Loading Events

« All Events

  • This event has passed.

ವಿಶಾಲಾಕ್ಷಿ ದಕ್ಷಿಣಾಮೂರ್ತಿ

November 18, 2023

೧೮.೧೧.೧೯೩೫ ಸಾಹಿತ್ಯ, ಸಂಸ್ಕೃತಿ, ಆದರ್ಶಗಳಿಗೆ ಹೆಸರಾದ ಮನೆತನದಲ್ಲಿ ವಿಶಾಲಾಕ್ಷಿಯವರು ಹುಟ್ಟಿದ್ದು ೧೯೩೫ರ ನವಂಬರ್ ೧೮ ರಂದು ಚಳ್ಳಕೆರೆಯಲ್ಲಿ. ತಂದೆ ತಳುಕಿನ ಶ್ರೀನಿವಾಸರಾಯರು, ತಾಯಿ ನಂಜಮ್ಮ. ಓದಿದ್ದು ಎಸ್.ಎಸ್.ಎಲ್‌.ಸಿ. ವರೆಗೆ. ವಿದ್ಯಾಭ್ಯಾಸವೆಲ್ಲ ಚಳ್ಳಕೆರೆಯಲ್ಲಿ. ಹುಟ್ಟಿದ್ದು ಸಾಹಿತಿಗಳ ವಂಶದಲ್ಲಾದ್ದರಿಂದ ಹೈಸ್ಕೂಲಿನಲ್ಲಿದ್ದಾಗಲೇ ಸಾಹಿತ್ಯದ ಕಡೆ ಬೆಳೆದ ಒಲವು. ಇವರ ವಂಶದವರಾದ ಟಿ.ಎಸ್. ವೆಂಕಣ್ಣಯ್ಯ, ತ.ಸು.ಶಾಮರಾಯರು ಬೀರಿದ ಸಾಹಿತ್ಯದ ಪ್ರಭಾವ. ಜೊತೆಗೆ ಬಾಲ್ಯದಲ್ಲಿ ಪ್ರಭಾವ ಬೀರಿದವರೆಂದರೆ ಬೆಳೆಗೆರೆ ಜಾನಕಮ್ಮ, ಬೆಳಗೆರೆ ಪಾರ್ವತಮ್ಮ, ಬೆಳಗೆರೆ ಸೀತಾರಾಮಶಾಸ್ತ್ರಿಗಳು ಮತ್ತು ಬೆಳಗೆರೆ ಕೃಷ್ಣಶಾಸ್ತ್ರಿಗಳು. ೧೨ನೆಯ ವಯಸ್ಸಿಗೇ ಮದುವೆಯಾದದ್ದು ಸಾಹಿತಿಗಳಾಗಿದ್ದ ಬಿ.ವಿ. ದಕ್ಷಿಣಾ ಮೂರ್ತಿಗಳನ್ನು. ಇವರು ನ್ಯಾಷನಲ್ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಯರಾಗಿ ಪ್ರಖ್ಯಾತ ಪಡೆದವರು. ಸುತ್ತಲಿನ ಸಮಾಜ, ವಂಶದ ಪ್ರಭಾವ ಪತಿಯ ಪ್ರೇರಣೆ ಎಲ್ಲವೂ ಸೇರಿ, ತಾವು ಹಳ್ಳಿಯಲ್ಲಿ ಕಂಡುಂಡ ಬದುಕಿನ ನೈಜ ಚಿತ್ರಣವನ್ನು ಅಕ್ಷರ ರೂಪಕ್ಕಿಳಿಸಿ ಬರೆದ ಮೊದಲ ಕಾದಂಬರಿ ‘ವಸುಮತಿ’ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿತಿ. ಓದುಗರಿಂದ ದೊರೆತ ಅಮೋಘ ಪ್ರಶಂಸೆ, ಮುಂದಿನ ಕಾದಂಬರಿಗಳ ರಚನೆಗೆ ನೀಡಿದ ಪ್ರೇರಣೆ. ’ಕಲ್ಲು ಬೊಂಬೆ ಕರಗಿತು’ ಕಾದಂಬರಿಯು ಸುಧಾ ವಾರ ಪತ್ರಿಕೆಯಲ್ಲು, ‘ವ್ಯಾಪ್ತಿ-ಪ್ರಾಪ್ತಿ’ ಕಾದಂಬರಿಯು ಕನ್ನಡ ಪ್ರಭ ಪತ್ರಿಕೆಯಲ್ಲೂ, ‘ಶ್ರೀವನಿತೆಯರಸನ’ ಕಾದಂಬರಿಯು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲು, ‘ಭ್ರಮೆಯ ಬದುಕಿನ ಸುತ್ತ’ ರಾಗ ಸಂಗಮ ಮಾಸ ಪತ್ರಿಕೆಯಲ್ಲು, ‘ವಿಮುಕ್ತಿ’ ಕಾದಂಬರಿಯು ಸುಧಾ ವಾರ ಪತ್ರಿಕೆಯಲ್ಲು, ‘ಆರಾಧಕ’ ಕಾದಂಬರಿಯು ತರಂಗ ವಾರಪತ್ರಿಕೆಯಲ್ಲು, ‘ಗೌರವಾನ್ವಿತ’ ಕಾದಂಬರಿಯು ವನಿತಾ ವಾರಪತ್ರಿಕೆಯಲ್ಲಿ, ‘ಅಂತರಂಗದ ಕರೆ’ ತರಂಗ ವಾರಪತ್ರಿಕೆಯಲ್ಲು, ‘ಸುಳಿಗೆ ಸಿಕ್ಕವರು’ ಪ್ರಜಾಮತ ವಾರಪತ್ರಿಕೆಯಲ್ಲು. ‘ಮನೆಯ ಮಗ’ ಕಾದಂಬರಿಯು ಸುಧಾ ವಾರಪತ್ರಿಕೆಯಲ್ಲು ಧಾರಾವಾಹಿಯಾಗಿ ಪ್ರಕಟಗೊಂಡವು. ಇವಲ್ಲದೆ ಪತಂಗಗಳು, ಹೆಣ್ಣೆಂಬ ಬೊಂಬೆ, ಬೆಳಗು ಬೆಳಗೆಲೆ ಚಂದ್ರ, ಪಶ್ಚಾತ್ತಾಪ, ಒಲಿದು ಒಂದಾದವರು, ಸೆಳೆತಗಳು, ದೊಡ್ಡ ಮನಸ್ಸಿನವನು, ದುಂಬಿ ಹಂಬಲ, ಋಣಫಲ, ವಿರಾಗಿಣಿ ಮುಂತಾದ ೬೦ ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟಿತ. ’ವ್ಯಾಪ್ತಿ-ಪ್ರಾಪ್ತಿ’ ಕಾದಂಬರಿಯು ‘ಜೀವನ ಚೈತ್ರ’ ಎಂಬ ಹೆಸರಿನಿಂದ ಡಾ. ರಾಜಕುಮಾರ್‌ರವರ ಅಭಿನಯದಲ್ಲಿ ೯೦ರ ದಶಕದ ಮೆಗಾ ಹಿಟ್ ಚಲನಚಿತ್ರವಾಗಿ ರಾಜ್ಯಾದ್ಯಂತ ೩ ವರ್ಷಗಳ ಕಾಲ ಪ್ರದರ್ಶನಗೊಂಡ ಅಗ್ಗಳಿಕೆಗೆ ಪಾತ್ರವಾಯಿತು. ಈ ಚಿತ್ರಕ್ಕೆ ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿ, ಹಾಡು, ಕಥೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ ಚಿತ್ರವೆನಿಸಿತು. ’ವ್ಯಾಪ್ತಿ-ಪ್ರಾಪ್ತಿ’ ಕಾದಂಬರಿಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ‘ಗೌರವಾನ್ವಿತ’ ಕಾದಂಬರಿಗೆ ವನಿತಾ ಮಾಸ ಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕಾದಂಬರಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ‘ಆರ್ಯಭಟ’ ಪ್ರಶಸ್ತಿ; ಡಾ.ಬಿ. ಸರೋಜ ದೇವಿಯರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಮಗಳು ಭುವನೇಶ್ವರಿಯವರ ಹೆಸರಿನಲ್ಲಿ ಸ್ಥಾಪಿಸಿರುವ ಬಿ. ಸರೋಜದೇವಿಯವರ ಪ್ರಶಸ್ತಿ, ಬಡಾವಣೆಯ ಕೆಂಪೇಗೌಡ ಪ್ರಶಸ್ತಿ, ಎನ್.ಎಂ.ಕೆ.ಆರ್.ವಿ. ಕಾಲೇಜಿನ ಕಾಮಧೇನು ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

Details

Date:
November 18, 2023
Event Category: