Loading Events

« All Events

  • This event has passed.

ಸಾಲೆತೂರ. ಬಿ.ಎ.

October 11, 2023

೧೧-೧೦-೧೯೦೦ ೧೮-೧೨-೧೯೬೩ ಕನ್ನಡ ನಾಡಿನ ಪ್ರಸಿದ್ಧ ಇತಿಹಾಸ ವಿದ್ವಾಂಸರಾದ ಭಾಸ್ಕರ ಆನಂದ ಸಾಲೆತೂರರವರು ಹುಟ್ಟಿದ್ದು ದ.ಕ. ಜಿಲ್ಲೆಯ ಪುತ್ತೂರು ತಾಲ್ಲೂಕಿನ ಸಾಲೆತೂರ ಎಂಬ ಗ್ರಾಮದಲ್ಲಿ. ತಂದೆ ನಾರಾಯಣರಾಯರು, ತಾಯಿ ಪಾರ್ವತಿ. ಪ್ರಾರಂಭಿಕ ಶಿಕ್ಷಣ ಮಂಗಳೂರಿನ ಸಂತ ಎಲೋಷಿಯಸ್ ಹೈಸ್ಕೂಲು. ಅದೇ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿ. ಮದರಾಸು ವಿಶ್ವವಿದ್ಯಾಲಯದಿಂದ ಎಲ್.ಟಿ. ಪದವಿ. ದ. ಕನ್ನಡದ ಬೋರ್ಡ್ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕ ವೃತ್ತಿ. ಫಾದರ್ ಹೆರಾಸ್‌ರ ಮಾರ್ಗದರ್ಶನದಲ್ಲಿ ಪಡೆದ ಎಂ.ಎ. ಪದವಿ. ಪ್ರಾಚೀನ ತುಳುನಾಡಿನ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಜೀವನದ ಸಮಗ್ರ ಅಧ್ಯಯನ. ‘ವಿಜಯನಗರ ಸಾಮ್ರಾಜ್ಯದ ಸಾಮಾಜಿಕ, ರಾಜಕೀಯ ಜೀವನ’ ಮಹಾಪ್ರಬಂಧ ಮಂಡಿಸಿ ಲಂಡನ್ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಕನ್ನಡ, ಸಂಸ್ಕೃತ, ಇಂಗ್ಲಿಷ್, ಜರ್ಮನ್ ಭಾಷೆಗಳಲ್ಲಿ ಪಡೆದ ಅಪಾರ ಪಾಂಡಿತ್ಯ. ೧೯೩೬ರಲ್ಲಿ ಪುಣೆಯ ಸರ್ ಪರಶುರಾಮ ಭಾವು ಕಾಲೇಜಿನಲ್ಲಿ ಇತಿಹಾಸದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭ. ನಂತರ ಅಲಹಾಬಾದ್ ವಿಶ್ವವಿದ್ಯಾಲಯದಲ್ಲೂ ಕೆಲಕಾಲ ಪ್ರಾಧ್ಯಾಪಕರ ಹುದ್ದೆ. ಇವರ ವಿದ್ವತ್ತನ್ನು ಗಮನಿಸಿದ ಭಾರತ ಸರಕಾರ ಐತಿಹಾಸಿಕ ದಾಖಲೆಗಳ ಸಂಗ್ರಹಾಲಯದ ನಿರ್ದೇಶಕರಾಗಿ ನೇಮಕ (ನ್ಯಾಷನಲ್ ಆರ‍್ಕೀವ್ಸ್ ಆಫ್ ಇಂಡಿಯಾ). ಕಡೆಯವರೆಗೂ ಹುದ್ದೆಯನ್ನು ನಿರ್ವಹಿಸಿ ನಿವೃತ್ತಿ. ನಂತರ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಸಂಸ್ಕೃತಿ ವಿಭಾಗದ ಪ್ರಾಧ್ಯಾಪಕರಾಗಿ, ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸಲ್ಲಿಸಿದ ಸೇವೆ. ಪ್ರಥಮ ದರ್ಜೆಯ ಸಂಶೋಧಕ, ಇತಿಹಾಸತಜ್ಞರಾದ ಸಾಲೆತೂರರವರು ರಚಿಸಿದ ಗ್ರಂಥಗಳು ಹಲವಾರು. ಸೋಷಿಯಲ್ ಅಂಡ್ ಪೊಲಿಟಿಕಲ್ ಲೈಫ್ ಅಂಡರ್ ವಿಜಯನಗರ್ ಎಂಪೈರ್, ಏನ್ಷಿಯಂಟ್ ಕರ್ನಾಟಕ-೧, ಹಿಸ್ಟರಿ ಆಫ್ ದಿ ತುಳುವ, ಇಂಡಿಯಾಸ್ ಡಿಪ್ಲೊಮ್ಯಾಟಿಕ್ ರಿಲೇಷನ್ಸ್ ವಿತ್ ದಿ ವೆಸ್ಟ್, ಏನ್ಷಿಯಂಟ್ ಇಂಡಿಯನ್ ಪೊಲಿಟಿಕಲ್ ಥಾಟ್ಸ್ ಆಂಡ್ ಇನ್‌ಸ್ಟಿಟ್ಯೂಷನ್ಸ್, ಮಿಡೇವಲ್ ಜೈನಿಸಂ, ವೈಲ್ಡ್ ಟ್ರೈಬ್ಸ್ ಇನ್ ಇಂಡಿಯನ್ ಹಿಸ್ಟರಿ, ದಿ ಮರಾಠ ಡೊಮಿನಿಯನ್ ಇನ್ ಕರ್ನಾಟಕ ಮುಂತಾದ ಇಂಗ್ಲಿಷ್ ಕೃತಿಗಳು. ಜರ್ಮನ್ ಕೃತಿ-ವರ್ಟ್ ಡೆರ್ ಉಸ್ಟಿಷೆನ್ ಲೆ ಹ್ರೆನ್ ಫುರ್ ರೈ ಲೂಸಂಗ್ ಎಂಬುದು. ಕನ್ನಡದ ಕೃತಿ-‘ಕನ್ನಡ ನಾಡಿನ ಚರಿತ್ರೆ ಸಂಪುಟ-೧’ (ದೇಸಾಯಿ ಪಾಂಡುರಂಗರಾಯರೊಡನೆ). ನೂರಾರು ಸಂಶೋಧನಾ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಿತ. ಹಂಪೆಯ ವಿಜಯನಗರ ಸಾಮ್ರಾಜ್ಯದ ಆರನೆಯ ಶತಮಾನೋತ್ಸವದಲ್ಲಿ ಪ್ರಮುಖ ಪಾತ್ರ. ಧಾರವಾಡದಲ್ಲಿ ನಡೆದ ಇತಿಹಾಸ ಸಮ್ಮೇಳನದ ಅಧ್ಯಕ್ಷತೆ. ನಿಧನರಾದದ್ದು ಧಾರವಾಡದಲ್ಲಿ ಡಿಸೆಂಬರ್ ೧೮ರ ೧೯೬೩ರಲ್ಲಿ.

Details

Date:
October 11, 2023
Event Category: