LOADING

ಹುಡುಕಲು ಟೈಪ್ ಮಾಡಿ

ಮನೆಯಂಗಳದಲ್ಲಿ ಮಾತುಕತೆ ಯಕ್ಷಗಾನ ಭಾಗವತರು

ಕಲ್ಮನೆ ನಂಜಪ್ಪ

ಜನಪದ ನಾಡಿನ ಹೆಮ್ಮೆ. ಸರ್ವ ಕಲೆಗಳ ಮೂಲಸೆಲೆ. ದೇಸೀ ಕಲೆಗೆ ಹತ್ತಾರು ರೂಪ, ನೂರಾರು ಸ್ವರೂಪ. ಪ್ರತಿ ರೂಪ-ಪ್ರಕಾರಕ್ಕೂ ಉಂಟು ಘನ ಇತಿಹಾಸ-ಪರಂಪರೆ. ಕರಾವಳಿಯ ದೇಸೀ ಕಲೆ ಯಕ್ಷಗಾನದಷ್ಟೇ ಮೂಡಲಪಾಯ ಯಕ್ಷಗಾನವೂ ಪುರಾತನ, ನಿತ್ಯನೂತನ. ಬಯಲಾಟವಾದ ಮೂಡಲಪಾಯ ಯಕ್ಷಗಾನದ ಕಲೆಯನ್ನೇ ಬದುಕಿದ ಧ್ಯಾನ-ತಪ್ಪಸ್ಸಿನ ಯಾನವಾಗಿಸಿಕೊಂಡ ಸಾಧಕರಲ್ಲಿ ಅರಳಗುಪ್ಪೆಯ ಕಲ್ಮನೆ ನಂಜಪ್ಪ ಪ್ರಮುಖರು. ಯಕ್ಷಗಾನದ ಧೀಮಂತ ಭಾಗವತರು, ಹಲವು ಕಲೆಗಳ ನುರಿತ ಕಲಾವಿದರು, ಪ್ರಖ್ಯಾತ ಪ್ರಸಂಗಕಾರರು, ಪ್ರಗತಿಪರ ಕೃಷಿಕರು, ಯಶಸ್ವಿ ಸಂಘಟಕರು, ಶಿಷ್ಯರ ನೆಚ್ಚಿನ ಕಲಾಗುರು.
ಕಲ್ಮನೆ ನಂಜಪ್ಪ ತುಮಕೂರು ಜಿಲ್ಲೆಯ ದೇಸೀ ಪ್ರತಿಭೆ. ಮೂಡಲಪಾಯ ಯಕ್ಷಗಾನದ ಬೀಡಾದ ತಿಪಟೂರು ತಾಲ್ಲೂಕಿನ ಅರಳಗುಪ್ಪೆ ಹುಟ್ಟೂರು. ಅವಿಭಕ್ತ ಅಪ್ಪಟ ಕಲಾವಿದರ ಕುಟುಂಬದ ಕುಡಿ. ಆಕಾಲದಲ್ಲೇ ತೊಳೆಬಾಗಿಲಿಗೆ ಕಲ್ಲು ಇಟ್ಟಿದ್ದ ಮಾಳಿಗೆ ಮನೆಯ ಮನೆತನ. ಐದು ಕಲ್ಲಿನ ಮನೆಗಳನ್ನು ಕಟ್ಟಿದ ಈ ಮನೆತನ ಆನಂತರ ಕಲ್ಮನೆಯವರಾಗಿ ಜನಜನಿತ.
ನಂಜಪ್ಪ ಕೂಲಿಮಠದ ಮೇಷ್ಟ್ರ ಮಗ. ಅಪ್ಪ ಶಿವನಂಜಪ್ಪ, ಅಜ್ಜ ಮಲ್ಲಿಕಾರ್ಜುನಪ್ಪ, ಮಾವ ಸಿದ್ದಲಿಂಗಪ್ಪ ಎಲ್ಲರೂ ಯಕ್ಷಗಾನದ ಭಾಗವತರು. ಹಾಗಾಗಿ ಬಣ್ಣದ ಸೆಳೆತ-ವೇಷಗಳ ಪ್ರಭಾವ ಸಹಜ, ಕಲೆ ರಕ್ತಗತ. ಆರನೇ ವಯಸ್ಸಿಗೆ ಸ್ತ್ರೀ ಪಾತ್ರದ ಮೂಲಕ ರಂಗಪ್ರವೇಶ. ಬಾಲಗೋಪಾಲ, ಲಕ್ಷ್ಮಿ, ಸರಸ್ವತಿ, ಶಾರದೆ ಬಣ್ಣ ಹಚ್ಚಿದ ಆರಂಭಿಕ ಪಾತ್ರಗಳು. ಸುವಿಖ್ಯಾತ ‘ಚನ್ನಬಸವ ಪುರಾಣ’ ಕೇಳುತ್ತಲೇ ಬೆಳೆದ ಸುಯೋಗ. ಹರೆಯದೊತ್ತಿಗೆ ದಕ್ಷಯಜ್ಞದ ದಕ್ಷ, ದೇವಿಮಹಾತ್ಮೆಯ ಶಕ್ತ ಬೀಜಾಸುರ, ಶಿವಜಲಂಧರದ ಜಲಂಧರ, ಸತ್ಯಚಿತ್ರಕೇತು ಮತ್ತಿತರ ಪ್ರಮುಖ ಪಾತ್ರಗಳಿಗೆ ಜೀವತುಂಬಿ ಮನ್ನಣೆ ಪಡೆದ ವೇಷಧಾರಿ. ಯಾವುದೇ ಪಾತ್ರವಾದರೂ ಅಭಿನಯ ಸಹಜ-ಪ್ರತಿಭಾಪೂರ್ಣ-ಸಂಪನ್ನ. ಓದಿನಂಗಳದಲ್ಲೂ ನಂಜಪ್ಪನವರು ಉತ್ತಮ ವಿದ್ಯಾರ್ಥಿ. ಲೋಯರ್ ಸೆಕೆಂಡ್ರಿ ಓದುತ್ತಿದ್ದ ಹುಡುಗನನ್ನು ಮನೆಕಟ್ಟುವುದಕ್ಕಾಗಿ ಶಾಲೆ ಬಿಡಿಸಿದ್ದು ವಿಚಿತ್ರವೆನಿಸಿದರೂ ಅಂದಿಗೆ ಮನೆತನಕ್ಕದು ಅನಿವಾರ್ಯ. ಆ ದಿನಗಳಲ್ಲಿ ಭಾಗವತರನ್ನು ದೇವರಂತೆ ಕಾಣುತ್ತಿದ್ದುದನ್ನು ಕಂಡು ಭಾಗವಂತಿಕೆ ಕಡೆಗೆ ಆಕರ್ಷಣೆ. ಸಿದ್ದಲಿಂಗಪ್ಪರ ಗರಡಿಯಲ್ಲಿ ಭಾಗವಂತಿಕೆ ಕರಗತ. ಮುಂದಿನದು ಅಚ್ಚಳಿಯದ ಕಲಾ ಇತಿಹಾಸ. ದಕ್ಷಿಣಾದಿ ಮತ್ತು ಉತ್ತರಾದಿ ದಾಟಿಯ ಕಥೆಗಳೆಲ್ಲವೂ ಕಂಠಪಾಠ. ದೇವಿಮಹಾತ್ಮೆ, ರತಿಕಲ್ಯಾಣ, ಕರ್ಣಪರ್ವ, ತ್ರಿಪುರ ಸಂಹಾರ, ದೇವಿಮಹಾತ್ಮೆ, ಶನಿ ಮಹಾತ್ಮೆ, ಮಾರ್ಕಂಡೇಯ ಚರಿತ್ರೆ, ಕುಶಲವರ ಕಾಳಗ, ಕನಕಾಂಗಿ ಕಲ್ಯಾಣ ಮುಂತಾದ ಕಥೆಗಳ ಪ್ರದರ್ಶನ. ಸಾವಿರಾರು ಕಾರ್ಯಕ್ರಮಗಳ ಸರದಾರ. ಹರಿಕಥೆ-ಶಿವಕಥೆಗಳನ್ನು ಯಕ್ಷಗಾನ ದಾಟಿಗೆ ಅಳವಡಿಸಿದ ರೂಪಾಂತರಕಾರ, ಪ್ರಸಂಗಕಾರರೂ ಸಹ. ಹೊಸ ಪೀಳಿಗೆಗೆ ಯಕ್ಷಗಾನ ಬಯಲಾಟವನ್ನು ಕಲಿಸಿದ ಹಿರಿಮೆ. ಬಹುಮುಖ ಪ್ರತಿಭೆ ನಂಜಪ್ಪನವರು ಅತ್ಯುತ್ತಮ ಬಡಗಿ, ನುರಿತ ಕೌಶಲ್ಯವುಳ್ಳ ಚಿತ್ರರಚನಾಕಾರರೂ ಸಹ. ಭಾಗವತಿಕೆಯ ಜೊತೆಗೆ ಆಟಗಳಿಗೆ ಅಗತ್ಯವಿರುವ ವೇಷಭೂಷಣಗಳ ತಯಾರಿಯಲ್ಲೂ ಸಿದ್ಧಹಸ್ತರು. ಯಕ್ಷಗಾನ ಸಂಗ್ರಹಾಲಯದ ರೂವಾರಿ. ಬೇಸಾಯದಲ್ಲಿ ಭರ್ಜರಿ ಬೆಳೆ ತೆಗೆವ ಪ್ರಗತಿಪರ ಕೃಷಿಕರೂ ಕೂಡ. ಶ್ರೀ ಕಲ್ಲೇಶ್ವರಸ್ವಾಮಿ ಯಕ್ಷಗಾನ ಮಂಡಳಿ ಸ್ಥಾಪಿಸಿ ಮೂರೂವರೆ ದಶಕಗಳಿಂದಲೂ ಸಾವಿರಾರು ಕಾರ್ಯಕ್ರಮಗಳ ಮೂಲಕ ಮೂಡಲಪಾಯ ಯಕ್ಷಗಾನದ ಉಳಿವಿಗೆ ಶ್ರಮಿಸಿದ ಕಲಾಚೇತನ. ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ-ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದ ಅಕಾಡೆಮಿಯ ಸದಸ್ಯತ್ವ, ಜಾನಪದ ಪರಿಷತ್ತಿನ ಪ್ರಶಸ್ತಿಗಳಿಂದ ಪುರಸ್ಕೃತರಾದ ಕಲ್ಮನೆ ನಂಜಪ್ಪನವರು ನಾಡಿನ ಕಲಾಪರಂಪರೆ ಬೆಳಗಿದ ಅಪೂರ್ಯ ದೇಸೀ ಕಲಾರತ್ನ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *

ಮಹತ್ವದ ಜಾಲತಾಣಗಳು

ಇ ಆಡಳಿತ ಜಾಲತಾಣ

ಇ-ಸೇವೆಗಳು

ಸಾಮಾನ್ಯ ಅಂಕಿ ಅಂಶ

ಸರ್ಕಾರದ ಆ್ಯಪ್ ಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು