೨೦.೩.೧೮೫೪ ೧೭.೫.೧೯೩೪ ಹುಟ್ಟಿದ್ದು ಸಂಸ್ಕೃತ ಮನೆತನದ ತಿರುಮಕೂಡಲು ನರಸೀಪುರದ ಸೋಸಲೆ ಎಂಬ ಹಳ್ಳಿಯಲ್ಲಿ. ಇವರ ಮೊದಲಿನ ಹೆಸರು ವೆಂಕಟಸುಬ್ಬುಶರ್ಮ. ತಂದೆ ಸೋಸಲೆ ಗರಳಪುರಿ ಶಾಸ್ತ್ರಿ, ತಾಯಿ ಸುಬ್ಬಮ್ಮ. ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ, ನಂತರ ಮೈಸೂರಿಗೆ ಹೋಗಿ ವೇ|| ಪೆರಿಯಾಸ್ವಾಮಿ ತಿರುಮಲಾಚಾರ್ಯರಲ್ಲಿ ವ್ಯಾಕರಣ, ತರ್ಕ, ಅಲಂಕಾರಾದಿ ಶಾಸ್ತ್ರಾಧ್ಯಯನ. ಸಾಹಿತ್ಯದಂತೆ ಚಿತ್ರಕಲೆ, ಸಂಗೀತದಲ್ಲಿ ಕೂಡಾ ವಿಶೇಷ ಪರಿಣತಿ. ಗುರುಗಳಾಗಿದ್ದ ತಿರುಮಲಾಚಾರ್ಯರೇ ಸ್ಥಾಪಿಸಿದ್ದ ಸದ್ವಿದ್ಯಾಶಾಲೆ (ಮೈಸೂರು) ಉಪಾಧ್ಯಾಯ ವೃತ್ತಿ ಪ್ರಾರಂಭ. ನಂತರ ಕೆಲಕಾಲ ಜಗನ್ಮೋಹನ ಮುದ್ರಾಕ್ಷರ ಶಾಲೆಯಲ್ಲಿ ಪ್ರಾಚೀನ ಸಂಸ್ಕೃತ ಗ್ರಂಥ ಪರಿಶೋಧನಾ ಕಾರ್ಯ. ೧೮೮೯ರಿಂದ ಹೊಸದಾಗಿ ಸ್ಥಾಪಿತವಾಗಿದ್ದ ಭಾಷೋಜ್ಜೀವಿನೀ ಸಂಸ್ಥೆಯಲ್ಲಿ ಕನ್ನಡ ಪಂಡಿತರ ಹುದ್ದೆ. ೧೮೯೪ರಿಂದ ೧೯೦೧ರವರೆಗೆ ಮೈಸೂರು ಅರಮನೆಯಲ್ಲಿ ರಾಜಗುರುಗಳ ಪಟ್ಟ . ಮೈಸೂರಿನಲ್ಲಿ ನಾಟಕ ಸಂಘವೊಂದನ್ನು ಕಟ್ಟಿ ಹಲವಾರು ವರ್ಷ ವ್ಯವಸ್ಥಾಪಕರಾಗಿ ದುಡಿದು ವೃತ್ತಿ ರಂಗಭೂಮಿಯ ನಾಟಕ ಕಲೆಯನ್ನು ಪುನರುಜ್ಜೀವಗೊಳಿಸಿದರು. ಹಲವಾರು ಗ್ರಂಥಗಳ ಪ್ರಕಟಣೆ, ನಾಟಕ-ಕರ್ನಾಟಕ ವಿಕ್ರಮೋರ್ವಶೀಯ, ಕರ್ನಾಟಕ ರಾಮಾಯಣ, ಕರ್ನಾಟಕ ನಳಚರಿತ್ರೆ, ಪ್ರತಾಪಸಿಂಹ ಚರಿತ್ರೆ, ಹರಿಶ್ಚಂದ್ರ ನಾಟಕ ಮುಂತಾದುವು. ಷಟ್ಪದಿ ಕಾವ್ಯಗಳು-ಶೇಷರಾಮಾಯಣಂ, ಉತ್ತರ ರಾಮಾಯಣದ ರಾಮಾಶ್ವಮೇಧ, ದಮಯಂತಿ ಚರಿತ್ರೆ. ಚಂಪೂಕಾವ್ಯಗಳು-ರಾಜಭಕ್ತಿ ಲಹರಿ, ಯಕ್ಷಪ್ರಶ್ನೆ, ಮಹಿಶೂರ ಮಹಾರಾಜ ಚರಿತಂ. ಸಂಸ್ಕೃತ ಚಂಪೂಕಾವ್ಯಗಳು-ಚಾಮರಾಜೇಂದ್ರ ಪಟ್ಟಾಭಿಷೇಕಂ, ಕೃಷ್ಣಾಂಬ ಪರಿಣಯಂ. ಸಂಸ್ಕೃತ ಸ್ತೋತ್ರಗಳು-ಶ್ರೀಮನ್ಮಹಾರಾಜಾಶೀರ್ವಾದ ಪಂಚರತ್ನಂ, ಶ್ರೀಮದ್ಯುವರಾಜಾಶೀರ್ವಾದ ಪಂಚರತ್ನಂ. ಗ್ರಂಥ ಪರಿಷ್ಕರಣ-ಕರ್ನಾಟಕ ಶಬ್ದಾನುಸಾರ, ಕರ್ನಾಟಕ ಕಾದಂಬರೀ, ನಾಗರಸನ ಕರ್ನಾಟಕ ಭಗವದ್ಗೀತೆ, ಶ್ರೀಕೃಷ್ಣರಾಯ ವಾಣೀವಿಲಾಸ ವಚನಭಾರತ, ಚಂಪೂರಾಮಾಯಣ (ಯುದ್ಧಕಾಂಡ), ಶ್ರೀಕೃಷ್ಣ ಭೂಪಾಲೀಯಂ (ಅಲಂಕಾರ ಗ್ರಂಥ) ಮುಂತಾದುವು. ಉತ್ತರ ಭಾರತದ ಜ್ಞಾನ ಸುಂದರಿ ಎಂಬ ವಿದುಷಿಯನ್ನು ತಮ್ಮ ಕವಿತಾ ಸಾಮರ್ಥ್ಯದಿಂದ ಸೋಲಿಸಿ ಶ್ರೀಮನ್ ಮಹಾರಾಜರ ಮೆಚ್ಚುಗೆಗೆ ಪಾತ್ರರಾಗಿ ಮಹಾವಿದ್ವಾನ್ (೧೯೦೫), ಕವಿತಿಲಕ (೧೯೧೨) ಮೊದಲಾದ ಪ್ರಶಸ್ತಿ ಗಳಿಸಿದರು. ಇದೇ ದಿನ ಹುಟ್ಟಿದ ಸಾಹಿತಿಗಳು : ಗಂಗಪ್ಪ ವಾಲಿ – ೧೯೧೨ ರಾಧಾಮೂರ್ತಿ – ೧೯೩೦ ಸರಸ್ವತಿ ವೆಂಕಟೇಶ್ – ೧೯೪೯

