Loading Events

« All Events

  • This event has passed.

ಬಸವರಾಜ ಕಟ್ಟೀಮನಿ

October 5, 2023

೫-೧೦-೧೯೧೯ ೨೩-೧೦-೧೯೮೯ ರಕ್ತದಲ್ಲಿ ಅದ್ದಿ ಬರೆಯುವ ‘ಕತ್ತಿಮನಿ’ಯವರು ಎಂದೇ ಪ್ರಸಿದ್ಧರಾಗಿದ್ದ ಬಸವರಾಜ ಕಟ್ಟೀಮನಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಾಲಮರಡಿಯಲ್ಲಿ. ತಂದೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದ ಅಪ್ಪಯ್ಯ, ತಾಯಿ ಬಾಳವ್ವ. ಕಿತ್ತು ತಿನ್ನುವ ಬಡತನ. ಮನವಳ್ಳಿ, ಚಿಕ್ಕೋಡಿ, ಬೆಳಗಾಂವಿ, ನಿಪ್ಪಾಣಿಯಲ್ಲಿ ಓಡಾಡಿ ಕಲಿತದ್ದು ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ. ವಿಪರೀತ ಕಥೆ ಹುಚ್ಚು . ತಾಯಿ ಮಗನ ಸಾಹಿತ್ಯದ ಹುಚ್ಚಿಗೆ ಎರೆದ ನೀರು. ರಾಮಾಯಣ, ಮಹಾಭಾರತ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮುಂತಾದವರ ಕಥೆಗಳನ್ನು ಬೆಳಗಿನತನಕವೂ ತಾಯಿಯ ಬಾಯಿಂದ ಕೇಳಿ ಕಲಿತದ್ದು. ಹೊಟ್ಟೆ-ಬಟ್ಟೆ ಕಟ್ಟಿ ಗ್ರಂಥಾಲಯದಿಂದ ನಾಲ್ಕಾಣೆ ತೆತ್ತು ತಂದು ಪುಸ್ತಕದ ಓದು. ‘ಏನ್ ಕಥೀ ಹುಚ್ಚು ಸುಮ್ಮನ ಮಲಕೋರ್ರೀ…’ ಇದು ತಂದೆಯವರ ಪ್ರತಿರಾತ್ರಿ ಬೈಗಳ. ಬಂಕಿಮಚಂದ್ರ, ಶರತ್ಚಂದ್ರರ ಕಾದಂಬರಿಗಳನ್ನು ತಾಯಿ ಓದಿಸಿ ಕೇಳುತ್ತಿದ್ದಳು. ತಾಯಿಗೆ ಅದೆಂತಾದ್ದೋ ಆತ್ಮವಿಶ್ವಾಸ. ಮಗ ಕಥೆ ಬರೆದೇ ಬರೆಯುತ್ತಾನೆಂಬ ನಂಬಿಕೆ. ಸಂಯುಕ್ತ ಕರ್ನಾಟಕದಲ್ಲಿ ಪತ್ರಿಕಾವೃತ್ತಿ ಆರಂಭ. ಅನ್ಯಾಯದ ವಿರುದ್ಧ, ಶೋಷಣೆಯ ವಿರುದ್ಧ, ಝಳುಪಿಸಿದ ಲೇಖನಿ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿ. ಸೆರೆವಾಸ. ಮೊದಲ ಕಾದಂಬರಿ ‘ಮಾಡಿ ಮಡಿದರು’, ನಂತರ ಸ್ವಾತಂತ್ರ್ಯದೆಡೆಗೆ. ಕಾರ್ಮಿಕರ ಶೋಷಣೆಯ ಬಗ್ಗೆ ಬರೆದದ್ದು ಜ್ವಾಲಾಮುಖಿಯ ಮೇಲೆ. ಮೋಹದ ಬಲೆಯಲ್ಲಿ, ಜರತಾರಿ ಜಗದ್ಗುರು-ಸಾಕಷ್ಟು ವಿವಾದ ಸೃಷ್ಟಿಸಿತು. ಬಲೆಯ ಬೀಸಿದರು, ಖಾನಾವಳಿ ನೀಲಾ, ಬೀದಿಯಲ್ಲಿ ಬಿದ್ದವಳು, ಮಣ್ಣು ಮತ್ತು ಹೆಣ್ಣು, ನೀ ನನ್ನ ಮುಟ್ಟಬೇಡ, ಆಶ್ರಮವಾಸಿ, ಜನಿವಾರ ಮತ್ತು ಶಿವದಾರ, ಗಿರಿಯ ನವಿಲು ಮುಂತಾದ ೩೩ ಕಾದಂಬರಿಗಳು. ಕಥಾಸಂಕಲನ-ಕಾರವಾನ್, ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ-ಪಟ್ಟಣದ ಹುಡುಗಿ. ಕವಿತೆ-ಕಂಪೊಜಿಟರ್, ಸ್ವತಂತ್ರವ್ವ. ಪ್ರವಾಸಕಥನ-ನಾ ಕಂಡ ರಶಿಯಾ. ಮಕ್ಕಳ ಸಾಹಿತ್ಯ-ಕುಮಾರರಾಮ, ಸಂಗೊಳ್ಳಿ ರಾಯಣ್ಣ. ಆತ್ಮಕಥೆ-ಕಾದಂಬರಿಕಾರನ ಬದುಕು. ಹಲವಾರು ಗೌರವ ಪ್ರಶಸ್ತಿಗಳು. ಜ್ವಾಲಾಮುಖಿಯ ಮೇಲೆ ಕಾದಂಬರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಬೆಳಗಾವಿಯ ೫೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೮೦). ೧೯೬೮ರಲ್ಲಿ ವಿಧಾನಸಭೆಯ ಸದಸ್ಯತ್ವ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಲ್. ಬಸವರಾಜು – ೧೯೧೯ ಎಚ್.ಆರ್. ಭಸ್ಮೆ – ೧೯೩೦ ಎನ್.ಎಸ್. ಸೋಮಪ್ಪ – ೧೯೩೫ ಭಾರತೀ ಪಾಟೀಲ – ೧೯೫೭

Details

Date:
October 5, 2023
Event Category: