ಹರ್ಡೇಕರ್ ಮಂಜಪ್ಪ

Home/Birthday/ಹರ್ಡೇಕರ್ ಮಂಜಪ್ಪ
Loading Events
This event has passed.

೧೮..೧೮೮೬..೧೯೪೭ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಬರಹಗಾರರು, ಪತ್ರಕರ್ತರೂ ಆಗಿದ್ದು ಕರ್ನಾಟಕದ ಗಾಂಧಿ ಎಂದೇ ಪ್ರಖ್ಯಾತರಾಗಿದ್ದ ಮಂಜಪ್ಪನವರು ಹುಟ್ಟಿದ್ದು ಬನವಾಸಿಯಲ್ಲಿ ಫೆಬ್ರವರಿ ೧೮ರ ೧೮೮೬ನೆಯ ಇಸವಿಯಲ್ಲಿ. ತಂದೆ  ಮಧುಕೇಶ್ವರಪ್ಪ. ಬನವಾಸಿಯ ಮಧುಕೇಶ್ವರನ ಭಕ್ತರು. ಪ್ರಾಥಮಿಕ ಶಿಕ್ಷಣ ಬನವಾಸಿ-ಶಿರಸಿಯಲ್ಲಿ ಮುಲ್ಕಿ ಪರೀಕ್ಷೆಗೆ (ಈಗಿನ ಏಳನೆಯ ತರಗತಿ) ಕುಳಿತು ಹೆಚ್ಚಿನ ಅಂಕಗಳನ್ನೂ ಪಡೆದು ಉತ್ತೀರ್ಣರಾದರು. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರಿಂದ ಉಪಾಧ್ಯಾಯ ವೃತ್ತಿಯನ್ನು ಹಿಡಿದರು. ಪಾಠ ಮಾಡುವಾಗ ಮಕ್ಕಳಿಗೆ ಚಿಕ್ಕ ಚಿಕ್ಕ ಪದ್ಯಗಳನ್ನು ರಚಿಸಿ, ಹಾಡಿಸಿ, ಮನದಟ್ಟಾಗುವಂತೆ ಮಾಡುತ್ತಿದ್ದರು. ದೇಶದುದ್ದಗಲಕ್ಕೂ ಗಾಂಧೀಜಿಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳುವಳಿಯಿಂದ ಪ್ರೇರಿತರಾಗಿ ಹುದ್ದೆ ತೊರೆದು  ಹೋರಾಟದಲ್ಲಿ ಭಾಗಿಯಾದರು. ಚಳವಳಿಯ ನೇತಾರರಾಗಿದ್ದ ಗಾಂಧೀಜಿ, ಲೋಕಮಾನ್ಯ ತಿಲಕರ ಆದರ್ಶಗಳನ್ನು ಪಾಲಿಸತೊಡಗಿದರು. ತಿಲಕರ ‘ಕೇಸರಿ’ ಪತ್ರಿಕೆಯಿಂದ ಸ್ಫೂರ್ತಿಪಡೆದು ‘ಧನುರ್ಧಾರಿ’ ಎಂಬ ವಾರ ಪತ್ರಿಕೆ (೧೯೦೬ರ ಸೆಪ್ಟೆಂಬರ್ ೨ನೆಯ ವಾರ)ಯನ್ನು ಅಣ್ಣ ಮಧುಲಿಂಗಪ್ಪನೊಡೆನ ಸೇರಿ ದಾವಣಗೆರೆಯಲ್ಲಿ ಪ್ರಾರಂಭಿಸಿ ೯ ವರ್ಷಕಾಲ ಬಹು ಕಷ್ಟದಿಂದ ನಡೆಸಿದರು. ಸಾಮೂಹಿಕ ಭಜನೆ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳಿಂದ ಪ್ರಭಾವಿತರಾದ ಮಂಜಪ್ಪನವರು  ದಾವಣಗೆರೆಯಲ್ಲಿ ಮೃತ್ಯುಂಜಯ ಸ್ವಾಮಿಗಳ ಮನ ಒಲಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಬಿಡುವಿನ ವೇಳೆಯಲ್ಲಿ ಧಾರ್ಮಿಕ ಪುಸ್ತಕಗಳ ಓದು, ಜ್ಞಾನಾರ್ಜನೆ, ಸಮಾಜಸೇವೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡ ಮಂಜಪ್ಪನವರು ನೈಷ್ಠಿಕ ಬ್ರಹ್ಮಚಾರಿಯಾಗಿಯೇ ಉಳಿದರು. ಪತ್ರಿಕೆಯ ಮುದ್ರಣಾಲಯದ ಕೆಲಸದ ನಡುವೆಯೂ ಬರೆದ ಪುಸ್ತಕಗಳು ‘ಪತಿತೋದ್ದಾರ’ ಎಂಬುದು. ಅದರಲ್ಲಿ ತಮ್ಮ ಹೆಸರನ್ನೂ ಹಾಕಿಕೊಳ್ಳಲಿಚ್ಛಿಸಲಿಲ್ಲ. ನಂತರ ಬರೆದದ್ದು’ ಬುದ್ಧಿಯ ಮಾತು’. ಈ ಪುಸ್ತಕ ಜನಪ್ರಿಯವಾಗಿ ನೂರಾರು ಪ್ರತಿಗಳು ಮಾರಾಟವಾದವು. ಗ್ರಂಥ ರಚನೆಯನ್ನೇ ಮುಖ್ಯ ಉದ್ಯೋಗವಾಗಿ ಕೈಗೊಂಡ ಮಂಜಪ್ಪನವರು ೧೯೨೧ರಲ್ಲಿ ‘ರಾಷ್ಟ್ರ ಜೀವನ’ ಎಂಬ ಗ್ರಂಥಮಾಲೆಯನ್ನು ಪ್ರಾರಂಭಿಸಿ ಬರೆದು ಪ್ರಕಟಿಸಿದ ಮೊದಲ ಗ್ರಂಥ ‘ಭಾರತೀಯರ ದೇಶ ಭಕ್ತಿ’. ತತ್ತ್ವಜ್ಞಾನ ದೃಷ್ಟಿಯಿಂದ ವಿವೇಚಿಸಿ ಬರೆದ ವಿನೂತನ ಗ್ರಂಥವಾಗಿತ್ತು. ವೀರಶೈವ ಮತದ ಬಗ್ಗೆ ಬರೆದ ಪುಸ್ತಕ ‘ವೀರಶೈವ ಸಮಾಜ ಸುಧಾರಣೆ’ಸ್ತ್ರೀಯರಿಗೆ ಸಮಾಜದಲ್ಲಿ ಸಮಾನಸ್ಥಾನಮಾನ ದೊರೆಯಬೇಕೆಂಬುದು ಅವರ ಹಂಬಲವಾಗಿ, ಸ್ತ್ರೀಯರ ಸ್ಥಿತಿ-ಗತಿ ಸುಧಾರಣೆಗಾಗಿ ಬರೆದ ಕೃತಿ’ ಸ್ತ್ರೀ ನೀತಿ ಸಂಗ್ರಹ’. ಗಾಂಧೀಜಿಯವರ ತತ್ತ್ವಾನುಯಾಯಿಯಾಗಿದ್ದ ಮಂಜಪ್ಪನವರಿಗೆ ೧೯೨೧ರಲ್ಲಿ ಗಾಂಧೀಜಿಯವರ ಬಂಧನವಾದಾಗ ಸ್ವಾಭಾವಿಕವಾಗಿ ದುಃಖಕ್ಕೀಡಾಗಿ, ಗಾಂಧೀಜಿಯವರ ಆದರ್ಶ, ತತ್ತ್ವಗಳನ್ನು ಪ್ರಚುರಪಡಿಸಲು ಧಾರವಾಡ, ಬಿಜಾಪುರ ಜಿಲ್ಲೆಗ ಳಲ್ಲಿ ಸಂಚಾರ ಕೈಗೊಂಡು ಸತ್ಯ, ಅಹಿಂಸೆ, ಬ್ರಹ್ಮಚರ್ಯ, ಆಸ್ತೇಯ, ಅಪರಿಗ್ರಹ, ಅಸ್ವಾದ, ನಿರ್ಭಯ, ಸ್ವದೇಶಿ ಮತ್ತು ಅಸ್ಪೃಶ್ಯತಾ ನಿವಾರಣೆ ಈ ನವತತ್ತ್ವಗಳ ಪ್ರಚಾರ ಕೈಗೊಂಡು ‘ಸತ್ಯಾಗ್ರಹಧರ್ಮ’ ಎಂಬ ಪುಸ್ತಕವನ್ನೂ ಬರೆದು ಪ್ರಕಟಿಸಿದರು. ಗಾಂಧೀಜಿಯವರ ನೈತಿಕ ತತ್ತ್ವಗಳನ್ನು ಅನುಷ್ಠಾನಗೊಳಿಸಲು ೧೯೨೨ರಲ್ಲಿ ಹುಬ್ಬಳ್ಳಿಯಲ್ಲಿ ‘ಸತ್ಯಾಗ್ರಹ’ ಸಮಾಜವನ್ನು, ಮರುವರ್ಷ ಹರಿಹರದ ಬಳಿ ತುಂಗಾ ನದಿಯ ದಡದಲ್ಲಿ ‘ಸತ್ಯಗ್ರಹ ಆಶ್ರಮ’ವನ್ನು ಸ್ಥಾಪಿಸಿದರು. ಆದರೆ ಮಳೆಗಾಲದಲ್ಲಿ ನದಿ ಪ್ರವಾಹ ಬಂದು ಆಶ್ರಮ ಕೊಚ್ಚಿ ಹೋಯಿತು. ಸಬರಮತಿ ಆಶ್ರಮದಲ್ಲಿ ಗಾಂಧೀಜಿಯವರೊಡನಿದ್ದು, ಅವರ ದಿನಚರಿಗಳನ್ನು ಹತ್ತಿರದಿಂದ ಕಂಡು, ಕೆಲವು ದಿವಸ ಆಶ್ರಮದಲ್ಲಿದ್ದು ಬಂದರು. ನಂತರ ಬರೆದ ಗ್ರಂಥ ‘ಬಸವ ಚರಿತ್ರೆ’. ವಿಜಾಪುರ ಜಿಲ್ಲೆಯ ಆಲಮಟ್ಟಿಯಲ್ಲಿ ವೀರಶೈವ ವಿದ್ಯಾಲಯ ಸ್ಥಾಪಿಸಿ (೧೩.೦೫.೧೯೨೭) ಕೊನೆಯವರೆವಿಗೂ ನಡೆಸಿಕೊಂಡು ಬಂದರು. ೧೯೨೮ರಲ್ಲಿ ‘ಖಾದಿ ವಿಜಯ’, ೧೯೩೦ರಲ್ಲಿ ‘ಉದ್ಯೋಗ’, ೧೯೩೧ರಲ್ಲಿ ‘ಶರಣ ಸಂದೇಶ’ ಎಂಬ ಪತ್ರಿಕೆಗಳ ಸಂಪಾದಕರಾಗಿಯೂ ದುಡಿದರು. ಶರಣ ಸಂದೇಶವು ವಾರ ಪತ್ರಿಕೆಯಾಗಿ ಮಾರ್ಪಾಡಾಗಿ ಹಲವಾರು ವರ್ಷ ಕಾಲ ಹಿಂದುಧರ್ಮ – ತತ್ತ್ವಜ್ಞಾನದ ಪ್ರಚಾರ ಮಾಡಿತು. ಗಾಂಧೀಜಿಯವರು ಅಸ್ಪೃಶ್ಯತೆಯ ನಿವಾರಣೆಗಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಾಗ ಮಂಜಪ್ಪನವರು ಅವರ ಜೊತೆಗಿದ್ದರು. ಉನ್ನತ ರಾಷ್ಟ್ರೀಯ ಚಿಂತನೆಗಳನ್ನು ಹೊಂದಿದ್ದ ಮಂಜಪ್ಪನವರು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವಕರ ಪಾತ್ರವರಿತು, ಆರೋಗ್ಯ, ದೇಶಪ್ರೇಮ, ಖಾದಿ, ಉದ್ಯೋಗ, ಧಾರ್ಮಿಕ ವಿಷಯಗಳು ಮುಂತಾದ ಹಲವಾರು ಗ್ರಂಥಗಳನ್ನು ರಚಿಸಿದರು. ಅವುಗಳಲ್ಲಿ ‘ಆಧುನಿಕ ಜರ್ಮನಿ’, ‘ಎಚ್ಚೆತ್ತ ಹಿಂದುಸ್ತಾನ’, ಬ್ರಿಟನ್ನಿನ ಲೇಬರ್ ಪಕ್ಷದ ಪಾರ್ಲಿಮೆಂಟ್‌ ಸದಸ್ಯರಾಗಿದ್ದ ಹಾರ್ಡಿಯವರು ಬಂಗಾಳ ವಿಭಜನೆಯ ಸಂದರ್ಭದಲ್ಲಿ ಭೇಟಿ ನೀಡಿದ ವಿಷಯದ ಮೇಲೆ ಬರೆದ ‘ಕೇರ್ ಹಾರ್ಡಿಯವರ ಭಾರತ ಪರ್ಯಟನ’,ಭಾರತೀಯರ ದೇಶಭಕ್ತಿ, ಮಹಾತ್ಮ ಗಾಂಧಿಯವರ ಚರಿತ್ರೆ, ಸತ್ಯಾಗ್ರಹಧರ್ಮ, ಹಿಂದುತ್ವ, ಸ್ವಕರ್ತವ್ಯ ಸಿದ್ಧಾಂತ ಮುಂತಾದ ರಾಷ್ಟ್ರೀಯ ಭಾವನೆಗಳ ಕುರಿತ ಪುಸ್ತಕಗಳು; ತ್ಯಾಗವೀರ ಲಿಂಗರಾಜರ ಚರಿತ್ರೆ, ಪ್ರಥಮಾಚಾರ ದೀಪಿಕೆ, ಬಸವ ಚರಿತ್ರೆ, ಬಸವ ಬೋಧಾಮೃತ, ಬುದ್ಧಿಯ ಮಾತು, ಭಗವಾನ್‌ ಬುದ್ಧ ಚರಿತ್ರೆ, ವಾರದ ಮಲ್ಲಪ್ಪ ಬಸವಪ್ಪನವರ ಚರಿತ್ರೆ, ವೀರಶೈವ ಮತತತ್ತ್ವ, ವೀರಶೈವ ಮತ ಬೋಧೆ, ಶುದ್ಧಿ ಸಂಘಟನೆ, ಕಾಯಕವೇ ಕೈಲಾಸ, ಮುಂತಾದ ಧಾರ್ಮಿಕ ಕೃತಿಗಳು; ಆರೋಗ್ಯ ಜೀವನ, ಸ್ತ್ರೀನೀತಿ ಸಂಗ್ರಹ, ದಾಂಪತ್ಯ ಧರ್ಮ, ಸುಬೋಧಸಾರ ಮುಂತಾದ ಸ್ಷಸ್ಥ ಸಮಾಜವನ್ನೂ ರೂಪಿಸುವ ಕೃತಿಗಳು ಸೇರಿ ಒಟ್ಟು ನಲವತ್ತಕ್ಕೂ ಹೆಚ್ಚು ಕೃತಿ ಪ್ರಕಟಿತ. ಹೀಗೆ ನೈಷ್ಠಿಕ ಬ್ರಹ್ಮಚಾರಿಯಾಗಿ, ಗಾಂಧೀಜಿಯವರ ಅನುಯಾಯಿಯಾಗಿ, ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಮಂಜಪ್ಪನವರು ಲೋಕವ್ಯವಹಾರದಿಂದ ಮುಕ್ತರಾದದ್ದು ೧೯೪೭ ರ ಜನವರಿ ೩ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top