ಸ.ಸ. ಮಾಳವಾಡ

Home/Birthday/ಸ.ಸ. ಮಾಳವಾಡ
Loading Events

೧೪-೧೧-೧೯೧೦ ೩೦-೮-೧೯೮೭ ಕನ್ನಡದ ಶ್ರೇಷ್ಠ ಪ್ರಾಧ್ಯಾಪಕ, ಸಾಹಿತಿ, ವಿಮರ್ಶಕ ಮಾಳವಾಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ. ತಂದೆ ಸಂಗನ ಬಸಪ್ಪ, ತಾಯಿ ಕಾಳಮ್ಮ. ಪ್ರಾರಂಭಿಕ ಶಿಕ್ಷಣ ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ. ಉನ್ನತ ವ್ಯಾಸಂಗ ಧಾರವಾಡದಲ್ಲಿ. ಎಂ.ಎ. ಪದವೀಧರರಾದ ಮೇಲೆ ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿ. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕ. ಅದೇ ಕಾಲೇಜಿನ ಪ್ರಾಚಾರ‍್ಯರಾಗಿ, ನಿವೃತ್ತರಾಗುವವರೆವಿಗೂ ಸಲ್ಲಿಸಿದ ಸೇವೆ. ನಿವೃತ್ತಿಯ ನಂತರ ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ, ಪರರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸಲ್ಲಿಸಿದ ಸೇವೆ. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ವಹಿಸಿದ ಮಹತ್ತರ ಪಾತ್ರ. ಹಲವಾರು ವಿದ್ವತ್ ಕೃತಿಗಳ ರಚನೆ-ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ. ಇವರ ಮೊಟ್ಟ ಮೊದಲ ಕೃತಿ. ನಂತರ ಪ್ರಕಟವಾದುದು ಹಲವಾರು ವಿಮರ್ಶಾ ಕೃತಿಗಳು-ಸಾಹಿತ್ಯ ಸಮಾಲೋಚನೆ, ಪುಸ್ತಕ ಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನ ದರ್ಶನ, ಕಾವ್ಯ ಮತ್ತು ಜೀವನ ಚಿತ್ರಣ, ಕವೀಂದ್ರ ರವೀಂದ್ರರು, ಸಾಹಿತ್ಯ ಸಂಗಮ, ಷಡಕ್ಷರಿ, ಸಾಹಿತ್ಯ ದೃಷ್ಟಿ, ಹರಿಹರ-ರಾಘವಾಂಕರು. ಸಂಪಾದಿತ- ಕನ್ನಡ ಗದ್ಯಮಾಲೆ ಭಾಗ-೧, ೨, ರಾಘವಾಂಕ ಚರಿತ್ರೆ, ಶ್ರೀ ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಪದ ಮಂಜರಿ. ವೈಚಾರಿಕ ಬರಹಗಳು-ಸಂಸ್ಕೃತಿ, ಕಾಲವಾಹಿನಿ, ದೃಷ್ಟಿಕೋನ, ನಾಲ್ಕು ಭಾಷಣಗಳು, ಸುವಿಚಾರ ಸಂಗಮ. ಪ್ರವಾಸ ಕಥನ-ಪಯಣದ ಕತೆ, ಸಂಚಾರ ಸಂಗಮ. ಜೀವನ ಚರಿತ್ರೆಗಳು- ಸ್ವಾದಿ ಅರಸು ಮನೆತನ, ಉತ್ತಂಗಿ ಚನ್ನಪ್ಪ, ಮಧುರ ಚೆನ್ನ, ಬಸವಣ್ಣನವರು, ನಾಗ ಮಹಾಶಯ, ಶಿಶುನಾಳ ಶರೀಫರು. ಆತ್ಮಚರಿತ್ರೆ-ಹಳ್ಳಿಯ ಹುಡುಗ, ದಾರಿ ಸಾಗಿದೆ. ಮುಂತಾದುವು ಸೇರಿ ಒಟ್ಟು ೪೦ಕ್ಕೂ ಹೆಚ್ಚು ಕೃತಿ ರಚನೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮಂಗ ಮಠ ಎಂಬ ಸಾಹಿತ್ಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕೀರ್ತಿ. ಸಂದ ಪ್ರಶಸ್ತಿಗಳು ಹಲವಾರು. ಮುಖ್ಯವಾದುವು ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೮೫ರಲ್ಲಿ ರಾಜ್ಯೋತ್ಸವ ಪ್ರಶಸ್ತಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಬಸು ಪಟ್ಟದ – ೧೯೨೩ ಹರಿಯಬ್ಬೆ ಕೆಂಚಮ್ಮ – ೧೯೬೬

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top