Loading Events

« All Events

  • This event has passed.

ರೊದ್ದ ಶ್ರೀನಿವಾಸರಾಯರು

September 17, 2023

೧೭-೯-೧೮೫೦ ೪-೮-೧೯೨೯ ಸಾಹಿತಿ, ಶಿಕ್ಷಣ ತಜ್ಞ, ಮುಂಬಯಿ ಕರ್ನಾಟಕ ಏಳಿಗೆಗಾಗಿ ದುಡಿದ ಶ್ರೀನಿವಾಸರಾಯರು ಹುಟ್ಟಿದ್ದು ಧಾರವಾಡದ ಮದಿಹಾಳದಲ್ಲಿ. ಅಂದಿನ ಮದರಾಸು ಪ್ರಾಂತ್ಯದ ಅನಂತಪುರ ಜಿಲ್ಲೆಯ ಪೆನುಗೊಂಡ ತಾಲ್ಲೂಕಿನ ರೊದ್ದ ಗ್ರಾಮದಿಂದ ಬಂದವರು ಇವರ ಪೂರ್ವಜರು. ತಂದೆ ಕೋನೆರರಾಯ, ತಾಯಿ ಸುಬ್ಬಮ್ಮ. ಪ್ರಾರಂಭಿಕ ಶಿಕ್ಷಣ ಮದಿಹಾಳದ ಗಾಂವಠಿ ಶಾಲೆ. ಕಲಿತದ್ದು ಮರಾಠಿ ಹಾಗೂ ಕನ್ನಡ. ಪ್ರೌಢ ಶಿಕ್ಷಣ ಬಾಸೆಲ್ ಮಿಷನ್ ಹೈಸ್ಕೂಲು. ಬಾಲಕನಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ಹೊತ್ತ ಸಂಸಾರದ ಭಾರ. ಹುಬ್ಬಳ್ಳಿಯ ಆಂಗ್ಲ ವರ್ನಾಕ್ಯುಲರ್ ಶಾಲೆಯಲ್ಲಿ ಶಿಕ್ಷಕರ ಹುದ್ದೆ. ವಿದ್ಯಾಭ್ಯಾಸದ ಆಸೆಯಿಂದ ಬೆಳಗಾವಿಯ ತರಬೇತಿ ಕಾಲೇಜು ಸೇರಿ ಉತ್ತೀರ್ಣ. ಪುಣೆಯಲ್ಲಿ ಮಾಡಿದ ಮ್ಯಾಟ್ರಿಕ್. ಡೆಕ್ಕನ್ ಕಾಲೇಜಿಗೆ ಸೇರಿದರೂ ಪದವಿ ಗಳಿಸದೆ ಅಪೂರ್ಣ. ಉದ್ಯೋಗಕ್ಕೆ ಸೇರಿದ್ದು ಕಲಘಟಕಿಯ ಮಾಮಲೆದಾರರ ಕಚೇರಿಯಲ್ಲಿ. ಮತ್ತೆ ಶಿಕ್ಷಣ ಕ್ಷೇತ್ರಕ್ಕೆ. ಧಾರವಾಡ, ಸವಣೂರುಗಳಲ್ಲಿ ಶಿಕ್ಷಕರ ವೃತ್ತಿ. ಧಾರವಾಡ ಜಿಲ್ಲೆಯ ಉಪವಿದ್ಯಾಕಾರಿಯಾಗಿ ನೇಮಕ. ಶಿಕ್ಷಕರ ಕಾಲೇಜಿನ ಪ್ರಾಚಾರ‍್ಯರಾಗಿ ನಿವೃತ್ತಿ. ಧಾರವಾಡದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರಲ್ಲಿ ಪ್ರಮುಖ ಪಾತ್ರ. ೧೮೭೭ರಿಂದ ಧಾರವಾಡದಲ್ಲಿ ಕಾಲೇಜು ಪ್ರಾರಂಭಿಸಲು ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತದ್ದು ೧೯೧೭ರಲ್ಲಿ. ಕರ್ನಾಟಕ ಕಾಲೇಜು ಪ್ರಾರಂಭ. ೧೯೧೯ರಲ್ಲಿ ತೆರೆದದ್ದು ಎಜುಕೇಷನ್ ಬೋರ್ಡ್ ಶಿಕ್ಷಣ ಸಂಸ್ಥೆ. ಸಾಮಾಜಿಕ, ಶೈಕ್ಷಣಿಕ ಕಾರ‍್ಯಗಳಲ್ಲೇ ಕಳೆದ ಕಾಲ. ಬರೆದದ್ದು ಕಡಿಮೆ. ಬರೆಯುವವರಿಗೆ ಪಿತೃ ದೇವರು. ನಂದಿನಿ ಮತ್ತು ಸ್ತ್ರೀ ಶಿಕ್ಷಣ, ಎರಡು ಪ್ರಮುಖ ಕೃತಿಗಳು. ನಂದಿನಿ ಬುದ್ಧನ ಚರಿತ್ರೆಯ ಗ್ರಂಥವಾದರೆ ‘ಸ್ತ್ರೀ ಶಿಕ್ಷಣ’ ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಪ್ರಾಮುಖ್ಯತೆಯ ಬಗ್ಗೆ ಬರೆದ ವಿಚಾರಪೂರ್ಣ ಗ್ರಂಥ. ಶಾಸನ ಸಭಾ ಸದಸ್ಯರಾಗಿ, ಧಾರವಾಡ ಪುರಸಭ ಸದಸ್ಯರಾಗಿಯೂ ಹೊತ್ತ ಜವಾಬ್ದಾರಿಗಳು. ಶ್ರೀನಿವಾಸರಾಯರ ಕಾರ್ಯ ವೈಖರಿಯನ್ನು ಮೆಚ್ಚಿ, ಅಂದಿನ ಸರಕಾರ ನೀಡಿದ್ದು ರಾವ ಬಹದ್ದೂರ್, ದಿವಾನ್ ಬಹದ್ದೂರ್ ಬಿರುದುಗಳು. ೧೯೨೪ರಲ್ಲಿ ಸರಕಾರ ನೀಡಿದ್ದು ಸಿ.ಪಿ.ಇ. ಪ್ರಶಸ್ತಿ, ಇದನ್ನು ಪಡೆದ ಮೊದಲ ಕನ್ನಡಿಗರೆಂಬ ಹೆಮ್ಮೆ. ೧೯೨೦ರಲ್ಲಿ ನಡೆದ ಆರನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕನ್ನಡ ಜನತೆ ತೋರಿದ ಗೌರವ. ನಿಧನರಾದದ್ದು ಆಗಸ್ಟ್ ೪ರ ೧೯೨೯ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಗುರುಸ್ವಾಮಿ ಕಲಗೇರಿ – ೧೯೩೯ ರಾಘವೇಂದ್ರ ದಂಡಿನ – ೧೯೭೦

Details

Date:
September 17, 2023
Event Category: