೦೭.೦೨.೧೯೪೮ ರಂಗಭೂಮಿ ನಟ, ನಾಟಕಕಾರರಾದ ಹರಿಕೃಷ್ಣರವರು ಹುಟ್ಟಿದ್ದು ಶಿವಮೊಗ್ಗ. ತಂದೆ ಪದ್ಮನಾಭರಾವ್, ತಾಯಿ ಲೀಲಾವತಿ. ಪ್ರಾರಂಭಿಕ ಶಿಕ್ಷಣ ತೀರ್ಥಹಳ್ಳಿ, ಶಿವಮೊಗ್ಗ. ಬೆಂಗಳೂರಿನ ಸೇಯಿಂಟ್ ಜೋಸೆಫ್ ಕಾಲೇಜಿನಲ್ಲಿ ಕಲಿತದ್ದು ವಿಜ್ಞಾನ. ಬಾಲ್ಯದಿಂದಲೇ ನಾಟಕ ರಂಗದತ್ತ ಬೆಳೆದ ಒಲವು. ಅಕ್ಕಪಕ್ಕದೂರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದಿಂದ ದೊರೆತ ಪ್ರಚೋದನೆ. ನಾಟಕದಲ್ಲಿ ಪಾರ್ಟು ಮಾಡಬೇಕೆನಿಸಿದಾಗ ನೆರೆ-ಹೊರೆ ಹುಡುಗರನ್ನು ಕಟ್ಟಿಕೊಂಡು ಸೀರೆ, ಪಂಚೆಯಿಂದಲೇ ವೇದಿಕೆ, ಸೀನರಿ ನಿರ್ಮಿಸಿ ಆಡಿದ ನಾಟಕಗಳು. ಶಾಲೆಯ ಗಣೇಶೋತ್ಸವ, ವಾರ್ಷಿಕೋತ್ಸವಗಳಲ್ಲಿ ನಟನಪಟ್ಟ ಗ್ಯಾರಂಟಿ. ಹೈಸ್ಕೂಲಿನ ನಂತರ ಸಹ್ಯಾದ್ರಿ ಕಲಾವಿದರ ಕಣ್ಣಿಗೆ ಬಿದ್ದು ಪಡೆದುಕೊಂಡ ಪಾತ್ರ. ವಿಧ್ಯುಕ್ತವಾಗಿ ರಂಗಭೂಮಿಗೆ ಪಾದಾರ್ಪಣೆ. ನಾಟಕದ ಆಸಕ್ತಿಯಿಂದ ಓದಿಗೆ ಸಂಚಕಾರ. ವೃತ್ತಿ ರಂಗಭೂಮಿಯ ನಾಟಕ ಕಂಪನಿ ಸೇರಲು ಮೈಸೂರಿಗೆ ಓಟ. ಅಲ್ಲೂ ಫಲ ದೊರೆಯದೆ ಪುನಃ ಬೆಂಗಳೂರಿಗೆ. ಉದ್ಯೋಗಕ್ಕೆ ಸೇರಲು ನಿರ್ಧರಿಸಿ ಸೇರಿದ್ದು ಕಿರ್ಲೋಸ್ಕರ್ ಕಂಪನಿಯಲ್ಲಿ ಗುಮಾಸ್ತನ ಹುದ್ದೆ. ಸಂಜೆ ಕಾಲೇಜು ಸೇರಿ ಪಡೆದ ಬಿ.ಕಾಂ. ಪದವಿ. ಬ್ಯಾಂಕ್ ಆಫ್ ಬರೋಡದಲ್ಲಿ ದೊರೆತ ಬ್ಯಾಂಕ್ ಹುದ್ದೆ. ರಂಗ ಚಟುವಟಿಕೆಗಳಿಗೆ ಸಿಕ್ಕಿದ ಅವಕಾಶ, ಪ್ರೋತ್ಸಾಹಗಳು. ನಂತರ ಪ್ರತಿಷ್ಠಿತ ಉಳ್ಳಾಲ್ ಷೀಲ್ಡ್ ನಾಟಕ ಸ್ಪರ್ಧೆಯಲ್ಲಿ ಹಲವಾರು ಬಾರಿ ಭಾಗಿ. ಬೆಳೆದ ರಂಗಭೂಮಿ ನಂಟಿನಿಂದ ಪ್ರೊ. ಬಿ.ಸಿ. ಯವರ ನಿರ್ದೇಶನದ ತುಘಲಕ್ನಲ್ಲೂ ಪಡೆದ ಪಾತ್ರ. ಬಿ.ವಿ. ಕಾರಂತ ನಿರ್ದೇಶನದ ಸ್ವರ್ಗಕ್ಕೆ ಮೂರೇ ಬಾಗಿಲು, ಅಪಾಯಕಾರಿ ಕಥೆ ಮುಂತಾದುವುಗಳಲ್ಲಿ ಸಿಕ್ಕ ಪಾತ್ರಗಳು, ತೋರಿದ ಪ್ರತಿಭೆ. ೧೯೭೨ರಲ್ಲಿ ಆರ್. ನಾಗೇಶ್, ಲೋಕೇಶ್, ಕೇಶವರಾವ್ರೊಡಗೂಡಿ ಹುಟ್ಟು ಹಾಕಿದ್ದು ‘ರಂಗ ಸಂಪದ’ ಸಂಸ್ಥೆ. ಪ್ರಸನ್ನರವರ ನಿರ್ದೇಶನದ ‘ಕದಡಿದ ನೀರು’ ನಾಟಕದಲ್ಲಿ ಹುಚ್ಚನ ಪಾತ್ರಕ್ಕೆ ದೊರೆತ ಜನ ಮೆಚ್ಚುಗೆ, ಪತ್ರಿಕಾ ಪ್ರಶಂಸೆ. ನಂತರ ಜೈಸಿದ ನಾಯ್ಕ, ನೀಕೊಡೆ-ನಾಬಿಡೆ, ಹುಟ್ಟಿದ್ದು ಹೊಲೆಯೂರು, ತೇಲಿಸೋ ರಂಗ-ಇಲ್ಲ ಮುಳುಗಿಸೋ, ಸೂರ್ಯ ಶಿಕಾರಿಯಲ್ಲಿ ನಟ. ನಿರ್ದೇಶಿಸಿದ್ದು ಆ ಮನಿ, ಅದೇ ಅಧೂರೆ ಮತ್ತು ಹತ್ಯಾ ಏಕ್ ಆಕಾರ್ ಕೀ ಕನ್ನಡಕ್ಕೆ ತಂದರೆ ‘ತೆರೆಗಳು’ ಇಂಗ್ಲಿಷ್ ತಂದ ಖ್ಯಾತಿ. ಯುಯುತ್ಸು ನಾಟಕ ರಚನೆ-ನಾಗಮಂಗಲದ ‘ಗೆಳತಿ ಗುಡ್ಡ’ದ ಮೇಲೆ ಮಂಡ್ಯ ರಮೇಶರಿಂದ ನಿರ್ದೇಶನ. ರಂಗಭೂಮಿ ಸೇವೆಗೆ ದೊರೆತ ನಾಟಕ ಅಕಾಡಮಿ ಪ್ರಶಸ್ತಿ. ಕಲಿಕೆಗೆ ವಯಸ್ಸಿನ ಭೇದವಿಲ್ಲವೆನ್ನುವಂತೆ ಸಮೀಪಿಸುತ್ತಿರುವ ಅರವತ್ತರ ವಯಸ್ಸಿನಲ್ಲೂ ಪಂ. ನರಸಿಂಹಲು ವಡವಾಟಿಯವರಲ್ಲಿ ಹಿಂದೂಸ್ತಾನಿ ಸಂಗೀತ ಕಲಿಕೆಯ ಹುಮ್ಮಸ್ಸು. ಇದೇ ದಿನ ಹುಟ್ಟಿದ ಕಲಾವಿದರು : ಎಸ್. ವಾಸುದೇವರಾವ್ – ೧೯೩೮
* * *