Loading Events

« All Events

  • This event has passed.

ಕೊರಟಿ ಶ್ರೀನಿವಾಸರಾವ್

October 19, 2023

೧೯-೧೦-೧೯೨೫ ೨೫-೪-೧೯೮೩ ಚಾರಿತ್ರಿಕ, ಸಾಮಾಜಿಕ ಕಾದಂಬರಿಕಾರರೆಂದೇ ಪ್ರಸಿದ್ಧರಾಗಿದ್ದ ಶ್ರೀನಿವಾಸರಾವ್‌ರವರು ಹುಟ್ಟಿದ್ದು ಹೊಸಕೋಟೆ ತಾಲ್ಲೂಕು ಕೊರಟಿ ಎಂಬ ಗ್ರಾಮದಲ್ಲಿ. ತಂದೆ ಶ್ರೀಪಾದರಾವ್, ತಾಯಿ ನಾಮಗಿರಿಯಮ್ಮ. ಪ್ರಾರಂಭಿಕ ಶಿಕ್ಷಣ ಹೊಸಕೋಟೆ, ಬೆಂಗಳೂರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಬಿ.ಕಾಂ. ಪದವಿ (೧೯೫೨), ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (೧೯೫೭). ಉದ್ಯೋಗಕ್ಕಾಗಿ ಸೇರಿದ್ದು ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ (೧೯೫೨) ವೃತ್ತಿ ಆರಂಭ. ಗಾಂನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆಯಲ್ಲಿ ಕೆಲಕಾಲ, ಬೆಂಗಳೂರಿನ ಲೆಕ್ಕಪತ್ರ ಕಚೇರಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ಆಚಾರ್ಯ ಪಾಠಶಾಲೆಯ ವಾಣಿಜ್ಯ, ಕಲಾ, ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಸಂಜೆ ಕಾಲೇಜಿನ ಉಪಪ್ರಾಚಾರ್ಯರಾಗಿ ವಿವಿಧ ಹಂತಗಳಲ್ಲಿ ಸಲ್ಲಿಸಿದ ಸೇವೆ. ಜೊತೆಗೆ ಅಧ್ಯಯನ ಮಂಡಲಿ, ಪರೀಕ್ಷಾ ಮಂಡಲಿ ಸದಸ್ಯರಾಗಿ, ಕಚೇರಿಯ ಅಕ್ಷಕರಾಗಿಯೂ ಕಾರ‍್ಯನಿರ್ವಹಣೆ. ಐತಿಹಾಸಿಕ, ಸಾಮಾಜಿಕ ಕಾದಂಬರಿಗಳ ರಚನೆಯಲ್ಲಿ ಸಿದ್ಧಹಸ್ತರು. ಸಾಮಾಜಿಕ ಕಾದಂಬರಿಗಳು-ಕಣ್ಣೀರಿನ ಕಡಲು, ಮಂಗಳ ದೀಪ, ವಿದ್ಯಾಧರೆ, ಗೃಹಿಣಿ, ಮಿಸ್ ಲೀಲಾವತಿ, ಮಮತೆಯ ಸುಳಿ, ಊರು ಕವಲೊಡೆದಾಗ, ಚೈತ್ರಯಾತ್ರೆ, ತೂರಿ ಬಂದ ತಾರೆ. ಐತಿಹಾಸಿಕ ಕಾದಂಬರಿಗಳು-ವಿಜಯನಗರದ ಸಾಮ್ರಾಜ್ಯದ ಬಗ್ಗೆ ೨೦ ಕಾದಂಬರಿಗಳು. ದೇವಗಿರಿ ಪತನ-೨ ಭಾಗ, ಕನ್ನಡಿಗರ ಕಾಳರಾತ್ರಿ, ಬಲಿದಾನ, ರಾಜ್ಯೋದಯ, ರಾಯಪರಾಭವ, ಗಜಬೇಂಟೆಕಾರ, ರಾಜ್ಯಕ್ರಾಂತಿ, ತೌಲವೇಶ್ವರ, ನಾಗಲಾದೇವಿ, ಜಗನ್ಮೋಹಿನಿ, ಶಾಂತಿವಾದಿ, ರಾಜದ್ರೋಹಿ, ಅಮಾತ್ಯರತ್ನ, ಹುಚ್ಚು ದೊರೆ, ರಕ್ಕಸತಂಗಡಿ, ರಘುನಾಥ ವಿಜಯ, ದೇವಿಕೋಟೆ, ಘಾಟಿ ಕಲಹ, ರಾಜ್ಯಕ್ಷಯ. ಇತರ ಐತಿಹಾಸಿಕ-ಮೈಸೂರು ಹುಲಿ, ಹುಲಿಯ ಹೆಜ್ಜೆ, ವ್ಯಾಘ್ರನಖ, ಧರ್ಮದೀಕ್ಷೆ, ಉಭಯ ಲೋಕೇಶ್ವರ, ತೇಜಸಿಂಹ, ರಾಣಿ ಚೆನ್ನಮ್ಮಾಜಿ, ಗುಣವಂತಿ, ರಾಜಾ ವೆಂಕಟಪ್ಪನಾಯಕ. ಧಾರ‍್ಮಿಕ-ಶ್ರೀ ತಿರುಪತಿ, ಶ್ರೀ ಮಧ್ವಾಚಾರ‍್ಯರು, ಜಯತೀರ್ಥರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರ ಸ್ವಾಮಿಗಳು, ಪುರಂದರದಾಸರು, ಶ್ರೀಪಾದರಾಜರು. ಒಂಬತ್ತು ಐತಿಹಾಸಿಕ ಕಥಾಸಂಕಲನಗಳು. ಭಾರತ-ಭಾರತಿ ಮಾಲಿಕೆಗಾಗಿ ಹಲವಾರು ಕೃತಿ. ಅನುವಾದ-ಆದಿಮಾನವರು. ವಿಜಯನಗರದ ಕಾದಂಬರಿಗಳು ತೆಲುಗಿಗೂ ಅನುವಾದ. ಚಲನಚಿತ್ರವಾದ ಕೃತಿಗಳು ಮಿಸ್ ಲೀಲಾವತಿ ಮತ್ತು ಗೃಹಿಣಿ. ಸಂದ ಗೌರವಗಳು ಹಲವಾರು. ಗುರು ಪೀಠಗಳಿಂದ ಪುರಸ್ಕೃತರು. ಅಮಾತ್ಯ ರತ್ನ ಕೃತಿಗೆ ರಾಜ್ಯ ಸರಕಾರದಿಂದ ಪ್ರಥಮ ಬಹುಮಾನ. ವ್ಯಾಸರಾಯರು ಕೃತಿಗೆ ಸಂಸ್ಕೃತಿ ಇಲಾಖೆಯಿಂದ ಬಹುಮಾನ, ಪೆನುಗೊಂಡೆಯಲ್ಲಿ ನಡೆದ ಕೃಷ್ಣದೇವರಾಯ ವರ್ಧಂತಿ ರಜತೋತ್ಸವದಲ್ಲಿ ಸನ್ಮಾನಿತರು. ತಿರುಮಲ ತಿರುಪತಿ ದಾಸ ಸಾಹಿತ್ಯ ಯೋಜನೆಯಡಿಯಲ್ಲಿ ಬೆಂಗಳೂರಿನಲ್ಲಿ ಅದ್ದೂರಿ ಸನ್ಮಾನ.

Details

Date:
October 19, 2023
Event Category: