Loading Events

« All Events

  • This event has passed.

ತೋನ್ಸೆ ಮಂಗೇಶರಾಯರು

September 11, 2023

೧೧..೧೮೭೭ ೨೩.೧೦.೧೯೪೦ ಪ್ರಸಿದ್ಧ ವಿದ್ವಾಂಸರು, ರಸಿಕರು, ಮಕ್ಕಳ ಮನದಾಳದ ಹರವುಗಳನ್ನೂ ಅರಿತು ಗದ್ಯ-ಪದ್ಯ ರಚನೆಯಲ್ಲಿ ತೊಡಗಿಸಿಕೊಂಡಿದಷ್ಟೇ ಅಲ್ಲದೆ ವಿಜ್ಞಾನ ಪುಸ್ತಕಗಳನ್ನೂ ಮಕ್ಕಳಿಗಾಗಿ ರಚಿಸಿದ ತೋನ್ಸೆ ಮಂಗೇಶರಾಯರು ಹುಟ್ಟಿದ್ದು ೧೮೭೭ರ ಸೆಪ್ಟಂಬರ್ ೧೧ರಂದು ಮಂಗಳೂರಿನಲ್ಲಿ. ತಂದೆ ನಾಡಕರ್ಣಿ ಆನಂದರಾವ್‌, ತಾಯಿ ಕಾರ್ನಾಡ್‌ ಮನೆತನಕ್ಕೆ ಸೇರಿದ ಜಾಹ್ನವಿಬಾಯಿಯವರು. ನಾಡಕರ್ಣಿ ಮನೆತನದಲ್ಲಿ ಹುಟ್ಟಿದ್ದರೂ ತೋನ್ಸೆ ಮನೆತನಕ್ಕೆ ದತ್ತಕ ಹೋಗಿದ್ದರಿಂದ ತೋನ್ಸೆ ಮಂಗೇಶರಾಯರೆಂದೆ ಪ್ರಸಿದ್ಧರಾದರು. ತೋನ್ಸೆಯವರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ ನಡೆದುದು ಮಂಗಳೂರಿನಲ್ಲಿ. ಭೌತಶಾಸ್ತ್ರದಲ್ಲಿ ಚಿನ್ನದ ಪದಕದೊಡನೆ ಮದರಾಸು ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. ಪದವಿ ಹಾಗೂ ಎಲ್‌.ಟಿ. ಪದವಿಗಳು. ಉದ್ಯೋಗಕ್ಕಾಗಿ ಸೇರಿದ್ದು ಶಾಲಾ ಉಪತನಿಖಾಧಿಕಾರಿಯಾಗಿ ಉಡುಪಿ, ಕುಂದಾಪುರಗಳಲ್ಲಿ ಕಾರ್ಯನಿರ್ವಹಿಸಿದ ನಂತರ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಆರಂಭವಾದ ಸೆಕೆಂಡರಿ ತರಬೇತಿ ಶಾಲೆಯ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ಹೈಸ್ಕೂಲಿನಲ್ಲಿ ವಿಜ್ಞಾನ ಬೋಧನೆಯ ಜೊತೆಗೆ ಇಂಗ್ಲಿಷ್‌ ಬೋಧನೆಯ ಕೌಶಲವನ್ನೂ ಕಲಿಸುತ್ತಿದ್ದರು. ಬೆಂಗಳೂರು ಹಾಗೂ ಬಳ್ಳಾರಿಯ ಕೆಲಕಾಲ ಶಿಕ್ಷಣ ಇಲಾಖೆಯ ಡೆಪ್ಯೂಟಿ ಡೈರೆಕ್ಟರಾಗಿಯೂ ಕಾರ್ಯನಿರ್ವಹಿಸಿದರು. ಮಕ್ಕಳಿಗಾಗಿ ಪದ್ಯರಚನೆಯಲ್ಲಿ ಆಸಕ್ತರಾಗಿದ್ದ ತೋನ್ಸೆಯವರ ರಚನೆಗಳು ಪ್ರಾಥಮಿಕ, ಮಾಧ್ಯಮಿಕ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಯಾಗಿದ್ದಿತು. ‘ಅಡುಗೆ ಮಾಡುವುದು’ ಎಂಬ ಪದ್ಯದಲ್ಲಿ-

ಆಹಾ ವಿಚಿತ್ರವು ಮಹಾ ವಿಚೋದ್ಯವು ಆಹಾರ ತಿನ್ನುವುದಕೆ ನಾವು ಅನ್ನಗೈವುದು

ಎಂದು ಬರೆದ ಪದ್ಯದಲ್ಲಿ ಭತ್ತವನ್ನೂ ಕುಟ್ಟಿ, ಕೇರಿ, ಅಕ್ಕಿತೊಳೆದು, ಅನ್ನ-ಹುಳಿ ಮಾಡಿ ತಿನ್ನುವುದರ ಪೂರ್ಣ ವಿವರಣೆಯ ಪದ್ಯ ಇದಾಗಿದ್ದರೆ- ‘ಮನೆಗೆಲಸ’ಪದ್ಯದಲ್ಲಿ

ಬಾಲರೆದ್ದ ಮೇಲೆ ಏನು ಮಾಡಬೇಕೆಲೇ ಕಾಲು ಕೈಯ ಮುಖವ ಹೀಗೆ ತೊಳೆಯ ಬೇಕೆಲೇ

ಎಂಬ ಪದ್ಯದಲ್ಲಿ ಕಸಗುಡಿಸಿ ಮನೆಗೆಲಸಮಾಡಿ ಶಾಲೆಗೆ ಹೋಗಿ ಓದಿ, ಸಂಜೆ ಗುರುವಿಗೆ ನಮಿಸಿ ಬರುವವರೆವಿಗೂ ವಿವರಿಸುವ ಪದ್ಯ ಇದಾಗಿದೆ. ಇದಲ್ಲದೆ ತೋನ್ಸೆಯವರ ಬಹು ಮುಖ್ಯ ಕೊಡುಗೆ ಎಂದರೆ ವಿಜ್ಞಾನ ಪ್ರಪಂಚಕ್ಕೆ ಕೊಟ್ಟ ಮೂರು ಪುಸ್ತಕಗಳು ಪ್ರಕೃತಿಶಾಸ್ತ್ರ, ಪದಾರ್ಥ ವಿಜ್ಞಾನ ಶಾಸ್ತ್ರ ಮತ್ತು ರಸಾಯನ ಶಾಸ್ತ್ರ. ಪ್ರಕೃತಿ ಶಾಸ್ತ್ರ ಪುಸ್ತಕವು ನಮ್ಮ ಸುತ್ತಲಿನ ಸಸ್ಯ ಜಗತ್ತು, ಪ್ರಾಣಿ-ಪಕ್ಷಿ ಪ್ರಪಂಚದ ವೈಚಿತ್ರ್ಯವನ್ನು ಸಚಿತ್ರವಾಗಿ ಪರಿಚಯಿಸುವ ಕೃತಿ. ಈ ಪುಸ್ತಕವನ್ನೂ ೧೯೨೯ ರಲ್ಲಿ ಬಾಸೆಲ್‌ ಮಿಷನ್‌ ಪ್ರೆಸ್‌ನಿಂದ ಪ್ರಕಟಿಸಲಾಗಿದೆ. ಪದಾರ್ಥ ವಿಜ್ಞಾನ ಶಾಸ್ತ್ರ ಪುಸ್ತಕ ಸೆಕೆಂಡರಿ ತರಬೇತಿ ಶಾಲೆಯ ಆಸಕ್ತ ಅಧ್ಯಾಪಕರುಗಳಿಗೆ ವಿಜ್ಞಾನ ಬೋಧನೆಯ ಕ್ರಮವನ್ನು ತಿಳಿಸಲು ರಚಿಸಿದ ಕೃತಿ. ವಿಜ್ಞಾನ ಪುಸ್ತಕಗಳೇ ಇಲ್ಲದಿದ್ದ ಸಂದರ್ಭದಲ್ಲಿ ಮಕ್ಕಳಿಗೆ ಮನಮುಟ್ಟುವಂತೆ ರಚಿಸಿದ ಯಶಸ್ಸು ತೋನ್ಸೆಯವರದು. ಸಣ್ಣ ಕತೆಗಳ  ರಚನೆಯಲ್ಲಿಯೂ ನಿಷ್ಣಾತರಾಗಿದ್ದ ತೋನ್ಸೆಯವರ ‘ಟೊಪ್ಪಿ ಇಟ್ಟುಕೊಂಡ ಮಂಗಗಳು’ ಮುಂತಾದ ಮಕ್ಕಳ ಕಥೆಗಳು ಬಹು ಜನಪ್ರಿಯ ಕತೆಗಳಾಗಿವೆ. ಪುಸ್ತಕಗಳ ರಚನೆ, ಬೋಧನೆಯ ಜೊತೆಗೆ ಇವರ ಇನ್ನೊಂದು ಪ್ರಕಾರದ ಕೆಲಸವೆಂದರೆ ಪತ್ರಿಕೋದ್ಯಮ. ‘ಬೋಧಿನಿ’ ಎಂಬ ಪತ್ರಿಕೆಯನ್ನು ಎಂ .ಎನ್‌. ಕಾಮತರೊಡನೆ ಕೆಲಕಾಲ ನಡೆಸಿದರು. ನಿವೃತ್ತಿಯ ನಂತರ ಪುಣೆ ಸೇರಿದ ತೋನ್ಸೆಯವರು ಕೆಲಕಾಲ ಪುಣೆಯ ಅಗರ್‌ಕರ್ ಶಾಲೆಯಲ್ಲಿ ಗೌರವ ಅಧ್ಯಾಪಕರಾಗಿ, ಪ್ರಸಿದ್ಧ ನಾಟಕಕಾರ ಪಿ.ಕೆ. ಅತ್ರೆಯವರೊಡನೆ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದು, ಕ್ರಿಯಾಶೀಲ ಬದುಕಿನಿಂದ ದೂರವಾದದ್ದು ೧೯೪೦ ರ ಅಕ್ಟೋಬರ್ ೨೩ ರಂದು ಪುಣೆಯಲ್ಲಿ.

Details

Date:
September 11, 2023
Event Category: