Loading Events

« All Events

ಅರ್ಚಕ ವೆಂಕಟೇಶ್

July 5

೫-೭-೧೯೧೬ ೨೦-೧೨-೧೯೯೭ ಅ.ನ.ಕೃ.ರವರ ಕಾದಂಬರಿಗಳ ಉತ್ಕರ್ಷದ ಕಾಲ. ಹಿರಿಯ ಸಾಹಿತಿಗಳಾದ ಕುವೆಂಪು, ಮಾಸ್ತಿ ಮುಂತಾದವರ ವಾಸ್ತವತೆಯ ಸಾಹಿತ್ಯ ರಚನೆಯನ್ನೇ ಪ್ರಶ್ನಿಸುತ್ತಾ, ಸಾಮಾನ್ಯ ಮನುಷ್ಯನ ದೈನಂದಿನ ಜೀವನದ ಆಗುಹೋಗುಗಳ ಬಗ್ಗೆ ಚಿತ್ರಿಸುತ್ತಾ ಬಂದು, ಪ್ರಗತಿಶೀಲರೆನಿಸಿದ್ದ ಅ.ನ.ಕೃ, ತ.ರಾ.ಸು, ನಿರಂಜನ, ಕಟ್ಟೀಮನಿಯವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ವೆಂಕಟೇಶ್‌ರವರು ಹುಟ್ಟಿದ್ದು ಧಾರವಾಡದಲ್ಲಿ. ತಂದೆ ಗೋಪಾಲಕೃಷ್ಣಾಚಾರ‍್ಯ, ತಾಯಿ ರಾಧಾಬಾಯಿ. ವೆಂಕಟೇಶ್‌ರವರು ಪೂರ್ವಿಕರು ಅರ್ಚಕ ವೃತ್ತಿ ನಡೆಸಿಕೊಂಡು ಬಂದಿದ್ದರಿಂದ ‘ಅರ್ಚಕ’ ಎಂಬುದು ಅನ್ವರ್ಥನಾಮವಾಗಿ ವೆಂಕಟೇಶ್‌ರವರ ಹೆಸರಿಗೆ ಸೇರಿಕೊಂಡಿತು. ಹಾವೇರಿ ಜಿಲ್ಲೆಯ ಹತ್ತಿ ಮತ್ತೂರು, ಹಾನಗಲ್ ತಾಲ್ಲೂಕಿನ ಆಲದಕಟ್ಟೆ, ಹಾವೇರಿ, ಬೆಳಗಾವಿಯಲ್ಲಿ ವಿದ್ಯಾಭ್ಯಾಸ. ಬೆಳಗಾವಿಯಲ್ಲಿದ್ದಾಗಲೇ ಮದುವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಬೆಳೆದ ಆಸಕ್ತಿ. ಕೈ ಬರಹದ ಪತ್ರಿಕೆ ‘ನನ್ನ ನುಡಿ’ ಆರಂಭ. ಇವರ ಸಾಹಿತ್ಯ ಪ್ರೇರಕರು ಶಾಲೆಯ ಮಾಸ್ತರಾಗಿದ್ದ ಜೋಗಳೇಕರ್ ಪಾಂಡು ರಂಗರಾಯರು. ಬಿ.ಎಂ.ಶ್ರೀ. ಮತ್ತು ಅ.ನ.ಕೃ.ರವರಿಂದ ಕನ್ನಡಕ್ಕಾಗಿ ದುಡಿಯಲು ದೀಕ್ಷೆ. ಪ್ರಚಂಡ ಭಾಷಣಕಾರರು. ಬೇಂದ್ರೆಯವರ ಶಿಫಾರಸ್ಸಿನಿಂದ ಉದ್ಯೋಗಕ್ಕೆ ಸೇರಿದ್ದು, ಸಂಪಾದಕ ಬಿ.ಶಿವಮೂರ್ತಿ ಶಾಸ್ತ್ರಿಗಳ ‘ಶರಣ ಸಾಹಿತ್ಯ’ ಮತ್ತು ‘ಸ್ವತಂತ್ರ ಕರ್ನಾಟಕ’ ಪತ್ರಿಕೆಗೆ. ಕೆಲಕಾಲ ಪತ್ರಕರ್ತರಾಗಿ ಸೇವೆ. ನಂತರ ಸೇರಿದ್ದು ಎಚ್.ಎ.ಎಲ್. ಕಾರ್ಖಾನೆ. ಇದೂ ಸರಿಹೊಂದದೆ ಮರಳಿ ಪತ್ರಿಕೋದ್ಯಮಕ್ಕೆ. ಮತ್ತೆ ಬೇಂದ್ರೆಯವರ ನೆರವು. ಸಿದ್ಧವನಹಳ್ಳಿ ಕೃಷ್ಣಶರ್ಮರ ಸಂಪಾದಕತ್ವದ ‘ವಿಶ್ವಕರ್ನಾಟಕ’ಕ್ಕೆ ಸೇರ‍್ಪಡೆ,. ಹದಿನೈದು ವರ್ಷ ದುಡಿದು ಕಡೇ ಒಂದು ವರ್ಷ ಸಂಪಾದಕರ ಜವಾಬ್ದಾರಿ. ಕೊನೆಗೆ ಸೇರಿದ್ದು ಸಂಯುಕ್ತ ಕರ್ನಾಟಕ. ನಿವೃತ್ತಿಯಾಗುವವರೆವಿಗೂ ಸೇವೆ. ಪತ್ರಿಕಾರಂಗದಲ್ಲಿ ದುಡಿಯುತ್ತಿದ್ದಾಗಲೇ ರಚಿಸಿದ್ದು ಹಲವಾರು ಕೃತಿಗಳು. ಮಕ್ಕಳ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದವರಲ್ಲಿ ಪ್ರಮುಖರು. ಕಥೆ, ಕಾದಂಬರಿ, ನಾಟಕ, ಕವನ ಸಂಕಲನಗಳ ಪ್ರಕಟಣೆ. ಕಾದಂಬರಿಗಳು-ದಿಲ್ಲಿ ಚಲೋ, ರವಿಶಂಕರ, ಅಸ್ತಿಪಂಜರ. ಕಥಾಸಂಕಲನಗಳು-ಧ್ರುವನಕ್ಷತ್ರ, ಜೀವನ ಸಂಗ್ರಾಮ. ಕವನ ಸಂಕಲನಗಳು-ಪೂರ್ಣಚಂದ್ರ, ಶಬ್ದ ಶಿಲ್ಪ, ಶಿಲಾಪಕ್ಷಿ, ಸಂಧ್ಯಾರಾಗ. ರಂಗನಾಟಕಗಳು-ಮೀರ್‌ಸಾದಿಕ್, ಪಂಗನಾಮ, ಬ್ಲಾಕ್‌ಮಾರ್ಕೆಟ್. ಹಿರಣ್ಣಯ್ಯ ಮಿತ್ರ ಮಂಡಲಿಯಿಂದ ಪ್ರದರ್ಶನಗೊಂಡ ನಾಟಕಗಳು. ಮಕ್ಕಳ ನಾಟಕ-ಭಾತೃಪ್ರೇಮ, ಪಾನಕ ಕೋಸಂಬರಿ, ಹರಿದ ಚಂದ್ರ, ಪ್ರಹ್ಲಾದನ ಪಾಣಿಪತ್ತು, ಸಾವನದುರ್ಗ, ಜಯ-ವಿಜಯ. ರಾಷ್ಟ್ರ ನೇತಾರರ ನಾಟಕಗಳು-ಸ್ವಾಮಿ ವಿವೇಕಾನಂದ, ಸುಭಾಶ್ ಚಂದ್ರ ಬೋಸ್, ಮದನಮೋಹನ ಮಾಳವೀಯ. ಜೀವನಚರಿತ್ರೆ-ರಮಣ ಮಹರ್ಷಿ, ರಾಮನ ಕಥೆ, ಭಕ್ತಿಗೀತಾಮೃತ ಮತ್ತೊಂದು ಮಕ್ಕಳ ಕೃತಿ. ಇಂಗ್ಲಿಷ್-ರ‍್ಯಾಂಡಮ್ ಥಾಟ್ಸ್. ವೆಂಕಟೇಶರು ಇನ್ನೂ ಹಲವಾರು ಕೃತಿ ರಚಿಸುವ ಹವಣಿಕೆಯಲ್ಲಿದ್ದಾಗಲೇ ೧೯೯೭ರ ಡಿಸೆಂಬರ್ ೨೦ರಂದು ಪ್ರವಾಸ ಹೋಗಿದ್ದಾಗ ತಿರುಚೆಂದೂರಿನಲ್ಲಿ ಅಕಾಲ ಮೃತ್ಯುಗೀಡಾದರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಶೇಖರಪ್ಪ ಹುಲಗೇರಿ – ೧೯೩೮ ಎಂ. ರಾಮಚಂದ್ರ – ೧೯೩೯ ಪಳಕಳ ಸೀತಾರಾಮಭಟ್ಟ – ೧೯೩೦ ಜ್ಞಾನಾನಂದ – ೧೯೪೦

Details

Date:
July 5
Event Category: