Loading Events

« All Events

  • This event has passed.

ಜ.ಚ.ನಿ. (ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮಿಗಳು)

October 20, 2023

೨೦.೧೦.೧೯೦೯ ೦೫.೧೧.೧೯೯೬ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಸಾಹಿತಿಗಳಷ್ಡೇ ಅಲ್ಲದೆ ವೈದ್ಯಕೀಯ, ತಂತ್ರಜ್ಞಾನ, ವಿಜ್ಞಾನ, ಅಧ್ಯಾತ್ಮಿಕ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರ ಪಾಲು ಬಹುದೊಡ್ಡದಿದೆ. ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೂಳೂರಿನ ಶ್ರೀನಿಡುಮಾಮಿಡಿ ಮಠದ ಪೀಠಾಧಿಪತಿಯಾಗಿ ಪಟ್ಟಾಭಿಷಿಕ್ತರಾಗಿದ್ದ ಶ್ರೀ ಚನ್ನಬಸವರಾಜ ದೇಶಿಕೇಂದ್ರ ಶಿವಾಚಾರ‍್ಯ ಸ್ವಾಮಿಗಳ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಗಾಧವಾದುದು. ವೀರ ಶೈವ ತತ್ತ್ವ ಸಿದ್ಧಾಂತದ ಗಹನ ವಿಚಾರಗಳನ್ನು, ವಚನ ಸಾಹಿತ್ಯದ ಹೂರಣವನ್ನು ಜನಸಾಮಾನ್ಯರಿಗೆ ತಿಳಿಯುವಂತೆ ಸಮನ್ವಯಾತ್ಮಕ ದೃಷ್ಟಿಯಿಂದ ಬರೆದ ಸಾಹಿತಿಗಳೆನಿಸಿದ್ದಾರೆ. ವೇದ, ಆಗಮ, ಶಾಸ್ತ್ರ, ಯೋಗ, ವ್ಯಾಕರಣ, ಉಪನಿಷತ್ತು, ,ವಚನ ಶಾಸ್ತ್ರ, ಭಗವದ್ಗೀತೆ, ರಾಮಾಯಣ, ಮಹಾಭಾರತ ಮುಂತಾಧ ಮಹಾಕಾವ್ಯಗಳು, ಭಾರತೀಯ ಸಂಸ್ಕೃತಿ, ಮಾನವ ಶಾಸ್ತ್ರ, ಜನಾಂಗೀಯ ಆಧ್ಯಯನ ಮುಂತಾದ ಮಾನವಿಕ ಶಾಸ್ತ್ರಗಳು – ಹೀಗೆ ಹಲವು ಹತ್ತು ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಸಂಪತ್ತನ್ನು ಕರಗತ ಮಾಡಿಕೊಂಡಿದ್ದು ಮನುಕುಲದ ಶ್ರೇಯಸ್ಸಿಗಾಗಿ ಧಾರೆಯೆರೆದವರು. ಜ.ಚ.ನಿ. ಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಅಂಬಡಗಟ್ಟಿ ಎಂಬ ಗ್ರಾಮದಲ್ಲಿ ಹಿರೇಮಠದ ದುಂಡಯ್ಯ ಮತ್ತು ತಾಯವ್ವ ಎಂಬುವರ ಮಗನಾಗಿ ೧೯೦೯ರ ಅಕ್ಟೋಬರ್ ೨೦ರಂದು. ಪೂರ್ವಾಶ್ರಮದ ಹೆಸರು ಚಂದ್ರಶೇಖರ. ಐದು ವರ್ಷದವನಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತನಾದ ಚಂದ್ರಶೇಖರನಿಗೆ ಓದಿಗೆ ಅಡೆತಡೆಯುಂಟಾದರೂ ಅಂಬಡಗಟ್ಟಿಯಿಂದ ನವಲಗುಂದ ತಾಲ್ಲೂಕಿನ ಅಡ್ನೂರಿಗೆ ಬಂದು ಪ್ರಾಥಮಿಕ ಶಿಕ್ಷಣ ಪಡೆದು ನಾಲ್ಕನೆಯ ತರಗತಿಯಲ್ಲಿ ತೇರ್ಗಡೆಯಾದ ನಂತರ ಹಾನಗಲ್ಲ ಶಿವಕುಮಾರ ಸ್ವಾಮಿಗಳ ಉಪದೇಶದಂತೆ ಶಿವಮೊಗ್ಗದ ಶಿವಯೋಗ ಮಂದಿರಕ್ಕೆ ಸೇರಿದ ಚಂದ್ರಶೇಖರ ಶಿವಯೋಗ ಅಭ್ಯಾಸದಲ್ಲಿ ತೊಡಗಿದ. ಶಿವಯೋಗ ಮಂದಿರದಲ್ಲಿ ೧೨ ವರ್ಷಗಳ ಕಾಲ ಸತತವಾಗಿ ಅಧ್ಯಯನ ನಡೆಸಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದು ಶಿವಮೊಗ್ಗದ ಸುತ್ತಮುತ್ತಲ ಪ್ರಕೃತಿ ಸೌಂದರ‍್ಯಕ್ಕೆ ಮಾರುಹೋಗಿ ಆಗಲೇ ಇವನ ಕವಿತಾಶಕ್ತಿ ಗರಿಕೆದರಿ ಹಾರತೊಡಗಲು  ಅವಕಾಶವೆನ್ನುವಂತೆ ಶಿವಯೋಗ ಮಂದಿರದಿಂದ ಪ್ರಕಟವಾಗುತ್ತಿದ್ದ ಕೈ ಬರಹದ ಪತ್ರಿಕೆ ‘ಸುಕುಮಾರ’ ದಲ್ಲಿ ಇವನ ಬಾಲಬರಹಗಳು ಪ್ರಕಟವಾಗತೊಡಗಿದವು. ಆಂತರಿಕ ಕಾರಣಗಳಿಂದ ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಲಾಗದೆ ಬೆಂಗಳೂರಿನ ಸರ್ಪಭೂಷಣ ಮಠಕ್ಕೆ ಬಂದು ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿದ. ಕನ್ಣಡ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡುತ್ತಾ ಹೋದಂತೆಲ್ಲ ಸಾಹಿತ್ಯ ಚಟುವಟಿಕೆಗಳ ಕೇಂದ್ರವೆನಿಸಿದ್ದ ಬೆಂಗಳೂರಿನ ಹಲವಾರು ಸಾಹಿತಿಗಳು ಪರೆಚಯವಾಗಿ ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡು ಸಾಹಿತ್ಯದ, ಧರ್ಮದ, ಅಧ್ಯಾತ್ಮಿಕ ಬದುಕಿನ ಭಾಷಣಕಲೆಗೆ ವೇದಿಕೆ ದೊರೆತು ತಾನು ಗಳಿಸಿದ ಜ್ಞಾನ ಸಂಪತ್ತನ್ನು  ಒರೆಗೆ ಹಚ್ಚ ತೊಡಗಿದ. ಗೂಳೂರಿನ ನಿಡುಮಾಮಿಡಿ ಪೀಠವು ಹುಡುಕಿಕೊಂಡು ಬಂದು, ಪೀಠಾಧಿಪತಿಯಾದನಂತರ ಇವರ ಅಧ್ಯಾತ್ಮಿಕ ಬೋಧನೆಗೆ ವೇದಿಕೆ ದೊರೆತಂತಾಯಿತು. ಇವರು ಪೀಠಾರೋಹಣ ಮಾಡಿದ ಸಂದರ್ಭದಲ್ಲಿ “ಮಹಾಪೀಠವನ್ನು ಆರೋಹಣಮಾಡಿದ ಮಾತ್ರದಿಂದಲೇ ಗುರುವೆಂಬ ಹೆಮ್ಮೆಯಿಂದ ಮೆರೆಯಬೇಕೆಂಬ ವಾಂಛೆ ನಮಗಿಲ್ಲ. ಸಾಹಿತಿಯಾಗಿ, ಸಮಾಜ ಸುಧಾರಕರಾಗಿ, ಧರ್ಮ ಪ್ರಚಾರಕಾರ‍್ಯದಲ್ಲಿ ಕಾರ‍್ಯ ಪ್ರವೃತ್ತರಾಗಬೇಕೆಂದು ಸಂಕಲ್ಪಿಸಿದ್ದೇವೆ”  ಎಂಬ ಮಾತುಗಳು ಅವರ ವಿನಮ್ರತೆಯನ್ನು ತೋರಿಸುತ್ತವೆ. ಅವರ ಸಾಹಿತ್ಯ ರಚನೆಯ ೩೭ ವರ್ಷಗಳ ಅವಧಿಯಲ್ಲಿ (೧೯೪೯-೮೬) ೬೦೦೦ ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಲ್ಲದೆ ನಾನ್ನೂರಕ್ಕೂ ಹೆಚ್ಚು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಜ.ಚ.ನಿ ಯವರಷ್ಟು ವಚನಗಳನ್ನು ಬಹಶ: ಪ್ರಪಂಚದಲ್ಲಿಯೇ ಯಾರೂ ಬರೆದಂತಿಲ್ಲ. ಅವರ ವಚನಗಳು ವೈವಿಧ್ಯತೆಯಿಂದ ಕೂಡಿದ್ದು ವಚನಗಳೆಂದರೆ ಬರೇ ನುಡಿ, ಭಾಷೆ, ಮಾತು ಎಂಬ ಅರ್ಥಗಳಿದ್ದರೂ ಶರಣರ ಅನುಭಾವದ ಅಭಿವ್ಯಕ್ತಿಯ ಶಕ್ತಿಯ ಸ್ಫೋಟವೇ ವಚನಗಳಾಗಿವೆ. ಇದನ್ನೇ ಅಲ್ಲಮ ಪ್ರಭು ಜ್ಯೋತಿರ್ಲಿಂಗವೆಂದು ಕರೆದರೆ ಸಂಸ್ಕೃತದಲ್ಲಿ ಶಬ್ಧಬ್ರಹ್ಮವೆನ್ನುತ್ತಾರೆ. ಸಹಜವಾದ ಅರ್ಥವಲ್ಲದೆ ಅರ್ಥಾತೀತ ಅರ್ಥಗಳನ್ನು ಪಡೆಯುತ್ತಾ ಹೋದಾಗ, ಅಧ್ಯಾತದ ಅನುಭವದ ವಿವಿದಾರ್ಥಗಳನ್ನು ಹೊಮ್ಮಿಸಿದಾಗ ಅದು ಅನಂತಾನಂತ ಅರ್ಥಗಳು ಹೊಂದಿ ಜ್ಯೋತಿರ್ಲಿಂಗ ಅಥವಾ ಶಬ್ಧಬ್ರಹ್ಮವಾಗುತ್ತದೆ. ಇಂತಹ ೬೦೦೦ ವಚನಗಳನ್ನೊಳಗೊಂಡ ೧೭೦೦ ಪುಟಗಳ ಬೃಹದ್ಗ್ರಂಥವು ಮರು ಮುದ್ರಣಗೊಂಡಿರುವುದು ಅವರ ಮೇಧಾಶಕ್ತಿಯ ಪ್ರತೀಕ. ಹೀಗೆ ಬರೆದ ವಚನಗಳು ವೈವಿದ್ಯತೆಯಿಂದ ಕೂಡಿದ್ದು ಸಾಲ, ಶೂಲಗಳಿಂದ ಬಸವಳಿದ ದಲಿತನ ಚಿತ್ರಣ, ದಲಿತರ ಸುಧಾರಣೆಗಾಗಿ ಸರಕಾರ ಮಂಜೂರು ಮಾಡಿದ ಹಣಕ್ಕಾಗಿ ಭೂತದಂತೆ ಕಾಯ್ದು ಲಪಟಾಯಿಸುವ ಅಧಿಕಾರಿಗಳು, ಸಮಾನತೆ, ಸಹಕಾರ, ಧಾರ‍್ಮಿಕ,  ಸಾಮಾಜಿಕ,  ಸಾಹಿತ್ಯ, ಸಮಕಾಲೀನ ರಾಜಕೀಯ, ಪಕ್ಷಾಂತರದ ಪಿಡುಗು, ಹೀಗೆ ಹಲವಾರು ವಿಚಾರಗಳಲ್ಲಿ, ವಚನಗಳನ್ನು ರಚಿಸಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ಪಕ್ಷಾಂತರದ ಪಿಡುಗಿನಿಂದ ರಾಜಕೀಯ ಹೇಗೆ ಭ್ರಷ್ಟಗೊಂಡಿದೆ ಎಂಬುದನ್ನು ಸೂಚಿಸಲು ಒಡೆತನಕ್ಕೆ ಹೊಡೆದಾಡುವ ಹಿರಿಯರ ನೋಡಾ ಪಕ್ಷಕ್ಕೊಮ್ಮೆ ಪಕ್ಷಾಂತರವಾಗುವ ಪ್ರತಿಷ್ಠಿತರ ನೋಡಾ    …………………………………………. ಇವರು ಒಡೆತನಕ್ಕೆ ಉಚಿತರಹರೆ ? ಇವರಿಂದ ನಾಡು ನುಡಿ ಉದ್ಧಾರವೆ? ಎಂದು ಪ್ರಶ್ನಿಸಿ ಇಂದಿನ ರಾಜಕೀಯ ಚಿತ್ರಣಕ್ಕೆ ಕನ್ನಡಿ ಹಿಡಿದಿದ್ದಾರೆ. ಇದಲ್ಲದೆ ರಾಷ್ಟ್ರೀಯತೆ, ದೇಶಭಕ್ತಿ, ನಾಡುನುಡಿ, ತುರ್ತು ಪರಿಸ್ಥಿತಿ, ಕುಟುಂಬ ಯೋಜನೆ, ಇತ್ಯಾದಿ ವಿಚಾರಗಳ ಬಗ್ಗೆಯೂ ವಚನಗಳ ಮೂಲಕ ಜನ ಸಾಮಾನ್ಯರ ಕಣ್ಣು ತೆರೆಸಿದ್ದಾರೆ. ವಚನಗಳಲ್ಲದೆ ಸಿದ್ಧಾಂತ  ಶಿಖಾಮಣಿಯನ್ನಾಧರಿಸಿದ ‘ಜೀವನ ಸಿದ್ಧಾಂತದ’ ಆರು ಬೃಹತ್ ಸಂಪುಟಗಳು, ಶೂನ್ಯ ಸಂಪಾದನೆಯನ್ನಾಧರಿಸಿದ ‘ಸಂಪಾದನೆಯ ಸೊಂಪು’ ನಾಲ್ಕು ಬೃಹತ್ ಸಂಪುಟಗಳು, ‘ಪ್ರಾಚೀನ ಮಹಾ ವ್ಯಕ್ತಿತ್ವ’ಗಳು ‘ಶತಕ ತ್ರಯ ಪ್ರವಚನ’, ‘ಕೈವಲ್ಯ ಪದ್ಧತಿ ಪ್ರದೀಪಿಕೆ’ ಮುಂತಾದ ಕೃತಿಗಳು ಮರುಮುದ್ರಣಗೊಳ್ಳುತ್ತಲೇ ಇವೆ. ಇವುಗಳಲ್ಲಿ ಜೀವನ ಚರಿತ್ರೆ, ಸಮೀಕ್ಷೆ, ಸಂಶೋಧನೆ, ನಾಟಕಗಳು, ಅನುಭವ ಸಂದೇಶಗಳು, ಅಧ್ಯಾತ್ಮಿಕ ಕೃತಿಗಳು, ಕಾವ್ಯ, ಸಂವಾದ ಸಾಹಿತ್ಯ, ವ್ಯಕ್ತಿ ಚಿತ್ರ, ಪರಾಮರ್ಶನ ಗ್ರಂಥಗಳು, ವಚನ ಸಂಗ್ರಹಗಳು, ಕಾವ್ಯ ಮೀಮಾಂಸೆ, ಅನುಭಾವಿಕ ಅಧ್ಯಯನ ಕೃತಿಗಳು – ಹೀಗೆ ನಾಲ್ಕು ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು ಇವುಗಳಲ್ಲಿ ಕವನ ಸಂಕಲನ, ಪ್ರವಾಸ ಸಾಹಿತ್ಯ, ನಾಟಕ, ಮಹಾ ಕಾವ್ಯ, ವಿಚಾರ ವಿಮರ್ಶೆ, ಪತ್ರ ಸಾಹಿತ್ಯ, ಚರಿತ್ರೆಯ ಪರಿಶೋಧನೆ, ಲಾಕ್ಷಣಿಕ ಗ್ರಂಥ, ವಚನ ಸಾಹಿತ್ಯ, ಸಾಹಿತ್ಯ ಮೀಮಾಂಸೆ, ಜನಪದ ಸಾಹಿತ್ಯ ಮೊದಲಾದ ಪ್ರಕಾರಗಳಿಂದ ಕೂಡಿವೆ. ಕನ್ನಡವನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಶ್ರೀ ಸ್ವಾಮಿಗಳು “ಕನ್ಡಡಿಗರು ಕನ್ನಡಿಗರಾಗಿಯೇ ಬಾಳಬೇಕು, ಬೆಳಗಬೇಕು, ಕನ್ನಡಾಂಬೆಯ ಋಣಮುಕ್ತರಾಗಲು ಹೆಣಗಬೇಕು. ಕನ್ನಡದಲ್ಲಿ ಕಂಪಿದೆ, ಕತ್ತುರಿಯಿದೆ, ಕಲ್ಲು ಸಕ್ಕರೆ ಸವಿ ಇದೆ, ಕನ್ನಡಿಗರು ಕನ್ನಡವನ್ನು ಕೈಹಿಡಿಯದಿದ್ದರೆ ಇನ್ನಾರು ಹಿಡಿದಾರು, ಇನ್ನಾರು ಸವಿದಾರು ?” ಎಂದು ಪ್ರಶ್ನಿಸುತ್ತಾ ತಮಗಿರುವ ಅಗಾಧ ಪ್ರೀತಿಯನ್ನು ತೋರಿಸಿದ್ದಾರೆ. ಅಕ್ಷರ ಪೂಜೆಯಲ್ಲಿಯೇ ತೊಡಗಿಸಿಕೊಂಡಿದ್ದ ಜ.ಚ.ನಿ. ಯವರಿಗೆ ೧೯೬೭ ರಲ್ಲಿ ‘ದಾಸೋಹ’, ೧೯೭೧ ರಲ್ಲಿ ‘ಜೀವನ ಸಿದ್ಧಿ’ ಎಂಬ ಎರಡು ಗ್ರಂಥಗಳನ್ನು ಅಭಿಮಾನಿಗಳು ಅರ್ಪಿಸಿದ್ದರ ಜೊತೆಗೆ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದ ಸ್ವಾಮಿಗಳು ಅಧ್ಯಾತ್ಮದ ಬದುಕಿನಿಂದ ದೂರವಾದದ್ದು ೧೯೯೬ ರ ನವೆಂಬರ್ ೦೫ ರಂದು.

Details

Date:
October 20, 2023
Event Category: