Loading Events

« All Events

  • This event has passed.

ಶಾಂತಾದೇವಿ ಮಾಳವಾಡ

December 10, 2023

೧೦.೧೨.೧೯೨೨ ..೨೦೦೫ ಕತೆ, ಕಾದಂಬರಿ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ, ವಿಚಾರ ಸಾಹಿತ್ಯ, ವಿಮರ್ಶೆ ಮುಂತಾದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಗಮನಾರ್ಹ ಸೇವೆ ಸಲ್ಲಿಸಿರುವ ‘ದಾನಮ್ಮ’ನವರು ಹುಟ್ಟಿದ್ದು ೧೯೨೨ರ ಡಿಸೆಂಬರ್ ೧೦ರಂದು ಬೆಳಗಾವಿಯಲ್ಲಿ. ತಂದೆ ಮುರಿಗೆಪ್ಪಶೆಟ್ಟರು, ತಾಯಿ ಜಯವಂತಿದೇವಿ. ಚಿಕ್ಕ ವಯಸ್ಸಿನಲ್ಲೆ ತಂದೆ ತಾಯಿಗಳ ಆಸರೆ ಕಳೆದುಕೊಂಡು ಬೆಳೆದದ್ದು ಅಜ್ಜಿಯ ಮಡಿಲಲ್ಲಿ. ಓದಿದ್ದು ಬರೇ ಪ್ರಾಥಮಿಕ ಶಾಲೆಯಾದರೂ ಸಾಧಿಸಿದ್ದು ಸಾಹಿತ್ಯದಲ್ಲಿ ಬಹು ಎತ್ತರದ ಸಾಧನೆ. ೧೯೩೭ರಲ್ಲಿ ವಿದ್ವಾಂಸರಾಗಿದ್ದ ಸ.ಸ. ಮಾಳವಾಡರನ್ನು ಮದುವೆಯಾದ ನಂತರ ‘ಶಾಂತಾದೇವಿ’ಯಾದರು. ಮದೆಯಾದ ನಂತರ ಮಾಳವಾಡರ ಪ್ರೋತ್ಸಾಹದಿಂದ ಕನ್ನಡ ಸಾಹಿತ್ಯದ ಆಳವಾದ ಅಧ್ಯಯನ ನಡೆಸಿದ್ದರ ಜೊತೆಗೆ ಹಿಂದಿ ಹಾಗೂ ಇಂಗ್ಲಿಷ್ ಸಾಹಿತ್ಯದ ಪರಿಚಯವನ್ನು ಪಡೆದರು. ಅವರ ಸಾಹಿತ್ಯ ಕೃಷಿ ಕಥಾಸಾಹಿತ್ಯದಿಂದ ಪ್ರಾರಂಭವಾದರೂ ಸಾಹಿತ್ಯದ ಹರವು ಬಹು ದೊಡ್ಡದು. ಮೊದಲ ಕಥಾ ಸಂಕಲನ ‘ಮೊಗ್ಗೆಯ ಮಾಲೆ’ (೧೯೪೧) ಮತ್ತು ‘ಕುಂಕುಮ ಬಲ’ ಕಥಾ ಸಂಕಲನಗಳಲ್ಲಿ ಹಲವಾರು ಉತ್ತಮ ಕಥೆಗಳನ್ನು ಕಾಣಬಹುದು. ಕಾದಂಬರಿ ಕ್ಷೇತ್ರದಲ್ಲಿಯೂ ಅವರದ್ದು ಅದ್ವೀತಿಯ ಸೇವೆ. ‘ಬಸವ ಪ್ರಕಾಶ’, ‘ದಾನ ದಾಸೋಹಿ ದಾನಮ್ಮ’, ‘ಶೂರ ರಾಣಿ ಕೆಳದಿಯ ಚೆನ್ನಮ್ಮ’ ಈ ಮೂರು ಕಾದಂಬರಿಗಳು ಕಾದಂಬರಿ ಕ್ಷೇತ್ರಕ್ಕೆ ನೀಡಿದ ವೌಲಿಕ ಕೃತಿಗಳು. ಸುಮಾರು ೬೦೦ ಪುಟಗಳ ಶೂರ ರಾಣಿ ಚೆನ್ನಮ್ಮ ಹಲವಾರು ಪ್ರಶಸ್ತಿಗಳಿಗೆ ಭಾಜನವಾಯಿತು. ಇವರು ರಚಿಸಿದ ಜೀವನ ಚರಿತ್ರೆಗಳಾದ ಕನ್ನಡ ತಾಯಿ, ಕೃತಿಯಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ, ಬೆಳವಡಿ ಮಲ್ಲಮ್ಮ, ಕಂತಿ, ಸಂಚಿಯ ಹೊನ್ನಮ್ಮ, ಅಕ್ಕಮಹಾದೇವಿ, ಅಕ್ಕನಾಗಮ್ಮ ಇವುಗಳಲ್ಲಿ ಜೀವನ ಚರಿತ್ರೆಗಳನ್ನು ಬಿಡಿಸಿದ್ದರೆ ಭಾರತದ ಮಾನಸ ಪುತ್ರಿಯರು ಕೃತಿಯಲ್ಲಿ, ಹುಟ್ಟಿನಿಂದ ವಿದೇಶಿಯರಾದರೂ ಭಾರತೀಯ ಸಂಸ್ಕೃತಿ ಸಂಪನ್ನತೆಯಿಂದ ಆಕರ್ಷಿತರಾದ ಐವರು ವಿದೇಶಿ ಮಹಿಳೆಯರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ವಚನ ಸಾಹಿತ್ಯವನ್ನು ಆಳವಾದ ಅಭ್ಯಾಸಮಾಡಿದ ಇವರು ಬಸವ ಯುಗದ ಶಿವಶರಣೆಯರು, ಎಣ್ಣೆ ಹೊಳೆಯ ನಂದಾದೀಪ, ಗಂಗಾಂಬಿಕೆ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಮಹಿಳಾ ಪ್ರಧಾನ ಸಾಹಿತ್ಯದಲ್ಲಿ ಹೆಚ್ಚು ಒಲವಿದ್ದ ಶಾಂತಾದೇವಿಯರು ಮಹಿಳೆಯರಿಗೆ ಉಪಯುಕ್ತವಾಗುವ ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ‘ರಸಪಾಕ’ ಎಂಬ ಕೃತಿ ಎಂಟು ಆವೃತ್ತಿಗಳನ್ನು ಕಂಡಿದೆ ಎಂದರೆ ಅದರ ಜನಪ್ರಿಯತೆಯ ಅರಿವಾದೀತು. ‘ಮಹಿಳೆಯರ ಅಲಂಕಾರ’ ಎಂಬುದು ಸಂಶೋಧನ ಕೃತಿ. ಹಲವಾರು ವಿದ್ವಾಂಸರ ಪ್ರಶಂಸೆಗೆ ಪಾತ್ರವಾಗಿದೆ. ‘ಸೊಬಗಿನ ಮನೆ’, ‘ವಧುವಿಗೆ ಉಡುಗೊರೆ’, ‘ಕುಟುಂಬ’ ಇವುಗಳು ಕೂಡಾ ಮಹಿಳೆಯರಿಗೆ ಬಹು ಉಪಯುಕ್ತ ಕೃತಿಗಳಾಗಿವೆ. ಸೃಜನಶೀಲ ಕೃತಿ ರಚನೆಯಲ್ಲೂ ತಮ್ಮ ಬರವಣಿಗೆಯ ಕೌಶಲವನ್ನು ತೋರಿರುವ ಶಾಂತಾದೇವಿಯರು ರಚಿಸಿದ ವಿಮರ್ಶಾ ಕೃತಿಗಳೆಂದರೆ ‘ಸಮುಚ್ಛಯ’, ‘ಮಹಿಳಾ ಚೇತನ’, ‘ಸಾರ್ವಜನಿಕ ರಂಗದಲ್ಲಿ ಮಹಿಳೆ’ ಮುಂತಾದವು ಸೇರಿ ೪೦ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಪ್ರವಾಸಪ್ರಿಯರಾದ ದಂಪತಿಗಳು ಕೈಗೊಂಡ ಪ್ರವಾಸಾನುಭವದ ಕೃತಿ ‘ಶ್ರೀಗಿರಿಯಿಂದ ಹಿಮಗಿರಿಗೆ’ ಕೃತಿಯಲ್ಲಿ ತಮ್ಮ ರಸಯಾತ್ರೆಯನ್ನು ಬಹು ಸೊಗಸಾಗಿ ದಾಖಲಿಸಿದ್ದಾರೆ. ಸ.ಸ. ಮಾಳವಾಡ ವಿಯೋಗದಿಂದ ಧೃತಿಗೆಟ್ಟರೂ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಮಾಳವಾಡರು ಪ್ರಾರಂಭಿಸಿದ್ದ ಆತ್ಮ ಚರಿತ್ರೆ ‘ದಾರಿ ಸಾಗಿದೆ’ ಕಡೆ ಭಾಗವನ್ನು ಇವರೇ ಬರೆದು ಪೂರ್ಣಗೊಳಿಸಿದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಅಕ್ಕನ ಬಳಗ, ಧಾರವಾಡದ ರಿಮ್ಯಾಂಡ್ ಹೋಂ, ಮುಂತಾದ ಸಂಸ್ಥೆಗಳ, ಸಮಿತಿಯ ಸದಸ್ಯರಾಗಿದ್ದರ ಜೊತೆಗೆ ಧಾರವಾಡದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಸ್ವಾಗತಾಧ್ಯಕ್ಷೆ, ಅಖಿಲ ಭಾರತದ ವೀರಶೈವ ಮಹಾಸಭಾ ಮಹಿಳಾ ಗೋಷ್ಠಿಯ ಸ್ವಾಗತಾಧ್ಯಕ್ಷೆ. ಅಖಿಲಭಾರತ ಅಕ್ಕನ ಬಳಗದ ಸಮ್ಮೇಳನಾಧ್ಯಕ್ಷೆ, ಕರ್ನಾಟಕ ಲೇಖಕಿಯರ ಸಮ್ಮೇಳನ, ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳು ಮೊದಲ್ಗೊಂಡು ೬೮ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸಾಹಿತ್ಯ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿ, ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ, ಅನುಪಮ ಪ್ರಶಸ್ತಿ, ಲಿಪಿ ಪ್ರಾಜ್ಞೆಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಎಂ.ಕೆ. ಇಂದಿರಾ ಪ್ರಶಸ್ತಿ ಮುಂತಾದವು ಇವರನ್ನು ಅರಸಿಬಂದ ಪ್ರಶಸ್ತಿಗಳು. ಇವರಿಗೆ ಅರ್ಪಿಸಿದ ಗೌರವ ಗ್ರಂಥ ‘ಪ್ರಶಾಂತ’. ಸದಾ ಯಾವುದಾದರೊಂದು ಸಂಸ್ಥೆ, ಸಾಹಿತ್ಯ ಕಾರ್ಯಕ್ರಮಗಳಲ್ಲೇ ತೊಡಗಿಸಿಕೊಂಡಿದ್ದ ಶಾಂತಾದೇವಿಯವರು ಬದುಕಿಗೆ ವಿದಾಯ ಹೇಳಿದ್ದು ೨೦೦೫ರ ಆಗಸ್ಟ್ ೭ರಂದು.

Details

Date:
December 10, 2023
Event Category: