೨೯-೬-೧೯೪೦ ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಹುಟ್ಟಿದ್ದು ಸುಳ್ಯ ತಾಲ್ಲೂಕಿನ ಚೊಕ್ಕಾಡಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜ. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಶಿಕ್ಷಕ ವೃತ್ತಿ. ಸುಳ್ಯ, ಪೈಲೂರು, ಕುಕ್ಕುಜಡ್ಕ ಶಾಲೆಗಳಲ್ಲಿ ೩೯ ವರ್ಷಕಾಲ ಸಹಾಯಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸಲ್ಲಿಸಿದ ಸೇವೆ. ಎಳೆವೆಯಿಂದಲೇ ಅನುಭವಿಸಿದ ಕಷ್ಟ ಕಾರ್ಪಣ್ಯದ ದಿನಗಳು, ನೋವಿನ, ಅವಮಾನದ, ಅಸಹಾಯಕತೆಯ ಘಟನೆಗಳಿಗೆ ಪ್ರತಿಭಟನೆಯ ರೂಪ ನೀಡಿದ್ದೆ ಮೂರ್ತ ಕಾವ್ಯರೂಪದಲ್ಲಿ. ಸಂಕೇತ, ಪ್ರತಿಮೆ, ರೂಪಕಗಳ ಮೂಲಕ ಹೊರಹಾಕಿದಾಗ ಕವಿಯೊಬ್ಬನ ಆವಿರ್ಭಾವ. ಹೀಗೆ ಬರೆದ ಕವನಗಳು ನಾಡಿನ ಪ್ರಮುಖ ಪತ್ರಿಕೆಗಳೆಲ್ಲದರಲ್ಲೂ ಪ್ರಕಟಿತ. ರಚಿಸಿದ ಕೃತಿಗಳು, ಕವನ ಸಂಕಲನ-ತೆರೆ, ಬೆಟ್ಟವೇರಿದ ಮೇಲೆ, ನಿಮ್ಮವೂ ಇರಬಹುದು, ಮೊನ್ನೆ ಸಿಕ್ಕವರು, ಇದರಲ್ಲಿ ಅದು, ಇನ್ನೊಂದು ಬೆಳಗು, ಮಾಗಿಯ ಕೋಗಿಲೆ. ಗೀತೆಗಳು-ಹಾಡಿನ ಲೋಕ, ಬಂಗಾರದ ಹಕ್ಕಿ. ವಿಮರ್ಶೆ-ಕಾವ್ಯ ಸಮೀಕ್ಷೆ, ಕೃತಿಶೋಧ, ಒಳಹೊರಗು. ಕಾದಂಬರಿ-ಸಂತೆಮನೆ. ಸಂಪಾದಿತ : ೧೯೦೧-೧೯೭೬ರವರೆಗೆ ದಕ್ಷಿಣ ಕನ್ನಡ ಕಾವ್ಯ (ಇತರರೊಡನೆ). ಕ್ಯಾಸೆಟ್ ಹಾಗೂ ಸಿಡಿಗಳು-ಮಿಲನ, ಮಾನಸ, ಬೆಣ್ಣೆ ಕದ್ದ ನಮ್ಮ ಕೃಷ್ಣ, ವನಸಿರಿ, ಅನುರಾಗ, ಸಲ್ಲಾಪ, ಹುಣ್ಣಿಮೆ, ನೂಪುರ, ಸಿರಿಗನ್ನಡ, ದೀಪ, ಭಾವ ಚಿತ್ತಾರ, ನಿನ್ನ ಬಾಂದಳದಂತೆ. ಸಂದ ಗೌರವ ಪ್ರಶಸ್ತಿಗಳು-೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಸುಳ್ಯ ತಾಲ್ಲೂಕು ೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ದ.ಕ. ಜಿಲ್ಲಾ ೧೫ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ವರ್ಧಮಾನ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ಮೃತ್ಯುಂಜಯ ಸಾರಂಗ ಮಠ ಪ್ರಶಸ್ತಿ, ಸಾಹಿತ್ಯಕಲಾನಿ ಪ್ರಶಸ್ತಿ, ಕರ್ನಾಟಕ ಶ್ರೀ ಪ್ರಶಸ್ತಿ ಮುಖ್ಯವಾದುವು. ಅರ್ಪಿಸಿದ ಗೌರವಗ್ರಂಥ ‘ಮುಕ್ತ ಹಂಸ.’ ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಜಿ. ಕೃಷ್ಣಮೂರ್ತಿ – ೧೯೩೧ ಮಾಲಿನಿ ಮಲ್ಯ – ೧೯೫೧ ದೇಸಾಯಿ ದತ್ತಮೂರ್ತಿ – ೧೯೧೧-೧.೯.೭೯ ಎಚ್.ಡಿ. ಚಂದ್ರಪ್ಪಗೌಡ – ೧೯೨೯ ಉಪ್ಪುಂದ ಚಂದ್ರಶೇಖರ ಹೊಳ್ಳ – ೧೯೪೬

