Loading Events

« All Events

ಡಾ. ಜಿ. ಜ್ಞಾನಾನಂದ

July 5

೦೫..೧೯೪೦ ವಿಶ್ವಕರ್ಮಸಾಹಿತ್ಯ, ಸಂಸ್ಕೃತಿ, ತತ್ತ್ವಕ್ಕೆ ಅಪಾರವಾದ ಕೊಡುಗೆ ನೀಡಿರುವ ಜ್ಞಾನಾನಂದರು ಹುಟ್ಟಿದ್ದು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ೧೯೪೦ರ ಜುಲೈ ೫ರಂದು. ತಂದೆ ಎಂ.ಆರ್.ಜಿ. ಶಂಕರ್‌ರವರು ಶಿಲ್ಪಿಗಳ ಪರಂಪರೆಯ ಮನೆತನದಲ್ಲಿ ಹುಟ್ಟಿ ಮೈಸೂರಿನ ಶಿಲ್ಪ ಸಿದ್ಧಾಂತಿ ಸಿದ್ಧಲಿಂಗ ಸ್ವಾಮಿಗಳಲ್ಲಿ ಶಿಲ್ಪಶಾಸ್ತ್ರವನ್ನೂ ಅಧ್ಯಯನ ಮಾಡಿದವರು. ತಾಯಿ ಈಶ್ವರಮ್ಮ. ಸಂಪೂರ್ಣ ಮರೆಯಾಗುತ್ತಿರುವ ವಿಶ್ವಕರ್ಮ ಧರ್ಮ ಸಾಹಿತ್ಯದ ಪುನರುಜ್ಜೀವನಕ್ಕಾಗಿ ಅದರ ಸಂಪಾದನೆ, ಪ್ರಕಟಣೆ, ಪ್ರಸಾರಕ್ಕಾಗಿ ಅಪಾರವಾದ ಕೆಲಸ ಮಾಡುತ್ತಿರುವ ಜ್ಞಾನಾನಂದರ ಪ್ರಾರಂಭಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಿಂದ ಪಡೆದ ಬಿ.ಎಸ್‌.ಸಿ. ಪದವಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ‘ಕನ್ನಡ ಮಹಾಭಾರತಗಳಲ್ಲಿ ಶಿಲ್ಪ ಮತ್ತು ಶಿಲ್ಪಿ’ ಎಂಬ ಮಹಾಪ್ರಬಂಧ ಮಂಡಿಸಿ ಪಡೆದ ಪಿ.ಎಚ್‌.ಡಿ. ಪದವಿ. ಇವುಗಳ ಜೊತೆಗೆ ಚೆನ್ನೈನ ದಕ್ಷಿಣ ಭಾರತ ಹಿಂದಿಸಭಾದಿಂದ ರಾಷ್ಟ್ರಭಾಷಾ ಪ್ರವೀಣ್‌, ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ನಿಂದ ಸ್ನಾತಕೋತ್ತರ ಸರ್ಟಿಫಿಕೇಟ್‌ (ಸ್ಟ್ಯಾಟಿಸ್ಟಿಕಲ್‌ ಅಪ್ಲೈಡ್‌ ಟು ಇಂಡಸ್ಟ್ರಿ), ಸೂಪರ್‌ವೈಸರಿ ಡೆವಲಪ್‌ಮೆಂಟ್‌ ಡಿಪ್ಲೊಮ ಮತ್ತು ಡಿಪ್ಲೊಮ ಇನ್‌ ಕ್ವಾಲಿಟಿ ಕಂಟ್ರೋಲ್‌ ಮುಂತಾದ ಕೆಲ ವೃತ್ತಿಪರ ಅಧ್ಯಯನಗಳು. ಉದ್ಯೋಗಕ್ಕಾಗಿ ಸೇರಿದ್ದು ಗಣತಿ ಕಚೇರಿಯಲ್ಲಿ ತಾತ್ಕಾಲಿಕವಾಗಿ, ಕೋಲಾರದ ಆರ್.ಟಿ.ಓ. ಕಚೇರಿಯಲ್ಲಿ ಕೆಲಕಾಲ. ನಂತರ ಸೇರಿದ್ದು ಬಿ.ಇ. ಎಂ.ಎಲ್‌. ಕಾರ್ಖಾನೆಯ ಯೋಜನಾ ಇಲಾಖೆಯಲ್ಲಿ ಮ್ಯಾನೇಜರ ಹುದ್ದೆಗೇರಿ ನಿವೃತ್ತಿ (೨೦೦೦). ಮಾಧ್ಯಮಿಕ ಶಾಲೆಯಲ್ಲಿದ್ದಾಗಲೇ ಚರ್ಚಾಕೂಟಗಳಲ್ಲಿ ಭಾಗಿ. ಹೈಸ್ಕೂಲಿನಲ್ಲಿದ್ದಾಗ ಸಾಹಿತ್ಯಾಭಿರುಚಿ ಬೆಳೆದು ಬರೆದ ಮೊದಲ ಕತೆಯು ಕಥಾವಳಿ ಪತ್ರಿಕೆಯಲ್ಲಿ ಪ್ರಕಟ. ಕಾಲೇಜು ದಿನಗಳಲ್ಲಿ ಬರೆದ ಪತ್ತೇದಾರಿ ಕಾದಂಬರಿಯು ಕಥಾವಳಿ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಗೊಂಡಿತು. ಬರೆದ ನೂರಕ್ಕೂ ಹೆಚ್ಚು ಸಣ್ಣ ಕತೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟವಾಗಿದ್ದು ‘ಪ್ರೇಮಗಂಗೆ’ ಎಂಬ ಸಂಕಲನದಲ್ಲಿ ೩೦ ಕಥೆಗಳು ಸೇರಿದೆ. ಮಕ್ಕಳಿಗಾಗಿ ಬರೆದ ಕೃತಿಗಳೆಂದರೆ – ‘ಆಕಾಶಯಾತ್ರೆ’. ಇದು ಕೇಂದ್ರ ಸರಕಾರದ ೧೨ ನೆಯ ಪುಸ್ತಕ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದರೆ ೧೪ನೆಯ ಪುಸ್ತಕ ಸ್ಪರ್ಧೆಯಲ್ಲಿ ‘ಸೂರ್ಯದೇವನ ಸಂಸಾರ’ ಕೃತಿಯು ಬಹುಮಾನ ಗಳಿಸಿದೆ. ಇದಲ್ಲದೆ ರಾಕೆಟ್‌ ಮತ್ತು ಆಕಾಶನೌಕೆ, ಚಂದ್ರ ಮುಂತಾದ ವೈಜ್ಞಾನಿಕ ಕೃತಿಗಳಲ್ಲದೆ ವೇಮನ, ನಾಗಾರ್ಜುನ, ಆರ್ಯಭಟ ಮುಂತಾದ ವ್ಯಕ್ತಿಚಿತ್ರ ಕೃತಿಗಳನ್ನೂ ರಾಷ್ಟ್ರೋತ್ಥಾನ ಸಾಹಿತ್ಯದ ಭಾರತ-ಭಾರತಿ ಸಂಪದಕ್ಕಾಗಿ ಬರೆದಿದ್ದಾರೆ. ಇದಲ್ಲದೆ ರಾಜೂರಾದ್ಧಾಂತ, ತ್ವಷ್ಟ್ರಬ್ರಹ್ಮ, ಕ್ಯಾಲೆಂಡರ್ ಕಥೆ ಮುಂತಾದವುಗಳೂ ಪ್ರಕಟಗೊಂಡಿವೆ. ಕಾದಂಬರಿಗಳೆಂದರೆ ನಯನ, ಅನ್ನಪೂರ್ಣ ಮೊದಲಾದ ಸಾಮಾಜಿಕ ಕಾದಂಬರಿಗಳಲ್ಲದೆ ಸಂಶೋಧನೆಯ ರಹಸ್ಯ, ಒಂಬತ್ತು ಅಲ್ಲ ಹತ್ತು, ಕೊಂದವನ ಕೊಲೆ, ಕೀರ್ತಿಕಾಮಿನಿ, ಮಾತನಾಡಿದರೆ ಮರಣ ಮುಂತಾದ ಪತ್ತೇದಾರಿ ಕಾದಂಬರಿಗಳನ್ನೂ ರಚಿಸಿದ್ದಾರೆ. ಇಂಗ್ಲಿಷ್‌, ಹಿಂದಿ, ಸಂಸ್ಕೃತ, ತೆಲುಗು ಮತ್ತು ಪಂಜಾಬಿ ಭಾಷೆಗಳಲ್ಲೂ ಪರಿಣತಿ ಪಡೆದಿದ್ದು ಇಂಗ್ಲಿಷ್‌ನಿಂದ ಥಿಂಕಿಂಗ್‌ ವಿತ್‌ ಯಜುರ್ವೇದ ಕೃತಿಯನ್ನೂ ‘ಯಜುರ್ವೇದ: ಒಂದು ಸಹಚಿಂತನೆ’. ಹಿಂದಿಯಿಂದ ‘ಮತ್ತೊಂದು ಭಾರತ’ ಮತ್ತು ದಾದಾರ್ ಬ್ರಿಡ್ಜ್‌ನ ಮಕ್ಕಳು; ಪಂಜಾಬಿಯಿಂದ ಯಾತ್ರಿ, ಮಂದಾರ, ನೆನಪಿನ ನೆರಳು ಮುಂತಾದ ಕೃತಿಗಳನ್ನೂ ಅನುವಾದಿಸಿದ್ದಾರೆ. ತೆಲುಗಿನಿಂದ ವೀರೇಶ ಲಿಂಗಂ ಆತ್ಮಚರಿತ್ರೆ, ಹೊಸನೀರು, ವಾಘಿರಾ, ತೆನಾಲಿ ರಾಮಲಿಂಗ ಕವಿ ಮುಂತಾದವುಗಳನ್ನೂ ಕನ್ನಡಕ್ಕೆ ತಂದಿರುವುದಲ್ಲದೆ ಹದಿನೇಳು ಭಾರತೀಯ ಭಾಷೆಗಳ ಪ್ರಾತಿನಿಧಿಕ ಕಥಾಸಂಕಲನ ‘ಹೊಸಚಿಗುರು’ (ಸಿಂಧಿ, ಡೋಗ್ರಿ, ಕಾಶ್ಮೀರಿ, ಅಸ್ಸಾಮಿ, ಒರಿಯಾ, ಮೈಥಿಲಿ, ಸಂಸ್ಕೃತ ಭಾಷೆಗಳನ್ನೊಳಗೊಂಡು) ಪ್ರಕಟವಾಗಿದೆ. ಲೌಕಿಕ ಸಾಹಿತ್ಯವಷ್ಟೇ ಅಲ್ಲದೆ ಶಾಸ್ತ್ರ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಗ್ರಂಥಗಳನ್ನೂ ಜ್ಞಾನಾನಂದರು ಕನ್ನಡಕ್ಕೆ ನೀಡಿದ್ದಾರೆ. ಶ್ರೀ ವರಾಹ ನರಸಿಂಹಾಚಾರ್ಯರ ಸಂಸ್ಕೃತ ಗ್ರಂಥವನ್ನೂ ಕನ್ನಡ ತಾತ್ಪರ್ಯದೊಡನೆ ದೀರ್ಘವಿವರಣೆ ನೀಡಿ ರಚಿಸಿರುವ ‘ಶ್ರೀ ವಿಶ್ವಕರ್ಮಾನ್ವಯ ಪ್ರದೀಪಿಕಾ’, ಪಂಚಾಗ್ನಿ ಹೋತ್ರಿ ಕೋಸೂರಿ ಪಾಪಯ್ಯ ದೀಕ್ಷಿತರಿಗೂ ಮಚಲಿ ಪಟ್ಟಣಂ ಸಪ್ತರ್ಷೀಯರಿಗೂ ನಡೆದ ಚರ್ಚೆಯ ಕನ್ನಡ ಅನುವಾದ ಕೃತಿ ‘ಶ್ರೀ ವಿಶ್ವಕರ್ಮಾನ್ವಯ ಭೂಷಣಂ’ಪ್ರಥಮ ವಿಶ್ವಕರ್ಮ ಬ್ರಾಹ್ಮಣ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ವಿಶ್ವಕರ್ಮಸಂಹಿತೆ, ವಿಶ್ವಕರ್ಮೋಪಾಖ್ಯಾನಗಳಿಂದ ಸಂಪಾದಿಸಿರುವ ‘ವಿಶ್ವಕರ್ಮೋಪಾಖ್ಯಾನ’, ಸಿಂಹಳದ ಆಲ್ಫ್ರೆಡ್‌ ಎಡ್ವರ್ಡ್ ರಾಬರ್ಟ್ ರವರು ಬರೆದಿರುವ ಇಂಗ್ಲಿಷ್‌ ಕೃತಿಯನ್ನೂ ಕಲಕತ್ತೆಯಿಂದ ಸಂಪಾದಿಸಿ ಇಂಗ್ಲಿಷ್‌ನಲ್ಲಿ ಪ್ರಕಟಿಸಿರುವ ಗ್ರಂಥ ‘ವಿಶ್ವಕರ್ಮ ಅಂಡ್‌ ಹಿಸ್‌ ಡಿಸಿಡೆಂಟ್ಸ್‌’. ೨೨೦, ರೇಖಾಚಿತ್ರಗಳು ೮೬೪ ಪುಟಗಳ ಬೃಹತ್‌ ಗ್ರಂಥವು ಶಿಲ್ಪಶಾಸ್ತ್ರದಲ್ಲಿಯೇ ಕನ್ನಡದಲ್ಲಿ ಪ್ರಕಟವಾಗಿರುವ ಮೊಟ್ಟ ಮೊದಲ ಶಿಲ್ಪಶಾಸ್ತ್ರ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗ್ರಂಥ ಶ್ರೀ ಕಾಶ್ಯಪ ಶಿಲ್ಪಶಾಸ್ತ್ರಂ (ಉತ್ತರಾರ್ಧ) ಕೃತಿ, ಮುಂತಾದವುಗಳಲ್ಲದೆ ಶ್ರೀ ಬ್ರಾಹ್ಮೀಯ ಚಿತ್ರಕರ್ಮಶಾಸ್ತ್ರಂ, ಶಿಲ್ಪಾದರ್ಶ (ಸಂಪುಟ ೧-೨), ರೂಪ ಲಕ್ಷಣ ಸಂಗ್ರಹ (ಸಂಪುಟ ೧), ಶಿಲ್ಪವಿದ್ಯಾ ರಹಸ್ಯೋಪನಿಷತ್ತು, ವಿಶ್ವಕರ್ಮಸೂಕ್ತ, ವಿಶ್ವಕರ್ಮಪೂಜೆಯ ತತ್ತ್ವ-ಮಹತ್ವ, ಪಾಂಚಾಲ ಬ್ರಾಹ್ಮಣರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಇವರು ಸಂಪಾದಿಸಿರುವ ಇತರ ಗ್ರಂಥಗಳೆಂದರೆ ನಾ.ಭಾ, ಚಂದ್ರಶೇಖರಾಚಾರ್ಯರ ಅಭಿನಂದನ ಗ್ರಂಥ ಆಚಾರ್ಯಭಿನಂದನೆ (೧೯೮೦), ಕೋಲಾರ ಜಿಲ್ಲಾ. ನಾಲ್ಕನೆಯ ಕನ್ನಡ ಸಮ್ಮೇಳನದ ನೆನಪಿನಸಂಚಿಕೆ ‘ಶಿಲ್ಪಸುಧಾ’, ಕೆ.ಜಿ.ಎಫ್‌.ನಲ್ಲಿ ನಡೆದ ಐದನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ವಸುಂಧರಾ-೧’, ಕನ್ನಡ ಮಿತ್ರರು (ಬಿಇಎಂಎಲ್‌ ನಗರ-ಕೆ.ಜಿ.ಎಫ್‌) ಸಂಸ್ಥೆಗಾಗಿ ವಸುಂಧರಾ-೨ ಮುಂತಾದ ಹಲವಾರು ನೆನಪಿನ ಗ್ರಂಥಗಳು. ಇವರದು ಅನುರೂಪ ದಾಂಪತ್ಯ. ಶ್ರೀಮತಿ ಸರಿತಾ ಜ್ಞಾನಾನಂದರು ಬರಹಗಾರ್ತಿಯಲ್ಲದೆ ಸಂಗೀತ ವಿದುಷಿ, ನಾಟ್ಯ ವಿಶಾರದೆಯಾಗಿದ್ದು ಜ್ಞಾನಾನಂದರ ಯಶಸ್ಸಿನಲ್ಲಿ ಇವರದ್ದೂ ಪಾಲಿದೆ. ಇದೀಗ ನಂದಿ ಗ್ರಾಮದಲ್ಲಿ ಬ್ರಹರ್ಷಿ ಶಿಲ್ಪ ಗುರುಕುಲದ ಮೇಲ್ವಿಚಾರಕರಾಗಿ, ಶಿಲ್ಪಶಾಸ್ತ್ರವನ್ನೂ ಬೋಧಿಸುವುದರ ಜೊತೆಗೆ ಕರ್ನಾಟಕ ಸರಕಾರದ ಶಿಲ್ಪಕಲಾ ಅಕಾಡಮಿಯ ಅಧ್ಯಕ್ಷರಾಗಿಯೂ ಕಾರ್ಯನಿರತರಾಗಿದ್ದಾರೆ. ಇವರಿಗೆ ೨೦೦೩ರಲ್ಲಿ ಸ್ನೇಹಿತರು, ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ  ‘ಸುಜ್ಞಾನ’.

Details

Date:
July 5
Event Category: