Loading Events

« All Events

  • This event has passed.

ಗೋಪಾಲಕೃಷ್ಣ ಪಿ. ನಾಯಕ್

September 3, 2023

೦೩..೧೯೨೮ ಕ್ರೀಡೆ, ಸಾಂಸ್ಕೃತಿಕ ವಲಯ, ಸಾಹಿತ್ಯವಲಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸಿರುವ ಗೋಪಾಲಕೃಷ್ಣ ಪಿ. ನಾಯಕ್‌ ರವರು ಹುಟ್ಟಿದ್ದು ೧೯೨೮ರ ಸೆಪ್ಟಂಬರ್ ೩ರಂದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹಿರೇಗುತ್ತಿ ಎಂಬಲ್ಲಿ. ತಂದೆ ಪಾಂಡುರಂಗ ಗೋಪಾಲ ನಾಯಕ್‌, ತಾಯಿ ಬೀರಮ್ಮ. ಪ್ರಾರಂಭಿಕ ಶಿಕ್ಷಣ ಕುಮಟೆಯಲ್ಲಿ ಪ್ರಾರಂಭವಾಗಿ ಧಾರವಾಡದಲ್ಲಿ ಕೆಲವರ್ಷ. ನಂತರ ಮಾಧ್ಯಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ವಿಜಾಪುರ, ಕುಮಟೆ, ಮತ್ತು ಬಿ.ಎಸ್‌.ಸಿ., ಬಿ.ಎಡ್‌. ಪದವಿ ಗಳಿಸಿದ್ದು ಧಾರವಾಡ, ಕುಮಟ ಮತ್ತು ಬೆಳಗಾವಿಯಲ್ಲಿ. ಕುಮಟೆಯ ಗಿಬ್ಸ್‌ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಬೋಧನಾ ವೃತ್ತಿಯನ್ನಾರಂಭಿಸಿದ ನಾಯಕರು ಪಿ.ಎಂ. ಹೈಸ್ಕೂಲು, ಅಂಕೋಲೆ, ವಿ.ಕೆ ಗರ್ಲ್ಸ್ ಹೈಸ್ಕೂಲು, ಅಂಕೋಲೆಯ ಪ್ರೈಮರಿ ಟೀಚರ್ಸ್ ಟ್ರೈನಿಂಗ್‌ ಕಾಲೇಜಿನ ಪ್ರಾಚಾರ್ಯರಾಗಿ ನಂತರ ಸಾಣೆಕಟ್ಟಿ ಶ್ರೀ ಸದ್ಗುರು ನಿತ್ಯಾನಂದ ಹೈಸ್ಕೂಲಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ. ಹದಿನಾರನೆಯ ವಯಸ್ಸಿನಿಂದಲೇ ಕತೆ, ಕವನಗಳನ್ನು ಬರೆಯಲು ಪ್ರಾರಂಭಿಸಿದ್ದು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲೆಲ್ಲಾ ಪ್ರಕಟಿತ, ಹದಿನೆಂಟರ ಹರೆಯದಲ್ಲೇ ಬರೆದ ಮೂರು ಅಂಕಗಳ ನಾಟಕ ‘ಆ ರಾತ್ರಿ’ ಹುಬ್ಬಳ್ಳಿಯ ಆನಂದ ಗ್ರಂಥಮಾಲೆಯಿಂದ ಪ್ರಕಟಗೊಂಡಿದ್ದು ೧೯೫೩ ರಲ್ಲಿ. ಹೈಸ್ಕೂಲಿನಲ್ಲಿದ್ದಾಗಲೇ ನಾಟಕದ ಹುಚ್ಚಿಗೊಳಗಾಗಿ ನೋಡಿದ್ದು, ಗರುಡ ಸದಾಶಿವರಾಯರ, ಮಹಮದ್‌ ಪೀರರ, ಕೆ. ಹಿರಣ್ಣಯ್ಯನವರ ಕಂಪನಿಯ ಹಲವಾರು ನಾಟಕಗಳು. ಬಾಲನಟನಾಗಿ ರಂಗ ಪ್ರವೇಶಿಸಿ ಹಲವರು ನಾಟಕಗಳ ಪಾತ್ರಧಾರಿ. ಸ್ತ್ರೀ ಪಾತ್ರಗಳನ್ನೂ ಅಭಿನಯಿಸಲು ಸ್ತ್ರೀಯರ ಕೊರತೆಯಿದ್ದ ಕಾಲದಲ್ಲಿ ಸ್ತ್ರೀ ಪಾತ್ರವಹಿಸಿ ಪಡೆದ ಪ್ರಸಿದ್ಧಿ. ದೇವದಾಸಿ, ಕುಂಕುಮ, ನಾಳಿನ ಬಾಳು, ತಾಳಿಕಟ್ಟೋಕ್ಕೂಲೀನೆ, ಗಂಡಸ್ಕತ್ರಿ, ಸೈರಂಧ್ರಿ, ಕಣ್ಣಿಗೆ ಮಣ್ಣು, ಸಂಧ್ಯಾಕಾಲ ಮುಂತಾದ ಹಲವರು ನಾಟಕಗಳಲ್ಲಿ ನಾಯಕನಟ ಹಾಗೂ ನಿರ್ದೇಶನ. ರಚಿಸಿದ ನಾಟಕಗಳು ದೇವಮೂರ್ತಿ, ನಟನಾಯಕ-ಒಂದಕ್ಕೆರಡು ನೂರು ರೂಪಾಯಿನೋಟು, ಅಬ್ಬಾ, ಏನು ಹುಡುಗಿ? ಇಂದಿನ ಸಂಸಾರ, ಜೀವನ-ಸಂಜೀವಿನಿ, ಹರಿಶ್ಚಂದ್ರಮತಿ (ಸರಳರಗಳೆಯ ನಾಟಕ) ಮುಂತಾದವುಗಳು. ಪ್ರವಾಸ ಸಾಹಿತ್ಯದ ಬಗ್ಗೆ ಬರೆದ ಕೃತಿಗಳು ಈ ಪರಿಯ ಸೊಬಗು, ಉತ್ತರ ಕನ್ನಡ ಜಿಲ್ಲಾ ಪ್ರೇಕ್ಷಣೀಯ ಸ್ಥಳಗಳು ಮತ್ತು ಉತ್ತರ ಕನ್ನಡ ದರ್ಶನ. ವಿನೋದ ಪ್ರಕಾರದಲ್ಲಿಯೂ ಆಸಕ್ತಿ ಹೊಂದಿ ಬರೆದ ಹಲವಾರು ಲೇಖನಗಳು ಪ್ರಕಟಗೊಂಡಿದ್ದು, ನಗೆ-ನವಿಲು ಸಂಕಲನದಲ್ಲಿ ಸೇರಿದೆ. ನಾಟಕದಂತೆ ಇವರನ್ನೂ ಆಕರ್ಷಿಸಿದ ಮತ್ತೊಂದು ಪ್ರಕಾರವೆಂದರೆ ಯಕ್ಷಗಾನ ಹಾಗೂ ಭರತನಾಟ್ಯ. ಸುಪ್ರಸಿದ್ಧ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿಯವರಲ್ಲಿ ಶಾಸ್ತ್ರೋಕ್ತವಾಗಿ ಭರತ ನಾಟ್ಯವನ್ನೂ ಅಭ್ಯಾಸಮಾಡಿ ೧೯೪೭ ರಿಂದ ೬೪ ರ ವರೆವಿಗೂ ಉತ್ತರ ಕನ್ನಡದ ವಿವಿಧೆಡೆಗಳಲ್ಲಿ ನೀಡಿದ ಪ್ರದರ್ಶನಗಳು. ಕುವೆಂಪು, ಬೇಂದ್ರೆ, ಮುಂತಾದವರ ಹಲವಾರು ಕವನಗಳನ್ನೂ ನೃತ್ಯ ಪ್ರಕಾರಕ್ಕೆ ಅಳವಡಿಸಿದ್ದು ಇವರ ಹೆಮ್ಮೆಯ ಸಾಧನೆ. ಇವರ ನಿರ್ದೇಶನದಲ್ಲಿ ಪುರಂದರ ರಂಗ, ಕಿಸಾಗೌತಮಿ, ರಂಗಪಂಚಮಿ, ಗೋಕುಲ ನಿರ್ಗಮನ ಮುಂತಾದ ನೃತ್ಯ ರೂಪಕಗಳು ಪ್ರದರ್ಶನ ಕಂಡಿವೆ. ಬೆಂಗಳೂರಿನ ನೃತ್ಯ ನವೋದಯ ಸಂಸ್ಥೆಯವರು ಆಯೋಜಿಸಿದ್ದ ನೃತ್ಯ ಕಾರ್ಯಾಗಾರದಲ್ಲಿ ನಾಟ್ಯಾಚಾರ್ಯರಾಗಿ, ಬಾದಾಮಿ ಚಾಲುಕ್ಯ ರಾಜ್ಯೋತ್ಸವ, ಕಲಾ ಮಹೋತ್ಸವಗಳ ನಾಟ್ಯತಜ್ಞರಾಗಿ ಹಲವಾರು ಉತ್ಸವ, ಗೋಷ್ಠಿಗಳಲ್ಲಿ ಭಾಗಿ. ‘ಆಂಗಿಕಾಭಿನಯ’ ಎಂಬ ಅಭಿನಯ ಕಲಾ ಅಧ್ಯಯನ ಗ್ರಂಥ ರಚಿಸಿದ್ದು ಅಭಿನಯ ಕ್ಷೇತ್ರಕ್ಕೆ ಕೊಟ್ಟ ಬಹು ದೊಡ್ಡ ಕೊಡುಗೆ. ಹಲವಾರು ಸಂಘ-ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು, ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಅಂಕೋಲೆಯ ಲಲಿತ ಕಲಾ ಮಂಡಲ, ಗೋಕರ್ಣದ ಕರ್ನಾಟಕ ಸಂಘ ಮುಂತಾದವುಗಳ ಕಾರ್ಯದರ್ಶಿಯಾಗಿ ನಿರ್ವಹಿಸಿದ ಕಾರ್ಯಗಳು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಲಾಗೋಷ್ಠಿ, ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ನಾಟಕ, ರಂಗಕಲೆ, ಜಾನಪದ ಕಲೆ ಮುಂತಾದ ಗೋಷ್ಠಿಗಳು; ಉತ್ತರ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಇಡಗುಂಜಿ ಯಕ್ಷಗಾನ ಸಮ್ಮೇಳನ, ಬೆಳಗಾವಿಯಲ್ಲಿ ನಡೆದ ೧೨ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ- ಹೀಗೆ ಹಲವಾರು ಗೋಷ್ಠಿ, ಸಮ್ಮೇಳನಗಳ ಅಧ್ಯಕ್ಷರಾಗಿ ಪಡೆದ ಗೌರವ. ಬಹುಮುಖ ಪ್ರತಿಭೆಯ ಗೋಪಾಲಕೃಷ್ಣ ಪಿ. ನಾಯಕ್‌ರವರಿಗೆ ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ಯಕ್ಷಗಾನ ಸಾಹಿತ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸೇವಾ ಪ್ರಶಸ್ತಿ, ಕೊಗ್ರೆ ಪ್ರತಿಷ್ಠಾನ ಪ್ರಶಸ್ತಿ, ಗಂಗೂಬಾಯಿ ಹಾನಗಲ್‌ ಪ್ರತಿಷ್ಠಾನದಿಂದ, ಹುಬ್ಬಳ್ಳಿಯ ಚುಟುಕು ಸಾಹಿತ್ಯ ಪರಿಷತ್ತಿನಿಂದ, ನೃತ್ಯ-ನಾಟಕ ಸಂಸ್ಥೆಗಳಿಂದ ಸನ್ಮಾನಿತರಾಗಿರುವ ಇವರ ಆತ್ಮಕಥೆ ‘ನನ್ನ ಕಥೆ’(೨೦೧೧) ಪ್ರಕಟವಾಗಿದ್ದು ಹುಟ್ಟಿನಿಂದ ಇಲ್ಲಿಯವರೆಗೆ ಬದುಕಿನ ವಿವಿಧ ಮಜಲುಗಳ ಪರಿಚಯದ ಅಧ್ಯಾಯಗಳು ಕವಿತಾರೂಪದಲ್ಲಿ ಪ್ರಾರಂಭವಾಗಿರುವುದೇ ‘ನನ್ನ ಕಥೆ’ಯ ವಿಶೇಷ.

Details

Date:
September 3, 2023
Event Category: