Loading Events

« All Events

  • This event has passed.

ಡಾ. ಎಲ್. ಬಸವರಾಜು

October 7, 2023

.೧೦.೧೯೧೯ ೨೯.೦೧.೨೦೧೨ ಪ್ರಾಧ್ಯಾಪಕ, ಗ್ರಂಥ ಸಂಪಾದಕ, ವಾಗ್ಮಿಯಾಗಿದ್ದು, ವಿದ್ವತ್ತು – ವೈಚಾರಿಕತೆ, ಸೃಜನಶೀಲತೆಗಳ ಸಂಗಮವೆನಿಸಿದ್ದ ಬಸವರಾಜುರವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರಿನಲ್ಲಿ ೧೯೧೯ರ ಅಕ್ಟೋಬರ್ ೭ರಂದು. ತಂದೆ ಲಿಂಗಪ್ಪ, ತಾಯಿ ವೀರಮ್ಮ. ಪ್ರಾರಂಭಿಕ ಶಿಕ್ಷಣ ಇಡಗೂರಿನಲ್ಲಿ. ಸಿದ್ಧಗಂಗೆಯಲ್ಲಿ ಪ್ರೌಢಶಾಲಾಭ್ಯಾಸ ಹಾಗೂ ವೇದಾಧ್ಯಯನ. ಬೆಂಗಳೂರು ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯಟ್, ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ..ಪದವಿ ಹಾಗೂ ಸ್ನಾತಕೋತ್ತರ ಪದವಿ. ಬೆಂಗಳೂರಿನ ಸರಕಾರಿ ಲೆಕ್ಕವಿಭಾಗ ಕಚೇರಿಯಲ್ಲಿ ಉದ್ಯೋಗಿಯಾಗಿ ಕೆಲಕಾಲ. ನಂತರ ದಾವಣಗೆರೆಯ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು ಸ್ನಾತಕೋತ್ತರ ಪದವಿ ಪಡೆದ ನಂತರ ಮೈಸೂರು ವಿಶ್ವವಿದ್ಯಾಲಯದ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇರಿ ರೀಡರ್ ಆಗಿ, ಪ್ರಾಧ್ಯಾಪಕರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದು ೧೯೮೦ರಲ್ಲಿ ನಿವೃತ್ತಿ. ಕನ್ನಡದ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾದ ಬಸವರಾಜುರವರು ಗ್ರಂಥ ಸಂಪಾದನೆ, ಸಂಶೋಧನೆಯಂತಹ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಸುಮಾರು ನಲವತ್ತಕ್ಕೂ ಹೆಚ್ಚು ಮೌಲಿಕ ಗ್ರಂಥಗಳನ್ನು ರಚಿಸಿರುವುದು ಅವರ ಪಾಂಡಿತ್ಯ, ಪ್ರತಿಭೆ, ಪರಿಶ್ರಮಗಳ ಫಲವಾಗಿದೆ. ಹಳಗನ್ನಡದ ಪಂಪನ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಕಾವ್ಯಗಳನ್ನು ಹಲವಾರು ದೃಷ್ಟಿಕೋನಗಳಿಂದ ಪರಿಶೀಲಿಸಿ ಸಾಮಾನ್ಯ ಓದುಗರೂ ಈ ಕಾವ್ಯಗಳನ್ನು ಓದಿ ಅರ್ಥಮಾಡಿಕೊಳ್ಳುವಂತಹ ಸರಳ ಮಾರ್ಗವನ್ನು ಕಂಡುಹಿಡಿದು ಸಾಮಾನ್ಯರೂ ಹಳಗನ್ನಡ ಗ್ರಂಥಗಳ ಬಗ್ಗೆ ಆಸಕ್ತಿ ತಳೆಯುವಂತೆ ಮಾಡಿದ್ದಾರೆ. ಜೊತೆಗೆ ಶೂನ್ಯ ಸಂಪಾದನೆ, ಸರಳ ಸಿದ್ಧರಾಮ ಚರಿತೆ,ಹರಿಶ್ಚಂದ್ರ ಕಾವ್ಯ, ರನ್ನನ ಗದಾಯುದ್ಧ,ಇವಗಳನ್ನು ಓದುಗರು ಅರ್ಥಮಾಡಿ ಕೊಳ್ಳುವಂತೆ ಸರಳೀಕರಿಸಿದ್ದಾರೆ. ಕಾವ್ಯಗ್ರಹಿಕೆಗೆ ಅನುಕೂಲವಾಗುವಂತೆ ರಚಿಸಿರುವ ಪಂಪ ಭಾರತ, ಪಂಪನ ಸಮಸ್ತ ಭಾರತ ಕಥಾಮೃತ ಕೃತಿಗಳು ಬಸವರಾಜುರವರ ವಿದ್ವತ್ ಮತ್ತು ವಿಚಕ್ಷಣತೆಯ ದ್ಯೋತಕವಾಗಿವೆ. ವಚನ ಸಾಹಿತ್ಯ ಕುರಿತು ವಿಶೇಷ ಅಧ್ಯಯನ ಕೈಗೊಂಡು ಸಂಪಾದಿಸಿರುವ ‘ಅಲ್ಲಮ ಪ್ರಭು ವಚನಗಳು’ ಕೃತಿಯ ಸಂಶೋಧನೆ ಹಾಗೂ ವಿದ್ವತ್ ಕ್ಷೇತ್ರದಲ್ಲಿ ಹೊಸ ಆಯಾಮಗಳನ್ನು ಸೃಷ್ಟಿಸಿದವು. ಅಲ್ಲಮ ಪ್ರಭುವಿನ ವಚನಗಳನ್ನು ಕುರಿತು ಬೇಂದ್ರೆಯವರು ‘ಇದು ಕೇವಲ ಶ್ರದ್ಧಯಲ್ಲ, ಇಲ್ಲಿ ತಪಸ್ಸಿನ ತೆಯ್ದಾಟವಿದೆ, ಬುದ್ದಿಯ ಗುದ್ದಾಟವೂ ಇದೆ.” ಎಂದು ಹೊಗಳಿದ್ದಾರೆ. ಶಿವಶರಣರೂ ಗೀತೆಗಳನ್ನು ರಚಿಸಿ ಹರಿದಾಸರಂತೆ ಹಾಡುತ್ತಿದ್ದರೆಂಬುದನ್ನು ಸಾಧಾರಪೂರ್ವಕವಾಗಿ ನಿರೂಪಿಸುವ ಗ್ರಂಥ ‘ಶಿವದಾಸ ಗೀತಾಂಜಲಿ’. ಇದು ಬಸವರಾಜುರವರ ಅತಿ ಮಹತ್ವದ ಕೃತಿಯೂ ಹೌದು. ಇದಲ್ಲದೆ ಬಸವಣ್ಣನ ವಚನಗಳು, ಅಕ್ಕ ಮಹಾದೇವಿಯ ವಚನಗಳು, ಸರ್ವಜ್ಞನ ವಚನಗಳ  ವಿದ್ವದಾವೃತ್ತಿಯಾದ ‘ಪರಮಾರ್ಥ’, ‘ಸರ್ವಜ್ಞನ ವಚನಗಳು’ (ಜನಪ್ರಿಯ ಆವೃತ್ತಿ), ಶಿವಗಣ ಪ್ರಸಾದಿತ ಮಹಾದೇವಯ್ಯನ ಶೂನ್ಯ ಸಂಪಾದನೆ ಮುಂತಾದ ಕೃತಿಗಳನ್ನು ಆಮೂಲಾಗ್ರ ಸಂಶೋಧಿಸಿ, ಪಾಠಾಂತರಗಳನ್ನು ಅಭ್ಯಸಿಸಿ ಶಾಸ್ತ್ರೋಕ್ತವಾಗಿ ಸಂಪಾದಿಸಿದ್ದಾರೆ. ಮುಂದುವರೆದು ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ದೇವರ ದಾಸೀಮಯ್ಯನ ವಚನಗಳು, ಬಸವ ವಚನಾಮೃತ (ಭಾಗ ೧-೨), ಮಹಾದೇವನ ಮಹಾಲಿಂಗೇಂದ್ರ ವಿಜಯ, ವೀರಶೈವ ತತ್ತ್ವ ಮತ್ತು ಆಚರಣೆ, ಕಲ್ಬುರ್ಗಿಯ ಶರಣ ಬಸವ, ಶರಣ ಬಸವ ಸಂಪುಟ, ಸರಳ ಶೂನ್ಯ ಸಂಪಾದನೆ, ಬಸವಣ್ಣನ ಷಟ್ ಸ್ಥಳ ವಚನಗಳು, ಸೊನ್ನಲಾಪುರದ ಸಂತ ಸಿದ್ಧರಾಮನ ನಿಜ ವಚನಗಳು ಮುಂತಾದ ವಚನಗಳನ್ನು ಸಂಪಾದಿಸಿದ್ದಾರೆ. ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ನಾಗವರ್ಮನ “ಛಂಧೋಂಬುಧಿ”, ಗುಣ ಚಂದ್ರನ “ಛಂಧಸ್ಸಾರ”, ವೀರ ಭದ್ರನ “ನಂದಿ ಛಂಧೋರ್ಣವ”, ಈಶ್ವರನ “ಕವಿ ಜಿಹ್ವಾ ಬಂಧನ”. ಈ ನಾಲ್ಕೂ ಗ್ರಂಥಗಳನ್ನು ಪರಿಷ್ಕರಿಸಿ “ಕನ್ನಡ ಛಂಧಸ್ಸಂಪುಟ” ಎಂದು ಪ್ರಕಟಿಸಿದ್ದಾರೆ.ಹಸ್ತ ಪ್ರತಿಗಳನ್ನು ಪರಿಶೀಲಿಸಿ ಕೇಶಿರಾಜನ ಶಬ್ದಮಣಿ ದರ್ಪಣವನ್ನು ವಿಶಿಷ್ಟ ರೀತಿಯಲ್ಲಿ ಸಂಪಾದಿಸಿ ಕೊಟ್ಟಿದ್ದಾರೆ. ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳ ಮೇಲಿನ  ಪ್ರೌಢಿಮೆಯಿಂದ, ಸಂಸ್ಕೃತ ಕವಿ ಭಾಸನ ಆರು ಏಕಾಂಕ ನಾಟಕಗಳನ್ನು ‘ಭಾರತ ರೂಪಕ’ ಎಂಬ ಹೆಸರಿನಿಂದ ಅನುವಾದಿಸಿದ್ದರ ಜೊತೆಗೆ ರಾಮಾಯಣ ಆಧಾರಿತ ಮೂರು ನಾಟಕಗಳನ್ನು “ರಾಮಾಯಣ ನಾಟಕ ತ್ರಿವೇಣಿ” ಎಂಬುದಾಗಿ ಪ್ರಕಟಿಸಿದ್ದಾರೆ. ಬೌದ್ಧ ಧರ್ಮಕ್ಕೆ ಸಂಬಂಧಿಸಿದಂತೆ ಜಿ.ಪಿ.ರಾಜರತ್ನಂ ರವರು ಧರ್ಮದಾನಿ ಬುದ್ಧ,  ಧರ್ಮಪದ ಪ್ರವೇಶಿಕಾ, ಬುದ್ಧನ ವಚನ ಪರಿಚಯ, ಬೋಧಿ ಸತ್ವನ ಕಥೆಗಳು, ಭಗವಾನ್ ಬುದ್ಧ ಮುಂತಾದ ಹಲವಾರು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕೃತಿಗಳಿದ್ದರೂ ಬೌದ್ಧ ಸಾಹಿತ್ಯ ಕುರಿತು ಕೆಲಸ ಮಾಡಿರುವವರು ಕಡಿಮೆಯೆ. ಬಸವರಾಜುರವರು ಬೌದ್ಧ ಧರ್ಮವನ್ನು ಕನ್ನಡಿಗರಿಗೆ ಪರಿಚಯಿಸಲು ‘ಬುದ್ಧ ಚರಿತೆ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ತಿರುಮಲಾರ್ಯ ಮತ್ತು ಚಿಕ್ಕದೇವರಾಜ ಒಡೆಯರು ಪ್ರಮುಖ ವಿಮರ್ಶಾ ಕೃತಿಗಳು. ಬಹು ದೀರ್ಘಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರೂ ಗುಪ್ತಗಾಮಿನಿಯಾಗಿದ್ದ ಇವರ ಸೃಜನಶೀಲ ಪ್ರತಿಭೆಯು ಪ್ರಕಟಗೊಂಡಿದ್ದು ಅವರ ೭೫ನೇ ವಯಸ್ಸಿನಲ್ಲಿ. ಮೊದಲ ಕವನ ಸಂಕಲನ ‘ಠಾಣಾಂತರವು’ ಪ್ರಕಟಗೊಂಡ ನಂತರ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿತು. ನಂತರ ಪ್ರಕಟವಾದ ಎರಡನೆಯ ಕವನ ಸಂಕಲನ ‘ಜಾಲಾರಿ’. ಈ ಎರಡೂ ಕವನ ಸಂಕಲನಗಳಲ್ಲೂ ವ್ಯಂಗ್ಯ, ವಿಡಂಬನೆಯ ಜೊತೆಗೆ ಸಾಮಾಜಿಕ ಕಳಕಳಿ ಸಮಕಾಲೀನ ಪ್ರಜ್ಞೆಯಿಂದ  ಕೂಡಿದ್ದು  ಆರು ನೂರಕ್ಕೂ ಹೆಚ್ಚು ಕವನಗಳಿವೆ. ಹೀಗೆ ಸಂಶೋಧನೆ, ಸೃಜನಾತ್ಮಕ ಸಾಹಿತ್ಯ ಕೃತಿಗಳ ರಚನೆ ಮುಂತಾದವುಗಳಲ್ಲಿ ತೊಡಗಿಸಿ ಕೊಂಡಿದ್ದ ಬಸವರಾಜುರವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ, ಪಂಪ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಸಂ.ಶಿ.ಭೂಸನೂರ ಮಠ ಪ್ರಶಸ್ತಿ, ಬಸವ ಪುರಸ್ಕಾರ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಗಳಲ್ಲದೆ ಚಿತ್ರದುರ್ಗದಲ್ಲಿ ನಡೆದ ೭೫ನೆಯ (೨೦೦೯) ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವ ಪುರಸ್ಕಾರಗಳಿಗೆ ಪಾತ್ರರಾಗಿದ್ದ ಬಸವರಾಜುರವರು ಸಂಶೋಧನಾ ಕ್ಷೇತ್ರದಿಂದ ನಿರ್ಗಮಿಸಿದ್ದು ೨೦೧೨ರ ಜನವರಿ ೨೯ರಂದು.

Details

Date:
October 7, 2023
Event Category: