ಸೂ. ಸುಬ್ರಹ್ಮಣ್ಯಂ

Home/Birthday/ಸೂ. ಸುಬ್ರಹ್ಮಣ್ಯಂ
Loading Events

೦೫.೦೬.೧೯೩೫ ಶಾಲಾ ಕಾಲೇಜು ದಿನಗಳಿಂದಲೇ ಕನ್ನಡಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದು ಕಚೇರಿ, ಕಾರ್ಖಾನೆಗಳಲ್ಲಿ ಕನ್ನಡ ಸಂಘಗಳ ಸ್ಥಾಪನೆಗೆ ಚಾಲನೆ ನೀಡಿ, ಕನ್ನಡ ವಾತಾವರಣವನ್ನು  ಮೂಡಿಸಿದ್ದಲ್ಲದೆ ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಸುಬ್ರಹ್ಮಣ್ಯಂ ರವರು ಹುಟ್ಟಿದ್ದು ೧೯೩೫ ರ ಜೂನ್ ೫ರಂದು ತುಮಕೂರಿನಲ್ಲಿ. ತಂದೆ ವಕೀಲರಾಗಿದ್ದ ಎಸ್. ಸೂರ‍್ಯನಾರಾಯಣರಾವ್, ತಾಯಿ ಕನಕಲಕ್ಷಮ್ಮ. ಪ್ರಾರಂಭಿಕ ಶಿಕ್ಷಣ ಶ್ರೀರಂಗಪಟ್ಟಣ ಹಾಗೂ ಚೆನ್ನಪಟ್ಟಣ. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ ಸಿ. ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ  ಬಿ. ಎಡ್. ಪದವಿಗಳ ನಂತರ ಎಂ.ಎ. ಪದವಿ. ರಿಸರ್ವಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದ ನಂತರ ೧೯೬೦-೭೦ರ ದಶಕದಲ್ಲಿ ಬೆಂಗಳೂರಿನಲ್ಲಿ ಕನ್ನಡವನ್ನು ನಿಕೃಷ್ಟವಾಗಿ ಕಾಣುತ್ತಿದ್ದ ಸಂದರ್ಭದಲ್ಲಿ ಕಚೇರಿಯಲ್ಲಿ ಕನ್ನಡದ ವಾತಾವರಣವನ್ನು ಮೂಡಿಸಲು ಕನ್ನಡ ಸಂಘವನ್ನು ಸ್ಥಾಪಿಸಿ, ಸಂಘದ ಮೂಲಕ ಹಲವಾರು ಕಾರ‍್ಯಕ್ರಮಗಳನ್ನು ಹಮ್ಮಿಕೊಂಡ ನಂತರ ಹಲವಾರು ಬ್ಯಾಂಕುಗಳಲ್ಲಿ ಕನ್ನಡ ಸಂಘ ಸ್ಥಾಪನೆಗೆ ಇದು ಪ್ರಚೋದನೆ ನೀಡಿ, ಹಲವಾರು ಕನ್ನಡ ಸಂಘಗಳು ಸ್ಥಾಪನೆಗೊಂಡು ಕನ್ನಡ ಕಾರ‍್ಯಕ್ರಮಗಳು ನಡೆಯಲು ಸಹಕಾರಿಯಾಯಿತು. ಇದರಿಂದ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಕೆಲ ಅಂಶದ ಉದ್ಯೋಗಾವಕಾಶಗಳು ದೊರೆಯಲು ಕಾರಣವಾಯಿತು. ಮಕ್ಕಳ ಸಾಹಿತ್ಯದ ಬಗ್ಗೆ ಒಲವಿದ್ದ ಸುಬ್ರಹ್ಮಣಂ ರವರು ಹಲವಾರು ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದರು. ಪಂಜೆ ಮಂಗೇಶರಾವ್, ಹೊಯ್ಸಳ, ತೋನ್ಸೆ ಮಂಗೇಶರಾಯರು, ಮಚ್ಚಿಮಲೆ ಶಂಕರನಾರಾಯಣರಾಯರು, ರಾಜರತ್ನಂ ಮುಂತಾದವರು ಹಾಕಿದ ಹಾದಿಯಲ್ಲಿ ಇತ್ತೀಚಿನ ಸಾಹಿತಿಗಳು ಮಕ್ಕಳ ಸಾಹಿತ್ಯ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿಲ್ಲ. ಮಕ್ಕಳ ಮನೋಧರ‍್ಮ, ವಯೋಧರ‍್ಮಕ್ಕೆ ತಕ್ಕಂತಹ ಸೃಜನಶೀಲ ಕೃತಿಗಳು ರಚನೆಯಾಗುತ್ತಿಲ್ಲವೆನ್ನುವ ಸೂ.ಸು. ರವರು ಮಕ್ಕಳ ಸಾಹಿತ್ಯದ ಬಗ್ಗೆ ಖಚಿತ ಅಭಿಪ್ರಾಯ ಹೊಂದಿದ್ದಾರೆ. ಫ್ರಾನ್ಸನಲ್ಲಿ ನ್ಯಾಷನಲ್ ರಿಸರ್ಚ್ ಸೊಸೈಟಿ ಫಾರ್ ಚಿಲ್ಡನ್ಸ್ ಲಿಟರೇಚರ್ (೧೯೮೩) ಆಯೋಜಿಸಿದ್ದ ಸಮ್ಮೇಳನದಲ್ಲಿ ಹಾಗೂ ಜರ್ಮನಿಯಲ್ಲಿ ನಡೆದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ  ಪಾಲ್ಗೊಂಡು ‘ಕನ್ನಡ ಮಕ್ಕಳ ಸಾಹಿತ್ಯದ ಮೇಲೆ ಭಾರತದ ಪ್ರಾಚೀನ ಸಾಹಿತ್ಯದ ಪ್ರಭಾವ’ ಎಂಬ ಪ್ರಬಂಧವನ್ನು ಮಂಡಿಸಿ ಮೆಚ್ಚುಗೆ ಪಡೆದಿದ್ದಾರೆ. ಮಕ್ಕಳ ಸಾಹಿತ್ಯವೆಂದರೆ ಕಾಗಕ್ಕ-ಗುಬ್ಬಕ್ಕಗಳ ಅಥವ ಪ್ರಾಸಬದ್ಧ ರಚನೆಗಳಾಗಿರದೆ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕ ವಾಗುವಂತಹ ಆಕರ್ಷಣೀಯ ಕೃತಿ ರಚಿಸಿದಾಗ ಮಕ್ಕಳ ಮನಸ್ಸನ್ನು ಸೆರೆಹಿಡಿಯ ಬಲ್ಲದೆಂಬ ಖಚಿತ ಅಭಿಪ್ರಾಯದ ಸೂ.ಸು. ರವರು ಮಕ್ಕಳಿಗಾಗಿ ಹಲವಾರು ಕೃತಿ ರಚಿಸಿದ್ದಾರೆ. ಮಕ್ಕಳಿಗಾಗಿ ಸಾಹಿತ್ಯ ಕೃತಿಗಳನಷ್ಟೇ ಅಲ್ಲದೆ ವಿಜ್ಞಾನದ ಬಗ್ಗೆ ಆಸಕ್ತಿ  ಬೆಳೆಯಲು ವೈಜ್ಞಾನಿಕ ಕೃತಿಗಳನ್ನು ರಚಿಸಬೇಕೆಂದು ನಿರ್ಧರಿಸಿ ‘ಕನ್ನಡ ವಿಜ್ಞಾನ ಪರಿಷತ್ತು’ ಸ್ಥಾಪಿಸಿ, ಅದರ ಸ್ಥಾಪಕ ಕಾರ‍್ಯದರ್ಶಿಯಾಗಿ ಹಲವಾರು ಯೋಜನೆಗಳನ್ನು ಕಾರ‍್ಯಗತಗೊಳಿಸಿದ್ದಲ್ಲದೆ ಮಕ್ಕಳಿಗಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರು ರಚಿಸಿದ ‘ರಕ್ತದ ಕಥೆ’ ನಾಟಕದಲ್ಲಿ ಬಿಳಿಯ ರಕ್ತ ಕಣಗಳು, ಕೆಂಪು ರಕ್ತ ಕಣಗಳು, ಪ್ಲಾಟ್ ಲೆಟ್ಸ್ ಪಾತ್ರರೂಪದಲ್ಲಿ ಮಾತನಾಡುತ್ತವೆ. ಇದನ್ನು ನೋಡಿದ ಮಕ್ಕಳಿಗೆ ರಕ್ತದ ಮಹತ್ವವನ್ನು ಅರಿಯಲು ಸಹಕಾರಿಯಾಗುತ್ತದೆ. ಇವರು ರಚಿಸಿದ ಇತರ ಕೃತಿಗಳೆಂದರೆ ನಮ್ಮ ಸೂರ್ಯ, ಶಬ್ದಸಾಗರದಲ್ಲಿ ಮತ್ತು ನಕ್ಷತ್ರ ನಕ್ಕಿತು. ಇವುಗಳಲ್ಲದೆ ಅದೃಷ್ಟವೇ, ಅನ್ವೇಷಣಯೇ?, ಮೇಘನಾದ ಸಹಾ, ಪ್ರಾಣಿಗಳ ಮೋಜು, ಅಲೆಗ್ಸಾಂಡರ್ ಪ್ಲೆಮಿಂಗ್, ಧೂಮಕೇತು, ಪೆನಿಸಿಲನ್ ಮುಂತಾದ ವೈಜ್ಞಾನಿಕ ಕೃತಿಗಳು; ಇಂಗ್ಲಿಷಿನಲ್ಲಿ ‘ದಿ ರೆಡ್ ರಿವರ್ ಆಫ್ ಲೈಫ್’ ಅಲ್ಲದೆ ‘ಆಲ್ಬರ್ಟ್ ಐನ್ ಸ್ಟೈನ್, ‘ವಿಸ್ಮಯಕರ ವಿಜ್ಞಾನ’, ‘ಮಾಲಿನ್ಯ’ ‘ಈ ನಮ್ಮ ಜಗತ್ತು’ ಮುಂತಾದ ಹಲವಾರು ಕೃತಿಗಳನ್ನು ಅನುವಾದಿಸಿದ್ದಾರೆ. ಜೀವನ ಚರಿತ್ರೆಗಳಾದ ಆಲ್ ಫ್ರೆಡ್ ನೊಬೆಲ್, ಜಗದೀಶ ಚಂದ್ರಬೋಸ್, ಆಚಾರ‍್ಯ ಪ್ರಫುಲ್ಲ ಚಂದ್ರ ರಾಯ್, ಅಲೆಕ್ಸಾಂಡರ್ ಫ್ಲೆಮಿಂಗ್ ಮುಂತಾದವುಗಳನ್ನು ರಚಿಸಿದ್ದಾರೆ. ಇದಲ್ಲದೆ ಇವರು ರಚಿಸಿದ ಇತರೆ ಕೃತಿಗಳೆಂದರೆ ‘ಬಿಳಲುಗಳು’ (ಪ್ರಬಂಧಗಳು), ‘ಹಣ್ಣಾಗದ ಹೂ’ (ಕಥಾ ಸಂಕಲನ), ‘ಸಾಕೋದ್ನರಿ ತಾತಾ (ನಾಟಕ), ‘ಕಣ್ಣುಗಳು (ರೇಡಿಯೋ ನಾಟಕ)’ ‘ಸೀಕರಣೆ’ (ಸಂಕೀರ್ಣ) ಕೃತಿಗಳಲ್ಲದೆ ಬಿ. ಜಿ. ಎಲ್ ಸ್ವಾಮಿಯವರ ಸಂಸ್ಮರಣೆ ಗ್ರಂಥ ‘ಸ್ವಾಮಿಯಾನ’, ಪ್ರೊ. ಜಿ. ವೆಂಕಟಸುಬ್ಬಯ್ಯನವರ ಅಭಿನಂದನ ಗ್ರಂಥ  ‘ಚಿರಂಜೀವಿ’ ಮತ್ತು ಹಾಸ್ಯ ಸಾಹಿತಿ ಟಿ. ಸುನಂದಮ್ಮನವರ ಅಭಿನಂದನ ಗ್ರಂಥ ‘ಸುನಂದಾಭಿನಂದನ’ ಮುಂತಾದ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಪ್ಯಾರಿಸ್ಸಿನ ಅಂತಾರಾಷ್ತ್ರೀಯ ಮಕ್ಕಳ ಸಾಹಿತ್ಯ ಸಂಶೋಧನ ಸಂಸ್ಥೆ, ಭಾರತೀಯ ಜಿಯಾಲಾಜಿಕಲ್ ಸೊಸ್ಯೆಟಿಯ ಫೆಲೊ ಆಗಿ ಕಾರ‍್ಯ ನಿರ್ವಹಿಸಿದ ಸೂ.ಸು ರವರಿಗೆ ‘ರಕ್ತದ ಕಥೆ’ ಕೃತಿಗೆ ಮದರಾಸಿನ ಭಾಷಾಪುಸ್ತಕ ಸಂಸ್ಥೆಯಿಂದ ಪ್ರಶಸ್ತಿ (೧೯೬೫), ನಮ್ಮ ಸೂರ‍್ಯ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೦), ‘ಶಬ್ದ ಸಾಗರದಲ್ಲಿ’ ಕೃತಿಗೆ ಎನ, ಸಿ. ಇ. ಆರ್. ಟಿ. ಮಕ್ಕಳ ಸಾಹಿತ್ಯ ಸ್ಪರ್ಧೆಯಲ್ಲಿ ಕರ್ನಾಟಕ ಸರಕಾರದ ಬಹುಮಾನ ಮತ್ತು ‘ನಕ್ಷತ್ರ ನಕ್ಕಿತು ಕೃತಿಗೆ ಕಾವ್ಯಾನಂದ ಪುರಸ್ಕಾರ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top