Loading Events

« All Events

  • This event has passed.

ಹಿರೇಮಲ್ಲೂರು ಈಶ್ವರನ್

November 1, 2023

.೧೧.೧೯೨೨ ೨೩..೧೯೯೮ ಬೋಧಕ, ಪ್ರಕಾಶಕ, ಸಂಪಾದಕ, ಸಮಾಜ ವಿಜ್ಞಾನಿ, ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರೆನಿಸಿದ್ದ ಈಶ್ವರನ್‌ರವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಹಿರೇಮಲ್ಲೂರಿನಲ್ಲಿ (ಈಗ ಹಾವೇರಿ ಜಿಲ್ಲಿಗೆ ಸೇರಿದೆ). ತಂದೆ ಚೆನ್ನಬಸಪ್ಪ, ತಾಯಿ ಬಸಮ್ಮ. ತಂದೆ ಮುಲ್ಕಿ ಪರೀಕ್ಷೆಯವರೆಗೆ ಓದಿ, ಟ್ರೈನಿಂಗ್ ಕಾಲೇಜಿನಲ್ಲಿ ಟ್ರೈನಿಂಗ್ ಪಡೆದು ಮಾಸ್ತರಿಕೆ ಉದ್ಯೋಗ ಪ್ರಾರಂಭಿಸಿದರು. ತಾಯಿ ನಿರಕ್ಷರಿ. ಹಳ್ಳಿಯಲ್ಲಿ ಮಾಸ್ತರದೇ ಕಡೇ ಮಾತು. ಸಕಲವೂ ಮಾಸ್ತರು ಹೇಳಿದಂತೆ ಕೇಳಬೇಕೆಂದು ರೂಢಿಸಿಕೊಂಡಿದ್ದು, ಮಾಸ್ತರಿಗೆ ಎಲ್ಲರೂ ಗೌರವ ತೋರುತ್ತಿದ್ದರು. ಅವಿಭಾಜ್ಯ ಕುಟುಂಬಕ್ಕೆ ಜಮೀನಿನಿಂದ ಬರುತ್ತಿದ್ದ ವರಮಾನ ಸಂಸಾರ ನಿರ್ವಹಣೆಗೆ ಸಾಲದಾಗಿದ್ದು ಕಡುಬಡತನದ ಜೀವನ. ಮಾಸ್ತರ ಮಗ ಯಾವಾಗಲೂ ಮೊದಲು ಸ್ಥಾನದಲ್ಲಿರಬೇಕೆಂಬ ಆಸೆ ತಂದೆಯದಾಗಿದ್ದರೂ, ಈಶ್ವರನ್‌ರವರಿಗೆ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಯಲ್ಲೇ ಆಸಕ್ತಿ ಜಾಸ್ತಿ. ಶಾಲಾದಿನಗಳಲ್ಲೇ ಸಾಹಿತ್ಯದ ರುಚಿ ಹತ್ತಿ ಪಠ್ಯ ಪುಸ್ತಕದೊಳಗಿಟ್ಟುಕೊಂಡು ಗಳಗನಾಥ್, ಈಶ್ವರ ಚಂದ್ರರ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಬೆಳಗಾವಿಯ ಲಿಂಗರಾಜು ಕಾಲೇಜಿನಲ್ಲಿ. ಬಿ.ಎ. ಪದವಿಯಲ್ಲಿ ಹೆಚ್ಚು ಅಂಕ ಗಳಿಸಿ ‘ಫೆಲೋ’ ಆಗುವ ಅವಕಾಶ ಪಡೆದುಕೊಂಡರು. ವಿದ್ಯಾರ್ಥಿ ದೆಸೆಯಲ್ಲಿಯೇ ಹಲವಾರು ಲೇಖನಗಳನ್ನು ಪತ್ರಿಕೆಗೆ ಬರೆಯತೊಡಗಿದ್ದರು. ಇಂಗ್ಲಿಷ್ ಭಾಷೆಯನ್ನು ಕಲಿಯುವ ಇಚ್ಚೆ ವ್ಯಕ್ತಪಡಿಸಿದಾಗ ‘ಫೆಲೋ’ ಷಿಪ್ ಕೈಬಿಟ್ಟುಹೋಗುವುದೆಂದರಿತು ಕಡೆಗೆ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು. ಎಂ.ಎ. ಪದವಿ ಗಳಿಸುವ ಮುಂಚೆಯೇ ‘ವಿಷ ನಿಮಿಷಗಳು’, ‘ಹಾಲಾಹಲ’ ಎಂಬ ಎರಡು ಗ್ರಂಥಗಳನ್ನು ಪ್ರಕಟಿಸಿದ್ದರು. ಎಂ.ಎ. ಫಲಿತಾಂಶ ಬಂದ ನಂತರ ಕಂದಾಯ ಇಲಾಖೆ ಸೇರಿದ್ದರಿಂದ ಮಗ ಕಲೆಕ್ಟರ್‌ವರೆಗೆ ಬಡ್ತಿ ಗಳಿಸಬಹುದೆಂಬ ಆಸೆ ತಂದೆಯದಾಗಿತ್ತು. ಆದರೆ ಇವರಿಗಿದ್ದ ಕನ್ನಡದ ಮೇಲಿನ ಪ್ರೀತಿಯಿಂದ ಕಂದಾಯ ಇಲಾಖೆಗೆ ರಾಜೀನಾಮೆ ಸಲ್ಲಿಸಿ ಹುಬ್ಬಳ್ಳಿಯ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿದರು. ಆದರೆ ಕಾಲೇಜಿನ ಆಡಳಿತ ವರ್ಗದ ರೀತಿನೀತಿಯಿಂದ ಬೇಸತ್ತು ಕರ್ನಾಟಕ ಸಂಘ ಸ್ಥಾಪಿಸಿ ಕನ್ನಡದ ಏಳ್ಗೆಗಾಗಿ ದುಡಿಯತೊಡಗಿದರು. ಪಿ.ಆರ್.ಕಂಠಿಯವರ ನೇತೃತ್ವದಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ‘ನವಯುಗ’ ದೈನಿಕ ಪತ್ರಿಕೆಗೆ ಲೇಖನಗಳನ್ನು ಬರೆಯ ತೊಡಗಿದರು. ಇದೇ ಸಂದರ್ಭದಲ್ಲಿ ಕಲ್ಪನಾ ಗ್ರಂಥಮಾಲೆಯನ್ನು ಪ್ರಾರಂಭಿಸಿ ‘ಶಿವನ ಬುಟ್ಟಿ’, ‘ರಾಜಾರಾಣಿ ದೇಖೋ’, ‘ಕನ್ನಡ ತಾಯ್‌ನೋಟ’ ಮುಂತಾದ ಕೃತಿಗಳನ್ನು ಪ್ರಕಟಿಸಿದರು. ತಮ್ಮ ಕೃತಿಗಳನಷ್ಟೇ ಪ್ರಕಟಿಸದೆ ಚೆನ್ನವೀರಕಣವಿಯವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ’, ವರದರಾಜ ಹುಯಲಗೋಳರ ‘ಫಲಸಂಚಯ’, ಸಿಂಪಿ ಲಿಂಗಣ್ಣನವರ ‘ಭಾರತದ ಭವ್ಯ ಸಿದ್ಧತೆ’, ‘ಅರವಿಂದರ ಕಾಗದಗಳು’, ಮಿರ್ಜಿ ಅಣ್ಣಾರಾಯರ ‘ರಾಮಣ್ಣ ಮಾಸ್ತರ’ ಮುಂತಾದ ಕೃತಿಗಳು ಹೊರಬರಲು ಕಾರಣರಾದರು. ಕಾಲೇಜಿನ ಆಡಳಿತ ಮಂಡಲಿಯ ಕಿರುಕುಳದಿಂದ ಬೇಸತ್ತಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಲಿಯು ಇವರನ್ನು ಸೊಲ್ಲಾಪುರದ ಸಂಗಮೇಶ್ವರ ಕಾಲೇಜಿಗೆ ವರ್ಗಮಾಡಿತು. ಕನ್ನಡದ ಮೇಲಿನ ಪ್ರೀತಿ, ಸೇವೆಯಿಂದ ವಂಚಿತರಾಗಿದ್ದೇ ಕಾರಣವಾಗಿ ಮಾನವ ಶಾಸ್ತ್ರದತ್ತ ಇವರ ಒಲವು ಬೆಳೆಯತೊಡಗಿತು. ಪ್ರಖ್ಯಾತ ಮಾನವಶಾಸ್ತ್ರಜ್ಞರಾಗಿದ್ದ ಪ್ರೊ. ಎಂ.ಎನ್.ಶ್ರೀನಿವಾಸ್‌ರವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಂತಹ ಹೊರ ಜಗತ್ತಿನ ಪರಿಚಯಕ್ಕೆ ನಾಂದಿ ಹಾಡಿದರು. ಮೊದಲಲ್ಲಿ ಇವರಿಗೆ ಆಕ್ಸ್‌ಫರ್ಡ್ ವಿ.ವಿ.