೨೬.೦೧.೧೯೨೫ ೧೮.೦೧.೧೯೯೧ ವೃತ್ತಿಯಲ್ಲಿ ನ್ಯಾಯಾಧೀಶರಾಗಿ, ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದಷ್ಟೇ ಅಲ್ಲದೆ ನ್ಯಾಯಾಲಯದ ಕಲಾಪಗಳೆಲ್ಲವೂ ಕನ್ನಡದಲ್ಲಿ ನಡೆದಾಗಲೇ ಕನ್ನಡಕ್ಕೆ ಸರಿಯಾದ ಸ್ಥಾನಮಾನ ದೊರೆತಂತೆ ಎಂದು ಹೇಳುತ್ತಿದ್ದು, ಕನ್ನಡದಲ್ಲೇ ತೀರ್ಪುಗಳನ್ನು ಪ್ರಕಟಿಸಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದ ನಮಿರಾಜ ಮಲ್ಲರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಮೂಡುಪಡುಕೋಡಿ ಗ್ರಾಮದ ಸೇವ ಎಂಬಲ್ಲಿ. ತಂದೆ ಕಿಜನಾರು ದೇವರಾಜ ಶೆಟ್ಟರು, ತಾಯಿ ತಿನ್ಯಮ್ಮ (ನಾಗಮ್ಮ). ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ತಾಯಿ ಹಾಗೂ ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಪ್ರಾರಂಭಿಕ ಶಿಕ್ಣಣ ಪೂಂಜಾ ಕಟ್ಟೆ ಎಂಬಲ್ಲಿ. ಪುತ್ತೂರು ಬೋರ್ಡ್ಹೈಸ್ಕೂಲಿನಲ್ಲಿ ಪ್ರೌಢಶಾಲಾಭ್ಯಾಸ. ನಂತರ ಓದು ಮುಂದುವರೆಸಲಾಗದೆ ಕೆಲಸಕ್ಕೆ ಸೇರಿದ್ದು ವೈನಾಡು ಎಂಬಲ್ಲಿ ದಿನಸಿ ಅಂಗಡಿಯೊಂದರಲ್ಲಿ. ಎಳವೆಯಿಂದಲೇ ಸಾಹಿತ್ಯದಲ್ಲಿ ಅಭಿರುಚಿಯಿದ್ದು ಬರೆದ ಮೊದಲ ಕೃತಿ ‘ನಾನು ಬಯಸಿದ ಹುಡುಗಿ’. ಇದು ಪ್ರಜಾಮತ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಹೇಳತೀರದ ಆನಂದ. ನಂತರ ಬರೆದ ಹಲವಾರು ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡವು. ಪುನ: ವಿದ್ಯಾಭ್ಯಾಸವನ್ನು ಮಲ್ಲರು ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜು ಹಾಗೂ ಮದರಾಸಿನ ಕ್ರಿಷ್ಚಿಯನ್ ಕಾಲೇಜುಗಳಲ್ಲಿ ಮುಂದುವರೆಸಿ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿ ಪಡೆದರು. ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ ಇವರ ಸಹಪಾಠಿಗಳಾಗಿದ್ದವರು ಬಾಗಲೋಡಿ ದೇವರಾಯರು, ಜಿ.ಟಿ. ನಾರಾಯಣರಾಯರು, ಕು.ಶಿ. ಹರಿದಾಸಭಟ್ಟರು ಮುಂತಾದವರುಗಳು. ಮದರಾಸಿನ ಅಮೇರಿಕನ್ವಾರ್ತಾ ಸಂಸ್ಥೆಯಲ್ಲಿ (USIS) ಭಾಷಾಂತರ ಸಹಾಯಕರಾಗಿ ಕೆಲ ಕಾಲ. ನಂತರ ಮದರಾಸಿನಿಂದ ಪ್ರಕಟವಾಗುತ್ತಿದ್ದ ಲಿಬರೇಟ್ ಮತ್ತು ಟೈಂಸ್ ಆಫ್ ಇಂಡಿಯಾ ಪತ್ರಿಕೆಗಳ ಸಂಪಾದಕೀಯ ವಿಭಾಗದಲ್ಲಿ ಕೆಲಸಮಾಡುತ್ತಲೇ ಬಿ.ಎಲ್. ಪದವಿಯನ್ನು ಗಳಿಸಿದನಂತರ ಮದರಾಸು ಸರಕಾರದ ಪ್ರಚಾರ ಇಲಾಖೆಯಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಮಂಗಳೂರಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ್ದಲ್ಲದೆ (೧೯೫೩-೬೯) ರಾಜಕೀಯದಲ್ಲಿಯೂ ಆಸಕ್ತರಾಗಿದ್ದು ಪ್ರಜಾಸೋಷಿಯಲಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದರು. ರಾಜಕೀಯ ಸಂಬಂಧವಿದ್ದರೂ ನ್ಯಾಯಾಧೀಶರಾಗಿ ದುಡಿದು (೧೯೬೩-೮೦) ನ್ಯಾಯ, ನಿಷ್ಠೆ, ಪ್ರಾಮಾಣಿಕತೆ ಮತ್ತು ಶಿಸ್ತು ಬದ್ಧ ಜೀವನವನ್ನು ರೂಢಿಸಿಕೊಂಡಿದ್ದರು. ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿದ್ದು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ‘ನೀವು ಮತ್ತು ಕಾನೂನು’, ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕಡೆಂಗೋಡ್ಲು ಶಂಕರ ಭಟ್ಟರ ‘ರಾಷ್ಟ್ರಮತ’ ಮತ್ತು ‘ಸಂಗಾತಿ’ ವಾರ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತುಳು ಭಾಷೆಯ ‘ಎಂಕ್ಲೆ ಸುಖೋ ದು:ಖೋ’, ‘ಕೊದ್ದೆಲ್’ ಅಂಕಣಗಳು, ಸುಧಾ ವಾರ ಪತ್ರಿಕೆಗೆ ಬರೆಯುತ್ತಿದ್ದ ‘ನ್ಯಾಯಾಲಯದ ತೀರ್ಪುಗಳು’ ಜನಪ್ರಿಯ ಅಂಕಣಗಳಾಗಿದ್ದವು. ಕಾರ್ನಾಡು ಸದಾಶಿವರಾಯರು (೧೯೬೦), ಅ.ನ. ಕೃಷ್ಣರಾಯರು (೧೯೬೧) ಮೊದಲಾದ ವ್ಯಕ್ತಿ ಚಿತ್ರ ಕೃತಿಗಳನ್ನು ರಚಿಸಿದ್ದಲ್ಲದೆ ಇವರು ಬರೆದ ಇತರ ಕೃತಿಗಳೆಂದರೆ ‘ಸೇತುವೆಯಲ್ಲಿ ಮರಣ ಕಾದಿತ್ತು’, ‘ಸ್ವಾತಂತ್ರ್ಯದ ಕಿಡಿ’ (೧೯೫೫), ‘ಎಮರ್ಸನ್ನನ ಮೂಲ ಬರಹಗಳು’ (೧೯೫೭), ಜಫರ್ಸನ್ನ್ನ ಬರಹಗಳು, ನ್ಯಾಯಾಲಯದಲ್ಲಿ ತೀರ್ಪುಗಳು’, ಮತ್ತು ‘ಪ್ರಜಾಪ್ರಭುತ್ವ’ ಬಹುಮುಖ್ಯ ಕೃತಿಗಳು. ಇವಲ್ಲದೆ ಇವರು ಬರೆದ ಕಾದಂಬರಿಗಳೆಂದರೆ ದೇವರದಾರಿ (೧೯೫೨),ಬಂಧನ ಬಾಂಧವ್ಯ (೧೯೫೩) ,ಬದುಕಿನ ಸುಳಿಯಲ್ಲಿ (೧೯೫೩), ತೀರದ ಆಸೆ (೧೯೫೪), ಕುರುಡು ಚಕ್ರ (೧೯೫೪), ಭ್ರಮಾಧೀನ (೧೯೫೬), ನಿಜಸುತ (೧೯೫೮), ರಕ್ತದ ರೂಪಾಯಿ, ಕರಿಚರ್ಮ (೧೯೬೧), ತಲ್ಲಣಿಸದಿರು, ವಿಲಾಸ ಮುಂತಾದವುಗಳು. ಇವರ ಕೊನೆಯ ಕಾದಂಬರಿ ಉಳಿವುದೇ ಕೀರ್ತಿ (೧೯೮೯). ಕಾಯಿದೆ ಹಾಗೂ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದಂತೆ ‘ಅಬಕಾರಿ ಕಾಯಿದೆ’, ಮತ್ತು ‘ನ್ಯಾಯ ತತ್ತ್ವ ಶಾಸ್ತ್ರ’ ವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ‘ಭೂತಾರಾಧನೆಯ ಕತೆಗಳು’ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿದೆ. ಲೋಹದ ಜೀವ (೧೯೫೦), ಮರದ ಮರೆಯಲ್ಲಿ ಕಥಾಸಂಕಲನಗಳು ಮದರಾಸು ಸರಕಾರದಿಂದ ಬಹುಮಾನ ಪಡೆದಿವೆ. ತಮ್ಮದೇ ಅಮೃತ ಪ್ರಕಾಶನದಡಿಯಲ್ಲಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಲ್ಲದೆ ನೂರಾರು ಕತೆಗಳು, ಬಿಡಿ ಬರಹಗಳು, ಕಾನೂನು ಸಲಹೆಗಳನ್ನು ಹಲವಾರು ಪತ್ರಿಕೆಗಳಿಗೆ ಬರೆಯುತ್ತಿದ್ದ ಮಲ್ಲರು ಸಾಹಿತ್ಯ ಲೋಕದಿಂದ ದೂರವಾದದ್ದು ೧೯೯೧ ರಲ್ಲಿ.

