Loading Events

« All Events

  • This event has passed.

ಎಸ್. ಅನಂತನಾರಾಯಣ

November 30, 2023

೩೦-೧೧-೧೯೨೫ ೨೫-೮-೧೯೯೨ ಪ್ರಗತಿಶೀಲ ಬರಹಗಾರರೆನ್ನಿಸಿಕೊಂಡಿದ್ದ ಅನಂತ ನಾರಾಯಣರವರು ಹುಟ್ಟಿದ್ದು ಮೈಸೂರಿನಲ್ಲಿ. ತಂದೆ ಆರ್. ಸದಾಶಿವಯ್ಯ, ತಾಯಿ ರಂಗಮ್ಮ. ಶಿಕ್ಷಣವೆಲ್ಲ ಮೈಸೂರಿನಲ್ಲೆ. ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿ  ರ್ಯಾಂಕಿನೊಡನೆ. ಮೈಸೂರು ವಿಶ್ವವಿದ್ಯಾಲಯದ ಹಲವಾರು ಬೋಧನ ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥನಾಗಿ ಕಾರ‍್ಯ ನಿರ್ವಹಣೆ. ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ಇವರೂ  ಕೂಡಾ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾಗಿ ಕಂಡ ಸೆರೆಮನೆ ವಾಸ. ಸೆರೆಮನೆಯೊಳಗಿದ್ದಾಗಲೇ ಕವಿತೆಗಳ ರಚನೆಗಾರಂಭ. ೧೯೪೪ರಲ್ಲಿ ಬಾಡದ ಹೂ ಎಂಬ ನೀಳ್ಗವಿತೆಗೆ ಬಿ.ಎಂ.ಶ್ರೀ.ಯವರ ರಜತ ಮಹೋತ್ಸವದ ಸುವರ್ಣ ಪದಕ. ಸಾಹಿತ್ಯ ಕ್ಷೇತ್ರ ಪ್ರವೇಶಿಸಿ ಬರೆದ ಹಲವಾರು ಕಥೆ, ಕಾದಂಬರಿ, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆಗಳು. ಕಾದಂಬರಿಗಳು-ಪಯಣದ ಹಾದಿಯಲ್ಲಿ, ಮುರುಕು ಮಂಟಪ, ಆಲದ ಹೂ, ಹಣ್ಣು ಹಸಿರು, ತೀರದ ಬಯಕೆ, ಅತ್ತಿಗೆ, ರತ್ನ ಪರೀಕ್ಷೆ, ಸಪ್ತಸಮಾಲೋಕ, ಸಾಹಿತ್ಯ ಮನನ. ಸಂಪಾದಿತ ಕೃತಿಗಳು-ಚಿಂತನ ಬಿಂದು, ಮೆಲಕು, ವಿಚಾರ ನಿಮಿಷ, ಪ್ರಬಂಧಗಳು, ಅರಣ್ಯ ಪರ್ವ, ಹರಿಶ್ಚಂದ್ರ ಕಾವ್ಯ ಸಾಂಗತ್ಯ. ಇಂಗ್ಲಿಷ್‌ನಿಂದ ಭಾಷಾಂತರ-ಎಲಿಯಟ್ಟನ ಮೂರು ಉಪನ್ಯಾಸಗಳು, ಕಲೆ ಎಂದರೇನು ? ಪಾಶ್ಚಾತ್ಯ ಕಾವ್ಯ ಚಿಂತನ, ಮಹತ್‌ಕಾವ್ಯ ಕಲ್ಪನೆ, ಸಾಹಿತ್ಯ ಪ್ರವೇಶ, ಸಾಹಿತ್ಯ ಮತ್ತು ಮನೋವಿಜ್ಞಾನ, ಸಾಹಿತ್ಯ ವಿಮರ್ಶೆಯ ತತ್ತ್ವಗಳು. ಸಂಸ್ಕೃತದಿಂದ-ಅಭಿಜ್ಞಾನ ಶಾಕುಂತಲ, ಕನ್ನಡ ಉತ್ತರ ರಾಮಚರಿತೆ, ಕನ್ನಡ ನಾಗಾನಂದ, ಭಾಸನ ಎರಡು ನಾಟಕಗಳು, ಸಂಗ್ರಹ ಭಾಗವತ, ಸಂಗ್ರಹ ಮಹಾಭಾರತ. ನಾಟಕಗಳು-ಪ್ರೇಮಬಲಿ, ಮಂಗಳಾರತಿ, ವಿಪರೀತಕ್ಬಂತೆ ವಿವಾಹ, ಸ್ವಪ್ನವಾಸವದತ್ತ, ಪ್ರತಿಜ್ಞಾ ಯೌಗಂಧರಾಯಣ, ಪೂರ್ಣಾಹುತಿ. ಕಾವ್ಯ-ಬಾಡದ ಹೂ, ಉಷಾ ಸ್ವಪ್ನ, ಬಣ್ಣಗಳು ಆಡಿದುವು. ವಿಮರ್ಶಾಕೃತಿ – ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ. ಸಂದ ಪ್ರಶಸ್ತಿ ಗೌರವಗಳು. ಪುರಂದರ ಕಂಡ ಶ್ರೀರಾಮ ಸಂಗೀತ ರೂಪಕಕ್ಕೆ ರಾಜ್ಯ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬಿ.ಎಂ.ಶ್ರೀ. ರಜತ ಮಹೋತ್ಸವ ಪದಕ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಸ್.ಆರ್. ಸಿದ್ಧಲಿಂಗಪ್ಪ – ೧೯೩೯ ಸರೋಜ ತುಮಕೂರು – ೧೯೪೦ ಎಚ್.ಆರ್. ಇಂದಿರಾ – ೧೯೪೦-೧೬.೧೦.೧೯೬೯

Details

Date:
November 30, 2023
Event Category: