Loading Events

« All Events

  • This event has passed.

ಪ್ರೇಮಾಭಟ್

September 22, 2023

೨೨..೧೯೪೧ ಪ್ರಸಿದ್ಧ ಕಾದಂಬರಿಕಾರ್ತಿ, ಕತೆಗಾರ್ತಿ ಪ್ರೇಮಾಭಟ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ, ಉಡುಪಿ ತಾಲ್ಲೂಕಿನ ಹೆರ್ಗ ಎಂಬಲ್ಲಿ ೧೯೪೧ ರ ಸೆಪ್ಟಂಬರ್ ೨೨ ರಂದು. ತಂದೆ ಜನಾರ್ದನ ಭಟ್‌, ತಾಯಿ ವನಜಾಕ್ಷಿ. ಬಹು ಬಡತನದ ಬದುಕು. ಬದುಕನ್ನರಸಿಕೊಂಡು ಬಂದುದು ಬೆಂಗಳೂರಿಗೆ. ಓದಿದ್ದು ಎಸ್‌.ಎಸ್‌.ಎಲ್‌.ಸಿ. ವರೆಗೆ. ತಾಯಿ ತಂದೆಯರಿಬ್ಬರು ದುಡಿದರೂ ಎರಡು ಹೊತ್ತಿನ ತುತ್ತಿನ ಚೀಲ ತುಂಬಿಸಿಕೊಳ್ಳುವಲ್ಲಿ ಪಡುತ್ತಿದ್ದ ಪರದಾಟ. ಹಿರಿಯ ಮಗಳಾದುದರಿಂದ ಸಂಸಾರದ ಭಾರ ಹೊರಲು ಶಿಕ್ಷಕಿಯಾಗಿ ಸೇರಿದ್ದು ದೂರದ ಗುಲಬರ್ಗದ ಮಾಧ್ಯಮಿಕ ಶಾಲೆಯೊಂದರಲ್ಲಿ ಕೆಲಕಾಲ. ನಂತರ ೧೯೬೨ ರಲ್ಲಿ ಸೇರಿದ್ದು ಕರ್ನಾಟಕ ಸರಕಾರದ ಸಚಿವಾಲಯದಲ್ಲಿ ಉದ್ಯೋಗಿಯಾದ ನಂತರ ಪಡೆದ ಎಂ.ಎ. ಪದವಿ. ವಿವಿಧ ಹುದ್ದೆಗಳನ್ನು ನಿರ್ವಹಿಸಿ ಶಾಖಾಧಿಕಾರಿಯಾದ ನಂತರ ಸ್ವ ಇಚ್ಛೆಯಿಂದ ಪಡೆದ ನಿವೃತ್ತಿ. ಹುಟ್ಟಿದೂರಿನ ಸುತ್ತಮುತ್ತಲ ಚೆಲುವು, ಹಸಿರು ತುಂಬಿದ ವನಸಿರಿ, ಇದಕ್ಕೆ ವ್ಯತಿರಿಕ್ತವಾಗಿ ಬೆವರು ಸುರಿಸುವ ಜೀತದಾಳುಗಳು, ಗುಲಾಮಗಿರಿಯಿಂದ ಕಂಗೆಡುತ್ತಿದ್ದ ತರುಣರು, ಶೋಷಣೆಗೊಳಪಡುತ್ತಿದ್ದ ಕೂಲಿಯಾಳುಗಳು ಮುಂತಾದವರುಗಳ ಬವಣೆಗಳನ್ನೂ ಕಂಡಿದ್ದ ಪ್ರೇಮಾಭಟ್‌ ರವರ ಕಥೆಗಳಿಗೆ ಇವೇ ಮೂಲ ದ್ರವ್ಯವಾಗಿ ಕಥಾರೂಪ, ಕಾದಂಬರಿ ರೂಪ ಪಡೆಯತೊಡಗಿದವು. ಅಜ್ಜಿ (ತಂದೆಯ ತಾಯಿ) ಸಂಜೆಯ ವೇಳೆ ಸುಶ್ರಾವ್ಯವಾಗಿ ಹಾಡುತ್ತಿದ್ದ ಹಾಡುಗಳು, ರಾಮಾಯಣ – ಮಹಾಭಾರತಾದಿಯಾಗಿ ಕಥೆಗಳು ಮತ್ತು ತಂದೆಯು ಕಷ್ಟದ ದಿನಗಳಲ್ಲಿಯೂ ಮನೆಗೆ ತರುತ್ತಿದ್ದ ದಿನಪತ್ರಿಕೆ, ವಾರಪತ್ರಿಕೆಗಳು ಮತ್ತು ನಾಲ್ಕಾಣೆ, ಎಂಟಾಣೆಯ ಕಥೆಪುಸ್ತಕಗಳು-ಇವುಗಳನ್ನೆಲ್ಲಾ ಓದುತ್ತಾ ಬಂದ ಪ್ರೇಮಾಭಟ್ ರವರ ಮನಸ್ಸಿನಲ್ಲಿಯೂ ಕಥೆಯ ಹಂದರದ ಹುತ್ತ ಕಟ್ಟ ತೊಡಗಿ ಬರೆದ ಮೊದಲ ಕಥೆ ‘ಗಾಜಿನ ಬಳೆ’ ಪ್ರಕಟವಾದುದು ಜನಪ್ರಗತಿ ಪತ್ರಿಕೆಯಲ್ಲಿ (೧೯೭೦). ಬಾಲವಿಧವೆಯಾಗಿ ತೌರಿಗೆ ಹಿಂದಿರುಗಿದ ಬಾಲೆಯರು ಹೂಬತ್ತಿ ಹೊಸೆಯುತ್ತಲೇ ಬದುಕನ್ನು ಕಳೆದುಬಿಡುತ್ತಿದ್ದ ವಿಧವೆಯರ ಬಗ್ಗೆ ಬರೆದ ಕಥೆಯೇ ಇದಾಗಿದ್ದು ಓದುಗರಲ್ಲಿ ಸಂಚಲನವನ್ನುಂಟುಮಾಡಿ, ಪರ-ವಿರೋಧದ ಪ್ರತಿಕ್ರಿಯೆಗೆ ಒಳಗಾಗಿತ್ತು. ಧೃತಿಗೆಡದ ಪ್ರೇಮಾಭಟ್‌ ರವರು ಮುಂದೆಯೂ ಸಹ ಹಲವಾರು ಕತೆಗಳನ್ನೂ ಬರೆಯತೊಡಗಿದರು. ವಿವಾಹನಂತರ ಪತಿ ಶ್ರೀನಿವಾಸಭಟ್ಟರಿಂದ ದೊರೆತ ಪ್ರೋತ್ಸಾಹದಿಂದ ಹಲವಾರು ಕತೆ, ಕಾದಂಬರಿಗಳು ಪ್ರಕಟವಾಗತೊಡಗಿದವು. ಪತಿಯೇ ಪ್ರಕಾಶಕರಾಗಿ ಇವರ ಕೃತಿಗಳನ್ನಲ್ಲದೆ ಇತರ ಲೇಖಕರ ಹಲವಾರು ಕೃತಿಗಳನ್ನೂ ಪ್ರಕಟಿಸಿದ್ದಾರೆ. ಇವರ ಪತಿ ಅಣ್ಣ ಎ.ಎಸ್‌. ರಾಮಕೃಷ್ಣ (ರಾಮಿ) ಹಾಗೂ ದೊಡ್ಡಪ್ಪನ ಮಗ ಕು.ಗೋ (ಎಚ್‌.ಗೋಪಾಲಭಟ್‌) ಹಾಸ್ಯಸಾಹಿತ್ಯದಲ್ಲಿ ಹೆಸರು ಮಾಡಿದವರು. ನಾಡಿನ ಪ್ರಸಿದ್ಧ ಪತ್ರಿಕೆಗಳಿಗೆಲ್ಲಾ ಬರೆದ ಕಥೆಗಳು ಸುಮಾರು ೧೨ ಕಥಾ ಸಂಕಲನಗಳಲ್ಲಿ ಸೇರ್ಪಡೆಯಾಗಿದ್ದು ೧೦೮ ಕಥೆಗಳ ‘ಅಕ್ಷತೆ’, ಪಂಚಾಮೃತ, ಪ್ರೇಮಾಭಟ್‌ ೧೦೮ ಕಥೆಗಳು ಮತ್ತು ೨೦೦೭ ರಲ್ಲಿ ೩೬೫ ಕಥೆಗಳ ಬೃಹತ್‌ ಕಥಾ ಸಂಕಲನ ‘ಕಥಾವರ್ಷ’ ಪ್ರಕಟಗೊಂಡಿದ್ದು ಬಹುಶಃ ಭಾರತೀಯ ಭಾಷೆಗಳಲ್ಲೇ ಇದೊಂದು ದಾಖಲೆಯ ಕಥಾಸಂಕಲನವಾಗಿದೆ. ಹಲವಾರು ಕಥೆಗಳು ಟಿವಿ ಧಾರಾವಾಹಿಯಾಗಿಯೂ, ಎರಡು ಕತೆಗಳು ಇಂಗ್ಲಿಷ್‌ ಭಾಷೆಗೂ ಭಾಷಾಂತರವಾಗಿದೆ. ಮಹರಾಷ್ಟ್ರ ಸರಕಾರದ ಪಠ್ಯ ಪುಸ್ತಕದಲ್ಲಿ, ಕನ್ನಡ ಭಾರತಿ ಸಂಕಲನದಲ್ಲಿ, ಬೆಂಗಳೂರು ವಿ.ವಿ.ದ ಪಠ್ಯದಲ್ಲೂ ಕೆಲ ಕಥೆಗಳು ಸೇರಿವೆ. ಸುಮಾರು ಐವತ್ತಕ್ಕೂ ಹೆಚ್ಚು ಕಾದಂಬರಿಗಳನ್ನೂ ರಚಿಸಿದ್ದು ಅವುಗಳಲ್ಲಿ ನಲವತ್ತಕ್ಕೂ ಹೆಚ್ಚು ಕಾದಂಬರಿಗಳು ಗೋಕುಲ, ಪ್ರಜಾಮತ, ಕರ್ಮವೀರ, ಸಂಯುಕ್ತ ಕರ್ನಾಟಕ,ಮಂಗಳ, ತರಂಗ, ಪ್ರಿಯಾಂಕ, ಸೌಂದರ್ಯ ಮುಂತಾದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿಯೇ ಪ್ರಕಟಗೊಂಡಿದ್ದು, ‘ಒಲಿದು ಬಂದವನು’ ಕಾದಂಬರಿಯು ‘ಆಡಿಬಾ ಅರಗಿಣಿಯೇ’ ಎಂಬ ಹೆಸರಿನಿಂದ ಮತ್ತು ‘ಸುಜಾತ’ ಕಾದಂಬರಿಯು ‘ಬೆಕ್ಕಿನ ಕಣ್ಣು’ ಹೆಸರಿನಿಂದ ಚಲನಚಿತ್ರವಾಗಿಯೂ ಜನಮನ ಸೆಳೆದಿವೆ. ನಂದಿನಿ ಕಾದಂಬರಿಯು ಇಂಗ್ಲಿಷ್‌ ಭಾಷೆಗೂ, ಆಯ್ದಕ್ಕಿ ಮಾರಯ್ಯ, ಕೊಟ್ಟೂರು ಬಸವೇಶ್ವರ, ಹೆಳವನ ಕಟ್ಟೆ ಗಿರಿಯಮ್ಮ ಕೃತಿಗಳು ಇತರ ಭಾಷೆಗಳಿಗೂ ಅನುವಾಗೊಂಡಿವೆ. ಕಥೆ, ಕಾದಂಬರಿಗಳಿಗೇ ಮೀಸಲಾಗದೆ ವಿಚಾರ ಚಿಂತನೆಯ ‘ಗೃಹಿಣಿ’, ವ್ಯಕ್ತಿಚಿತ್ರಣ, ಬದುಕು-ಬರೆಹಗಳ ಕೃತಿಗಳಾದ ಕಯ್ಯಾರ ಕಿಞ್ಙಣ್ಣರೈ, ಕೊಟ್ಟೂರು ಬಸವೇಶ್ವರ, ದೊಡ್ಡರಂಗೇಗೌಡ ಮೊದಲಾದ ೭ ವ್ಯಕ್ತಿ ಚಿತ್ರಗಳು; ಮನೆ, ಮದುಮಗಳು, ಹೆರ್ಗದ ದುರ್ಗಾಮಾತೆ, ಪೂರ್ಣಕುಂಭ ಮೊದಲಾದ ೮ ಕವನ ಸಂಕಲನಗಳು ಪ್ರಕಟವಾಗಿದೆ. ಬರಹಗಳ ಅನುಭವಕ್ಕಾಗಿ ದೇಶ ಸುತ್ತುವ ಹವ್ಯಾಸವಿದ್ದು ಪತಿಯೊಡನೆ ಭಾರತ, ನೇಪಾಳ, ಕಾಶ್ಮೀರ ಸುತ್ತಿದ್ದಲ್ಲದೆ ಲಂಡನ್‌ನಿಂದ ದುಬೈವರೆಗೆ ಸುತ್ತಿ ಬರೆದ ಪ್ರವಾಸಾನುಭವದ ಸಾಹಿತ್ಯ ಕೃತಿಗಳು ‘ಪೂರ್ವಾಂಚಲದಲ್ಲಿ ಕೆಲವು ದಿನಗಳು’ ಹಾಗೂ ‘ಲಂಡನ್‌ನಿಂದ ದುಬೈವರೆಗೆ…’ ದಿಬ್ಬಣ, ದಾಸಯ್ಯನ ಬಸ್ಸು, ಸುಬ್ಬತ್ತೆಯ ಪರಿವಾರ ಇವರ ಪ್ರಮುಖ ನಗೆಬರಹಗಳ ಸಂಕಲನಗಳು. ಕರ್ನಾಟಕ ಸರಕಾರದ ಚಲನಚಿತ್ರ ಆಯ್ಕೆ ಸಮಿತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಆಯ್ಕೆ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಮುಂತಾದವುಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಲವಾರು ಸಮ್ಮೇಳನಗಳಲ್ಲಿ ಉಪನ್ಯಾಸ, ಕವನವಾಚನ, ಪ್ರಬಂಧ ಮಂಡನೆ, ಸಾಹಿತ್ಯಗೋಷ್ಠಿಯ ಅಧ್ಯಕ್ಷತೆ ಮುಂತಾದವುಗಳ ಜವಾಬ್ದಾರಿ ಹೊತ್ತಿದ್ದಾರೆ. ಪತ್ರಿಕೆಗಳು ಏರ್ಪಡಿಸುವ ಕಥಾಸ್ಪರ್ಧೆಗಳಲ್ಲಿ ಹಲವಾರು ಬಾರಿ ಬಹುಮಾನಿತರಾಗಿರುವರಲ್ಲದೆ ‘ಮಿಣುಕು ಹುಳು’ ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ‘ಗೊಂದಲ’ ಕಾದಂಬರಿಗೆ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಕ.ಸಾ.ಪ;), ‘ಕಾಡುಕಡಿದು ಊರು ಮಾಡಿದರು’ ಕಾದಂಬರಿಗೆ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ ಪ್ರಶಸ್ತಿ, ‘ಗಾದಿ’ ಕಾದಂಬರಿಗೆ ರಾಮಕ್ಕ ಪದ್ಮಕ್ಕ ಟ್ರಸ್ಟ್‌ ಪ್ರಶಸ್ತಿ, ‘ಪ್ರೇಮಾಭಟ್‌ ೧೦೮ ಕಥೆಗಳು’ ಕಥಾ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ, ಭೂಮಿಕಾ ಕೃತಿಗೆ ಅಳಸಿಂಗ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರು. ಸ್ನೇಹಿತರು, ಅಭಿಮಾನಿಗಳು ೭೦ರ ಸಂಭ್ರಮದಲ್ಲಿ ಅರ್ಪಿಸಿದ ಅಭಿನಂದನ ಗ್ರಂಥ ‘ಸಂಸ್ಕೃತಿ’ (೨೦೧೧).

Details

Date:
September 22, 2023
Event Category: