Loading Events

« All Events

ಈಶ್ವರಚಂದ್ರ

July 14

೧೪-೭-೧೯೪೬ ಕಥೆಗಾರ ಈಶ್ವರಚಂದ್ರರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೋದಿಗೆರೆ. ತಂದೆ ಎಚ್.ಎನ್. ರಾಮರಾವ್, ತಾಯಿ ಪದ್ಮಾವತಮ್ಮ. ಪ್ರಾರಂಭಿಕ ಶಿಕ್ಷಣ ಚನ್ನಗಿರಿ, ಸಾಗರ, ಶಿವಮೊಗ್ಗ. ಭದ್ರಾವತಿಯಲ್ಲಿ ಡಿಪ್ಲೊಮ ಮುಗಿಸಿ ಉದ್ಯೋಗಕ್ಕೆ ಸೇರಿದ್ದು ಬೆಂಗಳೂರು ವಿಮಾನ ಕಾರ್ಖಾನೆ ‘ವಿಮಾನ ಸಂಶೋಧನೆ ಮತ್ತು ವಿನ್ಯಾಸ’ ಕೇಂದ್ರದಲ್ಲಿ. ೪೦ ವರ್ಷಗಳ ದೀರ್ಘಸೇವೆಯ ನಂತರ ನಿವೃತ್ತಿ. ಬಾಲ್ಯದಿಂದಲೇ ಸಾಹಿತ್ಯದ ಕಡೆ ಒಲವು. ತಂದೆ ಹೇಳುತ್ತಿದ್ದ ಭಾರತ, ಭಾಗವತ, ರಾಮಾಯಣ ಕಾವ್ಯ, ಕಥೆಗಳಿಂದ ಪ್ರೇರಣೆ. ಉದ್ಯೋಗದ ನಡುವೆಯೂ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪರೀಕ್ಷೆಯಲ್ಲಿ ಐದು ಚಿನ್ನದ ಪದಕ, ಮೂರು ನಗದು ಬಹುಮಾನ ಪಡೆದು ಉತ್ತೀರ್ಣರಾದ ಹೆಗ್ಗಳಿಕೆ. ಹಲವಾರು ಸಣ್ಣಕಥೆ, ಪ್ರಬಂಧ, ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಿತ. ಇವರು ಬರೆದ ಮುನಿತಾಯಿ ಕಥೆಯಾಧರಿಸಿ ಪುಟ್ಟಣ್ಣ ಕಣಗಾಲ್‌ರವರು ತಯಾರಿಸಿದ ಸಿನಿಮಾ ‘ಕಥಾಸಂಗಮ.’ ಹಬ್ಬಿದಾಮಲೆ ಮಧ್ಯದೊಳಗೆ ಎಂಬ ಕಥೆ ‘ಕಾಡಿಗೆ ಹೋದವರು’ ಎಂಬ ಹೆಸರಿನಿಂದ ಚಲನಚಿತ್ರ. ಕಥಾಸಂಕಲನಗಳು-ರಾತ್ರಿರಾಣಿ, ತೀರ, ಗುಂಪಿನಲ್ಲಿ ಕಂಡ ಮುಖ, ಮುನಿತಾಯಿ, ಕತ್ತಲಗರ್ಭ. ಕಾದಂಬರಿ-ಒಂದೇ ಸೂರಿನ ಕೆಳಗೆ, ಸಿಮೆಂಟ್ ಮನುಷ್ಯರು. ಮಕ್ಕಳ ಸಾಹಿತ್ಯ-ಮಕ್ಕಳ ನರೇಂದ್ರ ವಿವೇಕಾನಂದ, ಭಗತ್‌ಸಿಂಗ್, ಮಾರ್ಕೊನಿ, ಜಾರ್ಜ್ ಸೈಮನ್ ಓಂ, ಅ.ನ.ಕೃಷ್ಣರಾವ್, ಸುಬೋಧ ರಾಮರಾವ್, ಕಲ್ಯಾಣಸ್ವಾಮಿ, ಬೆಂಗಳೂರು ಜಿಲ್ಲೆಯ ದರ್ಶನ, ಗೆಳೆತನ ಮುಂತಾದ ೧೫ ಕೃತಿಗಳು. ಬೆಂಗಳೂರು ನಗರ ದರ್ಶನ, ಕೆಂಪೇಗೌಡ ನಗರ ದರ್ಶನ, ಚೈತ್ರಪಲ್ಲವ, ಸುವರ್ಣಶಕ್ತಿ, ಎಚ್.ಎ.ಇ.ಎ. ಹೆಜ್ಜೆ ಗುರುತುಗಳು. ಅನುವಾದ-ಎಕ್ಕೋರಿಯ ಕನಸು, ನಮ್ಮ ಭೂ ಸೇನೆ, ಬ್ರಹ್ಮಾಂಡದ ಬಳುವಳಿ, ಕಿವುಡು ವನದೇವತೆ, ಅಕ್ಬರನಿಂದ ಔರಂಗಜೇಬ್‌ವರೆಗೆ, ಭೂಕಂಪ, ನಾಳೆ ಸಂಭವಿಸಿದ್ದು ಮೊದಲಾದ ೧೬ ಕೃತಿಗಳು. ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞೆ ಸಂಘಕ್ಕಾಗಿ ೧೩೦೦ ಪುಟಗಳ ಶ್ರೀಮದ್ ಭಾಗವತ, ೧೪೦೦ ಪುಟಗಳ ಶ್ರೀ ಚೈತನ್ಯ ಚರಿತಾಮೃತವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ. ಭಗತ್‌ಸಿಂಗ್ ಕೃತಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ; ಒಕೇ ಗೂಟಲೋ (ಒಂದೇ ಸೂರಿನ ಕೆಳಗೆ) ತೆಲುಗಿಗೆ ; ಸಿಮೆಂಟ್ ಮನಿತರ್ಗಳ್ ತಮಿಳಿಗೆ ; ‘ಮುನಿತಾಯಿ ವ ಇತರ ಕಥಾ’ ಮರಾಠಿ ಭಾಷೆಗೆ ; ಬಿಡಿ ಕಥೆಗಳು ತೆಲುಗು, ತಮಿಳು, ಮರಾಠಿ, ಉರ್ದು, ಮಲೆಯಾಳಂ, ಹಿಂದಿ, ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿವೆ. ಸಂದ ಗೌರವ ಪ್ರಶಸ್ತಿಗಳು-‘ತೀರ’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಕ್ಕಳ ನರೇಂದ್ರ ವಿವೇಕಾನಂದ ಕೃತಿಗೆ ಸಾಹಿತ್ಯ ಸ್ಪರ್ಧೆ ವಿಶೇಷ ಪ್ರಶಸ್ತಿ, ಮುನಿತಾಯಿ ಕಥಾಸಂಕಲನಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ, ಚಿತ್ರಪ್ರೇಮಿಗಳ ಸಂಘದ ಪ್ರಶಸ್ತಿ. ಹಲವಾರು ಸಂಘ ಸಂಸ್ಥೆಗಳಿಂದ ರಾಜ್ಯೋತ್ಸವ ಸನ್ಮಾನ. ಚೆನ್ನಗಿರಿ ತಾಲ್ಲೂಕು ಸಮ್ಮೇಳನ, ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೊತ್ತಲ ಮಹಾದೇವಪ್ಪ – ೧೯೪೪ ಕೆ.ಎಸ್. ಭಗವಾನ್ – ೧೯೪೫ ಕೆ.ವಿ. ಶಂಕರಗೌಡರು – ೧೯೧೫ ಚಿದಂಬರ ಕೃಷ್ಣರಾವ್ ದೀಕ್ಷಿತ – ೧೯೨೨

Details

Date:
July 14
Event Category: