Loading Events

« All Events

  • This event has passed.

ಡಾ. ಪಿ.ಎಸ್. ರಾಮಾನುಜಂ

October 16, 2023

೧೬-೧೦-೧೯೪೧ ಸಾಹಿತ್ಯ, ಆಡಳಿತ ಎರಡನ್ನೂ ಸಮರ್ಥವಾಗಿ ನಿರ್ವಹಿಸಿ ಪ್ರಶಸ್ತಿ ಪಡೆದ ಪಿ.ಎಸ್.ರಾಮಾನುಜಂರವರು ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಬೇಡಮೂಡಲು ಎಂಬ ಗ್ರಾಮ. ತಂದೆ ಪ್ರತಿವಾದಿ ಭಯಂಕರ ಸಂಪತ್ ಕುಮಾರ ಆಚಾರ್ಯ, ತಾಯಿ ಇಂದಿರಮ್ಮ. ಪ್ರಾರಂಭಿಕ ಶಿಕ್ಷಣ ಹರದನಹಳ್ಳಿ, ಚಾಮರಾಜನಗರದಲ್ಲಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. (ಆನರ್ಸ್), ಕನ್ನಡ ಪಂಡಿತ ಪರೀಕ್ಷೆಯಲ್ಲಿ ಪ್ರಥಮ ರ್ಯಾಕ್. ಎಂ.ಎ. ಪ್ರಥಮ ರ್ಯಾಂಕ್, ಐದು ಚಿನ್ನದ ಪದಕದೊಡನೆ. ಸಂಸ್ಕೃತದಲ್ಲಿ ಸಂಶೋಧನೆ ಮಾಡಿ ಪಡೆದದ್ದು ಪಿಎಚ್.ಡಿ. ಮತ್ತು ಡಿ.ಲಿಟ್. ಪದವಿಗಳು. ರಾಷ್ಟ್ರಪ್ರಜ್ಞೆ, ರಾಷ್ಟ್ರಪ್ರೇಮ, ಸಾಹಿತ್ಯ ಪ್ರೇಮ ಮೂಡಲು ತಂದೆಯವರೇ ಕಾರಣ. ಬಿ.ವೆಂಕಟಾಚಾರ್ಯ, ಗಳಗನಾಥ ಮುಂತಾದವರ ಸಾಹಿತ್ಯ ನೀಡಿ ಆಸಕ್ತಿ ಮೂಡಿಸಿದರು. ವಿದ್ಯಾರ್ಥಿ ದೆಸೆಯಿಂದಲೇ ಕಥೆ, ಕವನ, ಲೇಖನ ಬರೆಯುವ ಹವ್ಯಾಸ. ದೊಡ್ಡಪ್ಪ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದುದರ ಆಕರ್ಷಣೆ ಐ.ಪಿ.ಎಸ್. ಗುರಿ ಆಯ್ಕೆ. ಆರನೆ ರ್ಯಾಂಕ್ ಪಡೆದು ಕರ್ನಾಟಕದಲ್ಲಿ ಸರಕಾರಿ ಸೇವೆ ಪ್ರಾರಂಭ. ಕೋಲಾರ, ಧಾರವಾಡ, ಪುತ್ತೂರು, ಕೊಡಗಿನಲ್ಲಿ ಎ.ಎಸ್.ಪಿ, ಎಸ್.ಪಿ, ಅಡಿಷನಲ್ ಡಿ.ಜಿ.ಪಿ.ಯವರೆಗೂ ಮೇಲೇರಿ ಸಲ್ಲಿಸಿದ ಸೇವೆ. ಇದೀಗ ನಿವೃತ್ತರು. ಕೊಡಗಿನಲ್ಲಿದ್ದಾಗ ‘ಕೊಡವರು’ ಸಂಶೋಧನಾ ಕೃತಿ ರಚನೆ. ಶಾಸ್ತ್ರೀಯ ಸಂಗೀತ ಹಾಗೂ ಪಿಟೀಲು ವಾದನದಲ್ಲೂ ಪ್ರವೀಣರು. ಲಲಿತ ಪ್ರಬಂಧಗಳು ರಾಮಾನುಜಂರವರಿಗೆ ಹೆಚ್ಚು ಕೀರ್ತಿ ತಂದ ಪ್ರಕಾರ. ಬೆಕ್ಕಿನ ಭಾಷೆ ಮತ್ತು ಇತರ ಪ್ರಬಂಧಗಳು, ಪ್ರೀತಿ ಪ್ರದರ್ಶನ ಮತ್ತು ಇತರ ಪ್ರಬಂಧಗಳು, ಪ್ರಬಂಧ ವಿಹಾರ, ಇಂಗಿತ (ಸಮಗ್ರ ಪ್ರಬಂಧ) ನಕ್ಷತ್ರಿಕರ ಲೋಕದಲ್ಲಿ ಪ್ರಕಟಿತ. ಕವನ ಸಂಕಲನಗಳು-ಮಿಣುಕು, ಅಯನ, ಬೆಳಕು ಹರಿದಂತೆ, ಇವರು ಈ ಐವರು, ದುಕೂಲ, ರುಚಿರ, ಕಾವೇರಿಯಿಂದ ಕಡಲವರೆಗೆ, ರಸಾಲ (ಸಮಗ್ರ ಕವಿತೆಗಳು). ಪೌರಾಣಿಕ ಕಥಾ ವಸ್ತುವಿನ ಕಥಾಗುಚ್ಛ, ವಾಗರ್ಥ ಮಹತ್ವದ ಕೃತಿಗಳು. ‘ನೂರೊಂದು ನೆನಪುಗಳು’-ಅಂಕಣ ಬರಹಗಳ ಕೃತಿ. ಅನುವಾದ-ಕಿರಾತಾರ್ಜುನೀಯಂ ಮಹಾಕಾವ್ಯದ ಗದ್ಯಾನುವಾದ ಸೇರಿ ೩೦ ಕೃತಿ ಪ್ರಕಟಿತ. ಸಂದ ಗೌರವ ಪ್ರಶಸ್ತಿಗಳು ಹಲವಾರು. ಪ್ರೀತಿ ಪ್ರದರ್ಶನ ಮತ್ತು ಇತರ ಪ್ರಬಂಧಗಳು, ಕೊಡವರು, ಬೆಕ್ಕಿನ ಭಾಷೆ ಮತ್ತು ಇತರ…ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ. ರುಚಿರ ಕೃತಿಗೆ ಮುದ್ದಣ ಕಾವ್ಯ ಪ್ರಶಸ್ತಿ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಸ್ಕೃತ ವಿದ್ವತ್ ಗೋಷ್ಠಿಯ ‘ವಿದ್ಯಾಲಂಕಾರ’ ಪ್ರಶಸ್ತಿ, ವೇದ ಶಾಸ್ತ್ರ ವಿದ್ವಾನ್ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ ಮತ್ತು ಪೊಲೀಸ್ ಹುದ್ದೆಯಲ್ಲಿ ಸಮರ್ಥ ಆಡಳಿತ ನಿರ್ವಹಣೆಗಾಗಿ ದೊರೆತದ್ದು ರಾಷ್ಟ್ರಪತಿಗಳ ಪದಕ.   ಇದೇ ದಿನ ಹುಟ್ಟಿದ ಸಾಹಿತಿಗಳು : ಉ.ಕಾ. ಸುಬ್ಬರಾಯಾಚಾರ್ – ೧೯೧೯ ಕ.ಮ.ಶಿ. ಚಂದ್ರಶೇಖರಯ್ಯ – ೧೯೩೧ ಡಾ. ಜೆ.ಕೆ. ರಮೇಶ್ – ೧೯೪೯ ಜ್ಯೋತಿ ಶಶಿಕುಮಾರ್ – ೧೯೫೦

Details

Date:
October 16, 2023
Event Category: