Loading Events

« All Events

  • This event has passed.

ಡುಂಡಿರಾಜ್

August 18, 2023

೧೮..೧೯೫೬ ದಿನನಿತ್ಯದಲ್ಲಿ ನಾವು ಕಾಣುವ ಅತಿ ಸರಳ ವಿಷಯಗಳನ್ನೇ ತಮ್ಮ ಚಿಕಿತ್ಸಕ ಕಣ್ಣುಗಳಿಂದ ನೋಡುತ್ತಾ, ಅದನ್ನು ಪದಗಳಲ್ಲಿ ಹಿಡಿದಿಡುತ್ತಾ, ವಿಶೇಷ ಅರ್ಥ ಬರುವಂತೆ ಮಾಡಿ ಕಡೆಯಲ್ಲಿ ನಗೆಯುಕ್ಕಿಸಿ ಮನಸ್ಸಿನಾಳದ ಹೊರೆಯನ್ನು ಹಗುರಾಗಿಸಿಬಿಡುವ ಗದ್ಯ-ಪದ್ಯದ ಬರವಣಿಗೆಯ ಡುಂಡಿರಾಜ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಕುದ್ರು ಎಂಬಲ್ಲಿ ೧೯೫೬ ರ ಆಗಸ್ಟ್‌ ೧೮ರಂದು. ತಂದೆ ವೆಂಕಟರಮಣ ಭಟ್ಟರು, ತಾಯಿ ರಾಧಮ್ಮ. ಪ್ರಾರಂಭಿಕ ಶಿಕ್ಷಣ ಹಟ್ಟಿಕುದ್ರುವಿನಲ್ಲಿ. ಎಸ್‌.ಎಸ್‌.ಎಲ್‌.ಸಿ ಓದಿದ್ದು ಬಸ್ರೂರು. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪಿ.ಯು. ಹಾಗೂ ಕೃಷಿ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎಸ್ಸಿ (ಕೃಷಿ) ಪದವಿಯಲ್ಲಿ ಅತ್ಯಧಿಕ ಅಂಕಗಳಿಸಿ ರಾಜ್ಯಪಾಲರಿಂದ ಚಿನ್ನದ ಪದಕ ಪಡೆದ ವಿದ್ಯಾರ್ಥಿ. ಓದಿದ್ದು ಬೇಸಾಯದ ಕೃಷಿಯಾದರೂ ಪ್ರಾರಂಭಿಸಿದ್ದು ಸಾಹಿತ್ಯ ಕೃಷಿ. ಹೈಸ್ಕೂಲಿನಲ್ಲಿದ್ದಾಗಲೇ ಮನೆಯ ಅಕ್ಕಪಕ್ಕದಲ್ಲಿ ನಡೆಯುತ್ತಿದ್ದ ಭಜನೆ, ಕೀರ್ತನೆ, ನಾಟಕಗಳಿಂದ ಆಕರ್ಷಿತರಾಗಿ ಕಾಲಕಳೆದದ್ದೇ ಹೆಚ್ಚು. ಇದರಿಂದ ಪ್ರೇರಿತರಾಗಿ ಬರೆದ ಕೆಲಪದ್ಯಗಳು ಸುಧಾ, ತರಂಗ, ಮುಂತಾದ ಪತ್ರಿಕೆಗಳ ಬಾಲ ವಿಹಾರ ಪುಟಗಳಲ್ಲಿ ಪ್ರಕಟಿತ. ಕಂದಮ್ಮಗಳೇ ಈ ವರ್ಷ ಎಂದಿನಂತಲ್ಲ ಇಷ್ಟುದಿನ ನಿಮ್ಮ ಕಷ್ಟಗಳಿಗೆ ಕಲ್ಲಾಗಿದ್ದವರೆಲ್ಲ ಈ ವರ್ಷ ನಿಮ್ಮ ಪಾಲಿಗೆ ಬೆಲ್ಲ! ಇನ್ನೂ ಯಾಕೆ ಅಳುತ್ತೀರಿ? ಸಣ್ಣ ಮಕ್ಕಳ ಹಾಗೆ ಓ, ಮರೆತಿದ್ದೆ! ನೀವೆಲ್ಲ ಮಕ್ಕಳೇ ಅಲ್ಲವೇ! ಎಂದು ಮಕ್ಕಳ ಬಗ್ಗೆ ಪದ್ಯಗಳನ್ನೂ ಬರೆದ ಕವಿ ಹಲವಾರು ಕವಿತೆಗಳು, ಮಿನಿ ಕವಿತೆಗಳ ಕೃಷಿಯನ್ನೂ ಪ್ರಾರಂಭಿಸಿದರು. ಅಯ್ಯಾ ಕುಮಾರ ವ್ಯಾಸ ನೀನು ಬರೆದದ್ದು ಭಾಮಿನಿ ನನ್ನದು ಬರೇ ಮಿನಿ! ಎಂದೆನ್ನುವ ದುಂಡಿರಾಜು ಮಿನಿಕವಿತೆಗಳ ಪ್ರಕಾರದಲ್ಲಿ ತಮ್ಮದೇ ಆದ ಹಾದಿಯನ್ನು ಕಂಡುಕೊಂಡು ಬರೆದದ್ದು ಸಾವಿರಾರು ಮಿನಿ ಕವಿತೆಗಳು. ಇಂದ್ರ ಪುನಃ ಬಂದ ಕ್ಕೊಕ್ಕೊಕ್ಕೊ ಎಂದ ಈ ಸಲ ಜಾಣೆ ಅಹಲ್ಯ ಮಾಡಿದಳು ಕೋಳಿ ಪಲ್ಯ ಹೀಗೆ ಪುರಾಣೇತಿಹಾಸಗಳ ವಸ್ತುಗಳನ್ನು ಆಯ್ದುಕೊಂಡರೂ ಕಡೆಯಲ್ಲಿ ಅರ್ಥ ಸ್ಫೋಟಿಸಿ ನಗೆಯುಕ್ಕಿಸುವ ಹನಿಗವನಗಳನ್ನು ಬರೆಯತೊಡಗಿದರು. ಹನಿಗವನಗಳನ್ನಷ್ಟೇ ಅಲ್ಲದೆ ಬರೆದ ಇಡಿ ಕವನಗಳು ಸಂಕಲನಗೊಂಡು ನಮ್ಮ ಗೋಡೆಯ ಹಾಡು (೧೯೮೨), ನೀನಿಲ್ಲದೆ (೧೯೮೪), ಏನಾಯಿತು (೨೦೦೦), ಅಕ್ಷತಾ-ಲಕ್ಷತಾ (೨೦೦೪), ಬನ್ನಿ ನಮ್ಮ ಹಾಡಿಗೆ (೨೦೦೪) ಮುಂತಾದವುಗಳ ಪ್ರಕಟವಾಗಿವೆ. ಇವಲ್ಲದೆ ಸುಮಾರು ೧೧ ಹನಿಗವನ ಸಂಕಲನಗಳು ಪ್ರಕಟವಾಗಿವೆ. ಪಾಡ್ಯ ಬಿದಿಗೆ ತದಿಗೆ (೧೯೮೫), ನವನೀತ (೧೯೯೧), ನೂರು ಹನಿಗವನಗಳು ಮತ್ತು ಹನಿಕೇತನ (೧೯೯೨), ಇನ್ನೂರು ಇನಿಗವನಗಳು (೧೯೯೫), ಪಂಚ್ ಕ ಜಾಯ್ (೧೯೯೭), ಅಳಿಲು ಸೇವೆ (೨೦೦೦) ಇವುಗಳ ಸಮಗ್ರ ಹನಿಗವನಗಳು ಹನಿಖಜಾನೆ ೨೦೦೭ರಲ್ಲಿ ಪ್ರಕಟಗೊಂಡಿದೆ. ಇಷ್ಟುದಿನ ನಾನು ಕವಿತೆಯನ್ನು ಕಟ್ಟಿದೆ ಈಗ ಕವಿತೆಯೇ ನನ್ನನ್ನು ಕಟ್ಟಿದೆ ಎನ್ನುವ ಕವಿ ಸಮಗ್ರದ ನಂತರ ಹನಿಹನಿಪ್ರೀತಿ ಮತ್ತು ಹನಿಹನಿ ಹಾಸ್ಯ (೨೦೦೯), ಗಣಿಧೂಳಿನಿಂದ ಪ್ರೇರಿತರಾಗಿ ಹನಿಗಣಿ (೨೦೧೧) ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಪದ್ಯದಷ್ಟೇ ಆಕರ್ಷಕವಾಗಿ ಬರೆಯುವ ಇವರ ಮತ್ತೊಂದು ಪ್ರಕಾರವೆಂದರೆ ಗದ್ಯ. ವಿಜಯ ಕರ್ನಾಟಕ ದಿನಪತ್ರಿಕೆಗಾಗಿ ಕೆಲವರ್ಷಗಳ ಕಾಲ ಅಂಕಣ ಬರಹವನ್ನು ನಿರ್ವಹಿಸಿದರು. ಬರಹಕ್ಕೆ ಇವರು ವಸ್ತವಿಗಾಗಿ ಎಂದೂ ಹುಡುಕಾಟ ನಡೆಸಿದವರಲ್ಲ. ಬೆಳೆದ ಪರಿಸರ, ಅಕ್ಕಪಕ್ಕದವರು, ಉದ್ಯೋಗಕ್ಕಾಗಿ ಕಾರ್ಪೊರೇಷನ್ ಬ್ಯಾಂಕ್ ಸೇರಿ ವಿವಿಧ ಸ್ಥಳಗಳಲ್ಲಿ ನಿರ್ವಹಿಸಿದ ವಿವಿಧ ಹುದ್ದೆಗಳಲ್ಲಿ ದೊರೆತ ವಿವಿಧ ರೀತಿಯ ಅನುಭವಗಳು. ಪ್ರಯಾಣ ಹೊರಟಾಗ ಜೊತೆಸಿಕ್ಕವರು, ಬಾಲ್ಯದಲ್ಲಿ ಮೆರಗು ನೀಡಿ ಜ್ಞಾಪಕಕ್ಕೆ ಬಂದವರು, ಎದುರಿಗೆ ಸಿಕ್ಕಿ ಧರ್ಮ ಸಂಕಟಕ್ಕೆ ಒಳಪಡಿಸಿದವರು – ಹೀಗೆ ಒಂದೇ, ಎಂದೇ… ಇವೇ ಅನುಭವಗಳಿಂದ ಬರೆದ ನೂರಾರು ಬರಹಗಳ ಪತ್ರಿಕೆಯ ಕಾಲಂನಲ್ಲಿ ಓದುಗರನ್ನೂ ರಂಜಿಸಿವೆ. ಹೀಗೆ ಬರೆದ ಪ್ರಬಂಧಗಳು ಯಾರಿಗೂ ಹೇಳ್ಬೇಡಿ (೨೦೦೦), ಮಾತು ಕವಿತೆ (೨೦೦೫), ಮತ್ತಷ್ಟು ಮಾತುಕ(ವಿ)ತೆ (೨೦೦೬), ಪರವಾಗಿಲ್ಲ (೨೦೦೭), ಬಾರಯ್ಯ ಲಂಬೋದರ (೨೦೦೮), ಟೈಮಿಲ್ಲಾಸಾರ್ ಟೈಮಿಲ್ಲ (೨೦೦೮), ಡುಂಡಿಮ (೨೦೧೦) ಮುಂತಾದ ಗದ್ಯ ಕೃತಿಗಳು ಪ್ರಕಟಗೊಂಡಿವೆ. ಇವರ ಆಸಕ್ತಿಯ ಮತ್ತೊಂದು ಪ್ರಕಾರವೆಂದರೆ ನಾಟಕಗಳ ರಚನೆ. ನನಗೆ ಸಾಹಿತ್ಯಕಲೆ ನಾಟಕಗಳ ಬಗ್ಗೆ ವಿಪರೀತ ಆಸಕ್ತಿ ಇದೆ. ನನ್ನವಳಿಗೂ ಅಷ್ಟೆ ಇದನ್ನೆಲ್ಲಾ ಸಹಿಸಿಕೊಳ್ಳುವ ಆ ಶಕ್ತಿ ಇದೆ! ಎನ್ನುತ್ತಲೇ ಹಲವಾರು ನಾಟಕಗಳನ್ನೂ ರಚಿಸಿದ್ದು ರಂಗದ ಮೇಲೂ ಪ್ರಯೋಗ ಗೊಂಡಿವೆ. ಓಡುವವರು (೧೯೮೧) , ಹುಡುಕಾಟ (೧೯೮೫), ಅಧ್ವಾನಪುರ (೧೯೮೯), ಕೊರಿಯಪ್ಪನ ಕೊರಿಯಾಗ್ರಫಿ (೧೯೯೧), ಅಜ್ಜಿಕತೆ (ಮಕ್ಕಳನಾಟಕ-೧೯೯೪), ಸಿನಿಮಹಾತ್ಮೆ (ಮೂರು ನಾಟಕಗಳು-೧೯೯೬), ಕಾಯೋಕಲ್ಪ (೨೦೦೩), ಮಗುಕಳೆದುಹೋಗಿದೆ (೨೦೦೬) ಮತ್ತು ಪುಕ್ಕಟೆ ಸಲಹೆ ಮುಂತಾದವುಗಳು. ಬರಹಗಾರರಾಗಿರುವುದಷ್ಟೇ ಅಲ್ಲದೆ ಭಾಷಣ ಕಲೆಯಲ್ಲಿಯೂ ನಿಷ್ಣಾತರಾಗಿದ್ದು ಹಲವಾರು ಹಾಸ್ಯಸಮ್ಮೆಳನಗಳಲ್ಲಿ ಹಾಸ್ಯಭಾಷಣಗಳಿಂದಲೂ ಜನರನ್ನೂ ರಂಜಿಸಿದ್ದಾರೆ. ಟಿವಿ ಧಾರಾವಾಹಿಯ ಹರಟೆ, ಹಾಸ್ಯಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ. ಯಾರು ಕೇಳ್ತಾರೆ ಈ ಕಾಲದಲ್ಲಿ ಗಂಭೀರ ಉಪನ್ಯಾಸ ಆಸಕ್ತಿಯಿಂದ ಆಲಿಸುತ್ತಾರೆ ಚಿಕ್ಕಚಿಕ್ಕ ಉPUNನ್ಯಾಸ! ಎನ್ನುತ್ತಲೇ ತಮ್ಮ ಹನಿಗವನ ಮಿಶ್ರಿತ ವಿಶಿಷ್ಟ ಭಾಷಣದಿಂದ ಕೇಳುಗರನ್ನೂ ಆಕರ್ಷಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹಾಸ್ಯಕಾರ್ಯಕ್ರಮಗಳೇ ಅಲ್ಲದೆ ಪುಸ್ತಕ ಬಿಡುಗಡೆ, ವಿಚಾರಸಂಕಿರಣ, ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳಿಗೂ ಡುಂಡರಾಜ್‌ರವರು ಬೇಕಾದವರೇ. ಈ ರೀತಿ ಪದೇಪದೇ ಸಾಹಿತ್ಯ ಕಾರ್ಯಕ್ರಮಗಳನ್ನೇರ್ಪಡಿಸಿದರೆ ಜನ ಬರುತ್ತಾರೋ ಇಲ್ಲವೋ ಎಂದು ಪ್ರತಿಯೊಬ್ಬ ಭಾಷಣಕಾರರನ್ನೂ ಕಾಡುವುದು ಸಹಜವೇ! ಹಿಂದೆಲ್ಲ ನನಗೆ ಭಾಷಣಕ್ಕೆ ನಿಂತಾಕ್ಷಣ ಢವಗುಡುತ್ತಿತ್ತು ಎದೆ ಕಂಡು ತುಂಬಿದ ಸಭಾಂಗಣ ಈಗ ಸಭೆಗೆ ಹೋಗುವಾಗಲೇ ಹೊಡೆದುಕೊಳ್ಳುತ್ತದೆ ಎದೆ ಆತಂಕ, ಅನುಮಾನ ಇರುತ್ತಾರೋ ಇಲ್ಲವೋ ಜನ! ಎಂದು ಹೇಳುತ್ತಲೇ ತಮ್ಮ ವಾಕ್‌ ಚಾತುರ್ಯದಿಂದ ಕೇಳುಗರನ್ನು ಸೆರೆಹಿಡಿಯಬಲ್ಲರು. ಈ ರೀತಿಯ ಇವರ ಹಾಸ್ಯಭಾಷಣ (ಹಾಸ್ಯಗಂಗೆ), ಹನಿಗವನ (ಉಪನ್‌ಕಾಯ್‌), ಹಾಸ್ಯಗೀತೆ (ಹುಣ್ಣಿಮೆ), ಪ್ರೇಮಗೀತೆಗಳ (ಸಲ್ಲಾಪ) ಧ್ವನಿಸುರುಳಿ, ಸಿಡಿ, ವಿಸಿಡಿಗಳೂ ಬಿಡುಗಡೆಗೊಂಡಿವೆ. ಹಾಸ್ಯವನ್ನೇ ಪ್ರಧಾನವಾಗಿಟ್ಟುಕೊಂಡು ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡುವಲ್ಲಿ ಹನಿಗವನ, ಇಡಿಕವನ, ಹಾಸ್ಯ ಪ್ರಬಂಧ-ನಾಟಕಗಳ ಮೂಲಕ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡುಂಡಿರಾಜರಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಮುದ್ದಣ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಚುಟುಕು ಸಾರ್ವಭೌಮ ಪ್ರಶಸ್ತಿ, ಕೋ.ಮ. ಕಾರಂತ ಪುರಸ್ಕಾರ, ಭಾರ್ಗವ ಪ್ರಶಸ್ತಿ, ಅಖಿಲ ಭಾರತ ಬಾನುಲಿ ನಾಟಕ ಸ್ಪರ್ಧೆಯಲ್ಲಿ ಅತ್ಯುತ್ತಮ ಹಾಸ್ಯ ನಾಟಕ ಪುರಸ್ಕಾರ, ‘ನವನೀತ’ ಕವನ ಸಂಕಲನಕ್ಕೆ ಕರ್ನಾಟಕ ಸರಕಾರದಿಂದ ಬಹುಮಾನ, ‘ಅಜ್ಜಿ ಕತೆ’ ನಾಟಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿಗಳಲ್ಲದೆ ಚುಟುಕ ಕವಿಗೋಷ್ಠಿಯ ಅಧ್ಯಕ್ಷತೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹನಿಗವನ ಗೋಷ್ಠಿಯ ಅಧ್ಯಕ್ಷತೆ ಮುಂತಾದ ಗೌರವಗಳು ದೊರೆತಿವೆ.

Details

Date:
August 18, 2023
Event Category: