ಹೊ.ವೆ. ಶೇಷಾದ್ರಿ

Home/Birthday/ಹೊ.ವೆ. ಶೇಷಾದ್ರಿ
Loading Events

೨೬-೫-೧೯೨೬ ೧೪-೮-೨೦೦೫ ಬಹುಭಾಷಾ ಕೋವಿದರು, ಉಜ್ವಲ ದೇಶಪ್ರೇಮಿ, ಚಿಂತಕರು, ಖ್ಯಾತ ಲೇಖಕರಾದ ಶೇಷಾದ್ರಿಯವರು ಹುಟ್ಟಿದ್ದು ಹೊಂಗಸಂದ್ರ. ತಂದೆ ವೆಂಕಟರಾಮಯ್ಯ, ತಾಯಿ ಪಾರ್ವತಮ್ಮ. ವಿದ್ಯಾಭ್ಯಾಸ ನಡೆದುದು ಬೆಂಗಳೂರಿನಲ್ಲಿ. ೧೯೪೬ರಲ್ಲಿ ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವಿ. ಶಿಕ್ಷಣ ಅವಯಲ್ಲಿ ಸದಾ ಅಗ್ರಪಂಕ್ತಿಯ ವಿದ್ಯಾರ್ಥಿ. ಶಿಕ್ಷಣ ಪೂರೈಸಿದ ಬಳಿಕ ಸಮಾಜ ಸೇವೆಗಾಗಿ ಅರ್ಪಿಸಿಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವ ಕಾರ‍್ಯಕರ್ತರಾಗಿ ದೇಶದುದ್ದಗಲಕ್ಕೂ ಸಂಚಾರ. ಪ್ರಾರಂಭದಲ್ಲಿ ಬೆಂಗಳೂರು ನಗರ ಪ್ರಚಾರಕರ ಜವಾಬ್ದಾರಿ. ೧೯೫೩-೫೬ರ ಅವಯಲ್ಲಿ ಮಂಗಳೂರು ವಿಭಾಗದ ಪ್ರಚಾರ ಕಾರ‍್ಯಭಾರ. ೧೯೬೦ರಲ್ಲಿ ಕರ್ನಾಟಕ ಪ್ರಾಂತ್ಯ ಪ್ರಚಾರಕ್ ಹಾಗೂ ೧೯೮೦ರಲ್ಲಿ ಕ್ಷೇತ್ರೀಯ (ದ. ಭಾರತದ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು) ಪ್ರಚಾರ ಕಾರ‍್ಯ ನಿರ್ವಹಣೆ. ೧೯೮೭ರಲ್ಲಿ ಪ್ರಧಾನ ಕಾರ‍್ಯದರ್ಶಿಯಾಗಿ ಸಂಘದ ಅತ್ಯುಚ್ಚ ಜವಾಬ್ದಾರಿಯನ್ನು ೯ ವರ್ಷಕಾಲ ನಿರ್ವಹಿಸಿದ ಯಶಸ್ಸು. ಸಂಘಟನೆಯಲ್ಲಿ ಅಸ್ಪೃಶ್ಯತೆಯ ಸಾಮಾಜಿಕ ದೋಷ ನಿವಾರಣೆ. ಮತಾಂತರ ಪಿಡುಗಿನ, ಸ್ವದೇಶಿ ವಸ್ತು ಬಳಕೆಯ, ಸಂಸ್ಕೃತ ಆಂದೋಳನದ ಹಲವಾರು ಕಾರ‍್ಯಕ್ರಮಗಳನ್ನು ಹಮ್ಮಿಕೊಂಡು ದೇಶವ್ಯಾಪಿ ಓಡಾಟ, ಹೋರಾಟ. ಯುವ ಜನಾಂಗಕ್ಕೆ ನಿರಂತರ ಮಾರ್ಗದರ್ಶನ. ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಜನರಿಗೆ ಮುಟ್ಟಿಸುವಲ್ಲಿ ಆಕರ್ಷಕ ಬರಹ, ವೈಚಾರಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ. ಸಮಾಜದೊಂದಿಗೆ ದೊರೆತ ಅನುಭವವನ್ನು ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷ್‌ನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ ಮಾಲೆ. ವಿಮರ್ಶಾತ್ಮಕ ವಿಶ್ಲೇಷಣೆ, ಪ್ರತಿಪಾದನೆ, ಸರಳ ಶೈಲಿ ಇವರ ಲೇಖನಗಳ ವಿಶೇಷತೆ. ರಚಿಸಿದ ಕೃತಿಗಳು-ಕನ್ನಡದಲ್ಲಿ ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ವಿಭಜನೆಯ ದುರಂತ ಕಥೆ, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ ‘ಭುಗಿಲು’, ಲಲಿತ ಪ್ರಬಂಧಗಳ ಸಂಗ್ರಹ ‘ತೋರ್ಬೆರಳು.’ ಇಂಗ್ಲಿಷ್‌ನಲ್ಲಿ-ಬಂಚ್ ಆಫ್ ಥಾಟ್ಸ್, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್, ಆರ್‌ಎಸ್‌ಎಸ್-ಎ ವಿಷನ್ ಇನ್ ಆಕ್ಷನ್, ಯೂನಿವರ್ಸಲ್ ಸ್ಪಿರಿಟ್ ಆಫ್ ಹಿಂದೂ ನ್ಯಾಷಲಿಸಮ್, ದಿ ವೇ, ಯೋಗ-ಎ ಸೋಷಿಯಲ್ ಇಂಪರೆಟಿವ್ ಮುಂತಾದುವು. ಹಿಂದಿ ಮತ್ತು ಮರಾಠಿಯಲ್ಲಿ ಕೃತಿ ರೂಪ್ ಸಂಘ ದರ್ಶನ್, ನಾನ್ಯ ಪಂಥ್, ಉಗವೇ ಸಂಘ ಪಹಾಟ್ ಮುಂತಾದ ಕೃತಿರಚನೆ. ಪ್ರಶಸ್ತಿಗಾಗಿ ಆಶಿಸದಿದ್ದರೂ ಕರ್ನಾಟಕ ಸಾಹಿತ್ಯ ಅಕಾಡಮಿ ೧೯೮೨ರಲ್ಲಿ ಲಲಿತ ಪ್ರಬಂಧಗಳ ಸಂಕಲನ ತೋರ್ಬೆರಳು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಸದಾ ದೇಶ ಪ್ರೇಮವನ್ನು ನರನಾಡಿಗಳಲ್ಲಿ ತುಂಬಿಕೊಂಡು, ಸಾಮಾಜಿಕ ಅನಿಷ್ಟಗಳ ವಿರುದ್ಧ ಭಾಷಣ, ಬರಹಗಳ ಮೂಲಕ ಯುವ ಜನತೆಗೆ ದಾರಿದೀಪವಾಗಿದ್ದ  ಚೇತನ ೨೦೦೫ರ ಸ್ವಾತಂತ್ರ್ಯೋತ್ಸವದ ಮುನ್ನಾದಿನ ನಂದಿ ಹೋಯಿತು.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top