LOADING

ಹುಡುಕಲು ಟೈಪ್ ಮಾಡಿ

ನಾಟಕ ಮನೆಯಂಗಳದಲ್ಲಿ ಮಾತುಕತೆ ರಂಗಭೂಮಿ ಕಲಾವಿದರು

ಚಿಂದೋಡಿ ಶ್ರೀಕಂಠೇಶ್

ಪ್ರದರ್ಶಕ ಕಲೆಗಳಲ್ಲಿ ರಂಗಭೂಮಿಗೆ ವಿಶೇಷ ಸ್ಥಾನ. ಬದುಕಿನ ರಂಗದ ಅನುಭವ-ಅನುಭಾವಗಳು ಪಾತ್ರ, ಸನ್ನಿವೇಶಗಳಾಗಿ ರಂಗಭೂಮಿಯಲ್ಲಿ ವಿರ್ಭವಿಸುವುದು ರಂಗಕಲೆಯ ವಿಶೇಷ. ರಂಗಕಾಯಕ ಹವ್ಯಾಸಿಗಳಿಗೆ ಆತ್ಮಸಂತೋಷದ ಸನ್ಮಾರ್ಗವಾದರೆ, ವೃತ್ತಿಪರರಿಗದು ಭಾವ-ಬಾಳಿಗೆರಡಕ್ಕೂ ಆಸರೆ.
ವೃತ್ತಿರಂಗಭೂಮಿಯ ಭವ್ಯ ಇತಿಹಾಸದಲ್ಲಿ ಚಿಂದೋಡಿ ಮನೆತನದ್ದು ಅಳಿಸಲಾಗದ ಹೆಜ್ಜೆಗುರುತು. ಮೂರು ತಲೆಮಾರುಗಳ ನಿರಂತರ ರಂಗಸೇವೆ ಈ ಮನೆತನದ ವೈಶಿಷ್ಟ್ಯ. ರಂಗಭೂಮಿಯನ್ನೇ ಕರ್ಮಭೂಮಿಯಾಗಿಸಿಕೊಂಡ ಈ ಸಾಧಕರ ಕುಟುಂಬದ ರಂಗರತ್ನ ಚಿಂದೋಡಿ ಶ್ರೀಕಂಠೇಶ್, ಆರು ದಶಕಗಳಿಂದಲೂ ರಂಗಸೇವಾನಿರತ ಸಾಧಕರು.
ನಟ, ನಿರ್ದೇಶಕ, ನಾಟಕಕಾರ, ಸಂಘಟಕ, ಮಾಲೀಕರಾಗಿ ವೃತ್ತಿರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿರುವ ಚಿಂದೋಡಿ ಶ್ರೀಕಂಠೇಶ್ ಮಧ್ಯಕರ್ನಾಟಕದ ದೈತ್ಯ ಪ್ರತಿಭೆ. ದಾವಣಗೆರೆ ತಾಯ್ನೆಲ. 1957ರಲ್ಲಿ ಜನನ. ಪ್ರತಿಷ್ಠಿತ ಕೆ.ಬಿ.ಆರ್.ಡ್ರಾಮಾ ಕಂಪನಿಯ ಮಾಲೀಕರಾಗಿದ್ದ ನಟರತ್ನ ಚಿಂದೋಡಿ ವೀರಪ್ಪ-ಲಕ್ಷ್ಮೀದೇವಿ ದಂಪತಿಯ ಪುತ್ರರು. ಓದಿದ್ದು ಪ್ರೌಢಶಾಲೆಯವರೆಗೆ ಮಾತ್ರ. ರಂಗಪರಿಸರದಲ್ಲೇ ಬೆಳೆದ ಶ್ರೀಕಂಠೇಶ್ ಅವರಿಗೆ ಬಾಲ್ಯದಿಂದಲೂ ಅಕ್ಷರಕ್ಕಿಂತ ಬಣ್ಣದ ಮೇಲೆಯೇ ತೀರದ ಮೋಹ. 5ನೇ ವಯಸ್ಸಿನಲ್ಲೇ ರಂಗಪ್ರವೇಶ. ಬೆಳ್ಳಿಬಂಗಾರ ನಾಟಕದ ಭದ್ರ ಬಣ್ಣ ಹಚ್ಚಿದ ಚೊಚ್ಚಲ ಪಾತ್ರ. ಅಪ್ಪ-ಅಮ್ಮನೇ ರಂಗಗುರುಗಳು. ನಿತ್ಯವೂ ರಂಗಪ್ರಯೋಗ-ಪಾತ್ರಗಳೊಡನೆ ಸಖ್ಯ. ಬದುಕು-ಭಾವವೆರಡೂ ರಂಗಭೂಮಿಯೇ ಆದಾಗ ತರಹೇವಾರಿ ಪಾತ್ರಗಳ ನಿರ್ವಹಣೆ. ಹಾಸ್ಯ ಪಾತ್ರ, ಕಥಾನಾಯಕ, ಖಳನಾಯಕ, ಪೋಷಕ ಕಲಾವಿದ ಮುಂತಾದ ವೈವಿಧ್ಯಮಯ ಪಾತ್ರಗಳಿಂದ ಜನಜನಿತ. ಗುರುವಿನ ಗದ್ಲ, ಹಳ್ಳಿಹುಡುಗಿ, ಬ್ರಹ್ಮಚಾರಿಯ ಮಗ, ಲಂಕಾದಹನ, ಶ್ರೀಕರಿಬಸವೇಶ್ವರ ಮಹಾತ್ಮೆ, ಪೊಲೀಸರ ಮಗಳು, ಶಿರಡಿ ಶ್ರೀ ಸಾಯಿಬಾಬಾ, ಯಾವ ಹೂವು ಯಾರ ಮುಡಿಗೋ, ಹೆಣ್ಣಿಗೆ ಹಠ ಗಂಡಿಗೆ ಛಲ, ದುಡುಕಿ ಹೋದ ಮಗ ಹುಡುಕಿ ಬಂದ ಸೊಸೆ ಮತ್ತಿತರ ನೂರಾರು ನಾಟಕ, ಸಾವಿರಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಬಣ್ಣ ಹಚ್ಚಿದ ಹಿರಿಮೆ.
1985ರಲ್ಲಿ ತಂದೆಯ ನಿಧನದ ಬಳಿಕ ಕೆ.ಬಿ.ಆರ್.ಡ್ರಾಮಾ ಕಂಪನಿಯ ಮಾಲೀಕತ್ವದ ಹೊಣೆ. ಹೊಸ ಹೊಸ ರಂಗಪ್ರಯೋಗಗಳಿಂದ ಕಂಪನಿಗೆ ಭದ್ರ ನೆಲೆ ಒದಗಿಸಿಕೊಟ್ಟ ಹೆಗ್ಗಳಿಕೆ. ನಿರ್ದೇಶಕ, ತಂತ್ರಜ್ಞ, ಬರಹಗಾರ, ಸಂಘಟನಾಕಾರರಾಗಿ ಅಮೂಲ್ಯ ರಂಗಸೇವೆ. ನಿದ್ದಿಗೆಡಿಶ್ಯಾಳ ಬಸಲಿಂಗಿ, ಸಿಂಪಲ ಹುಡುಗ ಡಿಂಪಲ ಹುಡುಗಿ ಮತ್ತಿತರ ನಾಟಕಗಳ ರಚನಕಾರರು. ಚಿತ್ರರಂಗಕ್ಕೂ ಕಲಾಸೇವೆ ವಿಸ್ತಾರ. ಎಷ್ಟು ನಗ್ತಿ ನಗು, ಶಂಭೋ ಶಂಕರ ಚಿತ್ರಗಳ ನಿರ್ಮಾಪಕರು ಕೂಡ. 17 ವರ್ಷಗಳ ಕಾಲ ಶ್ರಾವಣ ಮಾಸದಲ್ಲಿ ಅನ್ಯದಾಸೋಹದ ಸಾಮಾಜಿಕ ಸೇವೆ. ಅಪಾರ ಕಲಾಪ್ರೇಮದ ಶ್ರೀಕಂಠೇಶ್ರ ರಂಗಸೇವೆ ಅಗಣಿತ. 62 ವರ್ಷಗಳ ನಿರಂತರ ರಂಗಕಾಯಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ, ಅವ್ವ ಪ್ರಶಸ್ತಿ, ರಂಗಶ್ರೀ ಪ್ರಶಸ್ತಿ, ಮತ್ತಿತರ ಪ್ರಶಸ್ತಿ, ನಟಕುಶಲ, ಕಲಾಚತುರ ಬಿರುದುಗಳಿಂದ ಭೂಷಿತರಾಗಿರುವ ವೃತ್ತಿರಂಗಭೂಮಿಯ ಅನರ್ಘ್ಯ ರತ್ನ.

ಟ್ಯಾಗ್‌ಗಳು:
ಹಿಂದಿನ ಲೇಖನ
ಮುಂದಿನ ಲೇಖನ

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *

ಮಹತ್ವದ ಜಾಲತಾಣಗಳು

ಇ ಆಡಳಿತ ಜಾಲತಾಣ

ಇ-ಸೇವೆಗಳು

ಸಾಮಾನ್ಯ ಅಂಕಿ ಅಂಶ

ಸರ್ಕಾರದ ಆ್ಯಪ್ ಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು