ಸುರೇಂದ್ರ ಸಾ. ನಾಕೋಡ್

Home/Birthday/ಸುರೇಂದ್ರ ಸಾ. ನಾಕೋಡ್
Loading Events
This event has passed.

೧೧.೦೬.೧೯೩೨ ಕಲಾವಿದರ ಮನೆತನದಿಂದಲೇ ಬಂದ ಸುರೇಂದ್ರ ಸಾ ನಾಕೋಡ್ ರವರದು ಬಹುಮುಖ ಪ್ರತಿಭೆ. ಹುಟ್ಟಿದ್ದು ಗದಗ-ಬೆಟಗೇರಿಯಲ್ಲಿ. ತಂದೆ ವೆಂಕೂ ಸಾ ನಾಕೋಡ್‌ರವರು ವೃತ್ತಿಯಲ್ಲಿ ರಂಗಭೂಮಿಯ ಪ್ರಖ್ಯಾತ ಗಾಯಕರು, ಹಾರ್ಮೋನಿಯಂ ವಾದಕರು, ತಾಯಿ ನಾಗೂಬಾಯಿಯವರು ಕೂಡಾ ಸಂಗೀತ ಪ್ರೇಮಿ. ಚಿಕ್ಕಂದಿನಿಂದಲೇ ನಾಟಕ, ಸಂಗೀತಗಳತ್ತ ಒಲಿದ ಮನಸ್ಸು. ೧೨-೧೩ರ ಹರೆಯದಲ್ಲೇ ಹೇಮರೆಡ್ಡಿ ಮಲ್ಲಮ್ಮನ ಪಾತ್ರಧಾರಿಯಾಗಿ ರಂಗಭೂಮಿ ಪ್ರವೇಶ. ಕಿರಿಯ ವಯಸ್ಸಿನಲ್ಲೇ ಮಲ್ಲಮ್ಮನ ಪಾತ್ರ ಮಾಡಿ ತೋರಿದ ಅದ್ಭುತ ಪ್ರತಿಭೆ. ಹಲವಾರು ಪುರುಷ ಪಾತ್ರಗಳಲ್ಲೂ ಪಡೆದ ಪ್ರಖ್ಯಾತಿ. ಹಾಸ್ಯಪಾತ್ರಗಳಲ್ಲೂ ತೋರಿದ ಕೌಶಲ. ಉತ್ತರ ಕರ್ನಾಟಕದ ಹಾಸ್ಯ ಪಾತ್ರಧಾರಿ ಎಂಬ ಹೆಗ್ಗಳಿಕೆ. ಅಣ್ಣ ಅರ್ಜುನ್ ಸಾ ನಾಕೋಡ್‌ರವರಿಂದ ಕಲಿತ ಹಿಂದೂಸ್ತಾನಿ ಸಂಗೀತ ಹಾಗೂ ಹಾರ‍್ಮೋನಿಯಂ ವಾದನ. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ವರ್ಷಕಾಲ ವೃತ್ತಿರಂಗಭೂಮಿಯ ಒಡನಾಟ. ಸಂಗೀತ ಮನೆತನದಲ್ಲಿ ಹುಟ್ಟಿ, ಅದನ್ನೇ ಮೂಲಾಧಾರವಾಗಿ ಮಾಡಿಕೊಂಡು ಹುಬ್ಬಳ್ಳಿ, ದಾವಣಗೆರೆ, ಕುಂದಗೋಳದಲ್ಲಿ ಸ್ಥಾಪಿಸಿದ ಶ್ರೀ ಶಾರದಾ ಸಂಗೀತ ವಿದ್ಯಾಲಯ. ಅದೃಷ್ಟವನ್ನರಸುತ್ತ ಬಂದುದು ಬೆಂಗಳೂರಿಗೆ. ಹರಿಕೋಡೆಯವರ ಆಶ್ರಯ, ಪ್ರೋತ್ಸಾಹದಿಂದ ನೆಲೆಕಂಡ ಬದುಕು. ಕುಂದಗೋಳದಲ್ಲಿ ಸವಾಯಿ ಗಂಧರ್ವರ ಪುಣ್ಯತಿಥಿಯ ಸಂಗೀತೋತ್ಸವ, ದಸರಾ ಸಂಗೀತೋತ್ಸವ, ಹಂಪಿ ಸಂಗೀತೋತ್ಸವಗಳಲ್ಲಿ ಭಾಗಿ. ಗದಗ, ಮೂಡಬಿದ್ರೆ, ಉಡುಪಿ, ಮಂಗಳೂರು, ಚಿತ್ರದುರ್ಗ, ಮಡಕೇರಿ, ರಾಯಚೂರು, ಶಿವಮೊಗ್ಗಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಅಂತಾರಾಷ್ಟ್ರೀಯ ಖ್ಯಾತಿಯ ಹಾಡುಗಾರರಾದ ಪರಿವೀನ ಸುಲ್ತಾನ, ಸಲಾಮತ್ ಅಲಿಖಾನ್, ಯೂಸಫ್ ಅಲಿಖಾನ್, ಜಸ್‌ರಾಜ್, ಬಸವರಾಜ ರಾಜಗುರು ಮುಂತಾದವರುಗಳಿಗೆ ನೀಡಿದ ತಬಲ ಸಾಥಿ. ಗಂಗೂಬಾಯಿ ಹಾನಗಲ್, ಅರ್ಜುನ್ ಸಾ ನಾಕೋಡ್, ಶ್ರೀರಾಮ್ ಮರಾಠೆ, ಕ್ಲಾರಿನೆಟ್ ವಾದಕ ಬಂಡೋಪಾಧ್ಯಾಯ, ಮಾಧುರಿಜೋಶಿ, ಲಲಿತಾ ಉಭಯಂಕರ್‌ರವರುಗಳಿಗೆ ನೀಡಿದ ಹಾರ‍್ಮೋನಿಯಂ ಸಾಥಿ. ಆಕಾಶವಾಣಿ, ಟಿ.ವಿ. ಧಾರಾವಾಹಿ ಕಲಾವಿದರಾಗಿಯೂ ಅಭಿನಯಿಸಿದ ಕೀರ್ತಿ, ಚಂದ್ರಿಕಾ ಗುರುರಾಜ್, ಸಿ. ಅಶ್ವತ್ಥ್‌, ಮುದ್ದುಕೃಷ್ಣ, ಕಿರಣಮಯಿ, ಲಕ್ಷ್ಮೀ ಹಬೀಬ ತ್ರಿವೇಣಿ ಇವರುಗಳು ಶಿಷ್ಯ ವರ್ಗದಲ್ಲಿ ಪ್ರಮುಖರು. ರಾಜ್ಯ ಸಂಗೀತ, ನೃತ್ಯ ಅಕಾಡಮಿ ಪ್ರಶಸ್ತಿ, ಕಲಾಶ್ರೀ ಬಿರುದು, ಚಾಲುಕ್ಯ ಬಿರುದು ಮುಂತಾದ ಗೌರವ ಪ್ರಶಸ್ತಿಗಳು ಬಂದಿದ್ದರೂ ಪ್ರಮುಖ ಪ್ರಶಸ್ತಿಗಳಿಂದ ವಂಚಿತರೆ. ಇದೀಗ ತಮ್ಮದೆ ಸಂಗೀತ ವಿದ್ಯಾಲಯದ ಮೂಲಕ ಶಿಷ್ಯರಿಗೆ ನೀಡುತ್ತಿರುವ ಸಂಗೀತ ಶಿಕ್ಷಣ.   ಇದೇದಿನಹುಟ್ಟಿದಕಲಾವಿದರು ಬೆಳಕವಾಡಿ ರಂಗಸ್ವಾಮಿ ಅಯ್ಯಂಗಾರ್‌- ೧೯೨೩ ವಿಜಯವಾಮನ ಬಿ.ಆರ್‌. – ೧೯೪೮.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top