Loading Events

« All Events

  • This event has passed.

ಬೇಕಲ ರಾಮನಾಯಕ

October 26, 2023

೨೬.೧೦.೧೯೦೨ ೨೧.೧೧.೧೯೬೯ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದು, ತಮಗೆ ದೊರೆತ ಸೀಮಿತ ಅವಕಾಶಗಳ ಜೊತೆಗೆ ತಮ್ಮ ಪರಿಶ್ರಮವನ್ನು ಧಾರೆಯೆರೆದು ಕೋಟೆ ಕೊತ್ತಲಗಳ ಬಗೆಗೆ ಸಂಶೋಧನಾತ್ಮಕ ಬರಹಗಳನ್ನು ಬರೆದುದಲ್ಲದೆ ಹಲವಾರು ಕೃತಿ ರಚಿಸಿದ ಬೇಕಲ ರಾಮನಾಯಕರು ಹುಟ್ಟಿದ್ದು ೧೯೦೨ ರ ಅಕ್ಟೋಬರ್ ೨೬ ರಂದು ಕಾಸರಗೋಡಿನ ಚಾರಿತ್ರಿಕ ಸ್ಥಳವಾದ ಬೇಕಲದಲ್ಲಿ ತಂದೆ ಸಿದ್ದಯ್ಯ, ತಾಯಿ ಮಂಜಮ್ಮ. ಪ್ರಾರಂಭಿಕ ಶಿಕ್ಷಣ ಮಂಗಳೂರಿನ ಗಣಪತಿ ಹೈಸ್ಕೂಲಿನಲ್ಲಿ. ಎಸ್‌.ಎಸ್‌.ಎಲ್‌.ಸಿ. ತೇರ್ಗಡೆಯಾದ ನಂತರ ಐದು ವರ್ಷಗಳ ಕಾಲ ಕೈಗೊಂಡ ಕೋಟೆಕೊತ್ತಲಗಳು, ವೀರಗಲ್ಲು, ಮಾಸ್ತಿಕಲ್ಲು, ಶಾಸನಗಳ ಅಧ್ಯಯನ. ರಾಮಕ್ಷತ್ರಿಯ ಪಂಗಡಕ್ಕೆ ಸೇರಿದ ನಾಯಕರ ವಂಶಸ್ಥರು ಯುದ್ಧಗಳಲ್ಲಿ, ಕೋಟೆಕೊತ್ತಲಗಳ ರಕ್ಷಣೆಯಲ್ಲಿ ನಿರತರಾದ ಜನಾಂಗವಾಗಿದ್ದು ಇವರು ಬೆಳೆದ ಪರಿಸರ ಕೋಟೆಕೊತ್ತಲಗಳ ನಾಡಾಗಿದ್ದುದು ನಾಯಕರಿಗೆ ಸಹಜವಾಗಿಯೇ ಕೋಟೆಕೊತ್ತಲಗಳ ಬಗ್ಗೆ ಆಸ್ಥೆ ಬೆಳೆದು ಬಂದಿದ್ದರಿಂದಲೇ ವಿಶೇಷಾಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. ಇಂಟರ್ ಮೀಡಿಯೆಟ್‌ಗೆ ಸೇರಿದರಾದರೂ ಕಾರಣಾಂತರದಿಂದ ವ್ಯಾಸಂಗವನ್ನು ಮುಂದುವರೆಸಲಾಗದೆ, ಸೇರಿದ್ದು ಸೆಕೆಂಡರಿ ಟೀಚರ್ಸ್ ಟ್ರೈನಿಂಗ್‌ಗೆ. ಕೆಲಕಾಲ ಹಂಗಾಮಿ ಅಧ್ಯಾಪಕರಾಗಿ, ಗ್ರಂಥಪಾಲಕರಾಗಿ ಕಾರ್ಕಳ, ಮಂಗಳೂರು, ಕುಂಬಳೆ ಮುಂತಾದೆಡೆಗಳಲ್ಲಿ ದುಡಿದ ನಂತರ ಸೇರಿದ್ದು ಕಾಸರಗೋಡಿನ ಬಿ.ಇ.ಎಂ ಹೈಸ್ಕೂಲಿನಲ್ಲಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾಗಿ. ಅಧ್ಯಯನ, ಅಧ್ಯಾಪನಗಳೆರಡರಲ್ಲೂ ತೊಡಗಿಸಿಕೊಂಡಿದ್ದ ನಾಯಕರು ಮದರಾಸು ವಿಶ್ವವಿದ್ಯಾಲಯದಿಂದ ಪಡೆದ ವಿದ್ವಾನ್‌ ಪದವಿ. ಹೈಸ್ಕೂಲಿನಲ್ಲಿದ್ದಾಗಲೇ ಎಲ್ಲ ವಿಷಯಗಳನ್ನು ತೀಕ್ಷವಾಗಿ ಗಮನಿಸುವ ಸ್ವಭಾವದವರಾಗಿದ್ದ ನಾಯಕರು, ಅಧ್ಯಾಪಕರಾಗಿದ್ದ ಐರೋಡಿ ಶಿವರಾಮಯ್ಯ (೧೮೭೮-೧೯೪೧) ರವರಿಂದ ಸಾಹಿತ್ಯದ ಪ್ರೇರಣೆ ಪಡೆದು ಹಲವಾರು ಕೃತಿಗಳನ್ನು ರಚಿಸಿದರು. ಕಾಸರಗೋಡಿಗೆ ಸಂಬಂಧಿಸಿದ ಐತಿಹ್ಯಗಳನ್ನೂ ಸಂಗ್ರಹಿಸಿ ಕೋಟೆಯ ಕತೆಗಳು, ಬಾಳಿದ ಹೆಸರು ಮತ್ತು ಇತರ ಐತಿಹ್ಯಗಳು, ಪುಳ್ಕೂರು ಬಾಚ, ಕೆಚ್ಚಿನ ಕಿಡಿಗಳು, ನಾಡಕತೆಗಳು ಮತ್ತು ತೆಂಕನಾಡ ಐತಿಹ್ಯಗಳು ಎಂಬ ಆರು ಕಥಾ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಐತಿಹ್ಯಗಳನ್ನು ಸಂಗ್ರಹಿಸಿ ಕಥೆ ಬರೆದಂತೆ ಹಲವಾರು ನಾಟಕಗಳ ರಚನೆಗಳಲ್ಲಿಯೂ ತೊಡಗಿಸಿಕೊಂಡಿದ್ದು ತೌಳವ ಸ್ವಾತಂತ್ರ್ಯ, ಕೇತುಭಂಗ (ಧ್ವಜ ವಂದನೆ) ಸೌಭಾಗ್ಯರತ್ನ, ಸತ್ಯಪರೀಕ್ಷೆ, ರತ್ನಹಾರ, ಉತ್ಕಲ ಕುಮಾರಿ, ವೀರ ವಸುಂಧರೆ, ಪ್ರೇಮಲತೆ ಎಂಬ ಎಂಟು ನಾಟಕಗಳನ್ನೂ ರಚಿಸಿದ್ದಾರೆ. ಸಾಮಾಜಿಕ ವಸ್ತುವಾಗುಳ್ಳ ಪ್ರೇಮಲತೆ ಹಾಗೂ ಜಾನಪದ ಗೀತನಾಟಕವಾದ ಸತ್ಯಪರೀಕ್ಷೆಯನ್ನು ಬಿಟ್ಟರೆ ಉಳಿದೆಲ್ಲ ನಾಟಕಗಳೂ ಚಾರಿತ್ರಿಕ ವಸ್ತುಗಳಿಂದ ಕೂಡಿವೆ. ಮತೀಯ ಸಾಮರಸ್ಯ, ದೇಶಪ್ರೇಮ, ನಾಡ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಗೀತೆಗಳಿಂದ ಕೂಡಿದ ನಾಟಕಗಳನ್ನು ಶಾಲಾಮಕ್ಕಳು ಅಭಿನಯಿಸುವ ಸಲುವಾಗಿಯೇ ರಚಿಸಿದ್ದಾರೆ. ದೀರ್ಘಕಾಲ ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದ ನಾಯಕರಿಗೆ ಸಹಜವಾಗಿ ಮಕ್ಕಳು ಆಕರ್ಷಿತರಾಗುವುದು ಲಯಬದ್ಧ, ಪ್ರಾಸಬದ್ಧ ಹಾಡುಗಳಿಗೆಂದು ಅರಿತಿದ್ದು ರಚಿಸಿದ ಹಲವಾರು ಕವನಗಳು ‘ಸಚಿತ್ರಬಾಲಗೀತೆ’ ಎಂಬ ಸಂಕಲನದಲ್ಲಿ ಸೇರಿದೆ. ಸೀರೆಯ ನಿರಿಗೆಯನಾಡಿಪ ಗೊಂಬೆ ಹೀರೆಯ ಹೂವಿನ ರವಿಕೆಯ ಗೊಂಬೆ ವಾರೆಯ ಬೈತಲೆಯಾ ಕಣ್ಗೊಂಬೆ ಕುಣಿಯುವೆ ನಾನು ಕುಣಿಯುವೆನು ಎಂದು ‘ಗೊಂಬೆ’ ಎಂಬ ಪದ್ಯದಲ್ಲಿ ಬರೆದು ಮಕ್ಕಳಿಗೆ ಮುದ ನೀಡಿದ್ದಾರೆ. ಇವಲ್ಲದೆ ರಾಮಕ್ಷತ್ರಿಯ ಜನಾಂಗದ ಇತಿವೃತ್ತ, ಇಕ್ಕೇರಿನಾಯಕರ ಆಳಿಕೆ, ಬೇಕಲಕೋಟೆ ಮುಂತಾದವುಗಳನ್ನು ಕುರಿತು ಸಂಶೋಧನಾತ್ಮಕ ಲೇಖನಗಳನ್ನೂ ಬರೆದಿದ್ದಾರೆ . ಹಲವಾರು ಜಾನಪದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದ ಹಾಡುಗಳೆಂದರೆ ಸುಬ್ಬಪ್ಪನ ಹಾಡು, ತುಂಬೆಹಾಡು, ಗಿಂಡಿಪೂಜೆ, ಕೌಲಿಹಾಡು ಮೊದಲಾದವು. ಇವರ ಮತ್ತೊಂದು ಅಪೂರ್ವ ಕೃತಿ ಎಂದರೆ ‘ವಾಸಿಷ್ಠರಾಮಾಯಣ’ ಎಂಬ ಸಾಂಗತ್ಯ ಕಾವ್ಯವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಹೀಗೆ ಸೀಮಿತ ಅವಕಾಶಗಳನ್ನುಪಯೋಗಿಸಿಕೊಂಡು ಸತತ ಅಭ್ಯಾಸ, ಸಂಶೋಧನೆಯಲ್ಲಿದ್ದ ರಾಮನಾಯಕರು ಕಣ್ಮರೆಯಾದುದು ೧೯೬೯ ರ ನವಂಬರ್ ೨೧ ರಂದು.

Details

Date:
October 26, 2023
Event Category: