ಹುಲ್ಲೂರು ಶ್ರೀನಿವಾಸ ಜೋಯಿಸರು

Home/Birthday/ಹುಲ್ಲೂರು ಶ್ರೀನಿವಾಸ ಜೋಯಿಸರು
Loading Events
This event has passed.

೨೯-೩-೧೮೯೨ ೮-೧೧-೧೯೫೬   ಸಂಶೋಧಕ, ರಾಷ್ಟ್ರಪ್ರೇಮಿ, ಕರ್ನಾಟಕ ಏಕೀಕರಣಕ್ಕೆ ದುಡಿದ, ಪುರೋಹಿತ ಮನೆತನಕ್ಕೆ ಸೇರಿದ ಹುಲ್ಲೂರು ಶ್ರೀನಿವಾಸ ಜೋಯಿಸರ ಕುಟುಂಬದ ಹಿರಿಯರು ಸುಮಾರು ಮೂರು ನೂರು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಬಳಿಯ ಅಂಬಳೆ ಗ್ರಾಮದಿಂದ ಚಿತ್ರದುರ್ಗ ಜಿಲ್ಲೆಯ ಹುಲ್ಲೂರಿಗೆ ವಲಸೆ ಬಂದವರು. ತಂದೆ ಪಾಂಡುರಂಗ ಜೋಯಿಸ್, ತಾಯಿ ಪಾರ್ವತಮ್ಮ. ಪ್ರಾಥಮಿಕ ಶಿಕ್ಷಣ ಪಡೆದುದು ಚಿತ್ರದುರ್ಗದಲ್ಲಿ, ಮೆಟ್ರಿಕ್ ಪಾಸು ಮಾಡಿದ ನಂತರ ಕೆಲಕಾಲ ನೌಕರಿಯಲ್ಲಿದ್ದರು. ನಂತರ ಲಾ ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದರು. ವಕೀಲರಾಗಿದ್ದರೂ ಅಧ್ಯಯನ ಶೀಲರಾಗಿದ್ದು ಇತಿಹಾಸ ಸಂಶೋಧನೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದರು. ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ ಹೋರಾಟದಲ್ಲೂ  ಪಾಲ್ಗೊಂಡಿದ್ದರು. ಚಿತ್ರದುರ್ಗದ ಇತಿಹಾಸದ ಜೊತೆಗೆ ಕರ್ನಾಟಕದ ಇತಿಹಾಸದ ಬಗ್ಗೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಐತಿಹಾಸಿಕ ಸ್ಥಳಗಳು, ವ್ಯಕ್ತಿಗಳು, ಘಟನೆಗೆ ಸಂಬಂಸಿದಂತೆ, ಭಾಷೆ, ಧರ್ಮ, ಸಂಸ್ಕೃತಿ, ಶೌರ್ಯ, ಸಾತ್ವಿಕತೆ, ಆದರ್ಶ, ಉದಾರತೆ ಮೊದಲಾದ ಗುಣಗಳನ್ನು ಚಿತ್ರಿಸುವ ಉದ್ದೇಶದಿಂದ ಅವರು ಇಪ್ಪತ್ತೈದು ವರ್ಷಗಳ ಕಾಲ ಸುಮಾರು ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದು ಕನ್ನಡಿಗರ ಕಣ್ಣು ತೆರೆಸಿದ್ದಾರೆ. ಇವರು ರಚಿಸಿದ ಹತ್ತು ಪುಸ್ತಕಗಳಲ್ಲಿ  ಗಂಡುಗಲಿ ಕುಮಾರರಾಮ, ಕನ್ನಡ ಕಲಿ ಸಿರುಮನ ಚರಿತೆ ಬಹುಮುಖ್ಯವಾದುವು. ‘ಚಿತ್ರದುರ್ಗದ ಬಖೈರು’ ಇವರು ಸಂಪಾದಿಸಿ ಪ್ರಕಟಿಸಿದ ಅಮೂಲ್ಯ ಐತಿಹಾಸಿಕ ದಾಖಲೆಯ ಕೃತಿ. ಶ್ರೀ ತ.ರಾ.ಸು. ಮತ್ತು ಜಿ. ವರದರಾಜರಾಯರು ಕ್ರಮವಾಗಿ ಹಂಸಗೀತೆ ಮತ್ತು ಕುಮಾರರಾಮನ ಸಾಂಗತ್ಯ ಕೃತಿಗಳನ್ನು ಶ್ರೀನಿವಾಸ ಜೋಯಿಸರಿಗೆ ಅರ್ಪಿಸಿ ಗೌರವ ತೋರಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಿಕಾ ವರದಿಗಾರರಾಗಿ, ಚಿತ್ರದುರ್ಗ ಜಿಲ್ಲೆಯ ಪತ್ರಿಕೋದ್ಯಮಿಗಳ ಸಂಘದ ಅಧ್ಯಕ್ಷರಾಗಿ, ಮೈಸೂರು ಸಂಸ್ಥಾನ ಪತ್ರಿಕೋದ್ಯೋಗಿಗಳ ಸಂಘದ, ಮೈಸೂರು ಪ್ರಾದೇಶಿಕ, ಐತಿಹಾಸಿಕ ಪತ್ರಗಳ ಶೋಧನಾ ಸಮಿತಿ, ಯೋಜನಾ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದರು. “ಇತಿಹಾಸ ಸಂಶೋಧನಾ ಪ್ರಸಕ್ತ, ಐತಿಹ್ಯ ವಿಮರ್ಶನ ವಿಚಕ್ಷಣ” ಸಂದ ಬಿರುದು ಗೌರವಗಳು. ೨೦೦೦ ವರ್ಷದಷ್ಟು ದೀರ್ಘ ಇತಿಹಾಸ ಹೇಳುವ, ತಾವೇ ಸ್ಥಾಪಿಸಿದ ಚಿತ್ರದುರ್ಗದ ಪ್ರಾಚ್ಯವಸ್ತು ಸಂಗ್ರಹಾಲಯದ ಗೌರವ ಕ್ಯೂರೇಟರಾಗಿಯೂ ಸೇವೆ ಸಲ್ಲಿಸಿ ನಿಧನರಾದದ್ದು ೮.೧೧.೧೯೫೬ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಉಳವೀಶ  – ೧೯೨೬ ಅಣ್ಣಯ್ಯಗೌಡ – ೧೯೨೭ ಮ. ರಾಮಕೃಷ್ಣ – ೧೯೬೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top