Loading Events

« All Events

ಹಾಸನ ರಾಜಾರಾವ್

November 8

೮-೧೧-೧೯೦೮ ೮-೭-೨೦೦೬ ಹಾಸನದಲ್ಲಿ ಹುಟ್ಟಿ ಇಂಗ್ಲಿಷ್‌ನಲ್ಲಿ ಸಾಹಿತ್ಯ ರಚನೆ ಮಾಡಿ ವಿಶ್ವಮಾನ್ಯತೆ ಪಡೆದ ರಾಜಾರಾಯರ ತಂದೆ ಎಚ್.ವಿ. ಕೃಷ್ಣಸ್ವಾಮಿ, ತಾಯಿ ಗೌರಮ್ಮ. ನಾಲ್ಕು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರು. ಪದವಿಪೂರ್ವದವರೆಗೆ ಓದಿದ್ದು ಹೈದರಾಬಾದಿನಲ್ಲಿ. ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಕಲಿತದ್ದು ಆಂಗ್ಲ ಭಾಷೆ ಮತ್ತು ಫ್ರೆಂಚ್. ಹೈದರಾಬಾದಿನ ನಿಜಾಮ್ ಕಾಲೇಜಿನಿಂದ ಸಾಹಿತ್ಯ ಮತ್ತು ಇತಿಹಾಸದಲ್ಲಿ ಪಡೆದ ಬಿ.ಎ. ಪದವಿ. ವಿದ್ಯಾರ್ಥಿವೇತನ ಪಡೆದು ಇತಿಹಾಸದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದ್ದು ಫ್ರಾನ್ಸ್‌ನಲ್ಲಿ. ‘ಐರಿಷ್ ಸಾಹಿತ್ಯದ ಮೇಲೆ ಭಾರತೀಯ ಪ್ರಭಾವ’ ವಿಷಯ ಕುರಿತು ನಡೆಸಿದ ಸಂಶೋಧನಾ ವ್ಯಾಸಂಗ. ೧೯೩೦ರ ಸುಮಾರಿಗೆ ಬರೆದ ಹಲವಾರು ಪ್ರೌಢ ಕತೆಗಳು. ೧೯೩೧ರಲ್ಲಿ ಕ್ಯಾಮಿಲ್‌ಮೋಲಿ ಎಂಬ ಫ್ರೆಂಚ್ ಯುವತಿಯೊಡನೆ ಮದುವೆ. ಭಾರತದ ಪ್ರಾಚೀನ ಸಂಸ್ಕೃತಿ, ಅಧ್ಯಾತ್ಮದ ಬಗ್ಗೆ ಚಿಂತನೆ. ಆಲ್ಸ್ ಪರ್ವತದ ಬಳಿ ಋಷಿ ಜೀವನ ಸಾಗಿಸುತ್ತಿದ್ದ ರೋಮನ್ ರೋಲಾ ಎಂಬುವರ ಬಗ್ಗೆ ಜಯ ಕರ್ನಾಟಕಕ್ಕೆ ಬರೆದ ಲೇಖನ. ಪ್ಯಾರಿಸ್ಸಿನ ಮರ್ಕುರೆಡ್ ಫ್ರಾನ್ಸ್, ಆಫೇರೆ ಎತ್ರಾಂಜೆರ್ ಮುಂತಾದ ಪತ್ರಿಕೆಗಳ ಸಂಪಾದಕ ಮಂಡಲಿಯ ಸದಸ್ಯತ್ವ. ಭಾರತಕ್ಕೆ ೧೯೩೭ರಲ್ಲಿ ಮರಳಿ, ಅಧ್ಯಾತ್ಮಿಕ ಗುರುವಿನ ಅನ್ವೇಷಣೆ. ಪಂಡಿತ ತಾರಾನಾಥ್, ಶ್ರೀ ಅರವಿಂದರ ಭೇಟಿ. ಬರವಣಿಗೆಯ ಮೇಲೆ ಭಾರತೀಯ ಧರ್ಮ, ಕಲೆ, ಭಾಷಾಶಾಸ್ತ್ರ, ತತ್ತ್ವಶಾಸ್ತ್ರದ ದಟ್ಟ ಛಾಯೆ. ಸಣ್ಣಕತೆಗಳು ಯೂರೋಪಿನ ಪತ್ರಿಕೆಗಳು, ಫ್ರಾನ್ಸ್, ಇಂಗ್ಲೆಂಡ್, ಏಷ್ಯಾದಲ್ಲೂ ಪ್ರಕಟಿತ. ೧೯೩೮ರಲ್ಲಿ ಬರೆದ ಮೊದಲ ಕಾದಂಬರಿ ಕಾಂತಾಪುರ ಮತ್ತು ದ ಕೌ ಆಫ್ ದಿ ಬ್ಯಾರಿಕೇಡ್ಸ್-ಸಣ್ಣ ಕಥಾಸಂಕಲನ ಲಂಡನ್ನಿನಲ್ಲಿ ಪ್ರಕಟಿತ. ನಂತರ ಹಲವಾರು ಕಥೆಗಳು ಲಂಡನ್ನಿನ ಎನ್‌ಕೌಂಟರ್, ನ್ಯೂಯಾರ್ಕಿನ ರಿವ್ಯೂ ಆಫ್ ನ್ಯೂಯಾರ್ಕ್, ಮುಂಬಯಿಯ ಇಲ್ಲಿಸ್ಟ್ರೇಟೆಡ್ ವೀಕ್ಲಿಯಲ್ಲಿ ಪ್ರಕಟಿತ. ಬರೆದುದು ವಿಪುಲ ಸಾಹಿತ್ಯವೇನಲ್ಲ. ಗುಣದಲ್ಲಿ ಶ್ರೇಷ್ಠವೆಂದು ಅಂತಾರಾಷ್ಟ್ರೀಯ ವಿಮರ್ಶಕರಿಂದ ಮನ್ನಣೆ. ಕಾದಂಬರಿಗಳು-ಚೇನ್‌ಜಿಂಗ್ ಇಂಡಿಯಾ, ವಿದರ್ ಇಂಡಿಯಾ, ದಿ ಸರ್ಪೆಂಟ್ ಅಂಡ್ ದ ರೋಪ್, ದ ಕ್ಯಾಟ್ ಅಂಡ್ ಶೇಕ್ಸ್‌ಪಿಯರ್, ಕಾಮ್ರೆಡ್ ಕಿರಿಲೋವ್, ದ ಚೆಸ್ ಮಾಸ್ಟರ್ ಅಂಡ್ ಹಿಸ್ ಮೂವ್ಸ್, ಆನ್ ದಿ ಗಂಗಾ ಘಾಟ್, ದ ಮೀನಿಂಗ್ ಆಫ್ ಇಂಡಿಯಾ, ಗ್ರೇಟ್ ಇಂಡಿಯನ್ ವೇ ಎ ಲೈಫ್ ಆಫ್ ಮಹಾತ್ಮಾಗಾಂಧೀ ಮತ್ತು ಎರಡು ಕಥಾ ಸಂಕಲನಗಳು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಭಾರತ ಸರಕಾರದ ಪದ್ಮಭೂಷಣ, ಸಾಹಿತ್ಯ ವಲಯದ ಅತಿ ಪ್ರತಿಷ್ಠಿತ ನ್ಯೂ ಸ್ಟಾಡ್ಟ್ ಇಂಟರ್ ನ್ಯಾಷನಲ್ ಪ್ರೈಜ್, ವಾಷಿಂಗ್‌ಟನ್ ಡಿ.ಸಿ.ಯ ವುಡ್ರೊವಿಲ್ಸನ್ ಅಂತಾರಾಷ್ಟ್ರೀಯ ಕೇಂದ್ರದ ಫೆಲೊ ಆಗಿ ಆಯ್ಕೆಮುಂತಾದ ಗೌರವಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಆರ್. ನರಸಿಂಹನ್ – ೧೯೩೩ ಎನ್.ಎಸ್. ತಾರಾನಾಥ್ – ೧೯೫೩

Details

Date:
November 8
Event Category: