೩೦-೧-೧೯೫೫ ಹಾಸ್ಯ ಸಾಹಿತಿ ಸೂರಿ ಹಾರ್ದಳ್ಳಿ ಹುಟ್ಟಿದ್ದು ಕುಂದಾಪುರ ತಾಲ್ಲೂಕು ಹಾರ್ದಳ್ಳಿ. ತಂದೆ ಕೃಷ್ಣದೇವ ಕೆದಿಲಾಯ, ತಾಯಿ ಶಾರದಮ್ಮ. ಕೃಷಿ ಪೌರೋಹಿತ್ಯದಿಂದ ಅತ್ಯಲ್ಪ ವರಮಾನ. ಕಿತ್ತು ತಿನ್ನುವ ಬಡತನ. ಮಕ್ಕಳು ತುಂಬಿದ ನಂದ ಗೋಕುಲ. ಪ್ರಾಥಮಿಕ ವಿದ್ಯಾಭ್ಯಾಸ ಹಾರ್ದಳ್ಳಿ. ಹೈಸ್ಕೂಲು ಕಲಿತದ್ದು ಬಿದಕಲ್ ಕಟ್ಟೆ. ಪಿ.ಯು. ಸೇರಿದ್ದು ಹದಿನಾರು ಕಿ.ಮೀ. ದೂರದ ಶಂಕರ ನಾರಾಯಣ. ಸೌಕರ್ಯವಿಲ್ಲದೆ ಕಾಲು ನಡಿಗೆ ಪ್ರಯಾಣ. ಮನೆಯಲ್ಲಿ ಗಡಿಯಾರವಿಲ್ಲದೆ ಬಿಸಿಲಿಗೆದುರು ನಿಂತು ಹೊತ್ತಿನ ಎಣಿಕೆ. ಶಾಲೆಯ ಕಡೆ ನಡಿಗೆ. ಊಟಕ್ಕೆ ತತ್ವಾರ. ಇನ್ನು ಪುಸ್ತಕಕ್ಕೆಲ್ಲಿ ಹಣ, ಓದಿನ ಹಂಬಲ. ತಿಂಡಿಯ ಹದಿನೈದು ಪೈಸೆ ಉಳಿಸಿಕೊಳ್ಳುತ್ತಿದ್ದುದು ಕನ್ನಡಪ್ರಭ ಪತ್ರಿಕೆ ಕೊಳ್ಳಲು. ಮಧ್ಯಾಹ್ನ ಉಪವಾಸ. ಮಣ್ಣು ದಾರಿಯಲ್ಲಿ ಚಪ್ಪಲಿ ಇಲ್ಲದ ನಡಿಗೆ. ಅಡ್ಡ ಬಂದ ಹೊಳೆ ದಾಟಲು ಚೆಡ್ಡಿ ಬಿಚ್ಚಿ ಹೆಗಲಿಗೆ. ಇಲ್ಲದಿದ್ದರೆ ಒದ್ದೆ ಚೆಡ್ಡಿ ಗತಿ. ಬೆಳಿಗ್ಗೆ ಕಟ್ಟಿದ ಬುತ್ತಿ ಮಧ್ಯಾಹ್ನ ಹಳಸಲ ಮೃಷ್ಟಾನ್ನ. ಛಲದಲ್ಲಿ ಓದು. ಎಸ್.ಎಸ್.ಎಲ್.ಸಿ. ಪಾಸಾದಾಗ ತಂದೆಗೆ ಮಗ ಕೈಗೆ ಬಂದನೆಂದು ಖುಷಿ. ಉದ್ಯೋಗಕ್ಕೆ ಬೆಂಗಳೂರಿನ ಕಡೆ. ಚಾಮರಾಜಪೇಟೆ ಮಲಬಾರ್ ಲಾಡ್ಜ್ನಲ್ಲಿ ಮಾಣಿ ಕೆಲಸ. ಯಜಮಾನರ ಉದಾರತೆಯಿಂದ ಕಲಿಕೆ. ಕರ್ನಾಟಕ ವಿಶ್ವವಿದ್ಯಾಲಯ ಬೆಂಗಳೂರು ವಿಶ್ವವಿದ್ಯಾಲಯದ ಬಾಹ್ಯ ವಿದ್ಯಾರ್ಥಿ, ಪರೀಕ್ಷೆಗೆ ಹೋಗಲು ಕಾಸಿಲ್ಲದೆ ಕಾಲೇ ವಾಹನ. ಕಡೆಗೂ ಬಿ.ಎ. ಪದವಿ. ಮಲಬಾರ್ ಲಾಡ್ಜ್ ಮಾರಾಟದಿಂದ ಇದ್ದ ಕೆಲಸಕ್ಕೂ ಕತ್ತರಿ. ಬಿಸ್ಕತ್ ಕಾರ್ಖಾನೆ, ರಾಯಚೂರು-ರಾಯಚೂರು ವಾಣಿಯಲ್ಲಿ ಕೆಲಸ. ಕಡೆಗೆ ದಕ್ಕಿದ್ದು ಮೈಕೋ ಉಪಹಾರಗೃಹ. ಪರೀಕ್ಷೆ, ಸ್ಪರ್ಧೆ ಪ್ರತಿನಿತ್ಯದ ಕ್ರಮ. ಎಲ್ಲರನ್ನೂ ಹಿಂದಕ್ಕಿಕ್ಕಿ ಗಳಿಸಿದ ಭಡ್ತಿ. ಆಡಳಿತ ಸಂವಹನ ವಿಭಾಗದಲ್ಲಿ ಅಧಿಕಾರಿ ಪಟ್ಟ. ಬದುಕಿನ ಅಸ್ತಿತ್ವದ ಹೋರಾಟದ ನಡುವೆ ಓದು-ಬರೆಹ. ಕಥೆ, ಹಾಸ್ಯ ಲೇಖನಗಳ ಬರವಣಿಗೆ, ನಾಡಿನ ಎಲ್ಲ ನಿಯತಕಾಲಿಕೆಗಳಲ್ಲೂ ಪ್ರಕಟಿತ. ಟಿ.ವಿ. ಧಾರಾವಾಹಿಗಳ ಸಂಭಾಷಣೆ, ಕಥೆಗಾರ. ತ್ರಸ್ತ, ವಧುಪರೀಕ್ಷೆ-ಕಥಾಸಂಕಲನ ; ಸಿನಿಮಾ ಸಿನಿಮಾ, ಹಿತೈಷಿ, ಗಗನ ಸೌಧ-ಕಾದಂಬರಿ; ಹಾಸ್ಯನಾಟಕ-ಬಾಸನ್ನಿಬಾಯ್ಸೋದ್ಹೇಗೆ ? ; ಉಪಾಯೋಪಾಯಗಳು, ಉಗಾದಿಸೀರೆ, ಅನಾಮಧೇಯ ಪತ್ರಗಳು, ಹೆಂಡತಿಯನ್ನು ಪ್ರೀತಿಸಿದರೆ, ಸರ್ಕಾರಿ ಹಾಸ್ಯೋತ್ಸವ-ಹಾಸ್ಯ ಸಂಕಲನಗಳು ಪ್ರಕಟಿತ. ದೊರೆತ ಸನ್ಮಾನಗಳು-ಕಾಶಿ ಮಠವೊಂದರಿಂದ ಮತ್ತು ಕೋಲ್ಕತಾದ ಕನ್ನಡ ಸಂಘದಿಂದ ಸನ್ಮಾನ. ಪಡುಕೋಣೆ ರಮಾನಂದ ಪ್ರಶಸ್ತಿ ಮುಂತಾದುವು. ಪ್ರಸ್ತುತ ಕಾರ್ಪೋರೇಟ್ ಕಮ್ಯುನಿಕೇಷನ್ನಲ್ಲಿ ಅಧಿಕಾರಿ ಹುದ್ದೆ. ಇದೇ ದಿನ ಹುಟ್ಟಿದ ಸಾಹಿತಿಗಳು : ಎಸ್. ಅನಂತನಾರಾಯಣ – ೧೯೨೬-೨೬.೮.೧೯೯೨ ಎಂ.ಎ. ಜಯಚಂದ್ರ – ೧೯೪೪

