Loading Events

« All Events

  • This event has passed.

ಎಂ.ಜಿ. ನಂಜುಂಡಾರಾಧ್ಯ

August 1, 2023

೧-೮-೧೯೧೪ ೭-೧೧-೧೯೯೧ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ನಂಜುಂಡಾರಾಧ್ಯರು (ಅಮರವಾಣಿ) ಹುಟ್ಟಿದ್ದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಗುಂಡ್ಲಹಳ್ಳಿ. ತಂದೆ ಗಂಗಾಧರಯ್ಯ, ತಾಯಿ ವೀರಮ್ಮ. ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲಿ. ಪ್ರೌಢ ವ್ಯಾಸಂಗಕ್ಕೆ ಸೇರಿದ್ದು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಪಾಠಶಾಲೆಯಲ್ಲಿ. ಅಲಂಕಾರಶಾಸ್ತ್ರ, ವಿಶಿಷ್ಟಾದ್ವೈತ ವೇದಾಂತಗಳಲ್ಲಿ ವಿದ್ವಾನ್ ಪದವಿ. ಹಿಂದಿ ರಾಷ್ಟ್ರಭಾಷಾ ವಿಶಾರದ, ಕನ್ನಡದಲ್ಲಿ ವಿದ್ವಾನ್ ಪದವಿ ಪಡೆದ ತ್ರಿಭಾಷಾ ಪಂಡಿತರು. ಉದ್ಯೋಗಕ್ಕಾಗಿ ಸೇರಿದ್ದು ಶ್ರೀ ಜಯಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪಪ್ರಾಧ್ಯಾಪಕರಾಗಿ. ನಂತರ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಶಕ್ತಿ ವಿಶಿಷ್ಟಾದ್ವೈತ ವೇದಾಂತ ಮತ್ತು ವೀರಶೈವಾಗಮದ ಅಧ್ಯಾಪಕ, ಪ್ರಾಧ್ಯಾಪಕರಾಗಿ ೩೩ ವರ್ಷ ಸೇವೆಯ ನಂತರ ನಿವೃತ್ತಿ. ವಿದ್ಯಾರ್ಥಿ ದೆಸೆಯಿಂದಲೇ ಮಹಾತ್ಮಗಾಂ, ಸ್ವಾಮಿ ವಿವೇಕಾನಂದ, ಸ್ವಾಮಿ ದಯಾನಂದ ಸರಸ್ವತಿ, ರಾಮಕೃಷ್ಣ ಪರಮಹಂಸ, ಹರ್ಡೇಕರ್ ಮಂಜಪ್ಪ ಮೊದಲಾದವರ ಪ್ರಭಾವ, ಪಾಲಿಸಿದ ಆದರ್ಶ. ಕನ್ನಡ, ತೆಲುಗು, ಹಿಂದಿ ಸಂಸ್ಕೃತ ಭಾಷೆಗಳಲ್ಲಿ ಪಡೆದ ಪಾಂಡಿತ್ಯ. ಸಂಸ್ಕೃತದ ಸಂಪಾದಿತ ಕೃತಿಗಳು-ಕೈವಲ್ಯೋಪನಿಷತ್, ಮುಂಡಕೋಪನಿಷತ್, ಈಶಾವಾಸ್ಯೋಪನಿಷತ್, ಬ್ರಹ್ಮಸೂತ್ರ ವೃತ್ತಿ, ತತ್ತ್ವ ಪ್ರಕಾಶ ಮುಂತಾದುವು. ಕನ್ನಡ ಕೃತಿಗಳು (ಸಂಪಾದಿತ)-ಬಸವಪ್ಪಶಾಸ್ತ್ರಿಗಳ ಸಮಗ್ರ ಕೃತಿಗಳ ಬೃಹತ್ ಸಂಪುಟ, ಶಿವಾಗಮ, ಸೌರಭ, ಭಾರತೀಯದರ್ಶನ, ಶಕ್ತಿ ವಿಶಿಷ್ಟಾದ್ವೈತದರ್ಶನ, ದರ್ಶನ ದೀಪ್ತಿ, ದೇವರ ದಾಸಿಮಯ್ಯ ಪ್ರಶಸ್ತಿ ಮೊದಲಾದುವು. ವಿಮರ್ಶಾಕೃತಿಗಳು-ಮಹಾಕವಿ ಭಾರವಿ, ಕವಿ ಮುರಾರಿ, ಕವಿಶ್ರೀಹರ್ಷ, ಭಟ್ಟನಾರಾಯಣ, ಮಾಘಕವಿ. ಖಂಡಕಾವ್ಯಗಳು-ಪಕ್ಷ್ಮಲಾಕ್ಷಿ, ವಿಜಯನಾದ, ಗದ್ಯ ಕೃತಿಗಳು-ಅರ್ಜುನ ವಿಜಯ, ಚಂದ್ರಗುಪ್ತನ ಭಾಗ್ಯ, ಸತ್ಯವ್ರತಿ ಭೀಷ್ಮ. ನಾಟಕ-ಶಿವನ ಸೋಲು, ದಸ್ಯುಮಹರ್ಷಿ, ಐಲೂಷ. ಜೀವನಚರಿತ್ರೆ-ಬಸವಪ್ಪಶಾಸ್ತ್ರಿ, ಹೇಮರೆಡ್ಡಿ ಮಲ್ಲಮ್ಮ ಮುಂತಾದುವು ಸೇರಿ ೬೦ಕ್ಕೂ ಹೆಚ್ಚು ಕೃತಿ ರಚಿತ. ಭಾರತದ ಸುಪ್ರಸಿದ್ಧ ಪತ್ರಿಕೆಗಳಾದ ಮಧುರವಾಣಿ, ಸರಸ್ವತಿ ಸುಷ್ಮಾ, ಗಾಂಢೀವ, ಪರಿಷತ್ಪತ್ರಿಕೆ ಮುಂತಾದುವುಗಳಿಗೆ ಬರೆದ ವಿದ್ವತ್‌ಪೂರ್ಣ ಲೇಖನಗಳು, ಸಂಸ್ಕೃತ ವಿದ್ವದ್ಗೋಷ್ಠಿಗಳಲ್ಲಿ ಭಾಗಿ. ಸಂದ ಪ್ರಶಸ್ತಿಗಳು-ಮೈಸೂರು ಅರಮನೆಯಿಂದ ಆಸ್ಥಾನ ವಿದ್ವಾನ್-೧೯೪೬ ; ಭಾರತ ಸರಕಾರದ ಆದರ್ಶ ಶಿಕ್ಷಕ ರಾಷ್ಟ್ರಪ್ರಶಸ್ತಿ-೧೯೭೦ ; ರಾಜ್ಯಪ್ರಶಸ್ತಿ-೧೯೭೯ ; ರಂಭಾಪುರಿ ಸಂಸ್ಥಾನ ಮಠ, ಸುತ್ತೂರು ಮಠ, ಚಿತ್ರದುರ್ಗದ ಬೃಹನ್ಮಠ, ಹುಬ್ಬಳ್ಳಿ ಮೂರು ಸಾವಿರ ಮಠ-ಹೀಗೆ ಅರಮನೆ ಗುರುಮನೆಯಿಂದ ಪ್ರತಿಷ್ಠಿತ ಗೌರವ ಸನ್ಮಾನಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಹಿತ್ತಲಮನಿ. ವೀ.ಚ. – ೧೯೨೪ ಎಸ್. ಜಯಮಂಗಳ – ೧೯೪೯ ಬಾಳಾ ಸಾಹೇಬ್ ಲೋಕಾಪುರ – ೧೯೫೫ ಮೈತ್ರಿ. ಕೆ.ಎಂ. – ೧೯೬೨

Details

Date:
August 1, 2023
Event Category: