Loading Events

« All Events

  • This event has passed.

ಭಾಲಚಂದ್ರ ಘಾಣೀಕರ್

November 3, 2023

.೧೧.೧೯೧೦ .೧೦.೨೦೦೪ ಸ್ವಾತಂತ್ರ್ಯ ಹೋರಾಟಗಾರ, ಲೇಖಕ, ಪ್ರಕಾಶಕ ಭಾಲಚಂದ್ರಘಾಣೀಕರ್‌ರವರು ಹುಟ್ಟಿದ್ದು ಮಿಶ್ರಿಕೋಟೆ ಧಾರವಾಡ ಜಿಲ್ಲೆಯ ಕಲಘಟಕಿ ತಾಲ್ಲೂಕಿನ ಮಿಶ್ರೀ ಕೋಟೆಯಲ್ಲಿ ನವಂಬರ್ ೩ರ ೧೯೧೦ ರಲ್ಲಿ. ತಂದೆ ವೆಂಕಟರಾಯರು, ತಾಯಿ ಲಕ್ಷ್ಮೀಬಾಯಿ. ದೀಪಾವಳಿಯ ಪ್ರತಿಪದೆಯಂದು ಹುಟ್ಟಿದ್ದರಿಂದ ಭಾಲಚಂದ್ರನೆಂದು ನಾಮಕರಣ. ೧೯೨೧ ರಲ್ಲಿ ಹುಬ್ಬಳ್ಳಿಗೆ ಗಾಂಧೀಜಿಯವರ ಭೇಟಿ. ರಾಷ್ಟ್ರೀಯ ಭಾವನೆಗಳನ್ನು ಬಡಿದೆಬ್ಬಿಸುತ್ತಿದ್ದ ಕಾಲ. ಇದರಿಂದ ಪ್ರಭಾವಿತರಾದ ವೆಂಕಟರಾಯರು ರಾಷ್ಟ್ರೀಯ ಶಾಲೆಯನ್ನು ತೆರೆದರು. ಅಲ್ಲೇ ಭಾಲಚಂದ್ರ ಮತ್ತು ಇವರ ತಮ್ಮನ ವಿದ್ಯಾಭ್ಯಾಸ ಪ್ರಾರಂಭ. ಸರಕಾರದಿಂದ ನೆರವು ದೊರೆಯದೆ ಶಾಲೆ ನಿಂತು ಹೋಯಿತು. ನಂತರ ಭಾಲಚಂದ್ರರು ಸೇರಿದ್ದು ಹುಬ್ಬಳ್ಳಿಯ ರಾಷ್ಟ್ರೀಯ ಶಾಲೆಗೆ. ಅಲ್ಲಿ ಕಲಿತದ್ದು ಬಡಗಿತನ. ಕಾಲಿಗೆ ಉಳಿ ಏಟು ತಗುಲಿ ಶಾಲೆಗೆ ಶರಣು. ಮತ್ತೆ ಶಾಲೆಗೆ ಸೇರಿದ್ದು ಧಾರವಾಡದ ರಾಷ್ಟ್ರೀಯ ಶಾಲೆ. ಅಲ್ಲಿ ಹೊಸಕೆರೆ ಚಿದಂಬರಯ್ಯನವರು ಪಾರಮಾರ್ಥಕ ವಿಷಯ ಬೋಧಿಸಿದರೆ, ಸಹ ಪ್ರಬುದ್ಧೆಯವರು ಬೋಧಿಸುತ್ತಿದ್ದುದು ಸಂಸ್ಕೃತಿ. ಇವರ ಜೊತೆ ಪಾಠ ಕಲಿಸಲು ಬರುತ್ತಿದ್ದ ಇತರ ಉಪಾಧ್ಯಾಯರುಗಳೆಂದರೆ ದ.ರಾ. ಬೇಂದ್ರ, ಸಾಲಿ ರಾಮಚಂದ್ರರಾವ್, ಶ್ರೀಧರ ಖಾನೋಳಕರ್, ಬೆಟಗೇರಿ ಕೃಷ್ಣ ಶರ್ಮ, ನಾರಾಯಣಶರ್ಮ, ಶಂಬಾ ಜೋಶಿ ಮುಂತಾದವರು ಪಠ್ಯ ವಿಷಯಗಳನ್ನು ಬೋಧಿಸಿದರೆ ಆರ್.ಆರ್. ದಿವಾಕರ್‌, ಆಲೂರ ವೆಂಕಟರಾವ್, ಮುದವೀಡು ಕೃಷ್ಣರಾವ್ ಮುಂತಾದವರು ರಾಷ್ಟ್ರಪ್ರೇಮ, ರಾಷ್ಟ್ರ ಭಕ್ತಿ ಕುರಿತು ಭಾಷಣಗಳನ್ನು ಮಾಡಿ ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗುವಂತೆ ಸ್ಫೂರ್ತಿ ತುಂಬುತ್ತಿದ್ದರು. ಆಗೆಲ್ಲ ಕೈಬರಹದ ಪತ್ರಿಕೆಗಳ ಕಾಲ. ಮೇವುಂಡಿ ಮಲ್ಲಾರಿಯವರು ಪ್ರೌಢರಿಗಾಗಿ ‘ಕರ್ನಾಟಕ ದೇವಿ’ ಎಂಬ ಪತ್ರಿಕೆಯನ್ನು ಹೊರತಂದಾಗ ಇವರು ಕಿರಿಯರಿಗಾಗಿ ತಂದ ಪತ್ರಿಕೆ ‘ಭಾರತ ಮಾತೆ’. ಇಂಗ್ಲಿಷ್ ಕಲಿಯಲು ಧಾರವಾಡ ವಿಕ್ಟೋರಿಯಾ ಹೈಸ್ಕೂಲು ಪ್ರವೇಶ. ಐದನೆಯ ಇಯತ್ತೆಯಿಂದ ಇಂಗ್ಲಿಷ್ ಕಲಿಕೆ ಆರಂಭ. ಅರ್ಥವಾಗದ ಭಾಷೆಯಾದ ಎರಡು ವಿಷಯಗಳಲ್ಲಿ ನಾಪಾಸು. ಆದರೆ ಡ್ರಾಯಿಂಗ್ ತರಗತಿಯಲ್ಲಿ ತೋರಿದ ಆಸಕ್ತಿ. ಶಾಲೆ ಬಿಟ್ಟನಂತರ ಬೋರ್ಡ್ ಬರೆಯುವ ಕೆಲಸ, ಪತ್ರಿಕೆ ಹಂಚುವ ಕೆಲಸ ಜೊತೆಗೆ ದೇಸಿ ವಸ್ತುಗಳಾದ ಮಸಾಲೆ ಪುಡಿ, ದಂತಚೂರ್ಣ ಮಾರಾಟ, ಬೇಕರಿ ತೆರೆದು ಹೋಟೇಲುಗಳಿಗೆ ಬೀಸ್ಕೀಟು ಮಾರಾಟ ಮುಂತಾದವುಗಳಿಂದ ಜೀವನ ನಿರ್ವಹಣೆ. ೧೯೩೦ ರಲ್ಲಿ ನಾಡಿನಾದ್ಯಂತ ಹಬ್ಬಿದ ಸತ್ಯಾಗ್ರಹದ ರಣಭೇರಿ. ಸ್ವಯಂ ಸೇವಕನಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಸೇರ್ಪಡೆ. ಮನೆ ಮನೆಗೆ ಗಾಂಧೀಜಿಯ ಸಂದೇಶಗನ್ನು ಮುಟ್ಟಿಸುವ, ಡಂಗುರ ಸಾರುವ, ಸಭೆ-ಧ್ವಜ ವಂದನೆಗಳ ಸಿದ್ಧತೆ, ಮುಂತಾದುವುಗಳಲ್ಲಿ ಬಾಲಕ ತೋರುತ್ತಿದ್ದ ಉತ್ಸಾಹ ಕಂಡು ಕಾಂಗ್ರೆಸ್ ಕಮಿಟಿಯವರು ಅಂಕೋಲದಲ್ಲಿ ನಡೆಯುತ್ತಿದ್ದ ರೈತ ಚಳವಳಿಯಲ್ಲಿ ಭಾಗಿಯಾಗಲು ಒಪ್ಪಿಸಿದ್ದು, ಹಳ್ಳಿಗರಂತೆಯೇ ವೇಷ ಧರಿಸಿ ಪೊಲೀಸರಿಗೆ ಸುಳಿವು ಸಿಗದಂತೆ ವಹಿಸುತ್ತಿದ್ದ ಎಚ್ಚರ. ಇದೇ ಸಂದರ್ಭದಲ್ಲಿ ಹಲವಾರು ಸಾಹಿತಿಗಳ ಪರಿಚಯ. ಸಾಹಿತ್ಯದ ಹುಚ್ಚು ಹಿಡಿದು ಬರೆದದ್ದು ‘ಗಾಂಧಿ ಹುಚ್ಚು’ ಎಂಬ ಕಥೆ. ಅಂಕೋಲೆಯ ರೈತರ ಚಳವಳಿಯಲ್ಲಿ ರೈತರಿಗೆ ಪರಿಹಾರ ಸಿಕ್ಕ ನಂತರ ಬಾಲ ಚಂದ್ರರು ಧಾರವಾಡಕ್ಕೆ ವಾಪಸ್ಸಾದರು. ’ಸಮಾಜೋನ್ನತಿ ಪುಸ್ತಕ ಮಾಲೆ’ ಅಡಿಯಲ್ಲಿ ಒಂದಾಣೆ ಪುಸ್ತಕ ಪ್ರಕಟಣೆ. ‘ಗಾಂಧಿ ಹುಚ್ಚು’ ಕಥೆಯ ಎಂಟು ನೂರು ಪ್ರತಿ ಮಾರಾಟ ಮಾಡಿದ ದಾಖಲೆ. ಕರನಿರಾಕರಣೆಯ ಚಳವಳಿಯನ್ನಾಧರಿಸಿ ರಚಿಸಿದ ನಾಟಕ ‘ರೈತರ ಭಾಗ್ಯೋದಯ’ ಮತ್ತು ‘ನಾನೇ ಹೊಲೆಯ’ ಎಂಬ ಕಥೆಯ ಪ್ರಕಟಣೆ. ನೂರಾರು ಪ್ರತಿಗಳ ಮಾರಾಟ. ‘ರೈತರ ಭಾಗ್ಯೋದಯ’ ರಾಜದ್ರೋಹದ ಪುಸ್ತಕವೆಂದು ವಿಧಿಸಿದ ನಿಷೇದ. ಮುಂದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ನಿಷೇದಾಜ್ಞೆ ತೆರವು. ಚಳವಳಿಯ ಅಂಗವಾಗಿ ನಾನಾ ಕಥೆ ಧ್ವಜಾರೋಹಣ, ಕರಪತ್ರಗಳ ಹಂಚುವಿಕೆ, ಸಭೆ ನಡೆಸುವಂತಹ ನಿರಂತರ ದೇಶಭಕ್ತಿ ಕೆಲಸಗಳು. ಪೊಲೀಸರು ಹಿಂದೆ ಬಿದ್ದಾಗ ಕರಪತ್ರದ ಮುದ್ರಣ ಯಂತ್ರ, ಧ್ವಜಗಳನ್ನು ಅಡಗಿಸಿಡುವುದರಲ್ಲಿ ತೋರುತ್ತಿದ್ದ ಚಾಕಚಕ್ಯತೆ. ಅಂಕೋಲೆ ತಾಲ್ಲೂಕು ಕಚೇರಿಯ ಮುಂದೆ ನಿಷೇದಾಜ್ಞೆ ಇದ್ದರೂ ಸಭೆ ಕೂಡಿಸಿ ಭಾಷಣ ಮಾಡಿದ್ದಕ್ಕೆ ಪೊಲೀಸರಿಂದ ಬಂಧನ, ಶಿಕ್ಷೆ. ಹೀಗೆ ಹಲವಾರು ಬಾರಿ ಬಂಧನಕ್ಕೊಳಗಾಗಿ ಅನುಭವಿಸಿದ ಕಾರಾಗೃಹವಾಸ, ಬಿಡುಗಡೆ. ಎಡೆಬಿಡದ ಸಾಹಿತ್ಯ ಸೇವೆ. ತರುಣ ಕರ್ನಾಟಕ ಪತ್ರಿಕೆಯವರು ಏರ್ಪಡಿಸಿದ್ದ ಹರಿಜನೋದ್ಧಾರದ ಬಗ್ಗೆ ‘ಅಸ್ಪೃಶ್ಯದೇವ’ ಎಂಬ ನಾಟಕ ರಚಿಸಿ ಗಳಿಸಿದ ಬಹುಮಾನ. ಇದರಿಂದ ಪ್ರೇರಿತರಾಗಿ ಸಮಾಜೋನ್ನತಿ ಪುಷ್ಪಮಾಲೆಯಿಂದ ಹದಿನಾಲ್ಕು ಪುಸ್ತಕಗಳ ಪ್ರಕಟಣೆ. ’ರಾಜಹಂಸ’ ಮತ್ತು ‘ಸದಾನಂದ’ ಎಂಬ ಪತ್ರಿಕೆಗಳಲ್ಲಿ ಕೆಲಕಾಲ ಉಪಸಂಪಾದಕರ ಹುದ್ದೆ. ನಂತರ ತಾವೇ ಪ್ರಾರಂಭಿಸಿದ ಪತ್ರಿಕೆ ‘ಸಮಾಜ’ (೧೯೩೫) ಎಂಬ ಮಾಸಿಕ ಪತ್ರಿಕೆ. ಜೊತೆಗೆ ‘ಅಭ್ಯುದಯ’ ಎಂಬ ವಾರಪತ್ರಿಕೆಯೂ ಪ್ರಾರಂಭ. ಹಲವಾರು ವರ್ಷ ತಂದೆ ತಾಯಿಯರಿಂದ ದೂರವಿದ್ದುದರಿಂದ, ಧಾರವಾಡಕ್ಕೆ ಅವರನ್ನು ಕರೆಸಿಕೊಂಡು ನೆಲೆನಿಂತ ಬದುಕು. ಮದುವೆಯಾದ ನಂತರ ಸಂತಸದ ದಿನಗಳು. ಪತ್ರಿಕೆಯ ಕೆಲಸದಿಂದ ಸಾಗಿದ ಜೀವನ. ಕೆಲಕಾಲ ಬೆಂಗಳೂರಿನಲ್ಲೂ ನಡೆಸಿದ ಪತ್ರಿಕೋದ್ಯಮದ ಕೆಲಸಗಳು. ಸ್ವತಂತ್ರ ಮುದ್ರಣ ಯಂತ್ರದ ಅನುಕೂಲದಿಂದ ಪತ್ರಿಕೆಯ ಮುದ್ರಣದ ಜೊತೆಗೆ ಮುದ್ರಣ ಕಾಗದ ವ್ಯಾಪಾರ. ಮುದ್ರಣ ಕಾಗದದ ಮಾರಾಟದ ವ್ಯವಸ್ಥೆಗಾಗಿ ಸ್ಥಾಪಿಸಿದ್ದು ‘ಸಮಾಜ ಪೇಪರ್ ಮಾರ್ಟ್’. ನಂತರದಲ್ಲಿ ಇದು ‘ಸಮಾಜ ಪುಸ್ತಕಾಲಯ’ ಎಂಬ ಹೆಸರು ಪಡೆಯಿತು. ಸಮಾಜ ಪುಸ್ತಕಾಲಯದಿಂದ ಪ್ರತಿಭಾ ಎಂಬ ಮಾಸಪತ್ರಿಕೆಯ ಆರಂಭ. ಧಾರವಾಡದ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ಸಲ್ಲಿಸಿದ ಸಮಾಜ ಸೇವೆ. ಪ್ರತಿಭಾ ಪ್ರಕಾಶನದಡಿಯಲ್ಲಿ ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ, ಮೇವುಂಡಿ ಮಲ್ಲಾರಿ, ಗುರುನಾಥ ಜೋಶಿ, ಬಸವರಾಜ ಕಟ್ಟೀಮನಿ, ಎಸ್ಕಿ, ಬೀಚಿ, ಮಿರ್ಜಿ ಅಣ್ಣಾರಾಯ, ಕೃಷ್ಣಮೂರ್ತಿ ಪುರಾಣಿಕ, ನವಗಿರಿನಮದ, ಅ.ನ.ಕೃ., ವೆಂ.ಮು., ದೇಸಾಯಿ ದತ್ತಮೂರ್ತಿ, ಶ್ರೀಕೃಷ್ಣ ಕುಲಕರ್ಣಿ, ಸ.ಪ. ಗಾಂವಕರ ಮುಂತಾದವರ ಪುಸ್ತಕಗಳನ್ನು ಹೊರ ತಂದಾಗ ದೇವುಡು ರವರ ‘ಘಾಟಿ ಮುದುಕ’ ಪುಸ್ತಕದಿಂದಲೇ ಗ್ರಂಥಮಾಲೆ ಆರಂಭವಾದುದು. ೧೯೮೫ ರಲ್ಲಿ ಸಮಾಜ ಪುಸ್ತಕಾಲಯವು ಆಚರಿಸಿಕೊಂಡ ಸುವರ್ಣ ಮಹೋತ್ಸವ ಸಂಭ್ರಮ. ಇತರ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿ ಬೆಳಕಿಗೆ ತಂದಂತೆ ತಾವೇ ಬರೆದು ಪ್ರಕಟಿಸಿದ ಕೃತಿಗಳು ಹಲವಾರು. ನಾನೇ ಹೊಲೆಯ, ಸನಾತನೀಸೂಳೆ, ಬಂಗಾರದ ಹೊಗೆ, ಕಲಿತ ಹೆಂಡತಿ ಮುಂತಾದ ೧೨ ಕಥೆಗಳು; ಗಾಂಧಿ ಟೋಪಿ, ಬಡವರ ರೊಟ್ಟಿ, ರೈತರ ಭಾಗ್ಯೋದಯ, ಮುಂತಾದ ಏಕಾಂಕ ನಾಟಕಗಳು; ಶ್ಯಾಮನ ತಾಯಿ, ಪ್ರತಿಬಿಂಬ ಮೊದಲಾದ ಅನುವಾದಗಳು; ಗುಡಿಗುಡಿಯ ರಹಸ್ಯ, ಲೋಕಮಾನ್ಯ ಟಿಳಕ, ಸ್ವಾಮಿ ರಾಮತೀರ್ಥ, ಲಾಲಾಲಜಪತರಾಯ್ ಮೊದಲಾದ ಮಕ್ಕಳ ಸಾಹಿತ್ಯ ಕೃತಿಗಳು; ಗಾಂಧಿ ದರ್ಶನ ಎಂಬ ಸಾಕ್ಷ್ಯಚಿತ್ರ ಮತ್ತು ಇತರ ಲೇಖಕರೊಡನೆ ರಚಿಸಿದ ಆಜಾದ್ ಹಿಂದ್ ಮತ್ತು ಬಿರುಗಾಳಿ ಎಂಬ ಕೃತಿಗಳು ಸೇರಿ ೨೪ ಕೃತಿಗಳ ರಚನೆ. ಹೀಗೆ ೧೯೩೫ ರಲ್ಲಿ ಪ್ರಾರಂಭಿಸಿದ ಸಮಾಜ ಪುಸ್ತಕಾಲಯ ಸಂಸ್ಥೆಯು ಇಂದು ಕೂಡಾ ಪ್ರಕಟಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ೨೦೧೦ ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿತು. ಇದು ಕನ್ನಡ ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ದಾಖಲೆಯೂ ಹೌದು. ಮಕ್ಕಳಿಬ್ಬರಾದ ಮನೋಹರ ಘಾಣೀಕರ್ ಮತ್ತು ರವೀಂದ್ರ ಘಾಣೀಕರ್ ರವರ ನೇತೃತ್ವದಲ್ಲಿ ಪ್ರಕಾಶನ ಸಂಸ್ಥೆಯು ಮುನ್ನಡೆಯುತ್ತಿದ್ದು ಸುಮಾರು ೫೦ ಕ್ಕೂ ಹೆಚ್ಚು ಪ್ರಕಾರಗಳಲ್ಲಿ ೧೪೫೦ ಪುಸ್ತಕಗಳನ್ನು ಪ್ರಕಟಿಸಿ ದಾಖಲೆಯನ್ನು ನಿರ್ಮಿಸಿದ್ದಾರೆ. ಕನ್ನಡ ಪ್ರಕಟಣಾ ಪ್ರಪಂಚಕ್ಕೊಂದು ಭದ್ರ ಬುನಾದಿ ಹಾಕಿದ ಸ್ವಾತಂತ್ರ್ಯ ಹೋರಾಟಗಾರ, ಸಾಹಿತ್ಯ ಪರಿಚಾರಕ, ಪ್ರಕಟಣೆ – ಮಾರಾಟಗಾರರೆನಿಸಿದ್ದ ಭಾಲಚಂದ್ರ ಘಾಣೀಕರ್ ರವರು ೮.೧೦.೨೦೦೪ ರಲ್ಲಿ ನಿಧನರಾದರು.

Details

Date:
November 3, 2023
Event Category: