Loading Events

« All Events

  • This event has passed.

ವಿ.ಎಂ. ಇನಾಂದಾರ್ (ವೆಂಕಟೇಶ ಮಧ್ವರಾವ್‌ ಇನಾಂದಾರ್)

October 1, 2023

೦೧.೧೦.೧೯೧೨ ೨೬..೧೯೮೬ ಸೃಜನಶೀಲ ಕಾದಂಬರಿಕಾರ, ವಿಮರ್ಶಕ, ಬಹುಭಾಷಾ ಕೋವಿದರೆನಿಸಿದ್ದ ವೆಂಕಟೇಶ ಮಧ್ವರಾವ್‌ ಇನಾಂದಾರ್ ರವರು ಹುಟ್ಟಿದ್ದು ೧೯೧೨ರ ಅಕ್ಟೋಬರ್ ೧ರಂದು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಹುದಲಿಯಲ್ಲಿ. ತಂದೆ ಮಧ್ವರಾವ್‌ ಇನಾಂದಾರ್‌ರವರು ವೃತ್ತಿಯಿಂದ ಪೋಸ್ಟ್‌ಮಾಸ್ಟರಾಗಿದ್ದರೂ ಪ್ರವೃತ್ತಿಯಿಂದ ಸಂಶೋಧನಾಸಕ್ತರು, ತಾಯಿ ಕಮಲಾಬಾಯಿ. ಪ್ರಾರಂಭಿಕ ಶಿಕ್ಷಣ ಹುದಲಿಯಲ್ಲಿ. ಹೈಸ್ಕೂಲು ಶಿಕ್ಷಣ ಬೆಳಗಾವಿ, ಅಥಣಿ, ಮತ್ತು ವಿಜಾಪುರಗಳಲ್ಲಿ. ಮುಂಬಯಿ ವಿ.ವಿ.ದಿಂದ ಮೆಟ್ರಿಕ್ಯುಲೇಷನ್‌ನಲ್ಲಿ ರ‍್ಯಾಂಕ್‌ ವಿಜೇತರು ಹಾಗೂ ಸುವರ್ಣ ಪದಕದೊಡನೆ ಬಿ.ಎ. ಪದವಿ (ಇಂಗ್ಲಿಷ್‌) ಮತ್ತು ಎಂ.ಎ. ಪದವಿ. ‘ಸಂಸ್ಕೃತದ ಕಾವ್ಯಗಳಲ್ಲಿ ನಾಯಿಕಾ ಪಾತ್ರಗಳು’ ಎಂಬ ಪ್ರೌಢ ಪ್ರಬಂಧವನ್ನು ಮುಂಬಯಿ ವಿ.ವಿ.ಕ್ಕೆ ಸಲ್ಲಿಸಿ ಪಡೆದ ಮಾಂಡಲೀಕ ಪಾರಿತೋಷಕ. ಪಾರಿತೋಷಕದ ಒಂದು ಸಾವಿರ ರೂಪಾಯಿಗೂ ಒಂದು ಬೀರು ತುಂಬುವಷ್ಟು ಪಡೆದ ಇಂಗ್ಲಿಷ್‌ ಸಾಹಿತ್ಯ ಕೃತಿಗಳು. ಇದು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಇದ್ದ ಜ್ಞಾನದಾಹ. ಜಿಲ್ಲಾ ನ್ಯಾಯಾಲಯದಲ್ಲಿ ದೊರೆತ ಗುಮಾಸ್ತೆ ಹುದ್ದೆಯನ್ನು ತೊರೆದು ಎಂ.ಎ. ಪದವಿ ಪಡೆದ ನಂತರ ಸೋಫಿಯಾ ವಾಡಿಯಾರವರು ಪ್ರಕಟಿಸುತ್ತಿದ್ದ ‘ಆರ್ಯನ್‌ ಪಾಥ್‌’ ಮತ್ತು ‘ಇಂಡಿಯನ್‌ ಪೆನ್‌’ (PEN) ಪತ್ರಿಕೆಗೆ ಕನ್ನಡ ಪುಸ್ತಕಗಳ ವಿಮರ್ಶಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದರು. ನಂತರ ಇಂಗ್ಲಿಷ್‌ ಅಧ್ಯಾಪಕರಾಗಿ ಮುಂಬಯಿಯ ಸೀಡೇನ್‌ ಹ್ಯಾಂ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಗುಜರಾತಿನ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರಾಗಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ವೈಸ್‌ಪ್ರಿನ್ಸಿಪಾಲರಾಗಿ, ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತಿ. ನಿವೃತ್ತಿಯ ನಂತರವೂ ಬೆಂಗಳೂರು ವಿ.ವಿ.ದ ಯು.ಜಿ.ಸಿ ಗೌರವ ಪ್ರಾಧ್ಯಾಪಕರಾಗಿಯೂ ಕೆಲಕಾಲ ಕಾರ್ಯ ಪ್ರವೃತ್ತರಾಗಿದ್ದರು. ಮುಂಬಯಿಯ ಸೀಡೇನ್‌ ಹ್ಯಾಂ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗ ಹಲವಾರು ಸಂಕಷ್ಟಗಳನ್ನನುಭವಿಸಬೇಕಾಯಿತು. ಬೆಳೆದ ತಮ್ಮನೊಬ್ಬನ ಅಕಾಲ ಮೃತ್ಯು, ತಂದೆಯ ನಿವೃತ್ತಿ, ತಮ್ಮ – ತಂಗಿಯರ ಜವಾಬ್ದಾರಿ, ಹೆಂಡತಿಯ ಅನಾರೋಗ್ಯ, ತಾವೇ ಶಸ್ತ್ರಕ್ರಿಯೆಗೊಳಗಾಗಿ ಆಸ್ಪತ್ರೆಯಲ್ಲಿ ಮೂರುವಾರವಿದ್ದ ಸಂದರ್ಭದಲ್ಲಿ ಮೂರು ಮಕ್ಕಳನ್ನು ಬಿಟ್ಟು ಇಹಲೋಕ ತ್ಯಜಿಸಿದ ಹೆಂಡತಿ, ತಂದೆಯ ಮರಣ, ಇದೆಲ್ಲವನ್ನು ನೋಡಿ ಅನುಭವಿಸಲಾರದ ತಾಯಿಯ ಪರಿತಪಿಸುವಿಕೆ – ಹೀಗೆ ಹಲವಾರು ಕಷ್ಟಗಳ ಸರಮಾಲೆಯನ್ನೇ ಅನುಭವಿಸಬೇಕಾಯಿತು. ಹಿರಿಯರಾದ ಶ್ರೀರಂಗರ ಒತ್ತಾಸೆಯ ಮೇರೆಗೆ ಒಲ್ಲದ ಮನಸ್ಸಿನಿಂದ ಎರಡನೆಯ ಮದುವೆಯಾದದ್ದು ಧಾರವಾಡದ ಶ್ರೀನಿವಾಸರಾವ್‌ ಬೈಚವಾಳ ಮಾಸ್ತರ ಮಗಳು. ಈಕೆ ಸಂಸಾರದ ಹೊಣೆ ಹೊತ್ತದ್ದರಿಂದ ಕೊಂಚ ನೆಮ್ಮದಿ ಕಂಡರು. ಬಹುಭಾಷಾ ಪಂಡಿತರಾಗಿದ್ದ ಇನಾಂದಾರರು ಕನ್ನಡ, ಇಂಗ್ಲಿಷ್‌, ಹಿಂದಿ, ಮರಾಠಿ, ಸಂಸ್ಕೃತ, ಮುಂತಾದ ಭಾಷೆಗಳಲ್ಲಿ ಸಮಾನ ಪಾಂಡಿತ್ಯ ಪಡೆದಿದ್ದರು. ಇನಾಂದಾರರು ಕನ್ನಡ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ್ದೇ ಅನುವಾದ ಸಾಹಿತ್ಯದ ಮೂಲಕ. ವಿ.ಎಸ್‌. ಖಾಂಡೇಕರರ ಎರಡು ಧ್ರುವ (ಮರಾಠಿ – ದೋನಧ್ರುವ) ಇವರ ಮೊಟ್ಟ ಮೊದಲ ಅನುವಾದ ಕಾದಂಬರಿ (೧೯೩೭). ನಂತರ ಬರೆದ ಸ್ವತಂತ್ರ ಕಾದಂಬರಿ ಮೂರಾಬಟ್ಟೆ (೧೯೪೬). ಇವರ ಆರಂಭದ ಕಾದಂಬರಿಗಳಲ್ಲಿ ಕಥಾಪ್ರಧಾನವಾಗಿದ್ದು ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ವಿಶ್ಲೇಷಣೆಯಿಂದ ಕೂಡಿದೆ. ಗಾಲ್ಸ್‌ವರ್ದಿ ಇವರ ಮೆಚ್ಚಿನ ಕಾದಂಬರಿಕಾರರಾಗಿದ್ದು ಕಾದಂಬರಿ ಕ್ಷೇತ್ರದಲ್ಲಿ ಆಸಕ್ತಿ ತಳೆಯಲು ಕಾರಣವಾಯಿತು. ವಿ.ಎಸ್‌. ಖಾಂಡೇಕರರ ಮತ್ತೊಂದು ಕಾದಂಬರಿಯ ಅನುವಾದ ‘ಯಯಾತಿ’. ಚಂದ್ರವಂಶದ ದೊರೆ, ನಹುಷ ಚಕ್ರವರ್ತಿಯ ಮಗ. ವಿಧವಿಧವಾದ ಸುಖಗಳು ಕೈಗೆ ಸಿಕ್ಕಾದರೂ ಸದಾಕಾಲ ಅತೃಪ್ತನಾಗಿಯೇ ವಿಷಯಾಲಾಭಿಲಾಷೆಯಿಂದ ಹೊಸಹೊಸ ಸುಖಗಳ ಹಿಂದೆ ಕುರುಡಾಗಿ ಧಾವಿಸುವ ಚಕ್ರವರ್ತಿಯ ಕತೆ. ಇದೊಂದು ಸಮರ್ಥ ಅನುವಾದದ ಮಹೋನ್ನತ ಕಾದಂಬರಿ. ನಂತರ ಇವರು ಬರೆದ ಕಾದಂಬರಿಗಳು ಕನಸಿನ ಮನೆ, ವಿಜಯಯಾತ್ರೆ, ಶಾಪ, ಸ್ವರ್ಗದ ಬಾಗಿಲು, ಈ ಪರಿಯ ಸೊಬಗುವಿನಿಂದ ಹಿಡಿದು ತ್ರಿಶಂಕುವಿನ ವರೆಗೆ ೧೮ ಕಾದಂಬರಿಗಳನ್ನು ರಚಿಸಿದ್ದಾರೆ. ಇದರಲ್ಲಿ ನವಿಲು ನೌಕೆ ಕಾದಂಬರಿ ಮತ್ತು ಕಾಲ್ಪನಿಕ ಪ್ರವಾಸ ಕಥನ ಮಂಗಲ್ಯಾಂಡಿನಲ್ಲಿ ಮೂರುವಾರ ಧಾರಾವಾಹಿಯಾಗಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ವಿಹಾರಿ ಎಂಬ ಹೆಸರಿನಿಂದ ಲಘು ಪ್ರಬಂಧಗಳನ್ನು ಇದೇ ಪತ್ರಿಕೆಗೆ ೧೯೬೮ – ೭೨ರ ಸಮಯದಲ್ಲಿ ಬರೆದಿದ್ದು ಇವು ‘ಕಪ್ಪು ಚೆಲುವೆ ಮತ್ತು ಇತರ ಪ್ರಬಂಧಗಳು’ ಮತ್ತು ‘ಮನವೆಂಬ ಮರ್ಕಟ ಮತ್ತು ಇತರ ಪ್ರಬಂಧಗಳು’ ಎಂಬ ಹೆಸರಿನಿಂದ ೨೦೦೫ರಲ್ಲಿ ಪುಸ್ತಕ ರೂಪದಲ್ಲಿಯೂ ಪ್ರಕಟವಾಗಿದೆ. ಊರ್ವಶಿ, ಚಿತ್ರಲೇಖ ಮುಂತಾದ ಕಾದಂಬರಿಗಳು ಕೆಲವು ಮುದ್ರಣಗಳನ್ನು ಕಂಡಿದ್ದರೆ ‘ಶಾಪ’ ಕಾದಂಬರಿಯು ಐದು ಮುದ್ರಣಗಳನ್ನು ಕಂಡಿದ್ದು ಚಲನಚಿತ್ರವಾಗಿಯೂ ಜನಪ್ರಿಯತೆಗಳಿಸಿತು. ಸುಮಾರು ವರ್ಷಗಳ ಕಾಲ ಆಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದ ಇನಾಂದಾರರು ವ್ಯಾಪಕವಾದ ತಮ್ಮ ಅನುಭವದಿಂದ, ಅಗತ್ಯಸಾಹಿತ್ಯ ಸಾಮಗ್ರಿಗಳ ಸಂಗ್ರಹದಿಂದ ಅಧ್ಯಯನ – ಬೋಧನೆಯ ಶಿಸ್ತಿನಿಂದ ಸರಳವಾಗಿ, ನೇರವಾಗಿ, ಸಾಹಿತ್ಯಿಕ ಪರಿಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದು ಪಾಶ್ಚಾತ್ಯ ವಿಮರ್ಶೆ. ತರಗತಿಗಳಲ್ಲಿ ಬೋಧಿಸಿದ್ದಷ್ಟೇ ಅಲ್ಲದೆ ವಿಶ್ವವಿದ್ಯಾಲಯಗಳ ವಿಶೇಷ ಉಪನ್ಯಾಸಗಳ ಮೂಲಕ ತಾವು ವ್ಯಕ್ತಪಡಿಸಿದ ಪಾಶ್ಚಾತ್ಯ ವಿಮರ್ಶೆಯ ಅಧ್ಯಯನವನ್ನು ‘ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆ’, ‘ಪಾಶ್ಚಾತ್ಯ ವಿಮರ್ಶೆಯ ಮಧ್ಯಯುಗ’, ‘ಪಾಶ್ಚಾತ್ಯ ವಿಮರ್ಶೆಯ ಸಂಪ್ರದಾಯ ಯುಗ’, ಪಾಶ್ಚಾತ್ಯ ವಿಮರ್ಶೆಯ ರೊಮ್ಯಾಂಟಿಕ್‌ ಯುಗ’ ಮತ್ತು ಪಾಶ್ಚಾತ್ಯ ವಿಮರ್ಶೆಯ ಆಧುನಿಕ ಯುಗ ಎಂದು ಐದು ಭಾಗಗಳಲ್ಲಿ ಪ್ರಕಟವಾಗಿದ್ದು ಇವುಗಳ ಸಮಗ್ರ ಸಂಪುಟ ‘ಪಾಶ್ಚಾತ್ಯ ಕಾವ್ಯ ಮೀಮಾಂಸೆ’ ಗ್ರಂಥವೂ ಪ್ರಕಟವಾಗಿದೆ. ತೀ.ನಂ. ಶ್ರೀಕಂಠಯ್ಯನವರ ಭಾರತೀಯ ಕಾವ್ಯ ಮೀಮಾಂಸೆಗೆ ಸರಿಸಮಾನವಾಗಿ ನಿಲ್ಲಬಲ್ಲ ಸತ್ವಯುತ ಕೃತಿ ಎಂದರೆ ಇನಾಂದಾರರ ಪಾಶ್ಚಾತ್ಯ ಕಾವ್ಯ ಮೀಮಾಂಸೆ. ದಶಕಗಳ ಕಾಲ ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಸಿಕೊಂಡಿದ್ದ ಇನಾಂದಾರರ ಆಚಾರ್ಯ ಕೃತಿಯೂ ಹೌದು. ಇಂಗ್ಲಿಷ್‌ ಭಾಷೆಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಇನಾಂದಾರರು ಇಂಗ್ಲಿಷ್‌ ಭಾಷೆಯಲ್ಲಿ ಕನ್ನಡೇತರರಿಗೆ ಕಾರಂತ, ಗೋವಿಂದ ಪೈಗಳನ್ನು ಪರಿಚಯಿಸಿದ್ದಾರೆ. ಗೋವಿಂದ ಪೈಗಳ ಆಳವಾದ ಅಧ್ಯಯನ, ಸಮತೂಕದ ಜೀವನ ದೃಷ್ಟಿಯ ಬಗ್ಗೆ, ಶಿವರಾಮ ಕಾರಂತರ ಬದುಕು ಬರೆಹ, ಕುವೆಂಪು ಕಾದಂಬರಿಗಳ, ಶ್ರೀನಿವಾಸರ ಕಾದಂಬರಿಗಳಲ್ಲಿ ಜೀವನ ದರ್ಶನ (ಸುಬ್ಬಣ್ಣ, ಶೇಷಮ್ಮ, ಚನ್ನಬಸವನಾಯಕ ಮತ್ತು ಚಿಕ್ಕವೀರ ರಾಜೇಂದ್ರ ಕಾದಂಬರಿಗಳ), ಗೋವಿಂದ ಪೈಗಳ ಕಾವ್ಯ, ಬಿ.ಎಂ.ಶ್ರೀ ಬದುಕು – ಬರೆಹದ ಬಗ್ಗೆ ಕೃತಿ ರಚಿಸಿದ್ದಾರೆ. ಇಂಗ್ಲಿಷ್‌ನಲ್ಲಿ ಶಿವರಾಮಕಾರಂತ (೧೯೭೩), ಗೋವಿಂದ ಪೈ (೧೯೮೩). ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೆ ಇಂಗ್ಲಿಷ್‌ನಲ್ಲಿ ಪ್ರಕಟಗೊಂಡಿರುವ ಇತರ ಕೃತಿಗಳೆಂದರೆ ಹಿರೋಯಿನ್ಸ್‌ ಇನ್‌ ಸ್ಯಾನಸ್ಕ್ರಿಟ್‌ ಡ್ರಾಮಾ, ವಿದೂಷಕ ಇನ್‌ ಸ್ಯಾನಸ್ಕ್ರಿಟ್‌ ಡ್ರಾಮಾ ಮತ್ತು ಉತ್ತರರಾಮ ಚರಿತಮ್‌ ಮುಂತಾದವುಗಳು. ಇವರ ಮತ್ತೊಂದು ವಿಡಂಬನ ಕೃತಿಯೆಂದರೆ ಮಂಗಳ ಗ್ರಹಕ್ಕೆ ಯಾನ ಕೈಗೊಳ್ಳುವ ವಿಶಿಷ್ಟ ಕಾಲ್ಪನಿಕ ಕೃತಿ ‘ಮಂಗಲ್ಯಾಂಡಿನಲ್ಲಿ ಮೂರುವಾರ’. ಸ್ವತಃ ಲೇಖಕರೇ ಮಂಗಳ ಗ್ರಹಕ್ಕೆ ಪ್ರವಾಸ ಕೈಗೊಂಡು ಅಲ್ಲಿನ ಜನಜೀವನವನ್ನು ವಿಡಂಬಿಸುವ ಮೂಲಕ ನಮ್ಮ ದೇಶದ ಜನ ಜೀವನವನ್ನು ಪ್ರತಿಬಿಂಬಿಸುವ ಕೃತಿ. ಅಮೆರಿಕ ಮತ್ತು ರಷ್ಯನರು ಮಂಗಳ ಗ್ರಹಕ್ಕೆ ಉಪಗ್ರಹವನ್ನು ಕಳುಹಿಸಿದ ಸುದ್ದಿಯಿಂದ ಪ್ರೇರಿತರಾಗಿ ಬರೆದ ವಿಡಂಬನೆ. ತಾವೇ ತಯಾರಿಸಿರುವ ವಿಮಾನದಲ್ಲಿ ಯಾನವನ್ನು ಕೈಗೊಳ್ಳುತ್ತಾರೆ. ಅಲ್ಲಿನ ರಾಜಕೀಯ ಪ್ರಗತಿ, ರಾಜ್ಯಾಂಗ ಪದ್ಧತಿ, ಮಂತ್ರಿಗಳ ಕಾರುಬಾರು, ಭ್ರಷ್ಟಾಚಾರ, ವಿಷಯ ಲಂಪಟತೆಗಳ ಜೊತೆಗೆ ಸಾಹಿತಿಗಳ, ಜಗಳ, ವೈಮನಸ್ಯ, ಹಿರಿಯರಿಗೆ ಕಿರಿಯ ಸಾಹಿತಿಗಳ ಬರಹಗಳ ಬಗ್ಗೆ ಅಸಡ್ಡೆ, ಕಿರಿಯರಿಗೆ ಹಿರಿಯರ ಕೃತಿಗಳ ಬಗ್ಗೆ ಅನಾಸಕ್ತಿ ಈ ಎಲ್ಲ ವಿಷಯಗಳ ವಿಡಂಬನೆಯಿಂದ ಕೂಡಿದ ಕೃತಿ. ಇವಲ್ಲದೆ ಇನಾಂದಾರರ ಇತರ ಕೃತಿಗಳೆಂದರೆ ದೃಷ್ಟಿಲಾಭ (ಅನುವಾದಿತ ಕತೆಗಳು), ಬಿಡುಗಡೆ (ನಾಟಕ), ಕಾಲಿದಾಸನ ಕಥಾನಕಗಳು ಮತ್ತು ಡಾ. ಅಂಬೇಡ್ಕರ್ ವ್ಯಕ್ತಿ ಮತ್ತು ವಿಚಾರ. ವಿ.ಸೀ – ೭೫ ಸಂಪಾದಿತ ಕೃತಿಯಾದರೆ ಶರಶ್ಚಂದ್ರ – ವ್ಯಕ್ತಿ ಮತ್ತು ಕಲಾವಿದ (ಅನುವಾದ) ಹದಿನೆಂಟು – ಕಾದಂಬರಿಗಳು, ಹದಿನಾರು ವಿಮರ್ಶಾ ಗ್ರಂಥಗಳು ಇತರ ಕೃತಿಗಳೂ ಸೇರಿ ಒಟ್ಟು ೪೦ ಕ್ಕೂ ಹೆಚ್ಚು ಕೃತಿ ರಚಿಸಿರುವ ಇನಾಂದಾರ್ ರವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ‘ಕಾದಂಬರಿಕಾರ’ರೆಂಬ ಸನ್ಮಾನ, ಕುವೆಂಪು ಕಾದಂಬರಿಗಳು ಕೃತಿಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ ಪ್ರಶಸ್ತಿ, ಮತ್ತು ತೀ.ನಂ.ಶ್ರೀ ಸ್ಮಾರಕ ಬಹುಮಾನ, ಪಾಶ್ಚಾತ್ಯ ಕಾವ್ಯಮೀಮಾಂಸೆಗೆ ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ತಮ್ಮಣ್ಣರಾವ ಅಮ್ಮಿನಬಾವಿ ಸ್ಮಾರಕ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿದ್ದು ವಿಮರ್ಶಾ ಪ್ರಪಂಚದಿಂದ ದೂರವಾದದ್ದು ೧೯೮೬ರ ಜನವರಿ ೨೬ ರಂದು. ಅಭಿಮಾನಿಗಳು, ಶಿಷ್ಯರು ೧೯೮೪ರಲ್ಲಿ ಅರ್ಪಿಸಿದ ಗೌರವ ಗ್ರಂಥ ‘ನವನೀತ’ ಮತ್ತು ಪ್ರಪಂಚದ ೩೧ ಪ್ರಮುಖ ಕಾದಂಬರಿಗಳೆನಿಸಿರುವ ಟಾಲ್‌ಸ್ಟಾಯ್‌ರ ಅನ್ನಾಕರೇನಿನ, ಸರ್ವಾಂಟಿಸ್‌ನ ಡಾನ್‌ಕಿಯೋಟಿ, ಥಾಮಸ್‌ಮನ್‌ನ ಮ್ಯಾಜಿಕ್‌ ಮೌಂಟನ್‌, ಇ.ಎಂ. ಫಾರ್‌ಸ್ಟರ್ ನ ಹೋವರ್ಡ್ಸ್ ಎಂಡ್, ನೆಬೊಕೋವ್‌ನ ಲೋಲಿತ, ಕಾಪ್ಕನ ಟ್ರಯಲ್‌ ಮತ್ತು ಕಾಮುನ ಔಟ್‌ಸೈಡರ್ ಮುಂತಾದ ಕಾದಂಬರಿಗಳನ್ನು ಕುರಿತಂತೆ ನಾಡಿನ ಹಿರಿಯ ಕಿರಿಯ ಲೇಖಕರ ವಿಮರ್ಶಾತ್ಮಕ ಲೇಖನಗಳ ಸಂಸ್ಕರಣ ಗ್ರಂಥ ‘ಕಾದಂಬರಿ ಲೋಕ’ ೧೯೯೦ರಲ್ಲಿ ಬಿಡುಗಡೆಯಾಗಿದೆ. ವಿ.ಎಂ. ಇನಾಂದಾರರ ಹೆಸರನ್ನು ಚಿರಸ್ಥಾಯಿಯಾಗಿಸಲು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರವು ೧೯೮೭ ರಿಂದ ಪ್ರತಿವರ್ಷವೂ ವಿಮರ್ಶಾ ಕೃತಿಗಳಿಗೆ ವಿ.ಎಂ. ಇನಾಂದಾರ್ ಪ್ರಶಸ್ತಿ ನೀಡುತ್ತಾ ಬಂದಿದೆ.

Details

Date:
October 1, 2023
Event Category: