ಮೋಹನ್‌ ವರ್ಣೇಕರ್

Home/Birthday/ಮೋಹನ್‌ ವರ್ಣೇಕರ್
Loading Events
This event has passed.

೨೨..೧೯೫೦ ಕಲೆ ಹಾಗೂ ಸಾಹಿತ್ಯ  ಈ ಎರಡು ಕ್ಷೇತ್ರಗಳಲ್ಲೂ ಅಸಾಧಾರಣ ಕೊಡುಗೆ ನೀಡಿರುವ ಮೋಹನ್‌ ವರ್ಣೇಕರ್ ರವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣ ಗ್ರಾಮದಲ್ಲಿ.  ತಂದೆ ವಾಸುದೇವ ಶೇಟ್‌, ತಾಯಿ ತುಳಸಿಬಾಯಿ. ಪ್ರಾರಂಭಿಕ ಶಿಕ್ಷಣ ಹೊಸಪಟ್ಟಣ ಶಾಲೆ, ವಿರಾಜಪೇಟೆಯಲ್ಲಿ ಪ್ರೌಢಶಾಲಾ ಶಿಕ್ಷಣ. ಬೆಂಗಳೂರಿನ ಆಚಾರ್ಯ ಪಾಠ ಶಾಲಾ ಕಾಲೇಜಿನಿಂದ ಬಿ.ಎ. ಪದವಿ ಜೊತೆಗೆ ಟೈಪಿಂಗ್‌ ಮತ್ತು ಶೀಘ್ರಲಿಪಿಯಲ್ಲಿ ಪ್ರವೀಣ, ರ್ಯಾಂಕ್‌ ವಿಜೇತರು. ಉದ್ಯೋಗಕ್ಕಾಗಿ ಸೇರಿದ್ದು ಕರ್ನಾಟಕ ವಿಧಾನ ಸಭೆಯ ಸಚಿವಾಲಯದಲ್ಲಿ ಅಭಿಲೇಖನಾಧಿಕಾರಿಯಾಗಿ (RECORDING OFFICER) ಮೂವತ್ತು ವರ್ಷಗಳ ಸೇವೆಯ ನಂತರ ಪಡೆದ ಸ್ವಯಂ ನಿವೃತ್ತಿ. ಹೈಸ್ಕೂಲಿನಲ್ಲಿದ್ದಾಗಲೇ ಹಿಂದಿ ಉಪಾಧ್ಯಾಯಿನಿಯೊಬ್ಬರು ಹಿಂದಿಯಿಂದ ಕನ್ನಡಕ್ಕೆ ಮಕ್ಕಳ ಕತೆಗಳನ್ನು ಅನುವಾದಿಸಲು ಉತ್ತೇಜಿಸುತ್ತಿದ್ದು, ಹಲವಾರು ಕತೆಗಳ ಅನುವಾದ. ಹೀಗೆ ಬರೆದ ಕತೆಯನ್ನು ವಿರಾಜಪೇಟೆಯಿಂದ ಪ್ರಕಟವಾಗುತ್ತಿದ್ದ ‘ಹಿತವಾಣಿ’ ಪತ್ರಿಕೆಗೆ ಕೊಟ್ಟಿದ್ದು, ಪ್ರಕಟಗೊಂಡಾಗ ಇವರ ಆನಂದಕ್ಕೆ ಪಾರವೇ ಇರಲಿಲ್ಲ. ನಂತರ ಬೆಂಗಳೂರಿಗೆ ಬಂದಾಗ ಪ್ರಜಾಮತ ಪತ್ರಿಕೆಗೂ ಬರೆದ ಹಲವಾರು ಮಕ್ಕಳ ಕತೆಗಳು. ಹೀಗೆ ಮಕ್ಕಳ ಕತೆಯಿಂದಾರಂಭಿಸಿ ಕಾಲೇಜಿಗೆ ಬರುವ ವೇಳೆಗೆ ಬರೆದ ಹಲವಾರು ಪ್ರಬುದ್ಧ ಕತೆಗಳು. ಹಲವಾರು ಕತೆಗಳು ಪ್ರಕಟಗೊಂಡನಂತರ ಬರೆದ ಮೊದಲ ಕಾದಂಬರಿ ‘ದಿಕ್ಕು’ ನಂತರ ಬರೆದ ಕಾದಂಬರಿಗಳು ಪ್ರೀತಿ-ಪ್ರೇಮಗಳ ನಡುವೆ, ಸ್ವರ್ಣ ಮಂದಾರ, ಕಪ್ಪುಬಾನಲ್ಲಿ ಚಂದಿರ, ಮೊದಲಾದ ಕಾದಂಬರಿಗಳು; ಪ್ರಶಸ್ತಿ, ಪ್ರಾಪ್ತಿ, ಪ್ರೇಮಿಸಿದವರು, ಅವಳು ಕ್ಷಮಾತೀತಳು, ನರಸಿಂಹ ದೇವರಿಗಿಟ್ಟ ಚಿನ್ನದ ಕಿರೀಟ ಮುಂತಾದ ಕಥಾ ಸಂಕಲನಗಳು ಪ್ರಕಟವಾಗಿವೆ. ಮಕ್ಕಳ ಸಾಹಿತ್ಯಕ್ಕೂ ವಿಶಿಷ್ಟ ಕೊಡುಗೆ ನೀಡಿರುವ ವರ್ಣೇಕರರು ನಮ್ಮ ಅಕ್ಕ, ಆದರ್ಶ ಗೆಳೆಯ, ಬಹುಮಾನ, ದಶಾವತಾರಗಳು, ಪ್ರಚಂಡ ಚೋರರು, ಧೀರ ಪುಟಾಣಿ, ಮೂರು ಮಕ್ಕಳ ನಾಟಕಗಳು ಮುಂತಾದ ಮಕ್ಕಳ ನಾಟಕಗಳು; ಬಂಗಾರದ ಪೆಟ್ಟಿಗೆ, ನೀತಿ ಬೋಧಕ ಮಕ್ಕಳ ರಾಮಾಯಣ ಮೊದಲಾದ ಮಕ್ಕಳ ಕಥಾ ಸಂಕಲನಗಳು; ಜಾಣಮರಿ; ಮೊಗ್ಗು ಮೊದಲಾದ ಶಿಶುಗೀತೆಗಳ ಸಂಗ್ರಹಗಳು ಪ್ರಕಟವಾಗಿವೆ. ಕಥೆ, ಕಾದಂಬರಿಗಳಂತಹ ಗಂಭೀರ ಸಾಹಿತ್ಯದ ಜೊತೆಗೆ ನಗೆಲೇಖನ ಸಂಗ್ರಹಗಳು, ವ್ಯಕ್ತಿತ್ವ ವಿಕಸನ ಪುಸ್ತಕಗಳು ಮತ್ತು ದೈನಂದಿನ ಒತ್ತಡದ ನಡುವೆಯೂ ಆರೋಗ್ಯದತ್ತ ಎಚ್ಚರಿಸಲು ಸಹಾಯವಾಗುವಂತಹ ಹಲವಾರು ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ವ್ಯಕ್ತಿತ್ವ ವಿಕಸನದ ಕೃತಿಗಳಾದ – ಆಕರ್ಷಕ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳುವುದು ಹೇಗೆ?, ವ್ಯಕ್ತಿತ್ವ ವಿಕಸನ ಮಾರ್ಗದರ್ಶಿ, ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಲಿ ಮುಂತಾದ ಕೃತಿಗಳ ಜೊತೆಗೆ ಮಾನಸಿಕ ಆರೋಗ್ಯ ಸುಖೀ ದಾಂಪತ್ಯ ಜೀವನದ ಸಹಬಾಳ್ವೆಗೆ ಸಂಬಂಧಿಸಿದ ಕೃತಿಗಳಾದ ಮಾನಸಿಕ ಒತ್ತಡ-ನಿವಾರಣೋಪಾಯಗಳು, ಮಾನಸಿಕ ಒತ್ತಡ ಕಾಡುತ್ತಿದೆಯೇ? ಮನೋಖಿನ್ನತೆ, ನಿರ್ಲಕ್ಷ್ಯಬೇಡ, ಆತಂಕದಿಂದ ಹೊರಬನ್ನಿ, ಡಿಪ್ರೆಷನ್‌ ನಿವಾರಣೆಗೆ ೧೦೮ ಸಲಹೆಗಳು, ವಾಕಿಂಗ್‌ಮಾಡಿ, ಗೀಳು ಮನೋರೋಗ, ಥೈರಾಯ್ಡ್‌ ತೊಂದರೆ, ಧೂಮಪಾನದಿಂದ ಮುಕ್ತರಾಗಬೇಕೇ? ಅಂತಃಪುರದ ಅಂತರಂಗದ ಮಾತು, ಪತಿ-ಪತ್ನಿ ಸುಖವಾಗಿರಬೇಕು? ಮುಂತಾದ ಕೃತಿಗಳನ್ನೂ ರಚಿಸಿದ್ದಾರೆ. ಹನ್ನೆರಡು ಕಥೆಗಾರರ ಕಥಾಸಂಗ್ರಹ ‘ವರ್ಷ, ನೂರು ಕವಿಗಳ ನೂರು ಕವನಗಳ ಸಂಗ್ರಹ ‘ಶತಮಾನ’, ಐವತ್ತು ಕವಿಗಳ ಕವನ ಸಂಗ್ರಹ ‘ಗುಚ್ಛ’ ಜೊತೆಗೆ ತಜ್ಞ ವೈದ್ಯರುಗಳು ಬರೆದ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳ ಕೃತಿ ‘ಆರೋಗ್ಯಸಂಜೀವಿನಿ’, ಎಸ್‌.ಡಿ. ಗಾಂವ್‌ಕರ್ ವ್ಯಕ್ತಿ ಪರಿಚಯದ ಗ್ರಂಥ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ತಿಂಗಳ ಕಾರ್ಯಕ್ರಮವಾದ ‘ಮನೆಯಂಗಳದಲ್ಲಿ ಮಾತುಕತೆ’ಯ ಕೃತಿ ರೂಪದ ಪುಸ್ತಕ ಮುಂತಾದವುಗಳನ್ನೂ ಸಂಪಾದಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಬೆಳೆದದ್ದು ತಾಯಿಯಿಂದಲೇ. ತಾಯಿ ಬಿಡಿಸುತ್ತಿದ್ದ ಕೃಷ್ಣನ ರೇಖಾಚಿತ್ರದಲ್ಲಿ ಪ್ರತಿರೇಖೆಯೂ ಜೀವತುಂಬಿ ನಿಂತಿರುತ್ತಿದ್ದ ಕೃಷ್ಣನ ಚಿತ್ರ ನೋಡಿ ಉತ್ತೇಜಿತರಾಗಿದ್ದು, ಜೊತೆಗೆ ಇವರ ಸ್ನೇಹಿತರ ಮನೆಯಲ್ಲಿ ಕಟ್ಟು ಹಾಕಿಸಿಟ್ಟಿದ್ದ ಪೆನ್ಸಿಲ್‌ ಸ್ಕೆಚ್‌ನ ನಿಜಲಿಂಗಪ್ಪನವರ ಚಿತ್ರ. ಇವೆರಡು ಇವರಿಗೆ ಚಿತ್ರಕಲೆಯಲ್ಲಿ ಆಸಕ್ತಿಮೂಡಿಸಿ, ಅ.ನ. ಸುಬ್ಬರಾಯರ ಕಲಾಮಂದಿರದಿಂದ ಕಲಿತ ಚಿತ್ರಕಲೆ. ವಿಶಿಷ್ಟವಾಗಿದ್ದುದನ್ನು ಸಾಧಿಸಬೇಕೆಂದು ಆಯ್ದುಕೊಂಡದ್ದು ಚುಕ್ಕಿ ಚಿತ್ರಕಲೆ. ಇದು ತಾಳ್ಮೆ, ಏಕಾಗ್ರತೆ, ದೃಢಸಂಕಲ್ಪವನ್ನು ಬೇಡುವ ಕಲೆ. ಸತತ ಆರೇಳು ಗಂಟೆಗಳ ಕಾಲ ಒಂದೆಡೆ ಕುಳಿತು ಚಿತ್ರ ರಚಿಸುವ ಶ್ರಮದಾಯಕ ಕಲೆ. ಸುಪ್ರಸಿದ್ಧ ಕನ್ನಡ ಸಾಹಿತಿಗಳ ಚುಕ್ಕಿ ಭಾವಚಿತ್ರಗಳನ್ನೂ ಬಿಡಿಸಿದ್ದು, ನಾಡಿನ ಪ್ರಮುಖ ಪತ್ರಿಕೆಗಳ ಉಗಾದಿ, ದೀಪಾವಳಿ ವಿಶೇಷಾಂಕಗಳಲ್ಲಿ ಪ್ರಕಟವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿ ಹೊರ ತಂದಿರುವ ‘ಸಾಲು ದೀಪಗಳು’ ಪರಿಷ್ಕೃತ (೨೦೦೧) ಆವೃತ್ತಿಯಲ್ಲಿ ಚುಕ್ಕಿ ಚಿತ್ರಗಳು, ಕನಕಪುರದಲ್ಲಿ ನಡೆದ ೬೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ (೧೯೯೮) ಸಂದರ್ಭಕ್ಕಾಗಿ ಕಾರ್ಡ್ ರೂಪದಲ್ಲಿ ಕನ್ನಡ ಸಾಹಿತ್ಯ ಪರಷತ್ತಿಗಾಗಿ ಚುಕ್ಕಿಚಿತ್ರಗಳ ರಚನೆ, ಕನ್ನಡ ಪ್ರಸಿದ್ಧ ನೂರು ಸಾಹಿತಿಗಳ ಚುಕ್ಕಿ ಭಾವಚಿತ್ರ ಮತ್ತು ಪರಿಚಯವನ್ನೊಳಗೊಂಡ ಗ್ರಂಥ “ಚುಕ್ಕಿಚಿತ್ರದಲ್ಲಿ ಶತಸಾಹಿತ್ಯ ಪ್ರತಿಭೆ” (೧೯೯೯, ೨೦೦೫) ಪ್ರಕಟವಾಗಿದೆ. ಆಕಾಶವಾಣಿ, ದೂರದರ್ಶನಗಳಲ್ಲಿ ಅತಿಥಿಯಾಗಿ ಇವರ ಸಂದರ್ಶನವು ಪ್ರಸಾರವಾಗಿರುವುದರ ಜೊತೆಗೆ ಹಲವಾರು ಸಭೆ ಸಮಾರಂಭಗಳ ಮುಖ್ಯ ಅತಿಥಿಯಾಗಿ, ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದಾರೆ. ಇವರ ವಿವಿಧ ಪ್ರಕಾರದ ಚಟುವಟಿಕೆಗಳಿಗಾಗಿ ಗೊರೂರು ಸಾಹಿತ್ಯ ಪ್ರಶಸ್ತಿ, ಕನ್ನಡಸಿರಿ, ರಾಜಕುಮಾರ್ ಸದ್ಭಾವನ ಪುರಸ್ಕಾರ, ಬಸವನಗುಡಿ ರತ್ನ, ದೈವಜ್ಞ ಭೂಷಣ ಮುಂತಾದ ಪ್ರಶಸ್ತಿ ಪುರಸ್ಕಾರಗಳಲ್ಲದೆ ಹಲವಾರು ಸಂಘ-ಸಂಸ್ಥೆಗಳಿಂದಲೂ ಗೌರವಿಸಲ್ಪಟ್ಟಿದ್ದಾರೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top