Loading Events

« All Events

  • This event has passed.

ಪ್ರೊ. ಎಚ್. ಎಲ್. ಕೇಶವಮೂರ್ತಿ

December 28, 2023

೨೮.೧೨.೧೯೩೯ ವೈಚಾರಿಕ, ರಾಜಕೀಯ ವಿಡಂಬನೆಗಳಿಗೆ ಹೆಸರಾದ ಕೇಶವಮೂರ್ತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯಲ್ಲಿ ೧೯೩೯ರ ಡಿಸೆಂಬರ್ ೨೮ ರಂದು. ತಂದೆ ಎಚ್.ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ. ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸ ಬೆಳ್ಳೂರು, ನಾಗಮಂಗಲ, ಮೇಲುಕೋಟೆಯಲ್ಲಿ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿಎಸ್ಸಿ ಪದವಿ, ಹಾಸನದ ಮ್ನಾಡ್ ಎಂಜನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ತಿರುಪತಿಯ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಪಡೆದ ಎಂ.ಇ. ಪದವಿಗಳು. ಓದಿದ್ದು ಎಂಜನಿಯರಿಂಗ್ ಆದರೂ ಹವ್ಯಾಸವಾಗಿ ರೂಢಿಸಿಕೊಂಡದ್ದು ವಿಡಂಬನೆ, ಹಾಸ್ಯ, ವ್ಯಂಗ್ಯ, ಅಣಕು. ನಾಡಿನ ಪ್ರಸಿದ್ಧ ಪತ್ರಿಕೆಗಳ ಮೂಲಕ ಯಾರ ಮನಸ್ಸಿಗೂ ನೋವಾಗದಂತೆ ಹಾಸ್ಯದ ಸವಿಯುಣಿಸಿದರು. ಇವರು ಬರೆದ ಹಾಸ್ಯ ಬರೆಹಗಳೆಲ್ಲಾ ಹಲವಾರು ಸಂಕಲನಗಳಾಗಿ ಹೊರಬಂದಿವೆ. ನಿನ್ಯಾಕೋ ನಿನ್ನ ಹಂಗ್ಯಾಕೋ ಮಾವ?, ಎಂಗಾರ ಟಿಕೆಟ್ ಕೊಡಿ, ಹರಕುತುಟಿ ಮಹಾತ್ಮೆ, ಇಸ್ಪೀಟ್ ನ್ಯಾಯ, (ಅ) ನೀತಿಕಥೆಗಳು, ಹನುಮ ನಿನ್ನ ನಾಮ ಒಂದೇ, ಥೂ ! ಹಲ್ಕಾ!! ಮುಂತಾದ ನಗೆ ಬರೆಹ ಸಂಕಲನಗಳು; ಗೌರವಾನ್ವಿತ ದಗಾಕೋರರು, ಗಾಂಧಿ ಅವತ್ತು ಹುಟ್ಟಬಾರದಿತ್ತು! ದೇವರುಗಳ ಟೈಮೇ ಸರಿಯಿಲ್ಲ, ಪಾತಕಿಯೇ ಪರಮಾತ್ಮ ಮುಂತಾದ ವೈಚಾರಿಕ ವಿಡಂಬನೆಗಳ ಜೊತೆಗೆ ೨೦೧೧ ರಲ್ಲಿ ಆಯ್ದ ಬರಹಗಳ ಸಂಕಲನ ‘ಟೆಸ್ಟ್ ಆಫ್.ಎಚ್.ಎಲ್. ಕೇಶವಮೂರ್ತಿ’ ಮತ್ತು ‘ಪುಗಸಟ್ಟೆ ಪಾರಾಯಣ’ ಕೃತಿಗಳು ಬಿಡುಗಡೆಗೊಂಡಿವೆ. ಬರೆದುದಷ್ಟೇ ಅಲ್ಲದೆ ಸಂಪಾದಿಸಿದ ಕೃತಿಗಳು- ‘ಕನ್ನಡದಲ್ಲಿ ವಿನೋದ ಸಾಹಿತ್ಯ’ (ಕಾಲು ಶತಮಾನದ ವಿನೋದ ಸಾಹಿತ್ಯ – ಪ್ರೊ.ಅ.ರಾ. ಮಿತ್ರ ಮತ್ತು ಪ್ರೊ. ಕೆ.ನ.ಶಿವತೀರ್ಥನ್‌ರೊಡನೆ), ‘ಹಾಸ್ಯಕಸ್ತೂರಿ’ (ನಾ. ಕಸ್ತೂರಿಯವರ ಬರೆಹಗಳು – ಪ್ರೊ. ಕೆ.ಬಿ. ಪ್ರಸಾದರೊಡನೆ) ಹಾಗೂ ಕರ್ನಾಟಕ ಸಾಹಿತ್ಯ ಅಕಾಡಮಿಗಾಗಿ ‘ವಿನೋದ ಸಾಹಿತ್ಯ – ೧೯೯೬’. ವೈವಾವೋಸಿ (ನಾಟಕ), ಹಿತ್ತಲಗಿಡವೇ ಮದ್ದು, ಯಾರದು ತಪ್ಪು?, ಕರಿನಾಯಿ ಸತ್ತಾಗ ಮುಂತಾದ ೧೨ ಕೃತಿಗಳು – ನವಸಾಕ್ಷಕರಿಗಾಗಿ ರಚಿತವಾದವುಗಳು. ಹವ್ಯಾಸಿ ವರದಿಗಾರರಾಗಿ, ಅಂಕಣಕಾರರಾಗಿಯೂ ಕೇಶವಮೂರ್ತಿಯವರು ಹಲವಾರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ, ರಾಜ್ಯ ಸಂಪನ್ಮೂಲ ಕೇಂದ್ರ ಸಲಹಾ ಮಂಡಳಿ, ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಿತಿ, ಮೈಸೂರು ವಿವಿ.ದ ಸೆನೆಟ್ ಮುಂತಾದವುಗಳ ಸದಸ್ಯರಾಗಿ, ನವ ಸಾಕ್ಷರರ ಪಠ್ಯ ಪುಸ್ತಕ ಆಯ್ಕೆ ಸಮಿತಿ, ರಾಜ್ಯ ವಯಸ್ಕರ ಶಿಕ್ಷಣ ಸಮಿತಿ ನೌಕರರ ಸಂಘ, ನಾಗಮಂಗಲ ತಾಲ್ಲೂಕು ಪ್ರಥಮ ಸಾಹಿತ್ಯ ಸಮ್ಮೇಳನ, ಕೋಮು ಸೌಹಾರ್ದ ವೇದಿಕೆ ಮಂಡ್ಯ ಮುಂತಾದವುಗಳ ಅಧ್ಯಕ್ಷರಾಗಿಯೂ ಗೌರವ ಪಡೆದಿದ್ದಾರೆ. ಹಲವಾರು ಗೌರವ ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕರ್ನಾಟಕ ಮಾಧ್ಯಮ ಅಕಾಡಮಿ ಪ್ರಶಸ್ತಿ- ೨ ಬಾರಿ (೧೯೭೨-೨೦೦೭) ಮತ್ತು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರು. ಪತ್ರಿಕೆಗಳ ಮೂಲಕ ಕರ್ನಾಟಕದ ಜನತೆಗೆ ಈಗಲೂ ಹಾಸ್ಯದ ಸವಿ ಉಣಬಡಿಸುತ್ತಿದ್ದಾರೆ.

Details

Date:
December 28, 2023
Event Category: