Loading Events

« All Events

ಚಿದಂಬರ ಕೃಷ್ಣದೀಕ್ಷಿತ್

July 14

೧೪..೧೯೨೨ ೦೩.೧೦.೧೯೯೩ ಸೃಜನಶೀಲ ಸಾಹಿತ್ಯದಿಂದ, ಕನ್ನಡ ಪಾಂಡಿತ್ಯದಿಂದ ಹೆಸರುಗಳಿಸಿದ್ದ ಚಿದಂಬರ ಕೃಷ್ಣ ದೀಕ್ಷಿತರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ದೇವಿ ಹೊಸೂರಿನಲ್ಲಿ (ಈಗ ಹಾವೇರಿ ಜಿಲ್ಲೆಗೆ ಸೇರಿದೆ) ೧೯೨೨ರ ಜುಲೈ ೧೪ರಂದು. ತಂದೆ ಕೃಷ್ಣರಾಯರು, ತಾಯಿ ರುಕ್ಮಿಣಿಬಾಯಿ. ಪ್ರಾರಂಭಿಕ ಶಿಕ್ಷಣ ತುಮ್ಮನ ಕಟ್ಟಿ, ಮಾಧ್ಯಮಿಕದಿಂದ ಹೈಸ್ಕೂಲು ವರೆಗೆ ಹೊನ್ನಾವರ ಮತ್ತು ಧಾರವಾಡದಲ್ಲಿ. ಮೆಟ್ರಿಕ್ಯುಲೇಷನ್‌ ನಂತರ ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಎ. ಆನರ್ಸ್ ಹಾಗೂ ಎಂ.ಎ. ಪದವಿಗಳು. ಬೋಧಕರಾಗಿ ಸೇರಿದ್ದು ಮುಂಬಯಿಯ ರೂಪರೇಲ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಸುಮಾರು ೨೫ ವರ್ಷಗಳ (೧೯೫೪-೭೯). ಕಾಲ ಕನ್ನಡವನ್ನು ಬೋಧಿಸಿದರು. ನಂತರ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸೇರಿದ್ದು ೧೯೭೯ ರಲ್ಲಿ. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡಕ್ಕೆ ಸ್ಥಾನ ದೊರೆತಿದ್ದರೂ ಅಧ್ಯಯನ ಮಂಡಲಿ ರಚಿತವಾದದ್ದು ೧೯೫೯ರಲ್ಲಿ. ಕನ್ನಡಕ್ಕಾಗಿ ಪೂರ್ಣಮಟ್ಟದ ಕನ್ನಡ ಅಧ್ಯಯನ ವಿಭಾಗ ಪ್ರಾರಂಭವಾದದ್ದು ೧೯೭೯ರಲ್ಲಿ. ಚಿದಂಬರ ಕೃಷ್ಣ ದೀಕ್ಷಿತರು ಕನ್ನಡ ವಿಭಾಗದ ಮೊದಲ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ದುಡಿದರು (೧೯೭೯-೮೨). ನಂತರ ೧೯೮೪ರಲ್ಲಿ ವಿಭಾಗದ ಮುಖ್ಯಸ್ಥರಾಗಿ ಬಂದವರು ಡಾ. ಶ್ರೀನಿವಾಸ ಹಾವನೂರರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಅವರು ಬರೆದ ‘ಸೆರೆಯಾಳು’ ಕವಿತೆಯು ಭಾಗಶಃ ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಗೊಂಡಿತು. ಧಾರವಾಡ ಜಿಲ್ಲಾ ಪ್ರದೇಶದಲ್ಲಿ ನಡೆಯಿತೆಂದು ಕಲ್ಪಿಸಲಾದ ನೆರೆಯೊಳೊಬ್ಬನ ಕಥೆಯ ನಿರೂಪಣೆಯು ಇದಾಗಿದ್ದು ಸುಮಾರು ೧೪೮೮ ಸಾಲುಗಳ ನೀಳ್ಗವಿತೆಯನ್ನು ಶುಕ್ಲಪಕ್ಷ, ಕೃಷ್ಣಪಕ್ಷ ಎಂಬ ಎರಡು ಭಾಗಗಳಲ್ಲಿ ಬರೆದಿದ್ದಾರೆ. ಪತ್ರಿಕೆಗಳಿಗೆ ಇದಕ್ಕಿಂತ ಮುಂಚೆಯೇ ಬರೆದ ಇಪ್ಪತ್ತೆಂಟು ಕವಿತೆಗಳ ಸಂಕಲನ ‘ಮುಂಬೆಳಗು’ ಪ್ರಕಟಗೊಂಡಿತ್ತು. ಇದಕ್ಕೆ ಬೇಂದ್ರೆಯವರು ಮುನ್ನುಡಿ ಬರೆದಿದ್ದು, ಅವರ ಮಾತುಗಳಲ್ಲೇ ಹೇಳುವುದಾದರೆ “ವಿವಿಧ ವಿಲಾಸದಿಂದ ಕಟ್ಟಿರುವ ಈ ಇಪ್ಪತ್ತೆಂಟು ಕವನಗಳಲ್ಲಿ ಅಂತರಂಗವನ್ನೂ ಕೆದಕುವ, ಚಿತ್ರಕ್ಕೆ ಹರ್ಷವನ್ನುಂಟುಮಾಡುವ, ಮನವನ್ನೂ ಕಲ್ಲೋಲಗೊಳಿಸುವ, ಅಹಂಕಾರವನ್ನು ಚುಚ್ಚುವ, ಸೀಳುವ ಅನೇಕ ಶಸ್ತ್ರಾಸ್ತ್ರಗಳಿವೆ” ಎಂದಿದ್ದಾರೆ. ಪುತ್ರೋತ್ಸವ ಎಂಬುದು ಅವರ ಸಣ್ಣ ಕಥೆಗಳ ಸಂಕಲನ. ಆರಂಭದ ದಿನಗಳಲ್ಲಿ ಬಹು ಪ್ರತಿಭಾನ್ವಿತ ಕವಿ ಎನಿಸಿದ್ದ ದೀಕ್ಷಿತರು ಶಾಸ್ತ್ರಸಾಹಿತ್ಯ ದತ್ತ ಹೊರಳಿ, ಸೃಜನ ಶೀಲ ಕೃತಿ ರಚನೆ ಸಂಪೂರ್ಣ ನಿಂತೇ ಹೋಯಿತು. ಮಾತು ಮತ್ತು ಅದರ ಅರ್ಥ ಇವುಗಳ ಸಂಬಂಧದ ಸ್ವರೂಪವನ್ನು ಕಂಡುಕೊಳ್ಳುವಲ್ಲಿ ಸಂಪೂರ್ಣಮಗ್ನರಾಗಿ, ಇದೇ ವಿಷಯವಾಗಿ ಮೈಸೂರು ವಿಶ್ವ ವಿದ್ಯಾಲಯದಲ್ಲೂ ಹಲವಾರು ಉಪನ್ಯಾಸಗಳನ್ನೂ ನೀಡಿದರು. ಇವರ ಮತ್ತೆರಡು ಬಹುಮುಖ್ಯ ಕೃತಿಗಳೆಂದರೆ ‘ಶಬ್ದರಶ್ಮಿ’ ಮತ್ತು ‘ಶಬ್ದಾರ್ಥ ಮೀಮಾಂಸೆ’. ಶಬ್ದಾರ್ಥ ಮೀಮಾಂಸೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ೨೦೦೧ ರಲ್ಲಿ ಹೊರತಂದಿದೆ. ಹೀಗೆ ಕನ್ನಡಶಾಸ್ತ್ರ ಸಂಬಂಧ ಕೃತಿಗಳ ಆಳವಾದ ಅಧ್ಯಯನದಲ್ಲಿ ತೊಡಗಿದ್ದ ದೀಕ್ಷಿತರು ಕನ್ನಡ ಸಾಹಿತ್ಯದಿಂದ ಮರೆಯಾದದ್ದು ೧೯೯೩ ರ ಅಕ್ಟೋಬರ್ ೩ ರಂದು.

Details

Date:
July 14
Event Category: