Loading Events

« All Events

  • This event has passed.

ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

September 5, 2023

೦೫..೧೯೫೩ ಸಾಹಿತ್ಯದ ಅತಿ ಸಂಕೀರ್ಣ ಸಂಗತಿಗಳನ್ನು, ಒಣ ವಿಚಾರವೆನ್ನಿಸದೆ ಅತಿ ಸ್ವಾರಸ್ಯಕರವಾಗಿ ಹಾಗೂ ಸರಳ ರೀತಿಯಲ್ಲಿ ವಿಶ್ಲೇಷಿಸಿ, ಅದು ಎಲ್ಲ ವರ್ಗದ ಓದುಗರನ್ನೂ ತಲುಪುವಂತೆ ನಿರೂಪಿಸುವುದರಲ್ಲಿ ವಿಚಕ್ಷಣತೆ ಹೊಂದಿರುವ ಬಾಲಸುಬ್ರಹ್ಮಣ್ಯರವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನರಹಳ್ಳಿಯಲ್ಲಿ. ತಂದೆ ಶಿವರಾಮಯ್ಯ ತಾಯಿ ರಾಜಲಕ್ಷ್ಮಮ್ಮ. ಪ್ರಾರಂಭಿಕ ಶಿಕ್ಷಣ ನರಹಳ್ಳಿ ಮತ್ತು ಸುಂಕಾ ತೊಣ್ಣೂರು ಮತ್ತು ಪ್ರೌಢಶಾಲಾ ಶಿಕ್ಷಣ ನಾಗಮಂಗಲ. ಪ್ರಥಮ ರ‍್ಯಾಂಕ್‌ನೊಡನೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಬಿ.ಎ. ಆನರ್ಸ್ ಪದವಿ ಹಾಗೂ ಪ್ರಥಮ ರ‍್ಯಾಂಕಿನಿಂದ ಎಂ.ಎ. (ಕನ್ನಡ) ಪದವಿ. ಬಿ.ಎಂ.ಶ್ರೀ, ರಾಜರತ್ನಂ ಸ್ವರ್ಣ ಪದಕ ಪಡೆದುದಲ್ಲದೆ ಅತ್ಯುತ್ತಮ ವಿದ್ಯಾರ್ಥಿ ಎಂಬ ರಾಜ್ಯ ಪ್ರಶಸ್ತಿ ಹಾಗೂ ಭಾರತ ಸರಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದ ಪ್ರತಿಭಾವಂತರು. ‘ಆಧುನಿಕ ಕಾವ್ಯದ ಹಿನ್ನೆಲೆಯಲ್ಲಿ ಕೆ.ಎಸ್‌.ನ. ಕಾವ್ಯ-ಒಂದು ಅಧ್ಯಯನ’ ಎಂಬ ಪ್ರೌಢಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ. ಕೆ.ಎಸ್‌.ನ ಬಗ್ಗೆ ಇವರ ಮತ್ತೊಂದು ಮಹತ್ವದ ಕೃತಿ ಎಂದರೆ ಪೂರ್ಣ ಪ್ರಮಾಣದ ಸಂದರ್ಶನ ಕೃತಿ, ‘ಕೆ.ಎಸ್‌.ನ:ನುಡಿಮಲ್ಲಿಗೆ’. ಕನ್ನಡ ಸಾಹಿತ್ಯದಲ್ಲಿ ಪ್ರಕಟವಾಗಿರುವ ಈ ಮಾದರಿಯ ಮೊದಲ ಕೃತಿ ಎಂಬ ಹೆಗ್ಗಳಿಕೆ. ಶಿಕ್ಷಕರ ದಿನಾಚರಣೆಯಂದು ಹುಟ್ಟಿದ ನರಹಳ್ಳಿಯವರು ಬೆಂಗಳೂರು ಶೇಷಾದ್ರಿಪುರಂ ಕಾಲೇಜು ಕನ್ನಡ ವಿಭಾಗಕ್ಕೆ ಸೇರಿ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ ನಿವೃತ್ತಿ. ಮೂರು ದಶಕಗಳಿಂದಲೂ ನಿರಂತರವಾಗಿ ಸಾಹಿತ್ಯಿಕ ಅನುಸಂಧಾನದಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಸ್ವಯಂ ಪ್ರತಿಭೆಯಿಂದ ವಿಮರ್ಶನ ಕ್ಷೇತ್ರದಲ್ಲಿ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಯಾವುದೇ ಕೃತಿಯನ್ನು ಪರಿಶೀಲಿಸ ಹೊರಡುವಾಗಲೂ ಪ್ರಾಚೀನ ಕೃತಿಯನ್ನೂ ಆಧುನಿಕ ಸಂದರ್ಭಕ್ಕೆ ಇರುವ ಪ್ರಸ್ತುತತೆಯನ್ನೂ ಪರಿಶೀಲಿಸಿದರೆ, ಆಧುನಿಕ ಕೃತಿಯನ್ನು ವಿಮರ್ಶೆಗೆ ಒಡ್ಡುವಾಗ ಪಾರಂಪರಿಕವಾಗಿ ಅದು ಪಡೆಯಬಹುದಾದ ಅರ್ಥವನ್ನು ವಿವೇಚಿಸ ಹೊರಡುವುದು ಈ ವಿಮರ್ಶಕರ ಧ್ಯೇಯಗಳಲ್ಲೊಂದಾಗಿದೆ. ಜನಪರ ಸಂಸ್ಕೃತಿಯನ್ನು ಕುರಿತು ಮಾತನಾಡುವಾಗ ಇಂದಿನ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸುವ ಮೂಲಾಧಾರವಾದ ಸ್ನಾಯುಬಲದಿಂದ ಹೆಚ್ಚುತ್ತಿರುವ ದ್ವೇಷ, ಅಸಹನೆ, ಹಿಂಸೆ ಇಂದಿನ ಜೀವನ ಕ್ರಮದಲ್ಲಿ ಹೇಗೆ ಅನಿವಾರ್ಯವಾಗಿ ಬಿಟ್ಟಿದೆ ಎಂಬುದನ್ನು ವಿವೇಚಿಸುತ್ತಾ, ಗಾಂಧೀಜಿಯವರ ಸರಳತೆ, ಪ್ರೀತಿಸುವ ಶಕ್ತಿ, ಪ್ರಾಮಾಣಿಕತೆ ಹಾಗೂ ಸಮುದಾಯದ ಬಗೆಗಿನ ಕಾಳಜಿಗಳ ಬಗ್ಗೆ ಎಚ್ಚರಿಸುತ್ತಾರೆ. ಸಾಹಿತ್ಯಪರ ಚಿಂತನೆ ಮಾಡುವಾಗ ಕಳೆದ ಶತಮಾನದ ಸಾಹಿತ್ಯವನ್ನೂ ಅರ್ಥೈಸುವ, ಮರುಚಿಂತನೆಗೆ ಗುರಿಪಡಿಸುವ ಅಗತ್ಯತೆಯನ್ನು ಒತ್ತಿ ಹೇಳುತ್ತಾರೆ. ಹೀಗೆ ಇವರು ಚಿಂತನೆ ನಡೆಸಿ ಪ್ರಕಟಿಸಿರುವ ಎರಡು ಪೂರ್ಣ ಪ್ರಮಾಣದ ಕೃತಿಗಳೆಂದರೆ ಕುವೆಂಪುರವ ನಾಟಕಗಳ ಅಧ್ಯಯನ ಮತ್ತು ಕುವೆಂಪು ಕಾವ್ಯ (ಸಂಸ್ಕೃತಿ ಚರಿತ್ರೆಯ ರೂಪಕ) ವನ್ನು ಕುರಿತ ಗ್ರಂಥಗಳು ಮತ್ತು ಜಿ.ಎಸ್‌. ಶಿವರುದ್ರಪ್ಪನವರ ಕಾವ್ಯದ ಸಮಗ್ರ ಅಧ್ಯಯನದ ಕೃತಿ ‘ಹಣತೆಯ ಹಾಡು’. ಇವರ ಮೊದಲ ವಿಮರ್ಶಾ ಲೇಖನಗಳ ಸಂಕಲನ ‘ಅನುಸಂಧಾನ’ ಇದೊಂದು ಗಮನಾರ್ಹ ಕೃತಿಯಾಗಿದ್ದು ಇವರನ್ನೂ ವಿಮರ್ಶಕರ ಸಾಲಿಗೆ ಸೇರಿಸಿದ ಕೃತಿಯಾಗಿದೆ. ನಂತರ ಪ್ರಕಟವಾದ ವಿಮರ್ಶಾ ಕೃತಿಗಳೆಂದರೆ ನವ್ಯತೆ, ಸಾಹಿತ್ಯ ಸಂಸ್ಕೃತಿ, ಇಹರ ಪರಿಮಳದ ಹಾದಿ ಮತ್ತು ಪ್ರಬಂಧ ಸಂಕಲನ ‘ಅಂತರಂಗದ ಮೃದಂಗ’. ಅ.ನ.ಕೃ.ರವರು ಕಾದಂಬರಿಕಾರ, ಗಂಭೀರ ಅಧ್ಯಯನಕ್ಕೆ ಅರ್ಹರಲ್ಲ ಎಂಬ ಲಘು ಹೇಳಿಕೆಯನ್ನು ಸುಳ್ಳಾಗಿಸಲು, ಪೂರ್ವಾಗ್ರಹವನ್ನೂ ಬದಿಗಿಟ್ಟು ಕೃತಿಗಳ ವಿಮರ್ಶೆ ನಡೆಸಿ ರಚಿಸಿದ ಮೌಲಿಕ ಕೃತಿ ಅ.ನ.ಕೃ ಮತ್ತು ಕನ್ನಡ ಸಂಸ್ಕೃತಿ. ಅನುವಾದ ಪ್ರಕಾರದಲ್ಲಿಯೂ ತೊಡಗಿಸಿಕೊಂಡಿರುವ ಬಾಲಸುಬ್ರಹ್ಮಣ್ಯರವರು ನೊಬೆಲ್‌ ಪ್ರಶಸ್ತಿ ಪುರಸ್ಕೃತರಾದ ಐಸಾಕ್‌ ಬಾಷೆ ವಿಸ್‌ ಸಿಂಗರ್ ನ ಕತೆಗಳ ಅನುವಾದ ‘ಸಿಂಗರ್ ಕತೆಗಳು’, ‘ಗೇಬ್ರಿಯಲ್‌ ಗಾರ್ಸಿಯ ಮಾರ್ಕ್ವೆಜ್‌ ಕತೆಗಳು’ ಮತ್ತು ಮತ್ತೊಬ್ಬ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂದ್ರೆಜೀದ್‌ನ ಕಾದಂಬರಿ ಅನುವಾದ ‘ಕಡಿದಾದಹಾದಿ’ ಮುಂತಾದವುಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಜೊತೆಗೆ ಇತರರೊಡನೆ ಸಂಪಾದಿಸಿರುವ ಕೃತಿಗಳು ಕ್ರಿಸ್ತಾಂಜಲಿ, ೧೯೮೨ ರವಿಮರ್ಶೆ, ಹೊಸಹೆಜ್ಜೆ, ಕಥನ ಕವನಗಳು, ಸಂಗ್ರಹಷಟ್ಪದಿ ಮತ್ತು ಅಪೂರ್ವ ಕೃತಿಗಳು. ಸಾಹಿತ್ಯ ನಿರ್ಮಾಣ, ವಿಮರ್ಶೆಯ ಜೊತೆಜೊತೆಗೆ ಹಲವಾರು ಸಂಘ-ಸಂಸ್ಥೆಗಳೊಡನೆ ಒಡನಾಟ ಹೊಂದಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ, ಶೇಷಾದ್ರಿಪುರಂ ಕಾಲೇಜಿನ ಕನ್ನಡ ಸಂಘವನ್ನೂ ಕಟ್ಟಿ ಬೆಳೆಸಿದ್ದಲ್ಲದೆ ೨೫ ಮಹತ್ವದ ಕೃತಿ ಪ್ರಕಟಣೆಯಲ್ಲಿ ಮಹತ್ವದ ಪಾತ್ರವಹಿಸಿ, ಅನೇಕ ಸಂಘ-ಸಂಸ್ಥೆಗಳ ಸಲಹೆಗಾರರಾಗಿ, ವಿಶ್ವವಿದ್ಯಾಲಯ, ಸಾಹಿತ್ಯ ಅಕಾಡಮಿ, ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಕನ್ನಡ ಸಂಸ್ಥೆಗಳು ಮುಂಬಯಿ, ಚೆನ್ನೈ, ಕಾಸರಗೋಡು, ಒರಿಸ್ಸಾ, ದೆಹಲಿ ಮುಂತಾದೆಡೆಗಳಲ್ಲಿ ಆಯೋಜಿಸಿರುವ ವಿಚಾರ ಸಂಕಿರಣಗಳಲ್ಲಿ ಭಾಗಿಯಾಗುತ್ತಾ ಕನ್ನಡದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಬಿಡಿಯಾಗಿ ಓದಿ ವಿಮರ್ಶಿಸುವ ಕ್ರಮಕ್ಕಿಂತ ಇಡಿಯಾಗಿ ಓದಿ ವಿಮರ್ಶಿಸುವಂತಹ ಅಧ್ಯಯನ ಕ್ರಮದ ಬಗ್ಗೆ ಕಾಳಜಿ ಹೊಂದಿರುವ ನರಹಳ್ಳಿಯವರ ಸಾಧನೆಯನ್ನು ಗುರುತಿಸಿ ವಿ.ಎಂ. ಇನಾಂದಾರ್ ಪ್ರಶಸ್ತಿ, ಆದರ್ಶ ಸಾಹಿತ್ಯರತ್ನ ಪ್ರಶಸ್ತಿ, ಜಿ.ಎಸ್‌.ಎಸ್‌. ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ ಸ.ಸ. ಮಾಳವಾಡ ಪ್ರಶಸ್ತಿ, ಗೋರಖನಾಥ ಪುರಸ್ಕಾರ (ಬೆಂಗಳೂರು) ಮುಂತಾದ ಪ್ರಶಸ್ತಿಯ ಗರಿಗಳು ವಿಮರ್ಶಕರ ಮುಡಿಗೇರಿವೆ.

Details

Date:
September 5, 2023
Event Category: