ಹೊಯಿಸಳ (ಅರಗ ಲಕ್ಷ್ಮಣರಾಯರು)

Home/Birthday/ಹೊಯಿಸಳ (ಅರಗ ಲಕ್ಷ್ಮಣರಾಯರು)
Loading Events
This event has passed.

೦೭..೧೮೯೩ ೧೦.೧೦.೧೯೫೯ ೧೯ನೆಯ ಶತಮಾನದ ಪೂರ್ವಾರ್ಧದಲ್ಲಿ ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಪ್ರಮುಖರಾದ ಹೊಯಿಸಳ ಕಾವ್ಯನಾಮದ ಅರಗ ಲಕ್ಷ್ಮಣರಾಯರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ೧೮೯೩ರ ಮೇ ೭ರಂದು. ತಂದೆ ಸುಬ್ಬಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ನರಸಿಂಹರಾಜಪುರದಲ್ಲಿ. ಪ್ರೌಢಶಾಲಾ ವ್ಯಾಸಂಗ ಮಾಡಿದ್ದೂ ಮೈಸೂರಿನಲ್ಲಿ. ಬಿ.ಎ. ಪದವಿ ಪಡೆದದ್ದು ಸ್ವಾತಂತ್ರ್ಯ ಹೋರಾಟ ಗಾರ್ತಿಯಾದ ಅನಿಬೆಸೆಂಟರು ಮದನಪಲ್ಲಿಯಲ್ಲಿ ಸ್ಥಾಪಿಸಿದ್ದ ನ್ಯಾಷನಲ್‌ ಕಾಲೇಜಿನಿಂದ. ಕಾಲೇಜಿನಲ್ಲಿದ್ದಾಗಲೇ ಅನಿಬೆಸೆಂಟ್‌, ಸಿ.ಎಫ್‌. ಆಂಡ್ರೂನ್‌, ಮತ್ತು ಕಸಿನ್ಸ್ ರವರುಗಳ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ್ದರಿಂದ ವಿದ್ಯಾಭ್ಯಾಸಕ್ಕೆ ತಡೆಯುಂಟಾಯಿತು.  ೧೯೧೯ರಲ್ಲಿ ಶಾಂತಿನಿಕೇತನಕ್ಕೆ ತೆರಳಿ ಸುಮಾರು ೨ ವರ್ಷಗಳ ಕಾಲವಿದ್ದು ಬಂದನಂತರ ಇವರ ಬದುಕಿನ ರೀತಿಯೋ ಬದಲಾಯಿತು. ೧೯೨೨ರಲ್ಲಿ ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ನಿವೃತ್ತರಾಗುವವರೆವಿಗೂ ಅಧ್ಯಾಪಕರಾಗೇ ಇದ್ದ ಲಕ್ಷ್ಮಣರಾಯರಿಗೆ ಅಧ್ಯಾಪಕ ವೃತ್ತಿ ಬಹಳ ತೃಪ್ತಿ ತಂದುಕೊಟ್ಟ ವೃತ್ತಿಯಾಗಿತ್ತು. ಮಕ್ಕಳ ಮನಸ್ಸಿಗೆ ಸಂತಸಕೊಡುವ, ಹಾಡಿ-ಕುಣಿಯುವಂತಹ ಅನೇಕ ಪದ್ಯಗಳನ್ನು ರಚಿಸಿ ಮಕ್ಕಳ ಕವಿ ಎನಿಸಿಕೊಂಡರು. ಮಕ್ಕಳಿಗಾಗಿ ಹಲವಾರು ಪದ್ಯಗಳು, ಸುಮಾರು ೩೫ ಕಥೆಗಳು, ೫ ನಾಟಕಗಳನ್ನು ರಚಿಸಿದ್ದಾರೆ. ತಿರುಗಮುರುಗ ಇವರ ಚೊಚ್ಚಲ ಪದ್ಯ ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಯಿತು. ‘ಏಳುವ ಹೊತ್ತು ’ಇವರ ಪ್ರಥಮ ಕವನ ಸಂಕಲನ. ನಂತರ ಬಂದದ್ದು ‘ಕಂಕಣ’ (೧೯೯೫). ಆಯ್ದ ಪದ್ಯಗಳ ಸಂಕಲನ ‘ಬಂದ ಬಂದ ಸಂತಂಮಣ್ಣ’. ಕಂಕಣ ಸಂಕಲನದಲ್ಲಿರುವ ಕಾಂಪೌಂಡ್‌ ಬಂಗ್ಲಿ/ಕಂಕಮ್ಮಂಗೆ/ಮೂಛೆ ಬಂದಿತ್ತು/ಪ್ರಸಿದ್ಧ ಕಥನ ಕವನ. ಇದನ್ನು ಕಾರ್ಯಕ್ರಮದ ನಡುವಿನ ಬಿಡುವಿನ ಸಮಯದಲ್ಲೆಲ್ಲಾ ಹಲವಾರು ಮಂದಿ (MONO ACTING) ಹಾಡಿ, ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸಂತಂಮಣ್ಣ, ಚಂದುಮಾಮ, ಒಂದು ಎರಡು ಮೂರು, ಕೋಲು ಕುದುರೆ, ತಟ್ಟುಚಪ್ಪಾಳೆ ಪುಟ್ಟ ಮಗು, ನಂಗೊತ್ತಿಲ್ಲಪ್ಪಾ… ಇವರ ಜನಪ್ರಿಯ ಮಕ್ಕಳ ಪದ್ಯಗಳು. ತಾವು ರಚಿಸಿದ್ದಷ್ಟೇ ಅಲ್ಲದೆ ಪ್ರಸಿದ್ಧರಾಗಿದ್ದ ಉತ್ತಮ ಶಿಶು ಸಾಹಿತ್ಯವನ್ನೂ ಆರಿಸಿ ಮಕ್ಕಳಿಗಾಗಿ ಒದಗಿಸಿದ್ದಾರೆ. ಜಗತ್ತಿನ ಮೊದಲಕತೆ, ಈಜಪ್ತಿನ ‘ಅನ್ಬು-ಬಾಟ’, ಠಾಕೂರರ ‘ವಸಂತ’, ನೆಹರೂರವರ ‘ಮಗಳಿಗೆ ತಂದೆಯ ಓಲೆಗಳು’ ಮುಖ್ಯವಾದವುಗಳು. ಇವರು ರಚಿಸಿದ ಮಕ್ಕಳ ಕಥೆಗಳು ಹೂವಿನ ಹಾಸಿಗೆ, ಪುಟ್ಟರಸು, ಪಠಾಕ್ಷಿ, ಅನ್ಬು-ಬಾಟ, ಅದಕ್ಕೆ ಆ ಹೆಸರು, ಆನೆ ಇರುವೆ, ಗಂಟೆಗೋಪುರ, ಖೈದಿಗಳ ಕಷ್ಟ, ಪುಟ್ಟ ತಮ್ಮ ಯಾರು, ಪೋರಿ, ಬದುಕುವ ಮಂತ್ರ, ನಿಶ್ಚಲದಾಸ, ಅಭ್ಯಂಕು, ವೀರಕುಮಾರ, ಮಸೀದಿಯನ್ನೂ ಎಲ್ಲಿ ಕಟ್ಟಿದರು, ಶುಭಾಂಗ, ಬೋರನೆಟ್ಟ ಮೂಲಂಗಿ, ರಾಜನ ಬುದ್ಧಿವಂತಿಕೆ ಮುಂತಾದವುಗಳು. ಮಗು, ಪ್ರಸಾದ, ವಾತಾಪಿ, ಚಂದ್ರಹಾಸ, ಅಗಲಿದ ಮಗಳು ಮುಂತಾದ ೫ ನಾಟಕಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ. ದೊಡ್ಡವರಿಗಾಗಿ ಬರೆದ ಕೃತಿಗಳೆಂದರೆ ಕಂಚಿನ ಕನ್ನಡಿ, ಕಂಕಣ, ದಿನಾರಿ, ಹಾಡಿನ ಚಿಲುಮೆ, ಪರಿಷತ್ತಿನ ಲಾವಣ, ಗೆಲುವು-ಗುರಾಣಿ ಮುಂತಾದವುಗಳು. ಮಕ್ಕಳಿಗಾಗಿಯೇ ‘ಕನಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ ಸಾಕಷ್ಟು ಚಂದದಾರರು ದೊರೆಯದೆ ಹಣಕಾಸಿನ ತೊಂದರೆಯಿಂದಾಗಿ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ನಿವೃತ್ತಿಯ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಕಾಲ ಮತ್ತು ಪ್ರಜಾವಾಣಿ ಪತ್ರಿಕೆಯ ‘ಬಾಲಭಾರತಿ’ ಮಕ್ಕಳ ವಿಭಾಗವನ್ನು ಕೆಲಕಾಲ ನಡೆಸಿದರು. ಬೋಧಕರಾಗಿದ್ದ ಕಾಲದಲ್ಲಿ ಮಕ್ಕಳ ಮನಸ್ಸನ್ನೂ ಅರಿತಿದ್ದು ಲಕ್ಷ್ಮಣರಾಯರು ಮಕ್ಕಳ ಮನೋವಿಕಾಸಕ್ಕಾಗಿ ಹಲವಾರು ಕಥೆ, ಪದ್ಯ, ನಾಟಕಗಳನ್ನೂ ರಚಿಸಿದ್ದು ಮಕ್ಕಳ ಮನಸ್ಸಿಗೆ ದುಃಖ ಉಂಟುಮಾಡಿದ್ದು ೧೯೫೯ ರ ಅಕ್ಟೋಬರ್ ೧೦ ರಂದು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top