ದ ರೀತಿ ನೀತಿಗಳು ಕೊಂಚ ತಬ್ಬಿಬ್ಬು ಗೊಳಿಸಿದರೂ ಕ್ರಮೇಣ ಒಗ್ಗಿಕೊಂಡರು. ಇವರ ಡಾಕ್ಟರೇಟ್‌ಗೆ ಮಾರ್ಗದರ್ಶಕರಾಗಿದ್ದ ಪೋಕಾಕ್‌ ರವರ ಭಾರತೀಯರ ಜನಜೀವನ ಕುರಿತು ಅಧ್ಯಯನ ಮಾಡಲು ಸೂಚಿಸಿದಾಗ ಇವರು ಐರ್ಲೆಂಡ್ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡುತ್ತೇನೆಂದು ಸೂಚಿಸಿದರು. ಇದಕ್ಕೆ ಮಾರ್ಗದರ್ಶಕರು ಒಪ್ಪದಿದ್ದಾಗ ಬೇರೊಂದು ವಿಶ್ವವಿದ್ಯಾಲಯವನ್ನೇ ಹುಡುಕ ತೊಡಗಿ ಕಡೆಗೆ ಹಾಲೆಂಡ್‌ನ ಲಾಯ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ಪಡೆದರು. ಇವರು ಹಾಲೆಂಡಿನ ಕನ್ಯೆ ವೋಚಿನ್ ರವರನ್ನು ಮದುವೆಯಾಗಿ; ಈಶ್ವರನ್ ರವರಿಗೆ ಶೈಲಜಾ ಆದರು. ಇವರಿಗೆ ಹುಟ್ಟಿದ ಮೂವರು ಮಕ್ಕಳಲ್ಲಿ ಮೊದಲನೆಯವಳು ಅರುಂಧತಿ, ಎರಡನೆಯವನು ಹೇಮಂತ, ಮೂರನೆಯವನು ಶಿವಕುಮಾರ್. ಕರ್ನಾಟಕದ ಕರೆಯ ಮೇರೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ, ಮಾನವಶಾಸ್ತ್ರದ ಪ್ರೊಫೆಸರಾಗಿ ಸೇರಿದರಾದರೂ ಅಂದಿನ ಕುಲಪತಿಗಳಿಗೂ ಇವರಿಗೂ ಹೊಂದಾಣಿಕೆಯಾಗದೆ ಐದು ವರ್ಷ ಕಳೆಯುವಲ್ಲಿಯೇ ವಿಶ್ವವಿದ್ಯಾಲಯವನ್ನು ಬಿಡಬೇಕಾಯಿತು. ಪುನಃ ಹಾರಿದ್ದು ವಿದೇಶಕ್ಕೆ. ಟೊರ್ಯಾಂಟೊದ ಯಾರ‍್ಕ್ ವಿಶ್ವವಿದ್ಯಾಲಯ ಸೇರಿ ಪ್ರಖ್ಯಾತ ಸಮಾಜಶಾಸ್ತ್ರಜ್ಞರೆನಿಸಿದರು. ಇದೇ ವಿ.ವಿ.ಯಲ್ಲಿ ಮೂರು ದಶಕಗಳಷ್ಟು ಕಾಲ ಸಮಾಜ ವಿಜ್ಞಾನದ ಪ್ರಾಧ್ಯಾಪಕರಾಗಿ, ಎಮಿರೇಟಸ್ ಪ್ರಾಧ್ಯಾಪಕರಾಗಿ ದುಡಿದರು. ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಇವರು ರಚಿಸಿದ ಕೃತಿಗಳು ಸುಮಾರು ೨೫ ಕ್ಕೂ ಹೆಚ್ಚು. ಅಂತಾರಾಷ್ಟ್ರೀಯ ಮಟ್ಟದಲ್ಲಿ ೭೦ ಕ್ಕೂ ಕೃತಿಗಳನ್ನು ಸಂಪಾದಿಸಿದ್ದಾರೆ. ೩ ಜರ್ನಲ್‌ಗಳನ್ನು ನಡೆಸಿಕೊಂಡು ಬಂದಿದ್ದಾರೆ. ಇದೀಗ ಕೆಲ ಕರ್ನಲ್‌ಗಳನ್ನು ಇವರ ಕಿರಿಯಮಗ ಶಿವಕುಮಾರ್ ನಡೆಸಿಕೊಂಡು ಹೋಗುತ್ತಿದ್ದಾರೆ. ಹದಿಮೂರು ತಾಯಂದಿರ ಜೀವನ ಚಿತ್ರದ ಸಂಕಲನವೇ ‘ಕನ್ನಡ ತಾಯ್‌ನೋಟ’, ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ರಚಿಸಿದ ಕೃತಿ ‘ಕವಿಕಂಡನಾಡು’. ವಲಸಿಗನಾಗಿ ವಿದೇಶಕ್ಕೆ ಹಾರಿ, ಬಡ ಕುಟುಂಬವೊಂದರ, ಬಡರೈತನ ಮಗನ ಬವಣೆಯ ಆತ್ಮಕಥೆಯಂತಿರುವ ಹೋರಾಟದ ಚಿತ್ರಣದ ಕೃತಿಯೇ ‘ವಲಸೆ ಹೋದ ಕನ್ನಡಿಗರ ಕಥೆ’. ಮಗಳ ದುರಂತಮಯ ಬದುಕಿನ ಘಟನೆಗಳ ಕಥನಾತ್ಮಕ ನಿರೂಪಣೆಯ ಕೃತಿ ‘ಅರುಂಧತಿ ನನ್ನ ಮಗಳು’, ಕರ್ನಾಟಕದ ವಿಶ್ವವಿದ್ಯಾಲಯಕ್ಕಾಗಿ ಸಿದ್ಧಪಡಿಸಿದ್ದ ಮಹಾಪ್ರಬಂಧ ‘ಹರಿಹರನ ಕೃತಿಗಳು: ಒಂದು ಸಂಖ್ಯಾ ನಿರ್ಣಯ’, ಇದಲ್ಲದೆ ‘ಲಿಂಗಾಯತ ಧರ್ಮ: ಒಂದು ಅಧ್ಯಯನ’, ‘ಬಸವಣ್ಣ ಮತ್ತು ಲಿಂಗಾಯತ ಧರ್ಮ’, ‘ಲಿಂಗಾಯತ, ಜೈನ, ಬ್ರಾಹ್ಮಣಧರ್ಮಗಳು; ಮಠಗಳ ಒಂದು ತೌಲನಿಕ ಅಧ್ಯಯನ’ ಮುಂತಾದ ಕೃತಿಗಳು. ಇವರಿಗೆ ೭೬ ವರ್ಷ ತುಂಬಿದ ಸಂದರ್ಭದಲ್ಲೇ ಪಾರ್ಶ್ವವಾಯು ಪೀಡಿತರಾಗಿ ಆರೋಗ್ಯ ಸುಧಾರಣೆಗಾಗಿ ಧಾರವಾಡಕ್ಕೆ ಬಂದರು. ಅನಾರೋಗ್ಯ ಪೀಡಿತರಾಗಿದ್ದರೂ ಅವರ ಬರವಣಿಗೆಯ ಕಾಯಕಕ್ಕೆ ವಿಶ್ರಾಂತಿ ನೀಡಬಯಸದೆ ಮತ್ತೊಂದು ಕಾದಂಬರಿ ಬರೆಯುವ ಹವಣಿಕೆಯಲ್ಲಿದ್ದರು. ಮುಸ್ಸಂಜೆಯ ವಯಸ್ಸಿನಲ್ಲಿ ತಾಯ್ನಾಡಿನ ಆಕರ್ಷಣೆಗೊಳಗಾಗಿ ಅನಾರೋಗ್ಯವಾದಾಗಲ್ಲೆಲ್ಲಾ ಧಾರವಾಡಕ್ಕೆ ಧಾವಿಸುತ್ತಿದ್ದರು. ಹೀಗೊಮ್ಮೆ ಧಾರವಾಡಕ್ಕೆ ಬಂದಾಗಲೇ ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಶಿವಮೂರ್ತಿ ಸ್ವಾಮೀಜಿಯವರು ‘ಬಸವ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದ್ದರಿಂದ ಸಂಭ್ರಮಿಸಿದರು. ವಿದೇಶದಲ್ಲಿದ್ದರೂ ಕನ್ನಡ ನಾಡು-ನುಡಿಗಾಗಿ ಅಹರ್ನಿಶಿ ದುಡಿದ ವಿದ್ವಾಂಸರೊಬ್ಬರನ್ನು ಗುರುತಿಸಿ  ಸನ್ಮಾನಿಸಿದ್ದು ಅಭಿನಂದನಾರ್ಹ ಸಂಗತಿಯಾದರೂ ತನ್ನ ಪ್ರತಿಭೆಯನ್ನು ಕರ್ನಾಟಕದ ಜನತೆ ಗುರುತಿಸಿ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲವೆಂಬ ಕೊರಗು ಅವರನ್ನು ಬಾಧಿಸುತ್ತಲೇ ಇತ್ತು. ಸಮಾಜಶಾಸ್ತ್ರ, ಸಾಹಿತ್ಯ ಎರಡೂ ಕ್ಷೇತ್ರದಲ್ಲಿ ದುಡಿದ ಅಪರೂಪದ ಪ್ರತಿಭಾವಂತ ಈಶ್ವರನ್ ರವರು ಲೋಕವನ್ನು ತ್ಯಜಿಸಿದ್ದು ೨೩.೬.೧೯೯೮ ರಲ್ಲಿ.

Details

Date:
November 1, 2023
Event Category: