Loading Events

« All Events

  • This event has passed.

ತಿಲಕನಾಥ ಮಂಜೇಶ್ವರ

November 19, 2023

೧೯.೧೧.೧೯೪೭ ಕಥೆಗಾರ, ಪತ್ರಕರ್ತ, ಸಂಘಟಕ, ವೈಚಾರಿಕ ಲೇಖನಗಳ ಬರಹಗಾರರಾದ ತಿಲಕನಾಥ ಮಂಜೇಶ್ವರರವರು ಹುಟ್ಟಿದ್ದು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಬಳಿಯ ಕುಂಜತ್ತೂರು ಗ್ರಾಮದಲ್ಲಿ ತಾ. ೧೯.೧೧.೧೯೪೭ ರಲ್ಲಿ. ತಂದೆ ವೆಂಕಪ್ಪ, ತಾಯಿ ಆನಂದಿ, ಮಂಗಳೂರಿನ ಸರ್ಕಾರ ಕಾಲೇಜಿನಿಂದ ಪಡೆದ ಬಿ.ಕಾಂ. ಪದವಿ. ಉದ್ಯೋಗಕ್ಕಗಿ ಸೇರಿದ್ದು ತರಂಗ ವಾರ ಪತ್ರಿಕೆಗೆ. ಇದೀಗ ಹಿರಿಯ ಉಪಸಂಪಾದಕರಾಗಿ ಕಾರ್ಯ ನಿರ್ವಹಣೆ. ಆಗಾಗ ಬರೆದ ಸಣ್ಣಕಥೆಗಳನ್ನು ಸಂಗ್ರಹಿಸಿ ಹೊರತಂದ ಕಥಾಸಂಕಲನಗಳು ‘ಕಿಲಕಿಲನಗೆಯೊಡತಿ’ ಹಾಗೂ ‘ಹೆಜ್ಜೆ ಗುರುತು’. ‘ರಾಜೀವ’, ‘ಬಿಂಬ’, ‘ಪಲಾಯನ’ ಕಾದಂಬರಿಗಳು ನವಭಾರತ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ, ‘ಮರ್ಮರ’ ಮತ್ತು ‘ಅನುಪಲ್ಲವಿ’ ಕಾದಂಬರಿಗಳು ತರಂಗ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟಗೊಂಡಿವೆ. ಬಿಡಿ ಬರಹಗಳು ಕರ್ಮವೀರ, ಪ್ರಜಾಮತ, ಯುಗಪುರುಷ, ಲೋಕವಾಣಿ ಉದಯವಾಣಿ ಮತ್ತು ತುಷಾರ ಪತ್ರಿಕೆಗಳಲ್ಲಿ ಪ್ರಕಟಿತ. ತುಳುವಿನಲ್ಲೂ ಕವನ, ಕಾದಂಬರಿಗಳನ್ನು ಬರೆದಿದ್ದಾರೆ. ತರಂಗ ವಾರಪತ್ರಿಕೆಯೊಂದರಲ್ಲಿಯೇ ಸಮಕಾಲೀನ ವಿಷಯಗಳ ಮೇಲೆ ಬರೆದ ಸುಮಾರು ೭೦ ಕ್ಕೂ ಹೆಚ್ಚು ವೈಚಾರಿಕ ಲೇಖನಗಳು ಪ್ರಕಟಿತ. ಹಲವಾರು ಸಂಘ ಸಂಸ್ಥೆಗಳ ಒಡನಾಟ. ಕಾಸರಗೋಡು ತಾಲ್ಲೂಕು ಕನ್ನಡ ಲೇಖಕರ ಸಂಘಕ್ಕಾಗಿ ವೆಂಕಟರಾಜ ಪುಣಿಂಚಿತ್ತಾಯ ರೊಡನೆ ಸಂಪಾದಿಸಿದ್ದು ‘ಸಾಹಿತ್ಯ ಧ್ವನಿ’ ಸಂಚಿಕೆ. ಸುಪ್ರಸಿದ್ಧ ಕವಿಗಳ ಭಾವಗೀತೆಗಳ ‘ಭಾವಸಂಪದ’ ಮತ್ತು ‘ಭಾವ ಗಂಗೋತ್ರಿ’ಯನ್ನು ದುಂಡಿರಾಜರೊಡನೆ ಮಂಗಳೂರಿನ ಸಾಹಿತ್ಯ ಸಂಘಕ್ಕಾಗಿ ಸಂಪಾದಿಸಿದ್ದಾರೆ. ‘ಗುಣ ಗೌರವ’ ಮತ್ತು ‘ಉಡುಪಿ ಜಿಲ್ಲಾ ಬರಹಗಾರರ ಬಳಗ’ ಇನ್ನಿತರ ಸಂಪಾದಿತ ಕೃತಿಗಳು. ಇದರ ಜೊತೆಗೆ ಭಾವಗಂಗೋತ್ರಿ-ಮಂಗಳೂರು. ಮಂಗಳ ಫಿಲಂ ಸೊಸೈಟಿ -ಮಂಗಳೂರು ಸಂಸ್ಥೆಗಳ ಸ್ಥಾಪಕ ಕಾರ್ಯದರ್ಶಿಯಾಗಿ ಕಾಸರಗೋಡು ತಾಲ್ಲೂಕು ಕನ್ನಡ ಲೇಖಕರ ಸಂಘದ ಸಂಸ್ಥಾಪಕ ಸಹಕಾರ್ಯದರ್ಶಿಯಾಗಿಯೂ ದುಡಿಯುತ್ತಿದ್ದಾರೆ. ಇವರು ರಚಿಸಿದ ಕಥಾಸಂಕಲನಗಳು, ಕಾದಂಬರಿಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ‘ಹೆಜ್ಜೆ ಗುರುತು’ ಕಥಾ ಸಂಕಲನಕ್ಕೆ ಮತ್ತು ‘ಮರ್ಮರ’ ಕಾದಂಬರಿಗೆ ಬೆಂಗಳೂರಿನ ಪರ್ತಕರ್ತರ ವೇದಿಕೆಯ ಪ್ರಶಸ್ತಿ. ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಟ್ರಸ್ಟಿನ ‘ರುಕ್ಮಿಣಿ ಬಾಯಿ ಸಾಹಿತ್ಯ ಪ್ರಶಸ್ತಿ’ ಮತ್ತು ಕರ್ನಾಟಕ ಜನಸೇವಾ ಸಾಹಿತ್ಯ ಬಳಗ, ಬೀದರ ಇವರು ನೀಡುವ ದಿ. ಮ.ಮಾ ಬೋರಾಳಕರ ಮತ್ತು ದಿ. ಶ್ರೀಕಾಂತ ಪಾಟೀಲರ ನೆನಪಿನ ‘ಕರ್ನಾಟಕ ಜನಸೇವಾ ಸಾಹಿತ್ಯ ಪ್ರಶಸ್ತಿ’ ದೊರೆತಿದೆ. ಪತ್ರಿಕಾ ಮಾಧ್ಯಮದ ಸೇವೆಗಾಗ ಹೈದರಾಬಾದ್ ಕರ್ನಾಟಕ ನಾಗರಿಕರ ವೇದಿಕೆ ಬೆಂಗಳೂರು ಮತ್ತು ಸ್ವರಗಂಗಾ ಸಂಗೀತ ಅಕಾಡಮಿ ಹೊಸಪೇಟೆ ಇವರು ನೀಡುವ ‘ಶ್ರೀ ಕೃಷ್ಣದೇವರಾಯ ಪ್ರಶಸ್ತಿ’, ಪತ್ರಿಕಾ ಮಾಧ್ಯಮದ ಸೇವೆಗಾಗಿ ಕಲಾಚೇತನ ಸಾಂಸ್ಕೃತಿಕ ಅಕಾಡಮಿ, ಗದಗ ಇವರ ‘ಕಲಾಚೇತನ ಪ್ರಶಸ್ತಿ’, ‘ತುಳುವೆರೆಂಕುಲು’ ಬೆಂಗಳೂರು ಇವರ ‘ಬಲಿಯೇಂದ್ರ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ದೊರೆತಿವೆ. ಇದೀಗ ತರಂಗ ವಾರಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರತರು.

Details

Date:
November 19, 2023
Event Category: