ಸೂರ್ಯನಾರಾಯಣ ಚಡಗ

Home/Birthday/ಸೂರ್ಯನಾರಾಯಣ ಚಡಗ
Loading Events
This event has passed.

೧೩..೧೯೩೨ ೧೪.೧೧.೨೦೦೬ ತಾವು ಬರೆದಿದ್ದರ ಜೊತೆಗೆ ಉದಯೋನ್ಮುಖ ಬರಹಗಾರರ ಕೃತಿಗಳನ್ನೂ ಪ್ರಕಟಿಸಿ ಉತ್ತೇಜಿಸುತ್ತಾ, ಹಿರಿಯ ಸಾಹಿತಿಗಳನ್ನು ಸನ್ಮಾನಿಸಿ ಸಂಭ್ರಮಿಸುತ್ತಿದ್ದ ಸೂರ್ಯನಾರಾಯಣ ಚಡಗರು ಹುಟ್ಟಿದ್ದು ೧೯೩೨ ರ ಏಪ್ರಿಲ್‌ ೧೩ ರಂದು ಇಂದಿನ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ.  ತಂದೆ ನಾರಾಯಣ ಚಡಗ, ತಾಯಿ ಶೇಷಮ್ಮ. ಹುಟ್ಟಿದೂರಿನಲ್ಲಿಯೇ ಪ್ರಾರಂಭಿಕ ಶಿಕ್ಷಣ. ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ಮನೆಯಲ್ಲಿ ಇದ್ದ ಭಾವನವರು ಕವಿ ಮುದ್ದಣನ ರಾಮೇಶ್ವಮೇಧವನ್ನೂ ಓದಿ ಹೇಳುತ್ತಿದ್ದರು. ಹುಡುಗನಾಗಿದ್ದ ಇವರ ಮನಸ್ಸಿನ ಮೇಲೂ ಪರಿಣಾಮಬೀರಿ ತಾನೂ ಅದೇರೀತಿ ಏಕೆ ಬರೆಯಬಾರದು ಎಂಬ ಯೋಚನೆ ಇವರ ಮನಸ್ಸನ್ನು ಕಾಡತೊಡಗಿತು. ಶಾಲೆಯ ಸ್ನೇಹಿತರನ್ನು ಸೇರಿಸಿಕೊಂಡು ಕೈಬರಹದ ಪತ್ರಿಕೆಯೊಂದನ್ನು ಪ್ರಾರಂಭಿಸಿಯೇ ಬಿಟ್ಟರು. ಹತ್ತನೆಯ ತರಗತಿಗೆ ಬರುತ್ತಿದ್ದಂತೆ ಕನ್ನಡ ಪಂಡಿತರಾಗಿದ್ದ ಸುಬ್ರಾಯಭಟ್ಟರು ಶಾಲಾಗ್ರಂಥ ಭಂಡಾರದಿಂದ ವಾರಕ್ಕೆರಡು ಪುಸ್ತಕಗಳನ್ನು ಓದಲೇಬೇಕೆಂದು ಕಡ್ಡಾಯಗೊಳಿಸಿದಾಗ ಇವರ ಪಾಲಿಗೆ ಮೊದಲ ಸಲವೇ ಸಿಕ್ಕಿದ್ದು ಶಿವರಾಮ ಕಾರಂತರ ‘ಮುಗಿಯದ ಯುದ್ಧ’ ಹಾಗೂ ‘ಮರಳಿಮಣ್ಣಿಗೆ’ ಕಾದಂಬರಿಗಳು. ಈ ಎರಡು ಕಾದಂಬರಿಗಳನ್ನು ಓದಿ ಪ್ರಭಾವಿತರಾದದ್ದಷ್ಟೇ ಅಲ್ಲದೆ ತಾವೂ ಅದೇರೀತಿ ಬರೆಯಬೇಕೆಂಬ ಪ್ರೇರಣೆಗೊಳಗಾಗಿ, ತಮ್ಮ ನೆರೆಯಲ್ಲಿದ್ದ ಸಂಸಾರದ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ರಚಿಸಿದ ನಾಟಕ ‘ಸಂಸಾರ’. ನಂತರ ಈ ನಾಟಕದ ಆಧಾರದ ಮೇಲೆಯೇ ರಚಿಸಿದ ಮೊಟ್ಟಮೊದಲ ಕಾದಂಬರಿ ‘ರತ್ನ ಪಡೆದ ಭಾಗ್ಯ,’. ಇಷ್ಟರಲ್ಲಾಗಲೇ ಅವರು ಊರು ತೊರೆದು ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದು ಅಣ್ಣ ವಿಠಲದಾಸ ಚಡಗರ ಪ್ರೋತ್ಸಾಹದಿಂದ ಮಲ್ಲೇಶ್ವರಂನಲ್ಲೊಂದು ಹೊಟೇಲು ತೆರೆದು ಜೀವನವನ್ನಾರಂಭಿಸಿದ್ದರು. ೧೯೫೨ ರಿಂದ ತಮ್ಮ ಬರವಣಿಗೆಯನ್ನೂ ಪ್ರಾರಂಭಿಸಿ ಹಲವಾರು ಸಾಹಿತಿಗಳ ಗಮನ ಸೆಳೆದದ್ದು ಸಾಹಿತಿ ಚಡಗರನ್ನು ಹುಡುಕಿಕೊಂಡು ಮಲ್ಲೇಶ್ವರಂನಲ್ಲಿದ್ದ ಇವರ ‘ದೇವಿಭವನ’ ಹೊಟೇಲಿಗೆ ಬಂದ ಸಾಹಿತಿಗಳಿಗೆ ಬೆಣ್ಣೆಮಸಾಲೆದೋಸೆ ಸೇವೆ ಧಾರಾಳವಾಗಿ ದೊರೆಯುತ್ತಿತ್ತು. ಇವರ ಹೊಟೇಲಿನ ಡ್ರಾಯಿಂಗ್‌ ರೂಮಿನಲ್ಲಿ ಸೇರುತ್ತಿದ್ದ ಸಾಹಿತಿಗಳೆಂದರೆ ಅ.ನ.ಕೃ, ತ.ರಾ.ಸು, ರಾಜರತ್ನಂ ಮುಂತಾದವರೊಡನೆ ಕೆಲ ಕಿರಿಯಸಾಹಿತಿಗಳ ನೆಚ್ಚಿನ ತಾಣವಾಗಿ ಅದೊಂದು ‘ಚಡಗರ ಕಟ್ಟೆ’ ಎಂದೇ ಪ್ರಸಿದ್ಧವಾಗಿತ್ತು. ಡ್ರಾಯಿಂಗ್‌ ರೂಂ ಎಂದರೆ ಅದೆಂತಾದ್ದು! ಈರುಳ್ಳಿ, ಆಲೂಗಡ್ಡೆ ಮೂಟೆಗಳೇ ಕುರ್ಚಿಗಳು. ಅಲ್ಲಿ ನಡೆಯುತ್ತಿದ್ದ ಚರ್ಚೆಯ ಫಲಶ್ರುತಿಯೇ ಕಥೆ ಕಾದಂಬರಿಗಳಿಗೆ ಪ್ರೇರಣೆ-ವಸ್ತು, ಒಗ್ಗಿಸಿಕೊಂಡು ಬರಹಗಳಿಗಾಗಿಸಿದ್ದು ಸಾಹಿತಿಗಳಿಗೆ ಬಿಟ್ಟ ವಿಚಾರವಾಗಿತ್ತು. ತಾವಷ್ಟೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳದೆ ತಮ್ಮಂತೆ ಕೃತಿರಚಿಸಲು ಪ್ರಾರಂಭಿಸಿದ್ದ ಉದಯೋನ್ಮುಖ ಲೇಖಕರನ್ನು ನಿರಾಸೆಗೊಳಿಸಬಾರದೆಂಬ ದೃಷ್ಟಿಯಿಂದ ‘ನಂದನ ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನೇ ಪ್ರಾರಂಭಿಸಿ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದರು. ಇವರು ಬರೆದ ಸಣ್ಣಕಥೆಗಳು ‘ನಮ್ಮೂರಕಥೆಗಳು’, ‘ಜರತಾರಿ ಕುಪ್ಪಸೆ’ ಮತ್ತು ‘ಆರನೆಯ ಮೈಲಿಕಲ್ಲು’ ಎಂಬ ಮೂರು ಸಂಕಲನಗಳಲ್ಲಿ ಸಂಗ್ರಹವಾಗಿವೆ. ಸುಮಾರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದಿದ್ದು ‘ಮನೆತನ’ ಕಾದಂಬರಿ ಗೆ ರಾಜ್ಯಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ‘ಹೆಣ್ಣು ಹೊನ್ನು ಮಣ್ಣು’ ಐದು ಮುದ್ರಣ ಕಂಡ ಕಾದಂಬರಿ, ತುಳುಭಾಷೆಯಲ್ಲಿ ಚಲನಚಿತ್ರವಾಗಿದೆ. ಇದಲ್ಲದೆ ನಂದಾದೀಪ, ಮನೆಗೆ ಬಂದ ಸೊಸೆ, ಮನೆತುಂಬಿದ ಮಡದಿ, ಭೂರಿಬ್ರಾಹ್ಮಣ, ದೇವರ ಹೆಂಡತಿ ಮುಂತಾದ ಕಾದಂಬರಿಗಳೂ ಹಲವಾರು ಮುದ್ರಣಗಳನ್ನು ಕಂಡಿವೆ. ಜೊತೆಗೆ ಕಾವೇರಿ, ಕ್ಷಮೆ ಇರಲಿ ಪ್ರಭುವೆ, ಸೀಮಂತಿ, ಅಮರಸರಸ್ವತಿ, ಬಂಗಾಲಕ್ಷ್ಮೀ ಧರ್ಮ, ಕರ್ಮ, ಹೃದಯರಾಣಿ ಮುಂತಾದವುಗಳೂ ಸೇರಿ ೩೦ ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟಿತ. ಉದಯೋನ್ಮುಖ ಬರಹಗಾರರ ಬೆನ್ನೆಲುಬಾಗಿ ಪ್ರಕಾಶಕರಾಗಿದಷ್ಟೇ ಅಲ್ಲದೆ ತಾವು ಸಂಪಾದಕರಾಗಿ ಸಂಪಾದಿಸಿರುವ ಕೃತಿಗಳನ್ನೂ ತಮ್ಮ ಪ್ರಕಾಶನದಿಂದಲೇ ಪ್ರಕಟಿಸಿದ್ದಾರೆ. ೧೯೬೮ ರಲ್ಲಿ ೧೦೫ ಲೇಖಕಿಯರ ೮೯೬ ಪುಟಗಳ ಕಥಾಸಂಕಲನ ‘ಕಾಮಧೇನು’, ೧೯೬೯ ರಲ್ಲಿ ೧೫೦ ನಗೆಬರಹಗಳ ೧೦೦೦ ಪುಟಗಳ ಸಂಕಲನ ‘ನಗೆನಂದನ’, ೧೯೭೪ ರಲ್ಲಿ ಹಳಗನ್ನಡದಿಂದ ಆಧುನಿಕ ಕನ್ನಡದವರೆಗೆ ಹಾಸ್ಯ, ವಿಡಂಬನೆ, ಅಣಕ, ಕುಚೋದ್ಯ, ಪರಿಹಾಸ್ಯ , ವ್ಯಂಗ್ಯ ಬರಹಗಳ ಪದ್ಯ-ಗದ್ಯ ಮಿಶ್ರಿತ ೨೧೭ ಲೇಖಕರ ೧೧೨೦ ಪುಟಗಳ ಬೃಹತ್‌ ಸಂಕಲನ ‘ಸುಹಾಸ’ ಕೃತಿಯನ್ನು ಮತ್ತು ಪ್ರಾತಿನಿಧಿಕ ಕಥಾ ಸಂಕಲನ ‘ದಿಗಂತ’ (ಸಹಸಂಪಾದಕರು), ‘ಮೆಚ್ಚಿನ ಕನ್ನಡ ಬರಹಗಾರರು’ ಕೃತಿಗಳನ್ನೂ ಪ್ರಕಟಿಸಿದ್ದಾರೆ. ಜೊತೆಗೆ ‘ಜಯದೇವಿತಾಯಿ’ (ಜಯದೇವಿತಾಯಿ ಲಿಗಾಡೆ), ‘ಕಾರಂತ ಕೊಂಗಾಟೆ (ಶಿವರಾಮ ಕಾರಂತರು), ‘ಸೃಜನ’ (ಡಿ. ವೀರೇಂದ್ರ ಹೆಗಡೆ) ಮುಂಥಾದವರ ಸಂಭಾವನ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಒಮ್ಮೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿನ ಸಾಹಿತ್ಯ ಕಾರ್ಯಕ್ರಮವೊಂದಕ್ಕೆ ರಾಧಾಕೃಷ್ಣ ಕಲ್ಯಾಣಪುರ್ ರೊಡನೆ ಹೋಗಿದ್ದು, ಅಲ್ಲಿನ ಪ್ರಾಚೀನ ಅರುಣಾಚಲದೇಗುಲದ ಪ್ರದಕ್ಷಿಣೆ ಬರುತ್ತಿದ್ದಾಗ ಕಾಲಿಗೆ ಎಡವಿದನ್ನು ಮಣ್ಣು ಸರಿಸಿ ನೋಡಿದರೆ ಅದೊಂದು ಸುಂದರ ವಿಗ್ರಹ . ಇದರಿಂದ ಪ್ರಚೋದಿತರಾಗಿ ಸಂಗ್ರಹಿಸಿದ್ದು ಹಲವಾರು ಪ್ರಾಚೀನ ವಸ್ತುಗಳು. ಹೀಗೆ ಹತ್ತಾರು ವರ್ಷ ಊರೂರು ಸುತ್ತಿ ಸಂಗ್ರಹಿಸಿದ ವಸ್ತುಗಳು ಮನೆಯಲ್ಲೆಲ್ಲಾ ತುಂಬಿಹೋಗಿ, ಸ್ಥಳಾವಕಾಶ ಸಾಲದಾದಾಗ ಕನ್ನಡಸಾಹಿತ್ಯ ಪರಿಷತ್ತಿಗೆ ದಾನಮಾಡಿಬಿಟ್ಟರು. ಪರಿಷತ್ತು, ವಿಶ್ವವಿದ್ಯಾಲಯಗಳು ಮಾಡಬೇಕಾದ ಕೆಲಸವನ್ನು ಏಕವ್ಯಕ್ತಿಯಾಗಿ ಬಹುಶ್ರಮದಿಂದ ಸಂಗ್ರಹಿಸಿದ್ದರು. ಚಡಗರಿಗೆ ಸಂಘಟನೆ, ಸಮಾರಂಭಗಳೆಂದರೆ ಸಂಭ್ರಮ . ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರುಗಳಾದ ಅ.ನ.ಕೃ ಕಾರಂತರು, ಮಾಸ್ತಿ, ರಾಜರತ್ನಂ, ಗೋಕಾಕರು,  ವಿ.ಸೀ, ಬೀ.ಚಿ ಮುಂತಾದವರುಗಳನ್ನು ಸನ್ಮಾನಿಸಿ ಪಟ್ಟ ಸಂತಸ. ೭೦ನೆಯ ಹುಟ್ಟು ಹಬ್ಬದ ಸಂದರ್ಭಕ್ಕೆ ಅಭಿಮಾನಿಗಳು ಚಡಗರಿಗೆ ಅರ್ಪಿಸಿದ ಗೌರವ ಗ್ರಂಥ ‘ಸಡಗರ’. ಅನಾರೋಗ್ಯವನ್ನು ಲೆಕ್ಕಿಸದೆ ಸಾಹಿತ್ಯದ ಕಾರ್ಯಕ್ರಮವೆಂದರೆ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದ ಚಡಗರು ಸಾಹಿತ್ಯಲೋಕದಿಂದ ನಿರ್ಗಮಿಸಿದ್ದು ೨೦೦೬ ರ ನವಂಬರ್ ೧೪ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top