ಹ.ಮ. ಪೂಜಾರ

Home/Birthday/ಹ.ಮ. ಪೂಜಾರ
Loading Events
This event has passed.

೧೩.೦೩.೧೯೪೩ ಶಿಶುಗೀತೆಗಳು, ಮಕ್ಕಳ ಪದ್ಯಗಳನ್ನು ಬರೆದು ಮಕ್ಕಳ ಮನಸ್ಸನ್ನು ಚೇತೋಹಾರಿಯಾಗಿದ್ದಷ್ಟೇ ಅಲ್ಲದೆ ಮನೆಯಂಗಳದಲ್ಲಿ ಚಿಲಿಪಿಲಿ ಶಬ್ದ, ಶಾಲೆಯ ಆವರಣದಲ್ಲಿ ಮಕ್ಕಳ ಕಲರವ, ಮಕ್ಕಳ ಮೇಳದಲ್ಲಿ ಮಕ್ಕಳ ಇಂಪಾದ ದನಿ, ಮಕ್ಕಳಿಗಾಗಿ ಶಿಬಿರ, ಮಕ್ಕಳ ಹಬ್ಬ ಮುಂತಾದವುಗಳನ್ನು ನಡೆಸಿಕೊಂಡು ಬಂದು ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಸದಾ ತೊಡಗಿಸಿಕೊಂಡಿರುವ ಹ.ಮ.ಪೂಜಾರರವರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ. ತಂದೆ ಮನ್ನೆಪ್ಪ ಪೂಜಾರ, ತಾಯಿ ಗುರುಬಾಯಿ. ಓದಿದ್ದು ಸಿಂದಗಿಯಲ್ಲಿ ಪ್ರೌಢಶಾಲೆಯವರೆಗೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಬಾಹ್ಯ ವಿದ್ಯಾರ್ಥಿಯಾಗಿ ಪಡೆದ ಬಿ.ಎಡ್. ಪದವಿ. ೧೯೬೧ರಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಕರಾಗಿ ಸೇರಿ ನಂತರ ಪ್ರೌಢಶಾಲಾ ಶಿಕ್ಷಕರಾಗಿ ೨೦೦೧ರಲ್ಲಿ ನಿವೃತ್ತಿ. ಶಿಕ್ಷಕರಾಗಿದ್ದ ಅವಧಿಯಲ್ಲಿ ಸಿಂದಗಿ, ಕೋಡಳ್ಳಿ, ಗುಬ್ಬೆವಾಡ, ವೊರಟಗಿ, ರಾಂಪುರ ಮುಂತಾದೆಡೆಗಳಲ್ಲಿ ಕಾರ‍್ಯ ನಿರ್ವಹಣೆ. ಹಳ್ಳಿಗಾಡಿನ ಶಾಲೆಯಲ್ಲಿ ಮಕ್ಕಳ ಮನೋವಿಕಾಸಕ್ಕೆ ಅವಕಾಶಗಳು ಅತಿಕಡಿಮೆ ಎಂಬುದನ್ನು ಅರಿತ ಪೂಜಾರ ಅವರು ೧೯೭೫ರಲ್ಲಿ ಸಿಂದಗಿಯಲ್ಲಿ ಸ್ಥಾಪಿಸಿದ್ದು ಚಾಚಾ ನೆಹರು ವಿಜ್ಞಾನ ಮಂಡಳ. ಇದು ವಿಜ್ಞಾನಕ್ಕೆ ಮಾತ್ರ ಸೀಮಿತವಾಗಿದ್ದು ಸಾಮಾನ್ಯ ವಿದ್ಯಾರ್ಥಿಗೂ ಈ ಬಳಗದ ಉಪಯುಕ್ತತೆಗಳು ದೊರೆಯಲೆಂದು ವಿಸ್ತಾರಗೊಳಿಸಿ ೧೯೭೬ರಲ್ಲಿ ಸ್ಥಾಪಿಸಿದ್ದು ‘ಮಕ್ಕಳ ಬಳಗ’. ಮಕ್ಕಳ ಬಳಗದ ಮುಖಾಂತರ ಹಳ್ಳಿಯ ಮಕ್ಕಳಲ್ಲಿ ಬೌದ್ಧಿಕ ಶಕ್ತಿಯನ್ನು ಬೆಳೆಸಲು ರಸಪ್ರಶ್ನೆ ಕಾರ‍್ಯಕ್ರಮ, ವಿಜ್ಞಾನ ಮೇಳ, ಸಾಮಾನ್ಯ ಜ್ಞಾನ ಸ್ಪರ್ಧೆ ಮುಂತಾದ ಹಲವಾರು ಸ್ಪರ್ಧೆಗಳ ಆಯೋಜನೆ. ತಾಲ್ಲೂಕು ಮಟ್ಟದ ವಿಜ್ಞಾನ ಮೇಳ, ಅಂತಾರಾಷ್ಟ್ರೀಯ ಮಕ್ಕಳ ವರ್ಷಾಚರಣೆಗಳ ಜೊತೆಗೆ ನವೋದಯ ಶಾಲೆಯಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಮಕ್ಕಳಿಗೆ ೧೫ ವರ್ಷಗಳ ಕಾಲ ನಡೆಸಿದ ಉಚಿತ ತರಗತಿಗಳು. ಧರ್ಮಸ್ಥಳ, ತುಮಕೂರು ಮುಂತಾದೆಡೆಗಳಲ್ಲಿ ಜರುಗಿದ ಮಕ್ಕಳ ಮೇಳಗಳಲ್ಲಿ ಇವರ ಮಕ್ಕಳ ಬಳಗದಿಂದ ಪ್ರತಿಭಾ ಪ್ರದರ್ಶನ. ವಿಜಾಪುರದ ಮಕ್ಕಳ ಸಾಹಿತ್ಯ ಸಂಗಮದ ಸಹಯೋಗದೊಂದಿಗೆ ಏರ‍್ಪಡಿಸಿದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯೋತ್ಸವ, ಧಾರವಾಡದಲ್ಲಿ ನಡೆದ ದಕ್ಷಿಣವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಮತ್ತು ಕನ್ನಡ ಸಂಸ್ಕೃತಿ, ಬೆಂಗಳೂರು, ಇವರು ಏರ‍್ಪಡಿಸಿದ ಮಕ್ಕಳ ಮೇಳದಲ್ಲಿ ‘ಮಕ್ಕಳ ಇಲಾಖೆ ಬಳಗದ’ ಮಕ್ಕಳಿಂದ ಪ್ರತಿಭಾ ಪ್ರದರ್ಶನ- ಹೀಗೆ ಹಲವಾರು ಸಾಂಸ್ಕೃತಿಕ ಕಾರ‍್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಮಕ್ಕಳ ಬಳಗದ ಮಕ್ಕಳಿಗೆ ಕೊಟ್ಟ ತರಬೇತು, ಪಡೆದ ಪ್ರಶಸ್ತಿಗಳು. ಸಾಂಸ್ಕೃತಿಕವಾಗಿ ಮಕ್ಕಳ ಮನಸ್ಸನ್ನು ಹದಗೊಳಿಸಿದಂತೆ ಓದಿ ಕಲಿಯಲು ಬರೆದ ಹಲವಾರು ನೀತಿಕಥೆಗಳು ಹಾಗೂ ನೀತಿ ಪದ್ಯಗಳು. ಕಥಾ ಸಂಕಲನಗಳಾದ ‘ನೀತಿಯ ಬದುಕು’, ‘ಪರೋಪಕಾರ’, ‘ತುಂಟ ಮಂಗ’, ಮುಂತಾದವುಗಳಾದರೆ, ‘ಪರಿಸರ’ ಎಂಬುದು ಮಕ್ಕಳ ಕವಿತೆಗಳ ಸಂಕಲನ. ಈ ಸಂಕಲನದ ‘ಜಲ ಮೂಲ’ ಎಂಬ ಪದ್ಯದಲ್ಲಿ, ಕಡಲ ಜಲವು ಆವಿಯಾಗಿ ಗಗನದೊಡಲು ಸೇರಿತು ತಂಪು ತಗಲಿ ಆವಿ ಕರಗಿ ನೀರು ಧರೆಗೆ ಇಳಿಯಿತು ಇವಲ್ಲದೆ ನಾಡಸಿರಿ, ವನಸಿರಿ, ಸಹನೆ – ತ್ಯಾಗ, ಜಲಚಕ್ರ ಮೊದಲಾದ ಪದ್ಯಗಳಲ್ಲಿ ಪರಿಸಿರ, ವಿಜ್ಞಾನ, ತ್ಯಾಗ, ಶಿಸ್ತಿನ ಬಗ್ಗೆ ಅರಿವು ಮೂಡಿಸುವಂತಹ ಸಂದೇಶ ಬೀರುವ ಪದ್ಯಗಳಿವೆ. ಮಕ್ಕಳಿಗಾಗಿ ಬರೆದ ಮತ್ತೊಂದು ವ್ಯಕ್ತಿ ಚಿತ್ರಣದ ಕೃತಿ ‘ಕಾಯಕ ಯೋಗಿ ಚನ್ನ ವೀರ ಸ್ವಾಮಿಗಳು’. ಇವರು ಸಂಪಾದಿಸಿರುವ ಇತರ ಕೃತಿಗಳೆಂದರೆ ಶೈಕ್ಷಣಿಕ ಸಮ್ಮೇಳನದ ಸಂಸ್ಮರಣ ಗ್ರಂಥ ‘ರಸ ಕಿರಣ’, ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂಸ್ಮರಣ ಗ್ರಂಥ ‘ವಿಜಯ ವಾಣಿ’, ಜಿಲ್ಲಾ ಮಕ್ಕಳ ಸಾಹಿತ್ಯ ಸಮೀಕ್ಷೆ ‘ಚಿಣ್ಣರ ಚೇತನ’, ಸಂಗೀತ ಕುರಿತಾದ ಲೇಖನಗಳ ಸಂಕಲನ ‘ಪಂಚಾಕ್ಷರಿ ಪ್ರಭೆ’, ಸ್ಪರ್ಧೆಗಾಗಿ ಮಕ್ಕಳ ಸಾಹಿತಿಗಳು ಬರೆದ ಕಥೆ, ಕವನಗಳ ಸಂಕಲನ ‘ಪುಟ್ಟ ಕಾಣಿಕೆ’ ಮತ್ತು ‘ಸುವರ್ಣ ಸಂಭ್ರಮ’ ಮೊದಲಾದವುಗಳು. ಸಾಕ್ಷರತಾ ಆಂದೋಲನದಲ್ಲೂ ಪಾಲ್ಗೊಂಡು, ಪುಸ್ತಕ ರಚನಾ ಸಮಿತಿ ಸದಸ್ಯರಾಗಿ ವಿಜಯದೀಪ – ೧,೨,೩ ಮತ್ತು ಬಾಳಿಗೆ ಬೆಳಕು ಮುಂತಾದ ಪುಸ್ತಕಗಳ ರಚನೆಯಲ್ಲೂ ಸಕ್ರಿಯರಾಗಿ ದುಡಿದಿದ್ದಾರೆ. ಶೈಕ್ಷಣಿಕ ಹಾಗೂ ಸಾಹಿತ್ಯದ ಕೊಡುಗೆಗಾಗಿ ಶಿಕ್ಷಕರ ವೇದಿಕೆಯಿಂದ ಕರ್ನಾಟಕ ಶಿಕ್ಷಕರ ಪ್ರಶಸ್ತಿ, (೧೯೯೭), ಕರ್ನಾಟಕ ಸರಕಾರದಿಂದ ರಾಜ್ಯ ಶಿಕ್ಷಕ ಪ್ರಶಸ್ತಿ (೧೯೯೮), ಕೇಂದ್ರ ಸರಕಾರದಿಂದ ಉತ್ತಮ ರಾಷ್ಟ್ರ ಶಿಕ್ಷಕ ಪ್ರಶಸ್ತಿ (೨೦೦೦), ನೀತಿಯ ಬದುಕು ಕೃತಿಗೆ ಮೂರು ಸಾವಿರ ಮಠದ ಪ್ರಶಸ್ತಿ, ಪರಿಸರ ಕೃತಿಗೆ ವಿಜಾಪುರ ಮಕ್ಕಳ ಸಾಹಿತ್ಯ ಸಂಗಮದಿಂದ ಸಾಹಿತ್ಯ ಪ್ರಶಸ್ತಿ, ಬನಹಟ್ಟಿಯ ಮಹಾದೇವಪ್ಪ ಕರ್ಲಟ್ಟಿ ಪ್ರಶಸ್ತಿ, ಬೆಳಗಾವಿಯ ಕಾರಂಜಿ ಮಠದಿಂದ ಡೆಪ್ಯುಟಿ ಚೆನ್ನಬಸಪ್ಪ ಪ್ರಶಸ್ತಿ, ವಿಜಯ ಪ್ರಕಾಶನ ನಾಲತವಾಡ ಇವರಿಂದ ‘ಶ್ರೀ ಗುರು’, ಧಾರವಾಡದ ಚಿಲಿಪಿಲಿ ಪ್ರಕಾಶನದ ‘ಶಿಕ್ಷಣ ಸಿರಿ’, ಉಜ್ವಲ ಸಂಸ್ಥೆಯಿಂದ ‘ಮಕ್ಕಳ ಮಿತ್ರ’ ಪ್ರಶಸ್ತಿಗಳು ದೊರೆತಿವೆ. ಮಕ್ಕಳಲ್ಲಿ ಓದುವ ಹವ್ಯಾಸವನ್ನು ವೃದ್ಧಿಸುವ ಸಲುವಾಗಿ, ಪುಸ್ತಕ ಸಂಸ್ಕೃತಿಯ ಪ್ರಚಾರಕ್ಕಾಗಿ ರೂಪಿಸಿರುವ ಹಲವಾರು ಕಾರ‍್ಯಕ್ರಮಗಳನ್ನು ಕಾರ‍್ಯಗತಗೊಳಿಸುವಲ್ಲಿ ನಿರತರಾಗಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top