Loading Events

« All Events

  • This event has passed.

ಡಾ. ತೀ. ನಂ. ಶಂಕರನಾರಾಯಣ

September 27, 2023

೨೭.೦೯.೧೯೪೭ ನಾಡಿನ ಅತಿ ಮಹತ್ವದ ಜಾನಪದ ವಿದ್ವಾಂಸರು, ಚಿಂತಕರು, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಸಂಶೋಧಕರು. ಬುಡಕಟ್ಟು ಜಾನಪದ  ಗ್ರಾಮೀಣ ಜಾನಪದ ಸಂಸ್ಕೃತಿಯ ವಕ್ತಾರರೂ ಆಗಿರುವ ತೀ.ನಂ.ಶಂಕರನಾರಾಯಣರವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರದಲ್ಲಿ ೧೯೪೭ರ ಸಪ್ಟೆಂಬರ್ ೨೭ರಂದು. ತಂದೆ ಟಿ.ಎಸ್.ನಂಜುಂಡಯ್ಯ, ತಾಯಿ ಸತ್ಯಭಾಮಮ್ಮ. ಪ್ರಾರಂಭಿಕ ಶಿಕ್ಷಣ ತೀರ್ಥಪುರದಲ್ಲಿ. ಮಾಧ್ಯಮಿಕ ಶಾಲೆ ಶೆಟ್ಟಿಕೆರೆ, ಪ್ರಾಥಮಿಕ ಶಾಲಾಶಿಕ್ಷಣ ಮೈಸೂರಿನ ಶಾರದಾವಿಲಾಸ ಪ್ರೌಢಶಾಲೆ ಹಾಗೂ ಮಹಾಜನ ಪ್ರೌಢಶಾಲೆಗಳಲ್ಲಿ. ವಿಜ್ಞಾನ ವಿಷಯಗಳಲ್ಲಿ ಅತ್ಯುತ್ತಮ ಅಂಕಗಳಿಸಿದ್ದರೂ ಕನ್ನಡದ ಮೇಲಿನ ಪ್ರೀತಿಯಿಂದ ಸೇರಿದ್ದು ಬಿ.ಎ. ತರಗತಿಗೆ. ಇವರ ಸಂಬಂಧಿಗಳಾದ ತೀ.ನಂ.ಶ್ರೀ ಯವರ ಮನೆಯಲ್ಲಿದ್ದ ಸಾಹಿತ್ಯಿಕ ಪರಿಸರ. ಮಾಸ್ತಿ, ಡಿ.ವಿ.ಜಿ. ಬೇಂದ್ರೆ, ಪು.ತಿ.ನ, ಎ.ಎನ್. ಮೂರ್ತಿರಾವ್, ಡಿ.ಎಲ್.ಎನ್  ಮುಂತಾದವರುಗಳ ಸಮಾವೇಶ ಹಾಗೂ ಇವರುಗಳ ಶಿಷ್ಯರಾಗಿದ್ದ  ದೇ.ಜ.ಗೌ, ಹಾ.ಮಾ.ನಾ, ಎಚ್.ಎಂ.ಶಂಕರನಾರಾಯಣರಾಯರು, ಪರಮೇಶ್ವರ ಭಟ್ಟರು ಮುಂತಾದವರುಗಳ ಮಾತುಗಳನ್ನು ಕೇಳುವ ಅವಕಾಶ. ಆರನೆಯ ರ‍್ಯಾಂಕ್ ನೊಡನೆ ಬಿ.ಎ. ಪದವಿ ಹಾಗೂ ಎರಡನೆಯ ರ‍್ಯಾಂಕ್ ವಿದ್ಯಾರ್ಥಿಯಾಗಿ ಗಳಿಸಿದ ಎಂ.ಎ. ಪದವಿ. ತೀರ್ಥಪುರ ಹಾಗೂ ಶೆಟ್ಟಿಕೆರೆ ಹಳ್ಳಿಗಳ ಗ್ರಾಮೀಣ ಅನುಭವ ಮತ್ತು ಮನೆಯಲ್ಲಿ ಅಜ್ಜಿ ವೆಂಕಟಲಕ್ಷಮ್ಮನವರು ಹೇಳುತ್ತಿದ್ದ ಜನಪದ ಕಥೆಗಳು ಮತ್ತು ಹಾಡುಗಳು ಹಾಗೂ ಎಂ.ಎ. ತರಗತಿಯಲ್ಲಿ ಪ್ರೊ. ಸುಜನಾ ಮತ್ತು ಜೀಶಂಪರವರ ಪಾಠ ಪ್ರವಚನಗಳಿಂದ ಪ್ರಭಾವಿತರಾಗಿ ‘ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು’  ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಮೈಸೂರು ವಿ.ವಿ.ದ ಸಂಜೆ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕರಾಗಿ ಸೇರಿ, ಶಿವಮೊಗ್ಗ ಜಿಲ್ಲೆಯ ಬಿ.ಆರ್ ಪ್ರಾಜೆಕ್ಟೆನ ಸ್ನಾತಕೋತ್ತರ ಕೇಂದ್ರದ ಸ್ಥಾಪಕ ಮುಖ್ಯಾಧಿಕಾರಿಯಾಗಿ, ಕುವೆಂಪು ವಿಶ್ವವಿದ್ಯಾಲಯ ಪ್ರಾರಂಭವಾದನಂತರ ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಭಾರತಿ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿ ಕಲಾ ನಿಕಾಯದ ಡೀನ್ ಆಗಿ – ಹೀಗೆ ವಿವಿಧ ಹಂತಗಳಲ್ಲಿ ಕಾರ‍್ಯನಿರ್ವಹಿಸಿದ್ದಲ್ಲದೆ ಸ್ನಾತಕೋತ್ತರ ಪರೀಕ್ಷಾಮಂಡಲಿ, ಸ್ನಾತಕ ಕನ್ನಡ ಅಧ್ಯಯನ ಮಂಡಲಿ, ಸ್ನಾತಕೋತ್ತರ ಕನ್ನಡ ಅಧ್ಯಯನ ಮಂಡಲಿ ಮುಂತಾದವುಗಳ ಅಧ್ಯಕ್ಷರಾಗಿ; ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸಿಂಡಿಕೇಟ್ ಸದಸ್ಯರಾಗಿ, ಹಲವಾರು ವಿಶ್ವವಿದ್ಯಾಲಯಗಳ ಪರೀಕ್ಷಾ ಮಂಡಳಿಯ ಸದಸ್ಯರಾಗಿ ಬೆಂಗಳೂರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಕನ್ನಡ ಅಧ್ಯಯನ ಮಂಡಲಿಯ ಸದಸ್ಯರಾಗಿ ಕಾರ‍್ಯ ನಿರ್ವಹಿಸಿದ್ದಾರೆ. ಪರಿಸರ ವಿಜ್ಞಾನ, ಪಾರಾಮನೋವಿಜ್ಞಾನ, ಮಾನವ ವಿಜ್ಞಾನ, ತೌಲನಿಕ ಸಾಹಿತ್ಯ, ಇತಿಹಾಸ, ರಾಜಕೀಯ ವಿಜ್ಞಾನ ಮುಂತಾದವುಗಳಲ್ಲಿ ಆಸಕ್ತರಾಗಿದ್ದು ಪದವಿ ತರಗತಿಗಳಿಗೆ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ವಿಮರ್ಶೆ, ತೌಲನಿಕ ಕಾವ್ಯ ಮೀಮಾಂಸೆ, ಛಂದಸ್ಸು,, ಜಾನಪದ ವಿಜ್ಞಾನ ಮುಂತಾದ ವಿಷಯಗಳನ್ನು ಬೋಧಿಸಿದ್ದಾರೆ. ಹೀಗೆ ಸಾಹಿತ್ಯದ ಪ್ರಾಧ್ಯಾಪಕರಾಗಿ ಕನ್ನಡ ಕಾವ್ಯ ಮೀಮಾಂಸೆ, ವಿಮರ್ಶೆ, ಸಂಸ್ಕೃತಿಯ ಅಧ್ಯಯನವನ್ನು ಬೋಧಿಸುತ್ತಾ ಬಂದಿದ್ದರೂ ಜಾನಪದ ಅಧ್ಯಯನ ಹಾಗೂ ಸಂಗ್ರಹ, ಸಂಶೋಧನಾ ಕಾರ‍್ಯವನ್ನು ಮುಂದುವರೆಸಿಕೊಂಡು ಬಂದಿದ್ದು ಫಿನ್ ಲೆಂಡ್ ಜನಪದ ಮಹಾಕಾವ್ಯವಾದ ‘ಕಾಲೆವಾಲ’ ಮತ್ತು ಮಾನವ ಶಾಸ್ತ್ರದ ಅತಿ ಮಹತ್ವದ ಕೃತಿಯಾದ ಫ್ರೆಜರ್ ರವರ ‘ಗೋಲ್ಡನ್ ಬೊ’ ಎಂಬ ಎರಡು ಮೌಲಿಕ ಕೃತಿಗಳನ್ನು  ಜನಪದ ಅಧ್ಯಯನ ನಿರತರಾಗಿರುವವರಿಗೆ ಕೃತಿಗಳ ಪರಿಚಯ ಮಾಡಿ ಕೊಟ್ಟಿದ್ದಾರೆ. ಇವಲ್ಲದೆ ಜಾನಪದ ವಿಚಾರ, ಕಾಡು ಗೊಲ್ಲರು, ಕಾಡು ಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳು, ಜಾನಪದ ಮಹಾ ಕಾವ್ಯ, ಜಾನಪದ ಸಂಗ್ರಹ -ಸಂಪಾದನೆ, ಫಿನ್ಲೆಂಡಿನ ಜಾನಪದ ವಿದ್ವಾಂಸರು ಮೊದಲಾದ ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವುಗಳ ಜೊತೆಗೆ ಸಂಕೀರ್ಣ ಜಾನಪದ ಕಥೆಗಳು, ಜಾನಪದ ಕೈಪಿಡಿ, ಕರ್ನಾಟಕ ಜಾನಪದ ಮಹಾಕಾವ್ಯಗಳು, ಜನಪದ ಸಾಹಿತ್ಯ ಪ್ರಕಾರಗಳು, ಶ್ರೀಕಂಠ ತೀರ್ಥ (ತೀ.ನಂ.ಶ್ರೀ ಯವರಿಗೆ ಅರ್ಪಿಸಿದ ಸಂಸ್ಮರಣ ಗ್ರಂಥ), ಆಧುನಿಕತೆ ಮತ್ತು ಕನ್ನಡ ಸಾಹಿತ್ಯ, ಆಧುನಿಕತೆ ಮತ್ತು ಸಾಹಿತ್ಯ ಪ್ರಕಾರಗಳು ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಇಂಗ್ಲಿಷಿನಲ್ಲಿ ರಚಿಸಿರುವ ಕೃತಿ ‘ದಿ ಎಪಿಕ್ ಆಫ್ ಜುಂಜಪ್ಪ’ , ಟೆಕ್ಸಟ್ ಅಂಡ್ ಪರ್ ಫಾರ‍್ಮೆನ್ಸ್’ ಗ್ರಂಥವನ್ನು ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರವು ಪ್ರಕಟಿಸಿದೆ. ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ಮತ್ತು ಕನ್ನಡ ಭಾರತಿಯಿಂದ ಇವರ ಪ್ರಧಾನ ಸಂಪಾದಕತ್ವದಲ್ಲಿ ೫೦ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಪರಾಮನೋವೈಜ್ಞಾನಿಕ ಮತ್ತು ಜಾನಪದ, ಜಾನಪದ ವಿಜ್ಞಾನ, ಅಂತಾರಾಷ್ಟ್ರೀಯ ಜಾನಪದ ವಿಜ್ಞಾನದ ಸೈದ್ಧಾಂತಿಕ ವಿಷಯಗಳು- ಮುಂತಾದ ವಿಚಾರಗಳ ಬಗ್ಗೆ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳು, ಕಮ್ಮಟಗಳಲ್ಲಿ ಭಾಗಿ., ಒರಿಸ್ಸಾ, ಮಂಗಳೂರು, ಹೈದರಾಬಾದ್, ತಂಜಾವೂರು, ಹಂಪಿ, ಮಧುರೈ, ಕುಪ್ಪಂ ಮುಂತಾದೆಡೆಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಮತ್ತು ಉಡುಪಿಯ ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರವು ಆಯೋಜಿಸಿದ್ದ ಇಂಡೋ-ಅಮೇರಿಕನ್ ಕಮ್ಮಟ, ಫಿನ್ಲೆಂಡ್ ನ ತುರ್ಕು ನಗರದಲ್ಲಿ ನಡೆದ ಅಂತಾರಾಷ್ಟ್ರೀಯ ಜನಪದ ವಿಜ್ಞಾನ ಕಮ್ಮಟ ಮುಂತಾದವುಗಳಲ್ಲಿ ಭಾಗಿಯಾಗಿದ್ದಾರೆ. ಸುಮೃರು ೧೦ ವಿದ್ಯಾರ್ಥಿಗಳಿಗೆ ಎಂ.ಫಿಲ್ ಹಾಗೂ ಪಿಎಚ್.ಡಿ ಯ ಮಾರ್ಗದರ್ಶಕರಾಗಿದ್ದಾರೆ. ಇವರ ಜಾನಪದ ಸಂಶೋಧನೆ, ಸಾಹಿತ್ಯ ಕೃತಿ ರಚನೆಗಾಗಿ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯಿಂದ ಜಾನಪದ ತಜ್ಙ ಪ್ರಶಸ್ತಿ,  ಜಾನಪದ ಸಮೀಕ್ಷೆ – ವಿಶ್ಲೇಷಣೆ ಗ್ರಂಥಕ್ಕೆ ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಕು.ಶಿ. ಹರಿದಾಸಭಟ್ ಸ್ಮಾರಕ ಪುಸ್ತಕ ಬಹುಮಾನ, ಫೋಕ್ ಲೋರ್ ಮ್ಯೂಸಿಯಂ ಗೈಡ್ ಕೃತಿಗೆ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಬಹುಮಾನ ಮುಂತಾದವುಗಳಲ್ಲದೆ ಚಿಕ್ಕನಾಯಕನ ಹಳ್ಳಿಯಲ್ಲಿ ನಡೆದ ಮೊದಲ ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷತೆ, ಕರ್ನಾಟಕ ವಿಶ್ವವಿದ್ಯಾಲಯದ ೩೭ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವಗಳಲ್ಲದೆ ವಿದ್ಯಾರ್ಥಿಗಳು, ಅಭಿಮಾನಿಗಳು ೨೦೦೮ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ಸಮನ್ವಯ’.

Details

Date:
September 27, 2023
Event Category: