Loading Events

« All Events

ಮುದವೀಡು ಕೃಷ್ಣರಾಯರು

July 24

೨೪-೭-೧೮೭೪ ೭-೯-೧೯೪೭ ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಲ್ಲಿ ಪ್ರಮುಖರಾದ ರಂಗಭೂಮಿಯ ನಟ, ಪತ್ರಿಕೋದ್ಯಮಿ, ಲೇಖಕರಾಗಿದ್ದ ಕೃಷ್ಣರಾಯರು ಹುಟ್ಟಿದ್ದು ಬಾಗಲಕೋಟೆಯಲ್ಲಿ. ಮುದವೀಡು ಆಂಧ್ರಪ್ರದೇಶಕ್ಕೆ ಸೇರಿದ ಗ್ರಾಮದಿಂದ ಇವರ ಹಿರಿಯರು ಬಂದಿದ್ದರಿಂದ ಮುದವೀಡು ವಂಶಕ್ಕೆ ಬಂದ ಹೆಸರು. ತಂದೆ ಹನುಮಂತರಾವ್, ತಾಯಿ ಗಂಗಾಬಾಯಿ. ಚಿಕ್ಕಂದಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡದ್ದರಿಂದ ಬೆಳೆದದ್ದು ಚಿಕ್ಕಮ್ಮನ ಆಶ್ರಯದಲ್ಲಿ. ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಮೆಟ್ರಿಕ್‌ವರೆಗೆ ಓದಿದ್ದು ಧಾರವಾಡಲ್ಲಿ. ಭಾರತದ ಸ್ವಾತಂತ್ರ್ಯ ಆಂದೋಲನದಿಂದ ಪ್ರಭಾವಿತರಾಗಿ ವ್ಯಾಸಂಗವನ್ನು ಮುಂದುವರೆಸಲಾಗದೆ ಚಳವಳಿಯಲ್ಲಿ ಭಾಗಿ. ಲೋಕಮಾನ್ಯ ಟಿಳಕರ ಅನುಯಾಯಿಯಾಗಿ ಗಣೇಶೋತ್ಸವದ ಕಾರ‍್ಯಕರ್ತ. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿ ಸಕ್ರಿಯ ಕಾರ‍್ಯಕರ್ತರಾಗಿ ದುಡಿದರು. ಪಾನನಿರೋಧ ಚವಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ೨ ವರ್ಷ ಶಿಕ್ಷೆ. ಭಾಷಣ, ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿದ್ದಕ್ಕೆ ಮತ್ತೆರಡು ವರ್ಷ ಸ್ಥಾನಬದ್ಧತೆ. ಉತ್ತಮ ವಾಗ್ಮಿಯಾಗಿದ್ದ ಕೃಷ್ಣರಾಯರದು ಸಿಂಹ ಗರ್ಜನೆ. ತತ್‌ಕ್ಷಣದ ಅನುವಾದಕ್ಕೆ ಎತ್ತಿದ ಕೈ. ನೆಹರು, ರಾಜಾಜಿ, ಪಟ್ಟಾಭಿ ಸೀತಾರಾಮಯ್ಯ ಮುಂತಾದ ರಾಷ್ಟ್ರ ನಾಯಕರು ಕರ್ನಾಟಕಕ್ಕೆ ಬಂದಾಗ, ಭಾಷಣಗಳ ಅನುವಾದಕ್ಕಾಗಿ ಕೃಷ್ಣರಾಯರನ್ನು ಕರೆದೊಯ್ಯುತ್ತಿದ್ದರು. ಹುಬ್ಬಳ್ಳಿಯ ಸಭೆಯಲ್ಲಿ ರಾಜಾಜಿಯವರು. ಮೆನ್, ಮನಿ ಅಂಡ್ ಮ್ಯೂಸಿಷನ್ ಎಂದು ಹೇಳಿದಾಗ, ಮನುಷ್ಯ, ಮಾಲಕ್ಷ್ಮಿ, ಮಮ್ಮು-ಮದ್ದು ಎಂದು ಅನುವಾದಿಸಿ ರಾಜಾಜಿಯವರಿಂದ ಸೈ ಎನಿಸಿಕೊಂಡರು. ಕನ್ನಡ ಆಂದೋಲನವನ್ನು ಎಳೆವಯಸ್ಸಿನಲ್ಲೇ ಪ್ರಾರಂಭಿಸಿದರು. ಮರಾಠಿ ಪ್ರಾಬಲ್ಯವಿದ್ದ ಕರ್ನಾಟಕದಲ್ಲಿ ತಮ್ಮ ಬರಹ, ಭಾಷಣಗಳ ಮೂಲಕ ಮೂಡಿಸಿದ ಜಾಗೃತಿ. ತರುಣರಿಗೆ ತುಂಬಿದ ಚೈತನ್ಯ. ಏಕೀಕರಣಕ್ಕಾಗಿ ದುಡಿಮೆ. ಪತ್ರಿಕೋದ್ಯಮ ಆಸಕ್ತ ಕ್ಷೇತ್ರ. ಕರ್ನಾಟಕ ವೃತ್ತ, ಧನಂಜಯ ಪತ್ರಿಕೆಯನ್ನು ಕಾಲು ಶತಮಾನ ನಡೆಸಿದ ದಾಖಲೆ. ಸ್ವಾತಂತ್ರ್ಯ, ಏಕೀಕರಣದ ಪ್ರತಿಪಾದನೆಯ ಗಡುಸಾದ ಗದ್ಯ ಶೈಲಿ. ಬರೆದ ಅಗ್ರ ಲೇಖನಗಳು. ಕರ್ನಾಟಕದ ‘ಗಂಡುಗಲಿ’ ಬಿರುದು. ರಂಗಭೂಮಿಯಲ್ಲೂ ಆಸಕ್ತಿ. ೧೯೦೭ರಲ್ಲಿ ‘ಭಾರತ ಕಲೋತ್ತೇಜಕ ನಾಟಕ ಮಂಡಲಿ’ ಸ್ಥಾಪನೆ-‘ಪ್ರೇಮಭಂಗ’ ಬರೆದು ಆಡಿಸಿದ ನಾಟಕ. ನಾಟ್ಯ ವಿಲಾಸಿಯಾಗಿ ಅನೇಕ ನಾಟಕಗಳಲ್ಲಿ. ಚಿರಂಜೀವಿ ಎಂಬ ವಾಕ್ಚಿತ್ರದಲ್ಲಿ, ಚಿತ್ರಗುಪ್ತ ಭೂಮಿಕೆಯಲ್ಲಿ ಪಾತ್ರಧಾರಿ. ಒಳ್ಳೆಯ ಕಾದಂಬರಿಕಾರರಾಗಿದ್ದ ಕೃಷ್ಣರಾಯರು ರಚಿಸಿದ್ದು ಚಿತ್ತೂರು ಮುತ್ತಿಗೆ ಎಂಬ ಕಾದಂಬರಿ. ಅನುವಾದಿತ ನಾಟಕ-ವಿಕ್ರಮ ಶಶಿಕಲಾ, ಸುಭದ್ರಾ, ರಾಮರಾಜವಿಯೋಗ ಮುಂತಾದುವು. ಪ್ರೇಮಭಂಗ ಸ್ವತಂತ್ರ ನಾಟಕ. ಹಲವಾರು ಕವನಗಳ ರಚನೆ. ೧೯೩೯ರಲ್ಲಿ ಬೆಳಗಾವಿಯಲ್ಲಿ ನಡೆದ ೨೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕನ್ನಡನಾಡು ಗೌರವಿಸಿತು.   ಇದೇ ದಿನ ಹುಟ್ಟಿದ ಸಾಹಿತಿ : ಗಣೇಶ್ ಕೊಡಗು – ೧೯೫೨

Details

Date:
July 24
Event Category: