ಹ.ವೆಂ. ನಾಗರಾಜರಾವ್‌

Home/Birthday/ಹ.ವೆಂ. ನಾಗರಾಜರಾವ್‌
Loading Events

೦೮..೧೯೨೬ ೦೯..೧೯೯೨ ನಲವತ್ತು ವರ್ಷಗಳ ಹಿಂದೆ ಪ್ರಜಾಮತ ವಾರಪತ್ರಿಕೆಯ ಸಂಪಾದಕರಾಗಿ ರಾಷ್ಟ್ರೀಯ ಹಬ್ಬ ಹರಿದಿನಗಳು, ಸಮಾರಂಭಗಳ, ರಾಷ್ಟ್ರೀಯ ನಾಯಕರುಗಳ ಬಗ್ಗೆ ಸಚಿತ್ರ ಲೇಖನಗಳನ್ನು ಪ್ರಕಟಿಸಿ, ಪತ್ರಿಕೋದ್ಯಮದಲ್ಲಿ ಕೆಲಸ ಆಯಾಮವನ್ನೇ ಸೃಷ್ಟಿಸಿ, ಪತ್ರಿಕೆಗೊಂದು ಘನತೆಯನ್ನು ತಂದುಕೊಟ್ಟು ಪತ್ರಿಕೆಯ ಪ್ರಸಾರವನ್ನು ಲಕ್ಷಕ್ಕೇರಿಸಿ, ಕನ್ನಡಿಗರ ಮೆಚ್ಚಿಕೆಯ ಪತ್ರಿಕೆಯನ್ನಾಗಿಸಿದ ನಾಗರಾಜರಾಯರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ತಾಲ್ಲೂಕಿನ ಹರುವೆ ಗ್ರಾಮದಲ್ಲಿ ೧೯೨೬ ರ ಮೇ ೮ ರಂದು. ತಂದೆ ವೆಂಕಟರಾವ್‌, ತಾಯಿ ರಾಜಮ್ಮ. ಓದಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯೇಟವರೆಗೆ. ಜನವಾಣಿ ಪತ್ರಿಕೆಯಲ್ಲಿ ಪತ್ರಿಕೋದ್ಯಮಿಯಾಗಿ ವೃತ್ತಿ ಜೀವನವನ್ನಾರಂಭಿಸಿದ ನಾಗರಾಜರಾಯರು ೧೯೫೩ರಲ್ಲಿ ಪ್ರಜಾಮತ ವಾರಪತ್ರಿಕೆಯ ಉಪ ಸಂಪಾದಕರಾಗಿ ನೇಮಕಗೊಂಡು ೧೯೭೧ರಲ್ಲಿ ಸಂಪಾದಕರಾಗಿ, ೧೯೭೩ರಲ್ಲಿ ಮುಖ್ಯಸಂಪಾದಕರಾಗಿ ಪ್ರಜಾಮತವನ್ನು ವರ್ಣರಂಜಿತ ಪತ್ರಿಕೆಯನ್ನಾಗಿ ರೂಪಿಸಿ ೧೯೮೭ರಲ್ಲಿ ನಿವೃತ್ತರಾದರು. ೧೯೩೧ರ ಆಗಸ್ಟ್‌ ೧೫ ರಂದು ಆಂಧ್ರದ ಚಿತ್ತೂರಿನ ಬೈಸಾನಿ ನರಸಿಂಹೇಶ್ವರ ಗುಪ್ತರವರು (ಬಿ.ಎನ್‌.ಗುಪ್ತ) ಮದರಾಸಿನಿಂದ ಪ್ರಾರಂಭಿಸಿದ ಪತ್ರಿಕೆ. ೧೯೩೩ರಲ್ಲಿ ಬೆಂಗಳೂರಿನಿಂದ, ನಂತರ ಹುಬ್ಬಳ್ಳಿಯಿಂದ ಮತ್ತೆ ೧೯೪೮ರಲ್ಲಿ ಬೆಂಗಳೂರಿನಿಂದ ಬಿ.ಎಂ. ಶ್ರೀನಿವಾಸಯ್ಯನವರ ನೇತೃತ್ವದಲ್ಲಿ ಪತ್ರಿಕೆ ಪ್ರಕಟವಾಗತೊಡಗಿತು. ೧೯೫೩ರಲ್ಲಿ ಬಿ.ಎಂ. ಶ್ರೀನಿವಾಸಯ್ಯನವರ ನಿಧನದ ನಂತರ ಮಗ ಬಿ.ಎಸ್‌. ನಾರಾಯಣರು ವಹಿಸಿಕೊಂಡ ಮಾಲಿಕತ್ವ. ಎಂ.ಎಸ್‌. ಗುರುಪಾದಸ್ವಾಮಿ, ನರಸಿಂಹ ಸೋಮಯಾಜಿ, ಕಳಸ ಸತ್ಯನಾರಾಯಣ, ನಾಡಿಗೇರ್ ಕೃಷ್ಣರಾವ್‌, ಹ.ವೆಂ. ನಾಗರಾಜರಾವ್‌, ಕುಮಾರವೆಂಕಣ್ಣ ಮುಂತಾದವರುಗಳು ಸಂಪಾದಕರಾಗಿ ದುಡಿದರು. ಆಫ್‌ಸೆಟ್‌ ಮುದ್ರಣಯಂತ್ರ ದೊರೆತ ನಂತರ ವರ್ಣರಂಜಿತವಾಗಿ ಮುದ್ರಿಸತೊಡಗಿದರು. ಧಾರಾವಾಹಿಗಳು, ಸುದ್ದಿಯ ಜೊತೆಗೆ ಸಚಿತ್ರ ಫೋಟೋಗಳಲ್ಲದೆ ದೀಪಾವಳಿ ವಿಶೇಷಾಂಕವು ವರ್ಣರಂಜಿತವಾಗಿ ಮುದ್ರಣವಾಗತೊಡಗಿದ್ದರಿಂದ ಹೆಚ್ಚು ಪ್ರಖ್ಯಾತವಾಯಿತು. ಹ.ಮೆ.ನಾ.ರವರು ರಷ್ಯಕ್ಕೆ ಭೇಟಿ ನೀಡಿ ಬಂದನಂತರ ರಷ್ಯಾದೇಶದ ತಮ್ಮ ಅನುಭವಗಳನ್ನು ಕುರಿತ ಲೇಖನಮಾಲೆ ‘ನವರಷ್ಯದ ನೋಟ’ ವನ್ನು ಪ್ರಾರಂಭಿಸಿ ಕವಿ ಅಲಿ ಸುಲೇಮನಾವ್‌ ವಿಷಯ, ಮಾಸ್ಕೊ ನಗರದ ಸೌಂದರ್ಯ, ಲೆನಿನ್‌ ಹಿಲ್ಸ್‌ನಲ್ಲಿದ್ದ ಮಾಸ್ಕೊ ಮತ್ತು ಪೆಟ್ರಿಸ್‌ ಲುಮುಂಬಾ ಮೈತ್ರಿ ವಿಶ್ವವಿದ್ಯಾಲಯಗಳ  ಶೈಕ್ಷಣಿಕ ವಿಚಾರ, ಲೆನಿನ್‌ಗ್ರಾಡ್‌ನ ಕಲಾ ಸೌಂದರ್ಯ, ವೀರಭೂಮಿ ವೋಲ್ಗಾ ಗ್ರಾಡ್‌ ಮತ್ತು ಕೂಲ್ ಸ್ಟಾಯ್‌ ಸಾಹಿತ್ಯ ರಚನೆಯ ತಪೋಭೂಮಿ ಹೀಗೆ ನಾನಾ ವಿಷಯಗಳ ಬಗ್ಗೆ ವರ್ಣರಂಜಿತ ವ್ಯಾಖ್ಯಾನ ನೀಡಿ ಪತ್ರಿಕೆಯನ್ನು ಜನಪ್ರಿಯಗೊಳಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿಕೊಂಡು ರಚಿಸಿದ ಕಥೆ, ಕವನಗಳು ದೇಶಬಂಧು, ಛಾಯಾ, ಉಷಾ, ವಾಣಿ, ಸ್ವತಂತ್ರ, ಪ್ರಗತಿ, ಕಥೆಗಾರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ. ೧೯೪೮ರಲ್ಲಿ ಇವರು ಪ್ರಕಟಿಸಿದ ಮೊದಲ ಕಥಾ ಸಂಕಲನ ‘ಕತ್ತಲೆಬೆಳಕು’. ಇದರಲ್ಲಿ ಆರು ಕಥೆಗಳಿವೆ. ಈ ಸಂಕಲನದಲ್ಲಿ ಪ್ರಕಟಗೊಂಡ ರಂಗಾಶಾಮಿ ಕಥೆಯು, ಪ್ರಸಿದ್ಧ ವಿಮರ್ಶಕರಾದ ಕೆ.ನರಸಿಂಹಮೂರ್ತಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಾಗಿ ಸಂಪಾದಿಸಿದ ‘ಅತ್ಯುತ್ತಮ ಸಣ್ಣ ಕಥೆಗಳು’ ಸಂಕಲನ ಮತ್ತು ಇದೇ ಕಥೆಯು ಇಂಗ್ಲಿಷ್‌ಗೂ ಭಾಷಾಂತರಗೊಂಡು, ಇಂಗ್ಲಿಷ್‌ ಲೇಖಕ ಕಾ.ನಾ. ಸುಬ್ರಹ್ಮಣ್ಯಾಂರವರು ಸಂಪಾದಿಸಿದ ಮಾಡರ್ನ್ ಇಂಡಿಯನ್‌ ಶಾರ್ಟ್ ಸ್ಟೋರೀಸ್‌ ಸಂಪುಟ-೩ರಲ್ಲಿಯೂ ಸ್ಥಾನ ಪಡೆದುಕೊಂಡಿದೆ. ‘ಐದು ದೀಪಗಳ ಕಲಂಬ’. ಇದು ೧೯೬೪ರಲ್ಲಿ ಪ್ರಕಟವಾದ ಕವನ ಸಂಕಲನ. ಇದರಲ್ಲಿ ೧೬ ಕವನಕಗಳಿವೆ. ೧೯೭೭ರಲ್ಲಿ ಪ್ರಕಟವಾದ ಕೃತಿ ‘ಸೃಜನಶೀಲ’, ಇದರಲ್ಲಿ ಟಿ.ಎಸ್‌. ಎಲಿಯಟ್‌, ಟಾಯ್ನಬಿ ಯಿಂದ ಹಿಡಿದು ಪು.ತಿ.ನ., ಅ.ನ.ಕೃ., ಕಾರಂತ, ರಾವಬಹದ್ದೂರ್, ಕೆ.ಕೆ. ಹೆಬ್ಬಾರ್, ಪಂಡಿತ್‌ ರವಿಶಂಕರ್ ಮುಂತಾದವರ ವ್ಯಕ್ತಿಚಿತ್ರಗಳು, ಬಾಂಗ್ಲಾ-ಭಾರತ ಸಾಂಸ್ಕೃತಿಕ ಸಂಬಂಧ ಮುಂತಾದವುಗಳ ಬಗ್ಗೆ ಬರೆದ ಲೇಖನಗಳಿವೆ. ಸೋವಿಯತ್‌ ರಷ್ಯ ಪ್ರವಾಸ ಮಾಡಿದ ನಂತರ ತಾವು ಕಂಡ ಅನುಭವಗಳನ್ನು ‘ನವರಷ್ಯದನೋಟ’ ಎಂಬ ಅಂಕಣದಲ್ಲಿ ಬರೆದಿದ್ದು ಪುಸ್ತಕ ರೂಪದಲ್ಲೂ ಪ್ರಕಟಗೊಂಡು ೧೯೭೮ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ದ್ವಿತೀಯ ಬಹುಮಾನ ಪಡೆದ ಕೃತಿ ಎನಿಸಿತು . ಇದನ್ನು ೧೯೭೯ರಲ್ಲಿ ಗುರುನಾಥ ಜೋಷಿಯವರು ‘ನಯಾರೋಸ್‌ನ ಯಾಜಮಾನ’ ಎಂಬ ಹೆಸರಿನಿಂದ ಹಿಂದಿಗೂ ಅನುವಾದಿಸಿದರು. ಮತ್ತೊಮ್ಮೆ ೧೯೭೯ರಲ್ಲಿ ಪಶ್ಚಿಮ ಜರ್ಮನಿಯ ಪ್ರವಾಸ ಕೈಗೊಂಡು ಇಂಗ್ಲೆಂಡ್‌ಗೂ ಭೇಟಿ ನೀಡಿ ಬಂದರು. ೧೯೯೧ರಲ್ಲಿ ಪ್ರಕಟಗೊಂಡ ಕೃತಿ ‘ಮನದ ತೆರೆಯ ಮೇಲೆ’ ಪ್ರಬಂಧಗಳ ಸಂಕಲನ . ಇದರಲ್ಲಿ ಡಿ.ವಿ.ಜಿ: ನಮ್ಮ ಕನ್ನಡ ಪತ್ರಿಕೋದ್ಯೋಗಿ ಮತ್ತು ಕೃಷ್ಣನ ಕತೆಯಿಂದ ಹಿಡಿದು ನಗರವಾಸಿಗಳ ಗತಿಯವರೆಗೆ ೧೬ ಲೇಖನಗಳಿಂದ ಕೂಡಿದೆ. ಇದಲ್ಲದೆ ಮಕ್ಕಳ ಸಾಹಿತ್ಯದಲ್ಲೂ ಕೆಲಸ ಮಾಡಿರುವ ನಾಗರಾಜರಾಯರು ಶ್ರೀಪಾದರಾಜ ಮತ್ತು ಎಂ.ವೆಂಕಟಕೃಷ್ಣಯ್ಯ (ಮೈಸೂರುತಾತಯ್ಯ) ನವರ ವ್ಯಕ್ತಿ ಚಿತ್ರಗಳು, ರಾಷ್ಟ್ರೋತ್ಥಾನ ಪರಿಷತ್‌ನ ಭಾರತಭಾರತಿ ಪುಸ್ತಕ ಸಂಪದಕ್ಕಾಗಿ ‘ದಾದಾಬಾಯಿ ನವರೋಜಿ’ಯವರ ಬಗ್ಗೆ ಮತ್ತು ಕಲಾವತಿ ಹಾಗೂ ಅಮರಾವತಿಯ ಅರಸುಕುಮಾರ ಎಂಬ ಎರಡು ನೀಳ್ಗತೆಗಳನ್ನು ಮಕ್ಕಳಿಗಾಗಿ ರಚಿಸಿದ್ದಾರೆ.  ಜೊತೆಗೆ ಪ್ರಜಾಮತ ಪತ್ರಿಕೆಗಾಗಿ ಪ್ರತಿವಾರವೂ ಬರೆದ ಸಂಪಾದಕೀಯ ಲೇಖನಗಳು ಸಂಪುಟ-೧ ಪ್ರಕಟಗೊಂಡಿದೆ. ಪ್ರಚಾರದಿಂದ ದೂರವೇ ಉಳಿದಿದ್ದ ನಾಗರಾಜರಾಯರ ಇಗೆ ೧೯೭೮ರಲ್ಲಿ ಕರ್ನಾಟಕದ ಅಂದಿನ ರಾಜ್ಯಪಾಲರಾಗಿದ್ದ ಗೋವಿಂದ ನಾರಾಯಣ್‌ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸನ್ಮಾನ, ೧೯೮೦ರಲ್ಲಿ ಜ್ಞಾನಜ್ಯೋತಿ ಕಲಾವೃಂದದವರಿಂದ ‘ಪತ್ರಿಕಾ ಸಾಹಿತ್ಯ ರತ್ನ’ ಬಿರುದು ಮತ್ತು ಇದೇ ವರ್ಷ ಜನಸೇವಾ ಪರಿಷತ್ತಿನವರಿಂದ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಮಾಜಿ ಉಪರಾಷ್ಟ್ರಪತಿಗಳಾಗಿದ್ದ ಬಿ.ಡಿ. ಜತ್ತಿಯವರ ಅಧ್ಯಕ್ಷತೆಯಲ್ಲಿ ‘ಸಂಪಾದಕ ಕೇಸರಿ’ ಬಿರುದು ಮುಂತಾದ ಗೌರವ ಪ್ರಶಸ್ತಿಗಳಲು ದೊರೆತಿವೆ. ಸಂಪಾದಕರಾಗಿ ಸದಾಕಾಲ ಹೊಸತರ ಹುಡುಕಾಟದಲ್ಲಿ ತೊಡಗಿದ್ದು ಪ್ರಗತಿಶೀಲ ಮನೋಭಾವದಿಂದ ಕೂಡಿದ್ದು, ಹೊಸ ಹೊಸ ಲೇಖಕರನ್ನು ಬೆಳಕಿಗೆ ತರುವಲ್ಲಿ ಸದಾಕ್ರಿಯಾಶೀಲರಾಗಿದ್ದ ನಾಗರಾಜರಾಯರು ಪತ್ರಿಕೋದ್ಯಮದಿಂದ ದೂರವಾದದ್ದು ೧೯೯೨ ರ ಫೆಬ್ರವರಿ ೯ ರಂದು. ಇದೀಗ ೨೦೧೧ರಲ್ಲಿ ಬಿ.ಜಿ. ಸತ್ಯಮೂರ್ತಿಯವರ ಸಂಪಾದಕತ್ವದಲ್ಲಿ ‘ಹವೆಂನಾ ಸಮಗ್ರಸಾಹಿತ್ಯ ಭಾಗ ೧-೨’ ಪ್ರಕಟವಾಗಿದೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top