LOADING

ಹುಡುಕಲು ಟೈಪ್ ಮಾಡಿ

ನಿವೃತ್ತ ನ್ಯಾಯಮೂರ್ತಿಗಳು, ಉಚ್ಛನ್ಯಾಯಾಲಯ ನ್ಯಾಯಾಂಗ ಮನೆಯಂಗಳದಲ್ಲಿ ಮಾತುಕತೆ

ಶ್ರೀ ಅರಳಿ ನಾಗರಾಜ

ವಿಶ್ರಾಂತ ನ್ಯಾಯಾಧೀಶರು, ಕರ್ನಾಟಕ ಉಚ್ಛ ನ್ಯಾಯಾಲಯ
ಸೇವೆಯೆಂಬುದು ಸಾರ್ವಕಾಲಿಕ ಮೌಲ್ಯ. ಪರಹಿತವೇ ಸೇವೆಯ ಅಂತಃಸತ್ವ. ಜನಸಮುದಾಯ ಮತ್ತು ಸಮಾಜದ ಹಿತರಕ್ಷಣೆಯ ಸಮಷ್ಠಿ ಪ್ರಜ್ಞೆಯಿಂದ ಬೆಳಗಿ “ಬೆಳಕಾದ” ಸೇವಾಮೂರ್ತಿಗಳು ಆನೇಕಾನೇಕ. ಸೇವೆಯೇ ಬಾಳಿನ ಬೆಳಕು, ಅದರಲ್ಲೇ ದೈವವ ಹುಡುಕೆಂಬ ಲೋಕನುಡಿಗೆ ಸಾಕ್ಷಿಯಾಗಿ ಬದುಕಿದವರ ಪುಣ್ಯಭೂಮಿ ಈ ಕರುನಾಡು. ಅಂತಹ ಸೇವಾಮೂರ್ತಿಗಳ ಸಾಲಿನ “ಹೊಂಬೆಳಕು” ವಿಶ್ರಾಂತ ನ್ಯಾಯಮೂರ್ತಿ ಶ್ರೀ ಅರಳಿ ನಾಗರಾಜ್.
ನ್ಯಾಯಮೂರ್ತಿ, ಸಮಾಜಸೇವಾರತ್ನ, ಪರಿಸರವಾದಿ, ಅಪ್ಪಟ ದೇಶಪ್ರೇಮಿ, ಲೇಖಕ, ಕಾನೂನು ತಜ್ಞ, ಅಸೀಮ ಕನ್ನಡಾಭಿಮಾನಿಯಾಗಿ ನ್ಯಾ. ಅರಳಿ ನಾಗರಾಜ್ ಅವರದ್ದು ಬಹುಶ್ರುತ ಸಾಧನೆ. ಅಚ್ಚಳಿಯದ ಹೆಜ್ಜೆಗುರುತು. ನ್ಯಾಯದೇಗುಲದಲ್ಲಿ ಬಸವ ಬಾಳು ಬಾಳಿದ ನ್ಯಾಯಾಂಗ ಕ್ಷೇತ್ರದ ಪ್ರಾಮಾಣಿಕ ಪುಷ್ಪ.
ಭತ್ತದ ಕಣಜವೆಂದೇ ಹೆಸರುವಾಸಿಯಾದ ಗಂಗಾವತಿ ನ್ಯಾ. ಅರಳಿ ನಾಗರಾಜ್ ಅವರ ಹುಟ್ಟೂರು. ಸಾಮಾಜಿಕ ಕ್ಷೇತ್ರಕ್ಕೆ ಕೊಪ್ಪಳ ಜಿಲ್ಲೆಯ ಅನರ್ಘ್ಯ ಕೊಡುಗೆ. ಅಮರಪ್ಪ ಅರಳಿ-ಶಿವಗಂಗಮ್ಮ ದಂಪತಿಯ ಸುಪುತ್ರರು. 1950ರ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ದಿನದಂದು ಜನಿಸಿದ ಹೆಮ್ಮೆಯ ಕನ್ನಡಿಗರು. ಗಂಗಾವತಿಯ ಸರ್ಕಾರಿ ಶಾಲೆಯಲ್ಲಿ ಅಕ್ಷರಾಭ್ಯಾಸಕ್ಕೆ ಮುನ್ನುಡಿ. ಧಾರವಾಡದಲ್ಲಿ ಪ್ರೌಢ, ಹೊಸಪೇಟೆಯಲ್ಲಿ ಪಿಯುಸಿ ಶಿಕ್ಷಣ. ಬಿಎಸ್ಸಿ ಮೊದಲನೇ ವರ್ಷಕ್ಕೇ ಓದಿಗೆ ತಿಲಾಂಜಲಿ. ಕೃಷಿ, ಸಮಾಜಸೇವೆಯಲ್ಲಿ ಏಳು ವರ್ಷಗಳ ಕಾಲ ದುಡಿದು ಮತ್ತೆ ವಿದ್ಯಾಕ್ಷೇತ್ರಕ್ಕೆ. ಬಳ್ಳಾರಿಯ ವಿ.ಎಸ್.ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ. 33ನೇ ವಯಸ್ಸಿನಲ್ಲಿ ವಕೀಲಿ ವೃತ್ತಿಯಾರಂಭ. ಬಾಲ್ಯದಿಂದಲೂ ವ್ಯಕ್ತಿತ್ವದಲ್ಲಿ ಒಡಮೂಡಿದ್ದ ನ್ಯಾಯಪರತೆಯೇ ವೃತ್ತಿ-ಭಾವಬುತ್ತಿಯ ನಿಜದ್ರವ್ಯ. ರಾಯಚೂರು, ಕೊಪ್ಪಳ, ಗಂಗಾವತಿಯಲ್ಲಿ ವಕೀಲಿಗಿರಿ. ಸತ್ಯವೇ ಬಾಳಿನ ರಥದ ಪಥ. ಕಕ್ಷಿದಾರರೇ ಅನ್ನದಾತರೆಂಬ ದಿಟ್ಟನಂಬಿಕೆ. 1993ರಲ್ಲಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾಗಿ ನೇರ ನೇಮಕಾತಿ. ಬೆಳಗಾಂ, ಮಂಗಳೂರು, ವಿಜಯಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ಸೆಶನ್ಸ್‌ ನ್ಯಾಯಾಧೀಶರಾಗಿ ಅನುಪಮ ಸೇವೆ. ಕಾನೂನು ಅರಿವು ಕಾರ್ಯಕ್ರಮಗಳ ರೂಪಿಸುವುದರ ಜೊತೆಗೆ ಕಿರುಹೊತ್ತಿಗೆಗಳ ಹೊರತಂದ ಸಾಧನೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ-ಕಾರ್ಯದರ್ಶಿ, ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರಾಗಿಯೂ ಸೇವೆ. 2007ರಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡ ಗರಿಮೆ. ಹತ್ತಾರು ಪ್ರಕರಣಗಳಲ್ಲಿನ ಮಹತ್ವದ ತೀರ್ಪಿನಿಂದಾಗಿ ಸಾರ್ವಜನಿಕ ವಲಯದಲ್ಲಿ ಜನಪ್ರಿಯತೆ. 2011ರಲ್ಲಿ ಸ್ವಯಂ ಸೇವಾ ನಿವೃತ್ತಿ. ಹೈಕೋರ್ಟ್‌ನ ಇತಿಹಾಸದಲ್ಲಿ ಕನ್ನಡದಲ್ಲಿ ತೀರ್ಪು ಬರೆದ ಮೊದಲ ನ್ಯಾಯಾಧೀಶರೆಂಬ ಹೆಗ್ಗಳಿಕೆ. ನ್ಯಾಯಾಂಗದಾಚೆಗೂ ನ್ಯಾ. ಅರಳಿ ನಾಗರಾಜ್ ಅವರು ಸದಾ ಸೇವಾತತ್ಪರರು. ಪರಿಸರ ಸಂರಕ್ಷಣೆ, ಸ್ವಚ್ಛತೆಯ ಅಭಿಯಾನ, ನೊಂದವರಿಗೆ ಸಾಂತ್ವನ ಮತ್ತು ದುಃಖಗಳಿಗೆ ಧೈರ್ಯ ತುಂಬುವ ಸ್ತುತ್ಯಾರ್ಹ ಕಾರ್ಯ. ಭ್ರಷ್ಟಾಚಾರ, ಜಾತೀಯತೆ ಮತ್ತು ಅನೈತಿಕತೆ ಮುಕ್ತ ಸಮಾಜ ನಿರ್ಮಾಣಕ್ಕೆ ಅನುದಿನವೂ ಪರಿಶ್ರಮ. ನಿವೃತ್ತಿ ಬಳಿಕ ನೂರಾರು ಶಾಲಾ-ಕಾಲೇಜುಗಳಿಗೆ ಭೇಟಿಯಿತ್ತು ಸಹಸ್ರಾರು ವಿದ್ಯಾರ್ಥಿಗಳಿಗೆ ಚೈತನ್ಯ ತುಂಬುವಿಕೆ. “ದೇಶದ ಚಿತ್ತ ಯುವಜನರತ್ತ” ವಿಶಿಷ್ಟ ಪರಿಕಲ್ಪನೆಯ ಉಪನ್ಯಾಸ ಮಾಲಿಕೆಯಿಂದ ಅಚ್ಚಳಿಯದ ಛಾಪು ಮೂಡಿಸುವಿಕೆ. ಹಿರಿಯರಿಗಾಗಿ ಪುನಶ್ಚೇತನ ಶಿಬಿರ ಆಯೋಜನೆ, ಪುನಶ್ಚೇತನ ಕೃತಿ ರಚನೆ. ದೂರದರ್ಶನದ ಕಿರುಚಿತ್ರಗಳು, ರೇಡಿಯೋ ನಾಟಕಗಳಿಗೆ ಪರಿಕಲ್ಪನೆ ಒದಗಿಸಿಕೊಟ್ಟ,’ ಜನಸಾಮಾನ್ಯರಿಗೆ ಕಾನೂನು ಮಾಹಿತಿ’ ಪುಸ್ತಕದ ಎರಡು ಲಕ್ಷಕ್ಕೂ ಅಧಿಕ ಪ್ರತಿಗಳನ್ನು ಮನೆಮನೆಗೆ ತಲುಪಿಸಿದ ಸಾರ್ಥಕತೆ. ಬದುಕಿನ ಪ್ರತಿ ಕ್ಷಣವನ್ನೂ ನಾಡಹಿತ ಮತ್ತು ಜನಹಿತಕ್ಕೆ ಮೀಸಲಿಟ್ಟು ಕಾರ್ಯೋನ್ಮುಖರಾಗಿರುವ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರದ್ದು ಶುದ್ದ ಶರಣ ಸಂಸ್ಕೃತಿ. ಕಾಯಕವೇ ಕೈಲಾಸ. ಆ ಧನ್ಯತೆಯ ಕೈಂಕರ್ಯಕ್ಕಾಗಿ ಕನ್ನಡ ಧ್ರುವತಾರೆ, ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ, ವಚನ ನ್ಯಾಯಮೂರ್ತಿ ಮುಂತಾದ ಪ್ರಶಸ್ತಿ, ಬಿರುದುಗಳಿಂದ ಭಾಜನರಾಗಿರುವ ನ್ಯಾಯಮೂರ್ತಿಗಳು ನಮ್ಮ ನಡುವಿನ ನಿಜ ಗುಣ ಶರಣರೆಂಬುದು ಉತ್ಪ್ರೇಕ್ಷೆಯಿಲ್ಲದ ದಿಟದ ಮಾತು.

ಟ್ಯಾಗ್‌ಗಳು:

ನಿಮಗೆ ಇದೂ ಇಷ್ಟವಾಗಬಹುದು:

ಕಮೆಂಟ್ ಮಾಡಿ

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ. ಅಗತ್ಯ ಕ್ಷೇತ್ರಗಳನ್ನು ಗುರುತಿಸಲಾಗಿದೆ *

ಮಹತ್ವದ ಜಾಲತಾಣಗಳು

ಇ ಆಡಳಿತ ಜಾಲತಾಣ

ಇ-ಸೇವೆಗಳು

ಸಾಮಾನ್ಯ ಅಂಕಿ ಅಂಶ

ಸರ್ಕಾರದ ಆ್ಯಪ್ ಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು