿಂಗ್‌ ಪ್ರತಿಷ್ಠಾನ ಪ್ರಶಸ್ತಿ (೨೦೦೧), ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ಮತ್ತು ಬೆಂಗಳೂರಿನ ಲೇಡೀಸ್‌ ಸರ್ಕಲ್‌ನಿಂದ ಅಚೀವರ್ಸ್ ವಿಥ್‌ ಎ ಹಾರ್ಟ್ ಪ್ರಶಸ್ತಿ (೨೦೦೨), ಶಿವಮೊಗ್ಗ ಕರ್ನಾಟಕ ಸಂಘದಿಂದ ಎಂ.ಕೆ. ಇಂದಿರಾ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ ಹಾಗೂ ಡಾ.ಸಾ.ಶಿ. ಮರುಳಯ್ಯ ಪ್ರಶಸ್ತಿ (೨೦೦೪), ಇಂದೂರ್ ನ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪ್ರಶಸ್ತಿ  (೨೦೦೫), ಕೇಂದ್ರ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಮತ್ತು ಮಹಾರಾಷ್ಟ್ರದ ಶಿವಾಜಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೨೦೦೭), ಫಾಯ್‌ ಫೌಂಡೇಶನ್‌ನಿಂದ (ಮಹಾರಾಷ್ಟ್ರ) ರಾಷ್ಟ್ರಭೂಷಣ ಪ್ರಶಸ್ತಿ ಮತ್ತು ಆಶ್ವಾಸ್‌ ನುಡಿಸಿರಿ ಪ್ರಶಸ್ತಿ (೨೦೦೯), ಬಸವಶ್ರೀ ಪ್ರಶಸ್ತಿ ಮತ್ತು ತುಮಕೂರು ವಿ.ವಿ.ದ ಗೌರವ ಡಾಕ್ಟರೇಟ್‌ (೨೦೧೦) ಮುಂತಾದ ಪ್ರಶಸ್ತಿಗಳು ಸಂದಿವೆ. ಸುಧಾಮೂರ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿವರ್ಷವೂ ಉತ್ತರ ಕರ್ನಾಟಕ ಲೇಖಕಿಯರಿಗೆ ಸಾಹಿತ್ಯ ಪ್ರಶಸ್ತಿ ನೀಡುತ್ತಾ ಬಂದಿದೆ.

Details

Date:
August 19, 2023
Event Category: