LOADING

ಹುಡುಕಲು ಟೈಪ್ ಮಾಡಿ

ಜೋಗತಿ ನೃತ್ಯ ಕಲಾವಿದರು ಮನೆಯಂಗಳದಲ್ಲಿ ಮಾತುಕತೆ

ಮಾತಾ ಬಿ.ಮಂಜಮ್ಮ ಜೋಗತಿ

ಕಲೆ ಸದಾ ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ ಹಾಗೂ ಲಿಂಗಾತೀತ. ಕಲೆ ಆರಾಧಿಸುವವರ ಸ್ವತ್ತು, ಪೂಜಿಸುವವರ ದೈವ. ಪರಿಶ್ರಮಿಗಳ ಅಂಗೈನ ಅರಗಿಣಿ, ಪ್ರತಿಭಾವಂತರ ತಪ್ಪಸ್ಸಿನ ಪೂಜಾಫಲ. ಸಹಜತೆಯನ್ನು ಮೀರಿ ಅಸಾಮಾನ್ಯ ಸಾಧನೆಗೈಯುವುದು ಸಾಧಕರಿಗೆ ಮಾತ್ರ ಸಾಧ್ಯ. ಲೋಕನಿಂದನೆ, ಕೌಟುಂಬಿಕ ಅನಾದಾರ, ಸಾಮಾಜಿಕ ಬಹಿಷ್ಕಾರಗಳಂತಹ ಕೆಂಡದ ಮಳೆಯಲ್ಲಿ ತೊಯ್ದು ಬದುಕು ಕಟ್ಟಿಕೊಳ್ಳುವವರು ವಿರಳಾತಿವಿರಳರು. ಅಂತಹ ಅಪೂರ್ವ, ಅನನ್ಯ ಸಾಧನೆಗೈದ ಕಲಾಚೇತನ ಬಿ.ಮಂಜಮ್ಮ ಜೋಗತಿ.
ಮಂಜಮ್ಮ ಜೋಗತಿ ಸಾಧಕಿಯಾದ ಮಂಗಳಮುಖಿ. ಹೆಸರಾಂತ ಜನಪದ ನೃತ್ಯಗಾರ್ತಿ, ಹಾಡುಗಾರ್ತಿ, ರಂಗಕಲಾವಿದೆ, ವಾದ್ಯಗಾರ್ತಿ ಜೊತೆಗೆ ಕಲಾಸಂಘಟಕಿ. ಮಂಜಮ್ಮ ಅವರ ಬದುಕೇ ಅಗ್ನಿಕುಂಡ. ನೋವು-ಸಂಕಟ-ಸಮಸ್ಯೆಗಳ ಸಾಲಂಕೃತ ಮೆರವಣಿಗೆ. ಬಯಲಿಗೆ ಬಂದ ಬದುಕನ್ನು ಕಲೆಯ ಸ್ಪರ್ಶಮಣಿಯಿಂದ ಬಂಗಾರವಾಗಿಸಿಕೊಂಡ ಸಾಧಕ ಚೇತನ.
ಮಂಜಮ್ಮ ಕಲಾಲೋಕಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ. ಹುಟ್ಟಿದ್ದು ತಗ್ಗಿನಮಠ ಎಂಬ ಊರಿನ ಓಣಿಯಲ್ಲಿ. ಜನ್ಮನಾಮ ಬಿ. ಮಂಜುನಾಥ ಶೆಟ್ಟಿ. ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಯ ಸುಪುತ್ರರು. ಎಲ್ಲ ಮಕ್ಕಳಂತೆ ಆಡು, ಓದು, ಕುಣಿತದ ಸಡಗರದ ಬಾಲ್ಯ. ಆದರೆ, ಏಳನೇ ತರಗತಿಯ ವೇಳೆಗೆ ಶರೀರದಲ್ಲಿ ವಿಚಿತ್ರ ಏರುಪೇರು, ದೇಹದಲ್ಲಿ ದಿಢೀರಾಗಿ ಹೆಣ್ಣಿನ ಲಕ್ಷಣಗಳು ಗೋಚರಿಸಿದಾಗ ಹೆಣ್ಣಾಗಿ ಬದುಕಬೇಕೆಂಬ ಹಂಬಲ ಮೂಡಿದ್ದು ಸಹಜವೇ. ಆದರೆ, ಲೋಕಕ್ಕದು ಅಸಹಜ. ಪರಿಣಾಮ ಕೌಟುಂಬಿಕ, ಸಾಮಾಜಿಕ ಬಹಿಷ್ಕಾರದ ಬರಸಿಡಿಲು. ಆತ್ಮಹತ್ಯೆಗೆ ಯತ್ನಿಸಿಯೂ ಬದುಕಿಕೊಂಡ ಮೇಲೆ ಬದುಕು-ಭಾವವೆರಡು ಸಮಾಜಮುಖಿಯಾಗಲು ದೃಢತೀರ್ಮಾನ. ಮಂಜುನಾಥಶೆಟ್ಟಿ ‘ಮಂಜಮ್ಮ’ಳಾಗಿ ರೂಪಾಂತರ. ಆ ಹಂತದಲ್ಲಿ ದೊರೆತ ಕಾಳವ್ವ ಜೋಗತಿಯೇ ಗುರು, ತಾಯಿ, ಮಾರ್ಗದರ್ಶಕಿ-ದಿಕ್ಕುದೆಸೆ ಎಲ್ಲವೂ.
೧೯೮೫ರಲ್ಲಿ ಹೊಸಪೇಟೆ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಸ್ವೀಕಾರ. ಮುಂದಿನ ಬದುಕು ‘ಸೇವೆ’ಗೆ ಮುಡಿಪು. ಕಾಳವ್ವ ಜೋಗತಿ ಅವರಿಂದ ಜಾನಪದ ನೃತ್ಯ, ಹಾಡುಗಾರಿಕೆ ಮತ್ತಿತರ ಕಲೆಗಳೆಲ್ಲದರಲ್ಲೂ ತರಬೇತಿ. ಕಲಾವಿದೆಯಾಗಿ ಬದಲಾದ ಮಂಗಳಮುಖಿ! ತುಮಕೂರಿನಲ್ಲಿ ನಡೆದ ಅಖಿಲ ಕರ್ನಾಟಕ ಮಹಿಳಾ ಜಾಣಪದ ಸಮ್ಮೇಳನದಲ್ಲಿ ಕಲಾಪ್ರದರ್ಶನ ನೀಡುವುದರೊಂದಿಗೆ ಕಲಾಯಾನಕ್ಕೆ ಮುನ್ನುಡಿ. ಆನಂತರದ್ದು ಕಲೆಯೇ ಸಾಧನಾ ಪಥ. ಶ್ರೀ ರೇಣುಕಾ ಚರಿತ್ರೆ ನಾಟಕದ ಮುಖ್ಯ ಹಾಡುಗಾರ್ತಿ, ಗೌಡಶಾನಿ, ಕಾಮಧೇನು, ಪರಶುರಾಮ ಸೇರಿ ೭ ಪಾತ್ರಗಳ ನಿರ್ವಹಣೆ. ಸಾವಿರಾರು ಪ್ರದರ್ಶನದಲ್ಲಿ ಕಲಾಪ್ರೇಮಿಗಳ ಹೃನ್ನನ ಸೆಳೆದ ಕಲಾವಂತಿಕೆ. ಕಾಳವ್ವ ಜೋಗತಿಯವರ ಅಗಲಿಕೆಯ ನಂತರ ರೇಣುಕಾದೇವಿಯ ಪಾತ್ರದಲ್ಲೂ ಬೆಳಗುವಿಕೆ. ಮರಿಯಮ್ಮನಹಳ್ಳಿಯ ಮಾರುಕಲಾರಂಗದ ಬಯಲಾಟಗಳಲ್ಲಿ ನರ್ತಕಿಯಾಗಿ ಜನಜನಿತ. ಮೋಹಿನಿ ಭಸ್ಮಾಸುರ, ಹೇಮರೆಡ್ಡಿ ಮಲ್ಲಮ್ಮ, ಮೋಹನ್‌ಲಾಲಾ ಮುಂತಾದ ಪಾತ್ರಗಳಲ್ಲಿ ಮಿಂಚಿದ ರಂಗಕಲಾವಿದೆ. ವಾದ್ಯಗಾರ್ತಿಯಾಗಿಯೂ ಮೋಡಿ ಮಾಡಿದ ಕಲಾನಿಪುಣೆ.
ಹಂಪಿ ಉತ್ಸವ, ಬೀದರ್ ಉತ್ಸವ, ಜಾನಪದ ಲೋಕೋತ್ಸವ, ವಿಶ್ವ ಗೋ ಸಮ್ಮೇಳನ, ಜಾನಪದ ಜಾತ್ರೆ ಮುಂತಾದ ನಾಡಿನೆಲ್ಲಾ ಪ್ರಮುಖ ಉತ್ಸವಗಳಲ್ಲಿ ಹಾಗೂ ನಾಡಿನಾಚೆಯ ಸಾಂಸ್ಕೃತಿಕ ಉತ್ಸವಗಳಲ್ಲೂ ಕಲಾಪ್ರದರ್ಶನ. ಸಾವಿರಾರು ಕಾರ್ಯಕ್ರಮಗಳು, ಎಲ್ಲೆಡೆ ಮೆಚ್ಚುಗೆಯ ಕರತಾಡನ.
ಸತತ ನಾಲ್ಕು ದಶಕಗಳಿಂದಲೂ ನಿರಂತರ ಕಲಾಸೇವೆಗೈದಿರುವ ಮಂಜಮ್ಮ ಜೋಗತಿ ಅಶಕ್ತ ಹೆಣ್ಣುಮಕ್ಕಳು-ದಿಕ್ಕೇ ಕಾಣದ ತೃತೀಯಲಿಂಗಿಗಳ ಪಾಲಿಗೆ ಸ್ಫೂರ್ತಿಯ ಚೇತನವಾಗಿದ್ದು ವಿಶೇಷ. ನಿತ್ಯ ಬದುಕಿನ ಹೋರಾಟ, ಸಮಾಜದ ಕುಹುಕ ಮಾತುಗಳ ಮಧ್ಯೆ ತಮ್ಮದೇ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆ ಕಂಡುಕೊಂಡು ಮಂಜಮ್ಮ ಅರಳಿನಿಂತ ಬಗೆಯೇ ಬೆರಗಿನ ಕಥನ.
ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದಲೋಕ ಪ್ರಶಸ್ತಿ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳು ಮತ್ತಿತರ ಗೌರವಗಳೆಲ್ಲವೂ ಕಲೆಯ ಕೈಹಿಡಿದು ಗೆದ್ದ ಮಂಜಮ್ಮ ಅವರ ಸೇವೆಗೆ ಸಂದ ಸತ್ಫಲಗಳು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾಸಂಘಟನೆಗೆ ‘ಕಾಣೆ’ ನೀಡಿದ ಮಂಜಮ್ಮ ಜೋಗತಿ ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಜನಪದ ಕಲೆಯ ಪೋಷಣೆ ಮತ್ತು ರಕ್ಷಣೆಯ ಕಾರ್ಯದಲ್ಲಿ ತಲ್ಲೀನರು. ಛಲ, ಪರಿಶ್ರಮ, ಬದ್ಧತೆಗಳು ಬದುಕನ್ನು ನಳನಳಿಸಿ, ಗೆಲ್ಲಿಸಿ, ಗೌರವಿಸಬಲ್ಲದೆಂಬ ಲೋಕನುಡಿಗೆ ಮಂಜುಮ್ಮ ಜೋಗತಿಯವರ ಈ ಕಲಾಪೂರ್ಣ ಬದುಕೇ ತಾಜಾ ಉದಾಹರಣೆ ಮಾತ್ರವಲ್ಲ, ಸಾಧನಾಹಂಬಲಿಗರಿಗೆ ಎಂದೆಂದಿಗೂ ಪ್ರೇರಣೆಯೂ ಕೂಡ.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *

ಮಹತ್ವದ ಜಾಲತಾಣಗಳು

ಇ ಆಡಳಿತ ಜಾಲತಾಣ

ಇ-ಸೇವೆಗಳು

ಸಾಮಾನ್ಯ ಅಂಕಿ ಅಂಶ

ಸರ್ಕಾರದ ಆ್ಯಪ್ ಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು